Health benefits of papaya : ಪ್ರಪಂಚದ ಎಲ್ಲಾ ಭಾಗದ ಜನರೂ ಇಷ್ಟಪಡುವ ಸಿಹಿಯಾದ ಸ್ವಾದಿಷ್ಟಕರ ಹಣ್ಣು ಪಪ್ಪಾಯಿ. ಇದು ಆರೋಗ್ಯಕರ ಅಂಶಗಳನ್ನು ಹೊಂದಿದ ಅತಿ ಶ್ರೀಮಂತ ಹಣ್ಣು ಕೂಡ ಹೌದು.
ಪಪ್ಪಾಯಿ ಒಂದು ಜನಪ್ರಿಯ ಹಾಗೂ ಸರ್ವಕಾಲಿಕ ಹಣ್ಣು. ಇದನ್ನು “ಪರಂಗಿ ಹಣ್ಣು” ಎಂದು ಕೂಡ ಕರೆಯುತ್ತಾರೆ. ಪಪ್ಪಾಯಿಯ ಮೂಲ ಮಧ್ಯ ಅಮೇರಿಕ. ಸ್ಪೇನ್ ಮತ್ತು ಪೋರ್ಚಗಲ್ ನಾವಿಕರು ತಾವು ಪ್ರಯಾಣಿಸಿದ ಪ್ರದೇಶಗಳಾದ ಭಾರತ, ಫಿಲಿಪೈನ್ಸ್ ಮತ್ತು ಅಮೆರಿಕದ ಇತರೆ ಭಾಗಗಳಿಗೆ ಈ ಹಣ್ಣನ್ನು ಪರಿಚಯಿಸಿದರು.
20ನೇ ಶತಮಾನದಲ್ಲಿ ಅಮೆರಿಕ್ಕೆ ಈ ಹಣ್ಣನ್ನು ಪರಿಚಯಿಸಲಾಯಿತು ಹಾಗೂ ಹವಾಯಿ ಪ್ರದೇಶದಲ್ಲಿ ಬೆಳೆಯಲು ಪ್ರಾರಂಭಿಸಿದರು. 1920 ರಿಂದ ಅಮೇರಿಕ ಪಪ್ಪಾಯ ಬೆಳೆಯುವ ಪ್ರಮುಖ ದೇಶವಾಗಿದೆ.
ಜೊತೆಗೆ ಮೆಕ್ಸಿಕೊ ಕೂಡ ಇಂದು ಅತೀ ಹೆಚ್ಚು ಪಪ್ಪಾಯಿ ಬೆಳೆಯುವ ದೇಶವಾಗಿದೆ. ಇದು ಅಲ್ಪಾಧಿಯ ಶೀಘ್ರವಾಗಿ ಬೆಳೆಯುವ ಸುಮಾರು 10-12 ಅಡಿಯ ಗಿಡ. ಹಸಿರು ಬಣ್ಣದ ಗಟ್ಟಿಯಾದ ಕಾಯಿ ನಂತರ ಹಳದಿ ಮಿಶ್ರಿತ ಕೇಸರಿ ಬಣ್ಣಕ್ಕೆ ತಿರುಗಿ ಮೆದುವಾದ ಹಣ್ಣಾಗುತ್ತದೆ.
ಬಲಿತ ಕಾಯಿ ಕೋಣೆಯ ಉಷ್ಣಾಂಶಕ್ಕೆ ಹಣ್ಣಾಗುತ್ತದೆ. ಹಣ್ಣು ಸಾಮಾನ್ಯವಾಗಿ 7-20 ಇಂಚು ಉದ್ದವಿದ್ದು, ಒಳಭಾಗ ಹಳದಿ ಕೇಸರಿ ಬಣ್ಣದಾಗಿರುತ್ತವೆ ಹಾಗೂ ಕಾಳು ಮೆಣಸನ್ನು ಹೋಲುವ ಕಪ್ಪು ಬೀಜವಿರುತ್ತವೆ. ಈ ಹಣ್ಣು ಎಲ್ಲಾ ಕಾಲದಲ್ಲಿಯೂ ಲಭ್ಯ. ಆದರೆ ಬೇಸಿಗೆಯಲ್ಲಿ ಇದರ ಇಳುವರಿ ಹೆಚ್ಚು.
