News

ನೇಕಾರರ ವಿಶೇಷ ಯೋಜನೆಯಡಿ 1.25 ರೂ. ದರದಲ್ಲಿ ವಿದ್ಯುತ್‌ ಪೂರೈಕೆ ಯೋಜನೆ ಮುಂದುವರಿಕೆ: ಸಿಎಂ ಸಿದ್ದರಾಮಯ್ಯ

25 July, 2023 12:42 PM IST By: Kalmesh T
1.25 under the Special Scheme for Weavers. Continuation of electricity supply scheme at rate

ನೇಕಾರರ ವಿಶೇಷ ಯೋಜನೆಯಡಿ ಪ್ರಸ್ತುತ ಜಾರಿಯಲ್ಲಿರುವ 20 ಹೆಚ್.ಪಿ. ವರೆಗಿನ ವಿದ್ಯುತ್‌ ಸಂಪರ್ಕ ಹೊಂದಿರುವ ವಿದ್ಯುತ್‌ ಮಗ್ಗದ ಘಟಕಗಳಿಗೆ 1.25 ರೂ. ದರದಲ್ಲಿ ವಿದ್ಯುತ್‌ ಪೂರೈಕೆ ಯೋಜನೆಯನ್ನು ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಇಂದು ತಮ್ಮನ್ನು ಭೇಟಿಯಾದ ನೇಕಾರರ ಸಮುದಾಯಗಳ ಒಕ್ಕೂಟದ ನಿಯೋಗದ ಬೇಡಿಕೆಗಳಿಗೆ ಸ್ಪಂದಿಸಿ, ಈ ವಿಷಯ ತಿಳಿಸಿದರು. ಇದಲ್ಲದೆ 10 ಹೆಚ್.ಪಿ. ವರೆಗಿನ ಘಟಕಗಳಿಗೆ 250 ಯುನಿಟ್‌ ವರೆಗೆ ಉಚಿತ ವಿದ್ಯುತ್‌ ಒದಗಿಸಲು ಆಯವ್ಯಯದಲ್ಲಿ ಘೋಷಿಸಲಾಗಿದ್ದು, ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ಇದಲ್ಲದೆ ಹಿಂದುಳಿದ ವರ್ಗಗಳ 2 ಎ ವರ್ಗದಡಿ ಬರುವ ಸಮುದಾಯಗಳ ಗುತ್ತಿಗೆದಾರರಿಗೆ 1  ಕೋಟಿ ರೂ. ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಘೋಷಿಸಲಾಗಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿಯವರನ್ನು ಭೇಟಿಯಾದ ನೇಕಾರರು ತಮ್ಮ ವೃತ್ತಿಪರ ಚಟುವಟಿಕೆಗಳಿಗೆ ಮುಖ್ಯಮಂತ್ರಿಯವರು ಹಿಂದಿನಿಂದಲೂ ಬೆಂಬಲ ನೀಡಿದ್ದನ್ನು ಸ್ಮರಿಸಿ, ತಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವನ್ನೂ ನೀಡುವಂತೆ ಮನವಿ ಮಾಡಿದರು.

ಒಕ್ಕೂಟಕ್ಕೆ ಬೆಂಗಳೂರು ಮಹಾನಗರದಲ್ಲಿ ನಿವೇಶನ ನೀಡುವುದು, ಕಾಂತರಾಜ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಹಂಪಿ ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಸ್ವಾಮೀಜಿ, ತಪಸಿಹಳ್ಳಿ ದಿವ್ಯಜ್ಞಾನಾನಂದ ಸ್ವಾಮೀಜಿ, ಬಾಗಲಕೋಟೆ ಜಿಲ್ಲೆ ನೀರಲಕೇರಿ ಸಿದ್ಧಾರೂಢ ಮಠದ ಶ್ರೀ ಘನಲಿಂಗ ಸ್ವಾಮೀಜಿ, ಧಾರವಾಡದ ಶಿವಾನಂದ ಮಠದ ಶಿವಾನಂದ ಸ್ವಾಮಿಗಳು, ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಬಿ.ಎಸ್. ಸೋಮಶೇಖರ ಮತ್ತಿತರ ನೇಕಾರ ಮುಖಂಡರು ಉಪಸ್ಥಿತರಿದ್ದರು.