ಜೆಡಿಎಸ್(JDS) ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್(Covid-19) ಕಾರಣದಿಂದ ನೇಮಕಾತಿಗೆ ನಿರ್ಬಂಧಗಳಿದ್ದರೂ ಸಹ ಶಿಕ್ಷಣ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ನೇಮಕಾತಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಲಾಗಿದೆ. ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಅನುಮತಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಹಾಲಿ ನೌಕರರ ಮೇಲೆ ಒತ್ತಡ ಹೆಚ್ಚಾಗಿರುವುದು ನಿಜ, ಸದ್ಯ 91 ಸಾವಿರ ನೌಕರರು ಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 57 ಸಾವಿರ ಕೌಶಲ್ಯರಹಿತ ಸಿಬ್ಬಂದಿಗಳಿದ್ದಾರೆ, ಖಾಲಿ ಇರುವ ಹುದ್ದೆಗಳು ಭರ್ತಿಯಾಗುವವರೆಗೂ ತಾತ್ಕಾಲಿಕವಾಗಿ ಅಧಿಕ ಪ್ರಭಾರ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಮುಂಬಡ್ತಿ, ನಿಯೋಜನೆ, ಅನ್ಯಸೇವೆ, ಗುತ್ತಿಗೆ, ಹೊರಗುತ್ತಿಗೆ ಮೂಲಕ ಸಿಬ್ಬಂದಿ ಕೊರತೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕೆಲವು ಸಂದರ್ಭದಲ್ಲಿ ಅಭಿವೃದ್ಧಿ ಪ್ರಮಾಣ ಕಡಿಮೆಯೂ ಆಗಿದೆ. ಆದರೂ ರಾಜ್ಯದ ಅರ್ಥಿಕತೆಯನ್ನು ಸಮಾತೋಲನ ಕಾಯ್ದುಕೊಳ್ಳಲಾಗಿದೆ. ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿದಾಗ ಸತ್ಯಾಂಶ ತಿಳಿಯಲಿದೆ. ಕೋವಿಡ್‌ನಂತಹ ಸಮಯದಲ್ಲಿ ಆರ್ಥಿಕತೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಪ್ರತಿಪಕ್ಷದ ನಾಯಕರು ರಾಜ್ಯ ಸರ್ಕಾರವು(Government of Karnataka) ಸಾಲದ ಮೊತ್ತ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಸಾಲ ಮೊತ್ತದ ಹೆಚ್ಚಾಗಲು ಕಾರಣಗಳೇನು ಎಂಬುದನ್ನು ಅವಲೋಕಿಸದೆ ಟೀಕೆ ಮಾಡಬಾರದು. ಎರಡು ವರ್ಷದಲ್ಲಿ ಕೋವಿಡ್(Covid-19) ನಿಯಂತ್ರಣಕ್ಕಾಗಿ 15,645 ಕೋಟಿ ರು. ವೆಚ್ಚ ಮಾಡಲಾಗಿದೆ. ಅಲ್ಲದೇ, ಅಬಕಾರಿ ಹೊರತುಪಡಿಸಿದರೆ ಇತರೆ ತೆರಿಗೆಯ ಸ್ವೀಕೃತಿ ಕಡಿಮೆಯಾಗಿದೆ.
20-21ನೇ ಸಾಲಿನಲ್ಲಿ ಅಬಕಾರಿ ಇಲಾಖೆಯಲ್ಲಿ 636 ಕೋಟಿ ರು. ಹೆಚ್ಚಳವಾದರೆ, ಇನ್ನುಳಿದ ತೆರಿಗೆ ಇಲಾಖೆಯಲ್ಲಿ ಕಡಿಮೆಯಾಗಿದೆ. ವಾಣಿಜ್ಯ ತೆರಿಗೆಯಲ್ಲಿ(Commercial Tax) 11,404 ಕೋಟಿ ರು., ಮೋಟಾರು ವಾಹನದಲ್ಲಿ 2079 ಕೋಟಿ ರು., ನೋಂದಣಿ ಮತ್ತು ಮುದ್ರಾಂಕದಲ್ಲಿ 1500 ಕೋಟಿರು, ಇತರೆ ತರಿಗೆಯಲ್ಲಿ 540 ಕೋಟಿ ರು., ಕಡಿಮೆಯಾಗಿದೆ. ಕೇಂದ್ರದ ತೆರಿಗೆ ಪಾಲಿನಲ್ಲಿಯೂ ಕಡಿಮೆಯಾಗಿದ್ದು, ರಾಜ್ಯ ಸರ್ಕಾರ ಮಾಡಿದ ಅಂದಾಜಿಗಿಂತ 21,835 ಕೋಟಿ ರು. ಕಡಿಮೆಯಾಯಿತು. ಈ ಎಲ್ಲಾ ಕಾರಣಗಳಿಗಾಗಿ ಖರ್ಚು ನಿಭಾಯಿಸಲು ಅನಿವಾರ್ಯವಾಗಿ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಬೇಕಾಗಿದೆ ಎಂದು ಮುಖ್ಯಮಂತ್ರಿಗಳು ಸಮರ್ಥಿಸಿಕೊಂಡರು.