ಪಪ್ಪಾಯಿ ಅನಾದಿ ಕಾಲದಿಂದಲೂ ಬಳಕೆಯಲ್ಲಿರುವ ಹಣ್ಣು. ಸಾಮಾನ್ಯವಾಗಿ ಈ ಹಣ್ಣು ಯಾವುದೇ ಅಲರ್ಜಿಯನ್ನು ಉಂಟು ಮಾಡುವುದಿಲ್ಲ. ಬಹಳ ಸುಲಭವಾಗಿ ಜೀರ್ಣವಾಗುವ ಈ ಹಣ್ಣು ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಪರಿಪೂರ್ಣ ಆಹಾರವಾಗಿದೆ.
ಪ್ರಪಂಚದ ಎಲ್ಲಾ ಭಾಗದ ಜನರೂ ಇಷ್ಟಪಡುವ ಸಿಹಿಯಾದ ಸ್ವಾದಿಷ್ಟಕರ ಹಣ್ಣು ಇದು. ಸ್ವಾದಿಷ್ಟತೆ ಮತ್ತು ರುಚಿಗೆ ಸೀಮಿತವಾಗದೆ ಆರೋಗ್ಯಕರ ಅಂಶಗಳನ್ನು ಹೊಂದಿದ ಅತಿ ಶ್ರೀಮಂತ ಹಣ್ಣು.
ಜೀವಸತ್ವಗಳಾದ ಎ, ಬಿ, ಸಿ, ಇ ಹಾಗೂ ಪೊಟ್ಯಾಷಿಯಂ, ಮ್ಯಾಗ್ನೀಷಿಯಂ, ಬಿಟಾ ಕೆರೋಟಿವ್ ಹಾಗೂ ಪೋಲಿಕ್ ಆಮ್ಲಗಳ ಅಗರ.
ಪೋಷಕಾಂಶಗಳು ಪ್ರಮಾಣ
ತೇವಾಂಶ - 62.56 ಗ್ರಾಂ
ತೇವಾಂಶ - 62.56 ಗ್ರಾಂ
ಸಸಾರಜನಕ - 0.6 ಗ್ರಾಂ
ಕೊಬ್ಬು - 0.1 ಗ್ರಾಂ
ಶರ್ಕರಪಿಷ್ಠ - 2.7 ಗ್ರಾಂ
ಸುಣ್ಣ - 17 ಮಿ.ಗ್ರಾಂ
ರಂಜಕ - 13 ಮಿ.ಗ್ರಾಂ
ಕಬ್ಬಿಣ - 0.5 ಗ್ರಾಂ
ಮೆಗ್ನೀಷಿಯಂ - 11 ಮಿ.ಗ್ರಾಂ
ಸೋಡಿಯಂ - 6 ಮಿ.ಗ್ರಾಂ.
ಪೊಟ್ಯಾಷಿಯಂ - 16 ಮಿ.ಗ್ರಾಂ.
‘ಎ’ ಜೀವಸತ್ವ - 1595-3000 ಐ.ಯು
ಥಯಾಮಿನ್ (ಬಿ-1) - 0.04 ಗ್ರಾಂ
ಪಪ್ಪಾಯಿ ಹಣ್ಣಿನಲ್ಲಿರುವ ಹೇರಳ ಪೋಷಕಾಂಶಗಳ ಕಾರಣ ಈ ಹಣ್ಣು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಅವುಗಳಲ್ಲಿ ಕೆಲವನ್ನು ಕೆಳಗೆ ವಿವರಿಸಿದೆ:
- ಪಪ್ಪಾಯಿ ಜೀರ್ಣಕಾರಿ ಶಕ್ತಿಯನ್ನು ಪಡೆದಿದ್ದು, ಜೀರ್ಣಾಂಗದ ಅನೇಕ ತೊಂದರೆಗಳನ್ನು ನಿವಾರಣೆ ಮಾಡುತ್ತದೆ.
- ಪಪ್ಪಾಯದಲ್ಲಿ ವಿಟಾಮಿನ್ ‘ಎ’ ಅಧಿಕವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಾಗಿದ್ದು, ಇರಳುಗಣ್ಣು ದೋಷ ನಿವಾರಣೆಗೆ ಸಹಕಾರಿಯಾಗಿದೆ.
