News

ಸಹಕಾರ ಇಲಾಖೆಯಿಂದ 19 ಸಾವಿರ ರೈತರಿಗೆ ರಾಜ್ಯಾದ್ಯಂತ 12,420 ಕೋಟಿ ರೂ. ವಿತರಣೆ

18 January, 2021 5:19 PM IST By:
cash

ಕೋವಿಡ್‌-19 ಮಹಾಮಾರಿ ನಡುವೆ ಈ ಬಾರಿ ಸಹಕಾರ ಇಲಾಖೆ ರಾಜ್ಯಾದ್ಯಂತ 19,17,334 ರೈತರಿಗೆ ಒಟ್ಟು 12,420.10 ಕೋಟಿ ರೂಪಾಯಿಗಳಷ್ಟು ಸಾಲ ಸೌಲಭ್ಯ ವಿತರಿಸಲಾಗಿದೆ.  ಕೋವಿಡ್ ಬಿಕ್ಕಟ್ಟಿನ ನಡುವೆಯೂ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸಲಾಗಿದೆ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ.

2019-20ನೇ ಸಾಲಿನಲ್ಲಿ ಸಹಕಾರಿ ಸಂಘಗಳ ಮೂಲಕ 13,500 ಕೋಟಿ ರೂ.ಪಾಯಿ ಸಾಲ ನೀಡಲಾಗಿತ್ತು. 2020-21ನೇ ಸಾಲಿನಲ್ಲಿ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಾದಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಳಜಿಗೆ ಸ್ಪಂದಿಸಿ ಸಹಕಾರ ಇಲಾಖೆ ಮೂಲಕ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಸಾಲ ಸೌಲಭ್ಯ ನೀಡಲಾಗಿದೆ ಎಂದರು.

‘ಪ್ರಸಕ್ತ ಸಾಲಿನಲ್ಲಿ 24.50 ಲಕ್ಷ ರೈತರಿಗೆ  15,300 ಕೋಟಿ ಸಾಲ ನೀಡುವ ಗುರಿ ಇದೆ. ಶೀಘ್ರದಲ್ಲಿಯೇ ಈ ಗುರಿ ತಲುಪುವ ವಿಶ್ವಾಸವಿದೆ. ‘ರೈತರಿಗೆ ಸಾಲ ನೀಡುವ ಮೂಲಕ ಕೃಷಿ ಚಟುವಟಿಕೆಗೆ ಆರ್ಥಿಕ ಸ್ವಾವಲಂಬನೆಗೆ ನೆರವು ನೀಡಿದ ಖುಷಿ ನಮ್ಮದು. ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ  ಎಂದಿದ್ದಾರೆ.

ರೈತರಿಗೆ ಬ್ಯಾಂಕ್‌ಗಳು ಮತ್ತು ಸಹಕಾರ ಸಂಘಗಳು ಸಾಲ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ  ಅಧಿಕಾರಿಗಳ ಸಭೆ ನಡೆಸಿ ರೈತರಿಗೆ ತೊಂದರೆ ನೀಡದಂತೆ ತಾಕೀತು ಮಾಡಿದ್ದೇನೆ. ರೈತರಿಗೆ ಸಾಲ ವಿತರಣೆಯಲ್ಲಿ ಲೋಪವಾಗಬಾರದೆಂಬ ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ ಎಂದು ತಿಳಿಸಿದ್ದಾರೆ.