News

148 ರಸಗೊಬ್ಬರ ಮಾರಾಟಗಾರರ ಪರವಾನಗಿ ಅಮಾನತು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

09 October, 2020 9:57 AM IST By:

ಗೋದಾಮುಗಳಲ್ಲಿ ರಸಗೊಬ್ಬರದ ದಾಸ್ತಾನು ಇದ್ದರೂ ಸಂಗ್ರಹ ಇಲ್ಲ, ಖಾಲಿಯಾಗಿದೆ ಎಂದು ಫಲಕ ಹಾಕಿಕೊಂಡಿದ್ದ ರಾಜ್ಯದ 148 ರಸಗೊಬ್ಬರ ಮಾರಾಟ ಲೈಸೆನ್ಸ್‌ಗಳನ್ನು ರದ್ದು ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ಬಿ.ಸದಾನಂದಗೌಡ ಹೇಳಿದ್ದಾರೆ.

ಅವರು ಸುದ್ದಿಗಾರರ ಜೊತೆ ಮಾತನಾಡಿ, ಕೆಲ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ರಸಗೊಬ್ಬರ ಅಂಗಡಿಗಳ ಮಾಲೀಕರು ಸೇರಿ ರಸಗೊಬ್ಬರದ ಕೃತಕ ಕೊರತೆ ಸೃಷ್ಟಿಸಿದ್ದರು. ಇದರಿಂದಾಗಿ ರಾಜ್ಯದ ವಿವಿಧೆಡೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಗಮನಕ್ಕೆ ತರಲಾಗಿತ್ತು. ನಂತರ ಅಂತಹ ಗೋದಾಮು, ಅಂಗಡಿಗಳ ಮೇಲೆ ದಾಳಿ ಮಾಡಿ ಕ್ರಮ ಜರುಗಿಸಲಾಗಿದೆ  ಎಂದು ತಿಳಿಸಿದ್ದಾರೆ.

ಹಲವು ಕಡೆ ಗೋದಾಮುಗಳಲ್ಲಿ ರಸಗೊಬ್ಬರ ಸಾಕಷ್ಟು ಇದ್ದರೂ ಹೊರಗೆ ಸ್ಟಾಕ್‌ ಇಲ್ಲ ಎಂದು ಫಲಕ ಹಾಕಿದ್ದರು. ಕೃತಕ ಕೊರತೆ ಸೃಷ್ಟಿಸಿ ಬೇಡಿಕೆ ಹೆಚ್ಚುವಂತೆ ಮಾಡುವಲ್ಲಿ ಕಾಳ ಸಂತೆಕೋರರ ಜತೆ ಕೆಲವು ಅಧಿಕಾರಿಗಳೂ ಭಾಗಿಯಾಗಿದ್ದರು ಎಂಬುದು ತಿಳಿದು ಬಂದಿದ್ದು,  ಈ ರೀತಿ ಅಭಾವ ಸೃಷ್ಟಿಸಿ ರೈತರ ಹತ್ತಿರ ಹೆಚ್ಚು ಹಣ ಸುಲಿಗೆ ಮಾಡುತ್ತಿರುವುದು ಸರಿಯಲ್ಲ. ದೇಶಕ್ಕೆ ಅನ್ನ ನೀಡುವ ರೈತನಿಗೆ ಅಧಿಕಾರಿಗಳೇ ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.

ರೈತರಿಗೆ ಅಗತ್ಯ ರಸಗೊಬ್ಬರ ಪೂರೈಸುವುದು ರಾಜ್ಯ ಸರಕಾರದ ಜವಾಬ್ದಾರಿ. ಅದನ್ನು ಸಮರ್ಪಕವಾಗಿ ನಿಭಾಯಿಸುವಂತೆ ಕೃಷಿ ಸಚಿವರಿಗೆ ತಾಕೀತು ಮಾಡಿದ ನಂತರ ಸಮಸ್ಯೆ ಬಗೆಹರಿದಿದೆ. ದೇಶದಲ್ಲಿ ರಸಗೊಬ್ಬರ ಉತ್ಪಾದನೆ, ಬೇಡಿಕೆ, ಪೂರೈಕೆ ಮತ್ತು ಬಳಕೆ ಬಗ್ಗೆ ಪ್ರತಿ ದಿನ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ ಎಂದರು.