ಉಷ್ಣತೆ ಹೆಚ್ಚುತ್ತಿದೆ. ಇದರಿಂದ ನಮ್ಮ ಶಕ್ತಿ ಕುಗ್ಗುತ್ತಿದೆ. ಆಯುರ್ವೇದದಲ್ಲಿ ಇದಕ್ಕೆ ‘ಆದಾನ ಕಾಲ’ ಎನ್ನುತ್ತಾರೆ. ನಮ್ಮ ಶಕ್ತಿಯನ್ನಿಲ್ಲಿ ಸೂರ್ಯ ಸೆಳೆದುಕೊಳ್ಳುತ್ತಾನೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಅತೀ ಹೆಚ್ಚು ನೀರು ಕುಡಿಯಬೇಕು. ಹಣ್ಣಿನಿಂದ ಮಾಡಿದ ಜ್ಯೂಸ್ ಹೆಚ್ಚು ಸೇವಿಸಬೇಕು. ಮನೆಯಲ್ಲೇ ತಯಾರಿಸಿ ಸೇವಿಸುವುದು ಒಳ್ಳೆಯದು. ಹೊರಗಿನ ನೀರಿಗೆ ಸ್ವಚ್ಛತೆಯ ಗ್ಯಾರಂಟಿ ಇರಲ್ಲ. ಆರೋಗ್ಯ ಸಮಸ್ಯೆ ಉಲ್ಬಣಿಸಬಹುದು. ಟೈಫಾಯ್ಡ್, ಕಾಮಾಲೆ, ಶ್ವಾಸಕೋಶದ ಸೋಂಕು, ಗ್ಯಾಸ್ಟ್ರೋ ಎಂಟ್ರೈಟಿಸ್ (ವಾಂತಿ, ಬೇಧಿ ಮುಖ್ಯ ಲಕ್ಷಣ)ಗಳು ಬಾಧಿಸಬಹುದು.
ದಿನದಲ್ಲಿ ಹೆಚ್ಚೆಚ್ಚು ತಣ್ಣೀರಿನಿಂದ ಸ್ನಾನ ಮಾಡುವುದರಿಂದ ನಮ್ಮ ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ. ಮೈ ಕೈಗೆ ಎಣ್ಣೆ ಅಥವಾ ಸನ್‌ಸ್ಕ್ರೀನ್ ಲೋಶನ್, ಮಾಯಿಶ್ಚರೈಸರ್ ಹಚ್ಚುವುದು ಸೂಕ್ತ.
ಸಮಯ ನೋಡಿ, ಬಿಸಿಲು ನೋಡಿ ಹೊರಗೆ ಹೊರಡಿ. ಕಡಿಮೆ ಬಿಸಿಲಿನ ಹೊತ್ತಲ್ಲಿ ಮಾತ್ರ ಹೊರಗೆ ಓಡಾಡಿ. ಬೆಳಗ್ಗೆ 10 ರಿಂದ ಸಂಜೆ 4 ಬಿರು ಬಿಸಿಲು ಹೆಚ್ಚು ಬಾಧಿಸಬಹುದು. ಅನಿವಾರ್ಯವಾದಾಗ ತಲೆಗೆ ಟೋಪಿ ಅಥವಾ ಕೊಡೆ ಹಿಡಿದು ಹೊರ ನಡೆಯುವುದು ಒಳ್ಳೆಯದು.
ಬೇಸಿಗೆಯಲ್ಲಿ ಅತಿಯಾದ ವ್ಯಾಯಾಮ ಒಳ್ಳೆಯದಲ್ಲ. ದೇಹದ ಅರ್ಧಶಕ್ತಿ ವ್ಯಯವಾಗುವಷ್ಟು ಮಾತ್ರ ವ್ಯಾಯಾಮ ಮಾಡಿ. ಜಿಮ್ ಬೇಸಿಗೆಗೆ ಒಳ್ಳೆಯದಲ್ಲ. ಸಾಧಾರಣ ನಡಿಗೆ, ಓಟ ಸಾಕು.
ಹೊಟ್ಟೆಯ ಅರ್ಧ ಭಾಗದಷ್ಟು ಊಟ ಮಾಡಿ. ಇನ್ನೊಂದು ಭಾಗವನ್ನು ನೀರಿನಿಂದ ತುಂಬಿಸಿ. ಉಳಿದ ಭಾಗವನ್ನು ಖಾಲಿ ಬಿಡಿ. ಹಗುರಾಗಿರುವ ಹೊಟ್ಟೆ ಹಾಗೂ ತುಂಬಿಸಿದ ನೀರು ಆಯಾಸವನ್ನು ಹೋಗಲಾಡಿಸುತ್ತದೆ.
