ಕೋವಿಡ್ 19 ವೈರಸ್ ಸಂಬಂಧಿತ ಲಾಕ್ ಡೌನ್ ನಿಂದಾಗಿ ದೇಶಾದ್ಯಂತ ಸ್ಥಗಿತಗೊಂಡಿದ್ದ ಪ್ರಯಾಣಿಕ ರೈಲು ಸೇವೆ ಸರಿ ಸುಮಾರು ಎರಡು ತಿಂಗಳುಗಳ ಬಳಿಕ ಪುನರಾಂಭಗೊಳ್ಳಲಿದೆ.
ಈ ಕುರಿತಾಗಿ ಇಂದು ಪ್ರಕಟನೆಯನ್ನು ಹೊರಡಿಸಿರುವ ರೈಲ್ವೇ ಇಲಾಖೆಯು ಮೇ 12 ರಿಂದ ಮುಂಗಡ ಪ್ರಯಾಣದ ಬುಕ್ಕಿಂಗ್ ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ಮತ್ತು ಮೇ 12ರ ಮಂಗಳವಾರದಿಂದ 15 ಜೊತೆ (30 ಟ್ರಿಪ್) ಪ್ರಯಾಣಿಕ ರೈಲು ಸೇವೆಗಳು ಪುನರಾಂಭಗೊಳ್ಳಲಿವೆ. ಇದಕ್ಕಾಗಿ ಸೋಮವಾರ ಸಾಯಂಕಾಲ 4 ರಿಂದ ಬುಂಕಿ್ ಆರಂಭವಾಗಲಿದೆ.
IRCTCಯ ವೆಬ್ಸೈಟ್ ಮೂಲಕ ಮಾತ್ರ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ರೈಲ್ವೇ ನಿಲ್ದಾಣಗಳಲ್ಲಿ ಯಾವುದೇ ಕಾರಣಕ್ಕೂ ಟಿಕೆಟ್ ಗಳನ್ನು ನೀಡಲಾಗುವುದಿಲ್ಲ ಮತ್ತು ಅಲ್ಲಿನ ಟಿಕೆಟ್ ಕೌಂಟರ್ ಗಳು ಮುಚ್ಚಿರುತ್ತವೆ. ಆರಂಭಿಕವಾಗಿ 15 ವಿಶೇಷ ರೈಲುಗಳು ದಿಲ್ಲಿಯಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಸಂಚರಿಸಲಿವೆ ಎಂದು ಇಲಾಖೆ ತಿಳಿಸಿದೆ.
ಪ್ರಯಾಣಿಕ ರೈಲು ಸೇವೆಗಳ ಪುನರಾರಂಭದ ಪ್ರಾರಂಭಿಕ ಹಂತವಾಗಿ ನವದೆಹಲಿ ರೈಲ್ವೇ ನಿಲ್ದಾಣದಿಂದ ದಿಭ್ರುಗಢ, ಅಗರ್ತಲಾ, ಹೌರಾ, ಪಟ್ನಾ, ಬಿಲಾಸ್ ಪುರ, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು ತಾವಿ ರೈಲ್ವೇ ನಿಲ್ದಾಣಗಳನ್ನು ಸಂಪರ್ಕಿಸುವ ಪ್ರಯಾಣಿಕರ ರೈಲುಗಳು ಓಡಾಟ ನಡೆಸಲಿವೆ.
ಸದ್ಯಕ್ಕೆ, ಆನ್ ಲೈನ್ ನಲ್ಲಿ ಮುಂಗಡ ಕಾಯ್ದಿರಿಸಿದ ಟಿಕೆಟ್ ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರವೇ ರೈಲ್ವೇ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶವನ್ನು ನೀಡಲಾಗುವುದು ಮತ್ತು ಮಂಗಳವಾರದಿಂದ ಪ್ರಾರಂಭಗೊಳ್ಳುವ ರೈಲುಗಳಲ್ಲಿ ಎಲ್ಲಾ ಬೋಗಿಗಳು ಹವಾನಿಯಂತ್ರಿತ ಬೋಗಿಗಳಾಗಿರುತ್ತವೆ ಮತ್ತು ಇವುಗಳ ದರವು ರಾಜಧಾನಿ ಎಸಿ ಕ್ಲಾಸ್ ದರಕ್ಕೆ ಸಮನಾಗಿರುತ್ತದೆ.
ರೈಲಿಗೆ ಹತ್ತುವ ಮೊದಲು ಎಲ್ಲಾ ಪ್ರಯಾಣಿಕರನ್ನು ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು ಹಾಗೂ ಸೋಂಕು ಲಕ್ಷಣ ರಹಿತ ಪ್ರಯಾಣಿಕರಿಗೆ ಮಾತ್ರವೇ ರೈಲು ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಹಾಗೂ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.
ಮೇ 12ರಿಂದ ದೇಶಾದ್ಯಂತ ಪ್ರಯಾಣಿಕ ರೈಲು ಸೇವೆ ಪುನರಾರಂಭ; ಮಾಸ್ಕ್ ಕಡ್ಡಾಯ
11 May, 2020 8:28 PM IST