News

ಕಡಪ ಕಲ್ಲು ಗಣಿಯಲ್ಲಿ ಸ್ಫೋಟ; 10 ಮಂದಿ ಸಾವು

08 May, 2021 9:17 PM IST By:

ಆಂಧ್ರಪ್ರದೇಶದ ಕಡಪದ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಗಣಿಯಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 10 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಮಾಮಿಲ್ಲಪಲ್ಲೆ ಗ್ರಾಮದ ಸಮೀಪ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

 ಜಿಲೆಟಿನ್ ಕಡ್ಡಿಗಳನ್ನು ಅನ್ಲೋಡ್ ಮಾಡುವ ವೇಳೆ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.  ಅನೇಕ ಮಂದಿ ಕಾರ್ಮಿಕರು ಗಣಿಯಲ್ಲಿ ಸಿಲುಕಿಕೊಂಡಿದ್ದಾರೆ ಅವರ ರಕ್ಷಣೆಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ. ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಪೈಕಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಸುಣ್ಣದಕಲ್ಲು ಗಣಿಯಲ್ಲಿ ಸ್ಪೋಟದಿಂದ ಹಲವು ಮಂದಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ. ಗಣಿಯಲ್ಲಿ ಸಿಕ್ಕಿದ ಕೆಲವರನ್ನು ರಕ್ಷಣೆ ಮಾಡಿದ್ದು ಇನ್ನೂ ಮತ್ತೆ ಕೆಲವರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟಕಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಸಾಗಣೆ ಮಾಡುವ ಸಮಯದಲ್ಲಿ ಈ ದುರಂತ ಸಂಭವಿಸಿದೆ ಎಂದು ಪರುಮಾಮಿಲಾ ಇನ್ಸ್ ಪೆಕ್ಟರ್ ಮೋಹನ್ ರೆಡ್ಡಿ ತಿಳಿಸಿದ್ದಾರೆ. ಒಂದು ಕಡೆ ಕೊರೊನಾ ಸೋಂಕಿನಿಂದ ದೇಶದಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ ಮತ್ತೊಂದು ಕಡೆ ಅನಿಲ ದುರಂತ ಸೇರಿದಂತೆ ಇನ್ನಿತರ ಪ್ರಾಕೃತಿಕ ದುರಂತದಿಂದ ಜನರು ಸಾವನ್ನಪ್ಪುತ್ತಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂ, ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಅನಿಲ ಸೋರಿಕೆಯಿಂದ ಕಳೆದ ಕೆಲವು ತಿಂಗಳ ಹಿಂದೆ ಅನೇಕ ಮಂದಿ ಮೃತಪಟ್ಟಿದ್ದರು ಇದೀಗ ಆಂಧ್ರಪ್ರದೇಶದಲ್ಲಿ ಸುಣ್ಣದ ಕಲ್ಲು ಗಣಿಯಲ್ಲಿ ಸ್ಫೋಟ ಸಂಭವಿಸಿ ಕನಿಷ್ಠ 12 ಕಾರ್ಮಿಕರು ಸಾವನ್ನಪ್ಪಿದ್ದಾರೆ

ಮೃತ ಸಿಎಂ ಊರಿನವರು

ಸುಣ್ಣದಕಲ್ಲು ಸ್ಪೋಟದಲ್ಲಿ ಮೃತಪಟ್ಟ ಕಾರ್ಮಿಕರು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ತವರೂರಾದ ಪುಲಿವೆಂದಲ ಗ್ರಾಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿಯವರು ಕಡಪ ಜಿಲ್ಲೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರ ಕುರಿತು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತಪಟ್ಟ ಕಾರ್ಮಿಕರಿಗೆ ಪರಿಹಾರ ನೀಡುವ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.