ಅತಿಯಾದ ಕಾಫಿ, ಮದ್ಯಪಾನ, ಧೂಮಪಾನ ಮಾಡದಿದ್ದರೆ ಉತ್ತಮ. ಅಭ್ಯಾಸ ಮಾಡಿಕೊಂಡಿದ್ದರೆ ಕಡಿಮೆ ಸೇವಿಸುವುದು ಸೂಕ್ತ. ಏಕೆಂದರೆ ಆಲ್ಕೊಹಾಲ್, ಕಾಫಿಯ ಕೆಫಿನ್, ಸಿಗರೇಟಿನ ನಿಕೊಟಿನ್ ಬೇಸಿಗೆಯಲ್ಲಿ ನಮ್ಮ ದೇಹದ ಶಕ್ತಿಯನ್ನು ಕುಗ್ಗಿಸುತ್ತವೆ. ದೇಹದಲ್ಲಿ ಡ್ರೈನೆಸ್ ಹೆಚ್ಚಾಗುವಂತೆ ಮಾಡುತ್ತದೆ. ಉಳಿಂತೆ ಮಲಗುವ ಕೋಣೆ ತಣ್ಣಗಿರುವಂತೆ ನೋಡಿ ಕೊಳ್ಳಿ. ಫ್ಯಾನ್ ವಿಪರೀತ ಬಳಕೆ ಮಾಡಬೇಡಿ. ಇದರಿಂದ ಚರ್ಮ ಶುಷ್ಕವಾಗುವ ಸಾಧ್ಯತೆ ಇದೆ. ಹಾಸಿಗೆ ಮೃದುವಾಗಿದ್ದಷ್ಟು ಒಳ್ಳೆಯ ನಿದ್ದೆ ಗ್ಯಾರೆಂಟಿ.
ರತಿಕ್ರೀಡೆ ಅರ್ಥಾತ್ ಸೆಕ್ಸ್ ಕಡಿಮೆ ಇರಲಿ.
ಮನಸ್ಸು ಶಾಂತವಾಗಿರಲಿ. ಉದ್ವೇಗಕ್ಕೊಳಗಾಗಬೇಡಿ. ದೀರ್ಘಕಾಲದ ಉದ್ವೇಗದ ಸಮಸ್ಯೆ ಇರುವವರು ಎಚ್ಚರಿಕೆಯಿಂದಿರಿ. ಸಕ್ಕರೆ ಖಾಯಿಲೆ, ರಕ್ತದೊತ್ತಡ ಇರುವವರೂ ಶಾಂತ ಮನಸ್ಥಿತಿ ಕಾಯ್ದುಕೊಳ್ಳಲು ಪ್ರಯತ್ನಿಸಿ. ಕೆಲವೊಮ್ಮೆ ಅತಿ ಉದ್ವೇಗದಿಂದ ಹೃದಯಾಘಾತವೂ ಆಗುವ ಸಾಧ್ಯತೆ ಇರುತ್ತದೆ.
ಸರಳ ಹಾಗೂ ಸಡಿಲ ಉಡುಪು ಧರಿಸಿ. ಇದರಿಂದ ಗಾಳಿಯ ಓಡಾಟ ಹೆಚ್ಚುತ್ತದೆ. ಜೊತೆಗೆ ಬೇಸಿಗೆಯಲ್ಲಿ ಹೆಚ್ಚು ಕಾಡುವ ಫಂಗಲ್ ಇನ್‌ಫೆಕ್ಷನ್‌ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ತೊಡೆ ಸಂದಿ, ಕಂಕುಳ ಸಂದಿ, ಎದೆಯಭಾಗದಲ್ಲಿ ಫಂಗಲ್ ಇನ್‌ಫೆಕ್ಷನ್ ಆಗೋದು ಸಾಮಾನ್ಯ. ಸ್ನಾನ, ಸ್ವಚ್ಛತೆ ಮತ್ತು ಪೌಡರ್ ಗಳನ್ನು ಬಳಸಿ ದೂರ ಇಡಬಹುದು.
ಹುಳಿ, ಸಕ್ಕರೆ, ಉಪ್ಪು ಮತ್ತು ಸಿಹಿ ಬೇಸಿಗೆಯಲ್ಲಿ ಹೆಚ್ಚು ಸಹಕಾರಿಯಾಗಿರುತ್ತದೆ. ನೀರಿನಲ್ಲಿ ಬೆರೆಸಿ ಇವುಗಳನ್ನು ಸೇವಿಸುವುದರಿಂದ ಶೀಘ್ರ ಶಕ್ತಿಯ ಉತ್ಪಾದನೆಯಾಗುತ್ತದೆ. ಮಜ್ಜಿಗೆಯಂಥ ಪೇಯಗಳು, ಎಳನೀರು ಸೇವನೆಯಿಂದ ಬಾಯಾರಿಕೆಗೆ ಮುಕ್ತಿ. ಕಾಳು, ಬೇಳೆ, ಹಣ್ಣು, ತರಕಾರಿ ಸೇವನೆ ಹೆಚ್ಚಾಗಬೇಕು. ಹಾಲು, ಸಕ್ಕರೆ ಮಿಶ್ರಣ ದೇಹಕ್ಕೆ ಹಿತವಾಗಿರುತ್ತದೆ. ಮಾಂಸಾಹಾರ ಕಡಿಮೆ ಮಾಡಿ. ಲಘು ಭೋಜನ ಒಳ್ಳೆಯದು.
ಬೇಸಿಗೆಯಲ್ಲಿ ಆರೋಗ್ಯ ಹೆಚ್ಚಿಸಿ!
27 February, 2019 8:07 PM IST