- ಪಪ್ಪಾಯಲ್ಲಿರುವ ‘ಪೆಪೇನ್’ ಎಂಬ ಎನ್ಜೆಮ್ (Papain Enzyme) ಬಹು ಆರೋಗ್ಯಕಾರಿ. ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತದೆ. ಮಲಬದ್ಧತೆಗೆ ಈ ಹಣ್ಣು ರಾಮಬಾಣ ಹಾಗೂ ರಕ್ತಮೂಲವ್ಯಾಧಿಗೂ ಸಹ ಸಿದ್ಧ ಔಷಧಿ. ಈ ಎನ್ಜೆಮ್ ಚ್ವಿಂಗಮ್ ಮತ್ತು ಔಷಧಿಗಳ ತಯಾರಿಕೆಯಲ್ಲಿ ಬಳಸಿಕೊಳ್ಳುತ್ತಾರೆ.
- ಪಪ್ಪಾಯಿ ಉತ್ತಮ ನಾರಿನಾಂಶ ಹೊಂದಿರುವುದರಿಂದ ಕೊಲೆಟ್ಟ್ರಾಲ್ ಮಟ್ಟವನ್ನು ಹತೋಟಿಯಲ್ಲಿಡುತ್ತದೆ. ನಿತ್ಯ ಸೇವನೆಯಿಂದ ಹೃದಯಘಾತವನ್ನು ತಡೆಯಬಹುದಲ್ಲದೆ, ಈ ಹಣ್ಣು ದೇಹದ ತೂಕ ಇಳಿಕೆಯಲ್ಲಿ ಗಣನೀಯ ಪಾತ್ರವಹಿಸುತ್ತದೆ.
- ಪಪ್ಪಾಯಿ ಶ್ವಾಸಕೋಶ ಆರೋಗ್ಯಕ್ಕೂ ಉತ್ತಮ. ಧೂಮಪಾನಿಗಳು ಪಪ್ಪಾಯಿ ಜ್ಯೂಸ್ ನಿಯಮಿತವಾಗಿ ಸೇವಿಸುವುದರಿಂದ ಅದರಲ್ಲಿರುವ ಜೀವಸತ್ವ ‘ಎ’ ಶ್ವಾಸಕೋಶದ ಉರಿ, ನೋವು, ಸೋಂಕುಗಳನ್ನು ನಿಯಂತ್ರಣದಲ್ಲಿಡುತ್ತದೆ.
- ಬಾಣಂತಿಯರು ಈ ಹಣ್ಣುಗಳನ್ನು ಸೇವಿಸುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
- ಪಪ್ಪಾಯಿ ಅಕಾಲ ಮುಪ್ಪನ್ನು ತಡೆಯುತ್ತದೆ. ಇದನ್ನು ನೇರವಾಗಿ ಮುಖಕ್ಕೆ ಹಚ್ಚುವುದರಿಂದ ಸಹ ಚರ್ಮ ಮೃದುವಾಗಿ ಕಾಂತಿಯುಕ್ತವಾಗಿ ಹೊಳೆಯುತ್ತದೆ. ಇದಲ್ಲದೆ ಪಪ್ಪಾಯಿ ಕಾಯಿಯ ಜ್ಯೂಸ್ ಮಧ್ಯ ವಯಸ್ಕರಲ್ಲಿ ಕಂಡುಬರುವ ಋತುಚಕ್ರದ ಸಮಸ್ಯೆಗಳಿಗೆ, ಮೊಡವೆಗಳಿಗೆ, ಗಾಯದಲ್ಲಿ ಊತ, ಕೀವುಗಟ್ಟುವುದನ್ನು ತಡೆಯಲು ಉತ್ತಮ ಔಷಧ.
ಲೇಖಕರು : ಕವಿತಾ ಉಳ್ಳಿಕಾಶಿ, ವಿಜ್ಞಾನಿ (ಗೃಹ ವಿಜ್ಞಾನ) ಕೃಷಿ ವಿಜ್ಞಾನ ಕೇಂದ್ರ , ಗಂಗಾವತಿ, ಕೊಪ್ಪಳ.