News

ಭೀಮಾ ನದಿಗೆ 1 ಲಕ್ಷ ಕ್ಯೂಸೇಕ್ ನೀರು ಬಿಡುಗಡೆ

20 September, 2020 6:30 PM IST By:

ಭೀಮಾ ಜಲಾನಯನ ಪ್ರದೇಶದಲ್ಲಿ ಸತತ ಮಳೆ ಮತ್ತು ಉಜನಿ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ರವಿವಾರ ಮಧ್ಯಾಹ್ನ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜಿನಿಂದ 1,02,000 ಕ್ಯುಸೆಕ್ ನೀರು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ ಎಂದು ಕೆ.ಎನ್.ಎನ್.ಎಲ್. ಭೀಮಾ ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತ ಅಶೋಕ ಆರ್. ಕಲಾಲ್ ತಿಳಿಸಿದ್ದಾರೆ.

ಜಲಾನಯನ ಪ್ರದೇಶದಲ್ಲಿ  ಒಂದು ವಾರದಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭೀಮಾ ನದಿಗೆ ಒಳಹರಿವು ಹೆಚ್ಚಳವಾಗುತ್ತಿದೆ. ಮುಂದೆಯೂ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದ್ದು, ಒಳಹರಿವಿನಷ್ಟೆ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. 

ಆದ್ದರಿಂದ ಸೊನ್ನ ಬ್ಯಾರೇಜ್ ಕೆಳಭಾಗದಲ್ಲಿರುವ ಅಫಜಲಪುರ, ಜೇವರ್ಗಿ ಮತ್ತು ಚಿತ್ತಾಪುರ ತಾಲೂಕಿನ ಗ್ರಾಮಗಳ ರೈತರು ನದಿಯ ದಡಕ್ಕೆ ಹೋಗಬಾರದು. ಅಲ್ಲದೆ ತಮ್ಮ ಜಾನುವಾರುಗಳನ್ನು ನದಿಯ ದಡಕ್ಕೆ ಬಿಡದಂತೆ ಎಚ್ಚರ ವಹಿಸಬೇಕು. ಅದೇ ರೀತಿ ಸೊನ್ನ ಬ್ಯಾರೇಜಿನ ಕೆಳಗಡೆ ಬರುವ ಇನ್ನಿತರ ಬ್ಯಾರೇಜ್‍ಗಳ ಅಧಿಕಾರಿಗಳು ಎಚ್ಚರವಹಿಸಲು ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಅಫಜಲ್ಪುರ ತಾಲೂಕಿನ ಮಣೂರ ಗ್ರಾಮದಲ್ಲಿರುವ ನದಿ ಯಲ್ಲಮ್ಮನ ದೇವಸ್ಥಾನಕ್ಕೆ ಜಲದಿಗ್ಭಂಧನವಾಗಿದ್ದು ಪ್ರವೇಶಕ್ಕಾಗಿ ನಿರ್ಮಿಸಿದ್ದ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಾದರೆ ಘತ್ತರಗಿಯಿಂದ ಸಿಂದಗಿ ಹಾಗೂ ದೇವಲ ಗಾಣಗಾಪೂರದಿಂದ ಜೇವರ್ಗಿ ತಾಲೂಕಿನ ಸಂಪರ್ಕಗಳು ಕಡಿತವಾಗಲಿವೆ.

 ಘತ್ತರಗಿ, ದೇವಲ ಗಾಣಗಾಪೂರಗಳಲ್ಲಿ ಸೇತುವೆ ಮೇಲಿಂದ ನೀರು ಹರಿಯುವ ಸಾಧ್ಯತೆ ಇದೆ. ನದಿ ಪಾತ್ರದ ಗ್ರಾಮಗಳಲ್ಲಿ ಡಂಗೂರ ಸಾರಿಸಿ ದನ, ಕುರಿಗಾಹಿಗಳು, ಮೀನುಗಾರರು ನದಿ ದಡಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.