News

ಏಪ್ರೀಲ್ 13 ರಂದು ಒಂದೇ ದಿನ 1.84 ಲಕ್ಷ ಹೊಸ ಕೇಸ್‌, 1,027 ಸಾವು!

14 April, 2021 2:24 PM IST By:
corona

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಲೇ ಇದೆ. ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಈ ಕೊರೋನಾ ಈಗ ಭಾರತ ದೇಶವನ್ನು ತಲ್ಲಣಗೊಳಿಸಿದೆ. ಒಂದೇ 1.84 ಲಕ್ಷ ಕೊರೋನಾ ಪಾಸಿಟಿವ್ ಪ್ರಕರಣ ಹಾಗೂ 1027 ಜನರು ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ಏಪ್ರೀಲ್ 13 ರಂದು ಒಂದೇ ದಿನ 1,84,372 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದದರೊಂದಿಗೆ ದೇಶದಲ್ಲಿ ಇಲ್ಲಿಯವರೆಗೆ ಪತ್ತೆಯಾದ ಪ್ರಕರಣಗಳ ಸಂಖ್ಯೆ 1.38 ಕೋಟಿಗೆ ತಲುಪಿದೆ.

ಅಷ್ಟೇ ಅಲ್ಲ, ಈ ಮೂಲಕ ಸತತ ನಾಲ್ಕು ದಿನಗಳಿಂದ ದೇಶದಲ್ಲಿ ಪ್ರತಿ ದಿನ 1.5 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದಂತಾಗಿದೆ. 1.38 ಪ್ರಕರಣಗಳೊಂದಿಗೆ ಭಾರತ ಬ್ರೆಜಿಲ್‌ನ್ನು ಹಿಂದಿಕ್ಕಿದ್ದು, ಅಮೆರಿಕದ ನಂತರದ ಸ್ಥಾನದಲ್ಲಿದೆ.

ಆತಂಕಕಾರಿ ಸಂಗತಿ ಎಂದರೆ ಸಾವಿನ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವುದು. ಬುಧವಾರ ಒಟ್ಟು 1,027 ಜನರು ದೇಶದಲ್ಲಿ ಕೋವಿಡ್‌ ಸೋಂಕಿನಿಂದ ಅಸುನೀಗಿದ್ದಾರೆ. ಇದು ಕಳೆದ 6 ತಿಂಗಳಲ್ಲೇ ದೇಶದಲ್ಲಿ ದಿನವೊಂದಕ್ಕೆ ಕೊರೊನಾದಿಂದ ಸಾವನ್ನಪ್ಪಿದ ಗರಿಷ್ಠ ಸಂಖ್ಯೆಯಾಗಿದೆ.

ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗುತ್ತಿದ್ದು ಅಲ್ಲಿ ಮಂಗಳವಾರ 60,212 ಪ್ರಕರಣಗಳು ವರದಿಯಾಗಿದ್ದು, 281 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆನ್ನಿಗೆ ರಾಜ್ಯದಲ್ಲಿ ಕಠಿಣ ನಿರ್ಬಂಧಗಳನ್ನು ಸಿಎಂ ಉದ್ಧವ್‌ ಠಾಕ್ರೆ ಘೋಷಿಸಿದ್ದಾರೆ.

ದಿಲ್ಲಿಯಲ್ಲೂ ದೈನಂದಿನ ಗರಿಷ್ಠ ಪ್ರಕರಣ ವರದಿಯಾಗಿದ್ದು 13,468 ಹೊಸ ಪ್ರಕರಣಗಳು ದೃಢಪಟ್ಟಿವೆ. ಜತೆಗೆ ಸೋಂಕಿನಿಂದ 81 ಜನರು ಅಸುನೀಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಕೇಜ್ರಿವಾಲ್‌ ಸಿಬಿಎಸ್‌ಸಿ ಪರೀಕ್ಷೆ ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದ ಬಳಿಕ ಉತ್ತರ ಪ್ರದೇಶ, ಛತ್ತೀಸ್‌ಗಢ, ದಿಲ್ಲಿ ಮತ್ತು ಮಧ್ಯ ಪ್ರದೇಶದಲ್ಲಿ ಹೆಚ್ಚಿನ ಕೇಸ್‌ಗಳು ವರದಿಯಾಗುತ್ತಿವೆ. ಕುಂಭ ಮೇಳ ನಡೆಯುತ್ತಿರುವ ಉತ್ತರಾಖಂಡ್‌ನ ಹರಿದ್ವಾರದಲ್ಲಿ ಮಂಗಳವಾರ 594 ಹೊಸ ಪ್ರಕರಣಗಳು ವರದಿಯಾಗಿದ್ದು, ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 2,812ಕ್ಕೆ ಏರಿಕೆಯಾಗಿದೆ.