ರಾಜ್ಯದಲ್ಲಿ ಉಂಟಾದ ಬರದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ರಾಜ್ಯ ಸರ್ಕಾರ ತುರ್ತು ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಮೊದಲ ಕಂತಿನ ಭಾಗವಾಗಿ ಅರ್ಹ ರೈತರಿಗೆ 2 ಸಾವಿರ ರೂಪಾಯಿಗಳನ್ನ ನೀಡಲು ಸರ್ಕಾರ ಹಣವನ್ನು ಬಿಡುಗಡೆ ಮಾಡಿದೆ.
ಆರ್ಥಿಕ ನೆರವು ನೀಡಲು ಕೇಂದ್ರಕ್ಕೆ ಪತ್ರ ಉದ್ಯೋಗ ಖಾತರಿ ಯೋಜನೆಯಡಿ 150 ಮಾನವ ದಿನಗಳ ಉದ್ಯೋಗ ಕೊಡಲು ಕೇಂದ್ರಕ್ಕೆ ಅನುಮತಿ ಕೋರಲಾಗಿತ್ತು. ಆದರೆ ಇನ್ನೂ ಅನುಮತಿ ನೀಡಿಲ್ಲ. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಮೂರು ಹಂತದಲ್ಲಿ ಘೋಷಿಸಿದ್ದೇವೆ. ರೂ.18,171 ಕೋಟಿ ಪರಿಹಾರದ ಆರ್ಥಿಕ ನೆರವು ನೀಡಲು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ.
ಕೇಂದ್ರ ನಮ್ಮ ತೆರಿಗೆ ಹಣದ ಪಾಲನ್ನು ನಮಗೆ ವಾಪಾಸ್ ಕೊಟ್ಟರೂ ಸಾಕು ನಮ್ಮ ರೈತರ ಕಷ್ಟಕ್ಕೆ ಸಹಾಯವಾಗುತ್ತಿತ್ತು. ಬರಪರಿಹಾರಕ್ಕಾಗಿ ಕೇಂದ್ರ ಸಚಿವರಿಗೂ ಮನವಿ ಮಾಡಿದ್ದೇವೆ. ಕೇಂದ್ರ ಕೃಷಿ ಮತ್ತು ಗೃಹ ಸಚಿವರನ್ನು ಖುದ್ದು ಭೇಟಿ ಮಾಡಲು ಸಮಯ ಕೊಡಿ ಎಂದು ಪತ್ರ ಬರೆದಿದ್ದೆ ಇವತ್ತಿನವರೆಗೂ ಸಮಯ ಕೊಟ್ಟಿಲ್ಲ ಎಂದು ಸಿಎಂ ಕೇಂದ್ರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ವಿತ್ತ ಸಚಿವರನ್ನು ನಮ್ಮ ಮಂತ್ರಿಗಳು ಭೇಟಿ ಮಾಡಿದ್ದಾರೆ. ಆದರೂ ಕೇಂದ್ರ ಸರ್ಕಾರ ಇವತ್ತಿನವರೆಗೆ ಸಭೆ ನಡೆಸಿಲ್ಲ. ಪರಿಹಾರ ನೀಡುವ ಪ್ರಕ್ರಿಯೆಯನ್ನೇ ಶುರು ಮಾಡಿಲ್ಲ.
ಬಿತ್ತನೆ ವೈಫಲ್ಯ ಮತ್ತು ಮಧ್ಯಂತರ ವಿಮೆ ಪರಿಹಾರಕ್ಕೆ ರಾಜ್ಯ ಸರ್ಕಾರ ಈಗಾಗಲೇ 6.5 ಲಕ್ಷ ರೈತರಿಗೆ ರೂ.460 ಕೋಟಿ ನಮ್ಮ ಸರ್ಕಾರ ಬಿಡುಗಡೆ ಮಾಡಿದೆ. ಕುಡಿಯುವ ನೀರು, ಮೇವಿಗೆ ರೂ.327 ಕೋಟಿ ಬಿಡುಗಡೆ, ರೂ.780 ಕೋಟಿ DC ಗಳ PD ಖಾತೆಯಲ್ಲಿದೆ. ಅವರೂ ತಹಶೀಲ್ದಾರ್ ಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ವಿರೋಧ ಪಕ್ಷದವರ ಪ್ರಶ್ನೆ ಎದುರಿಸಲು ಸರ್ಕಾರ ಸಿದ್ಧ!
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಭಾಗದ ಸಮಸ್ಯೆಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುವುದು. ನಿಗಮಮಂಡಳಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ ಶಾಸಕರನ್ನು ಪರಿಗಣಿಸಲಾಗುವುದು. ನಾನು ಹಾಗೂ ಉಪಮುಖ್ಯಮಂತ್ರಿಗಳು ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಪಕ್ಷದ ವರಿಷ್ಠರಿಗೆ ನೀಡಲಾಗಿದ್ದು, ಅನುಮತಿಯನ್ನು ನಿರೀಕ್ಷಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.