News

2000 ನೋಟು ಹಿಂತೆಗೆತ ಬೆನ್ನಲ್ಲೇ ಭರ್ಜರಿ ಏರಿಕೆ ಕಂಡ ಬಂಗಾರ

22 May, 2023 5:05 PM IST By: Maltesh
2000 note withdrawal: Gold saw a huge rise

ದೇಶದಲ್ಲಿ ರೂ.2000 ನೋಟುಗಳನ್ನು ಗ್ರಾಹಕರಿಗೆ ವಿತರಿಸದಂತೆ ರಿಸರ್ವ್ ಬ್ಯಾಂಕ್ ಘೋಷಿಸುತ್ತಿದ್ದಂತೆಯೇ ಅನೇಕರು ಬುಲಿಯನ್ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಖರೀದಿ ಮಾಡುತ್ತಿರುವುದು ಬಹಿರಂಗವಾಗಿದೆ. ಅನೇಕ ಜನರು ತಮ್ಮ 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾಯಿಸುವದಕ್ಕೆ ಸುಲಭವಾದ ದಾರಿ ಕಂಡುಕೊಂಡಿದ್ದು, ಚಿನ್ನ ಖರೀದಿಗೆ ಮುಂದಾಗಿದ್ದಾರೆ.

ಮೋದಿ ಸರ್ಕಾರವು ನೋಟು ಅಮಾನ್ಯೀಕರಣವನ್ನು ಪೂರ್ಣಗೊಳಿಸಿದ ಸುಮಾರು 7 ವರ್ಷಗಳ ನಂತರ, RBI 2000 ರೂ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿದೆ. ಸದ್ಯ 2 ಸಾವಿರ ರೂಪಾಯಿಯ ನೋಟುಗಳು ಹೆಚ್ಚಿರುವ ಜನರು ಬಂಗಾರದ ಖರೀದಿಗೆ ಮುಗಿಬಿದ್ದಿದ್ದಾರೆ ಆದ್ದರಿಂದ ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡಿದ್ದು ಚಿನ್ನಾಭರಣಗಳಿಗೆ ಡಿಮ್ಯಾಂಡ್‌ ಬಂದಿದೆ.

2000 ರೂಪಾಯಿ ನೋಟುಗಳನ್ನು ಪಾವತಿಸಿ ಮಾರಾಟ ಮಾಡುತ್ತಿರುವವರಿಂದ ಚಿನ್ನ ಅಥವಾ ಬೆಳ್ಳಿಯನ್ನು ಸುಮಾರು 10 ಪ್ರತಿಶತದಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಚಿನ್ನದ ವ್ಯಾಪಾರಿಗಳು ಹೇಳುತ್ತಾರೆ. ನೋಟು ಅಮಾನ್ಯೀಕರಣದಿಂದಾಗಿ ಮಾರಾಟ ಶೇ.10-20ರಷ್ಟು ಹೆಚ್ಚಾಗಿದೆ ಎಂದು ವರದಿಗಳಾಗಿವೆ. ಇವೆಲ್ಲ ಬೆಳವಣಿಗೆಗಳಿಂದ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 63,000 ರೂ.ನಿಂದ 65,080 ರೂ.ಗೆ ಏರಿಕೆಯಾಗಿದೆ.