Health & Lifestyle

ನಿರೋಧಕ ಪಿಷ್ಟ ಹಾಗೂ ಅದರ ಪ್ರಾಮುಖ್ಯತೆ

12 April, 2023 1:49 PM IST By: Kalmesh T
Resistant starch and its importance

ನಿರೋಧಕ ಪಿಷ್ಟವು ಹಲವಾರು ಪ್ರಯೋಜನಗಳನ್ನು ಹೊಂದಿದ್ದು, ಕೆಲವು ಆಹಾರ ಪದಾರ್ಥಗಳಲ್ಲಿ ನೈಸರ್ಗಿಕವಾಗಿ ಲಭ್ಯವಿದೆ. ಇವುಗಳಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಕುರಿತು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದಾರೆ ಹಾವೇರಿಯ ದಾನವೀರ ಶಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ ಶಿದ್ದನಗೌಡ ಯಡಚಿ, ಕಿರಣ್ ನಾಗಜ್ಜನವರ, ತಿಪ್ಪಣ್ಣ ಕೆ.ಎಸ್ ಅವರು.

ನಿರೋಧಕ ಪಿಷ್ಟವು ಆಹಾರದಲ್ಲಿರುವ ನಾರಿನಾಂಶದ ಒಂದು ವಿಧವಾಗಿದೆ. ಇದು ಜೀರ್ಣಕ್ರಿಯೆಯ ಸಂದರ್ಭದಲ್ಲಿ ಸಣ್ಣ ಕರುಳಿನಲ್ಲಿ ಸಂಪೂರ್ಣವಾಗಿ ಜೀರ್ಣವಾಗದೇ ದೊಡ್ಡ ಕರುಳನ್ನು ತಲುಪುತ್ತದೆ.

ದೊಡ್ಡ ಕರುಳನ್ನು ತಲುಪಿದ ನಂತರ ಕರುಳಿನ ಬ್ಯಾಕ್ಟೀರಿಯಾದಿಂದ ಹುದುಗಿಸಲ್ಪಪಡುತ್ತದೆ. ಈ ಪ್ರಕ್ರಿಯೆಯ ಮೂಲಕ ಸಣ್ಣ ಸರಪಳಿಯ ಕೊಬ್ಬಿನಾಮ್ಲಗಳು ಉತ್ಪತ್ತಿಯಾಗುತ್ತವೆ. ನಿರೋಧಕ ಪಿಷ್ಟವು ಹಲವಾರು ಪ್ರಯೋಜನಗಳನ್ನು ಹೊಂದಿದ್ದು, ಕೆಲವು ಆಹಾರ ಪದಾರ್ಥಗಳಲ್ಲಿ ನೈಸರ್ಗಿಕವಾಗಿ ಲಭ್ಯವಿದೆ.

ಇವುಗಳನ್ನು ಆಹಾರ ಸಂಸ್ಕರಣೆಯ ಮೂಲಕವೂ ರಚಿಸಬಹುದಾಗಿದೆ. ಒಟ್ಟಾರೆಯಾಗಿ ನಾಲ್ಕು ವಿಧದ ನಿರೋದಕ ಪಿಷ್ಟಗಳಿದ್ದು, ಪ್ರತಿಯೊಂದು ವಿಧವು ವಿಶಿಷ್ಟ ಗುಣಲಕ್ಷಣಗಳನ್ನು ಹಾಗೂ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ನಿರೋಧಕ ಪಿಷ್ಟವು ಸಂಪೂರ್ಣ ಧಾನ್ಯಗಳು, ಕಡಲೆ, ಬಟಾಣಿ, ಚೆನ್ನಂಗಿ ಬೆಳೆಗಳಂತಹ ದಿದ್ವಳ ಧಾನ್ಯಗಳಲ್ಲಿ ಅಧಿಕವಾಗಿ ಅಡಗಿರುತ್ತದೆ. ನಿಯಮಿತವಾಗಿ ದ್ವಿದಳ ಧಾನ್ಯಗಳನ್ನು ತಿನ್ನುವದರಿಂದ ದೇಹದಲ್ಲಿ ನಿರೋಧಕ ಪಿಷ್ಟದ ಪ್ರಮಾಣವನ್ನು ಹೆಚ್ಚಿಸಬಹುದು.

ಸಂಪೂರ್ಣ ಧಾನ್ಯಗಳಾದ ಓಟ್ಸ್, ಬಾರ್ಲಿ, ಕುಚ್ಚಲಕ್ಕಿ ಇವುಗಳು ನಿರೋಧಕ ಪಿಷ್ಟದ ಉತ್ತಮ ಮೂಲಗಳಾಗಿದೆ. ಈ ಧಾನ್ಯಗಳಿಂದ ತಯಾರಿಸಲ್ಪಟ್ಟ ಬ್ರೆಡ್ ಹಾಗೂ ಪಾಸ್ತಾಗಳೂ ಕೂಡ ನಿರೋಧಕ ಪಿಷ್ಟದ ಪ್ರಮುಖ ಆಕರಗಳಾಗಿವೆ.

ಬಾಳೆಕಾಯಿ ಕೂಡ ಹೆಚ್ಚಿನ ಪ್ರಮಾಣದ ನಿರೋಧಕ ಪಿಷ್ಟವನ್ನು ಹೊಂದಿದ್ದು, ಇದರಿಂದ ಬೇಯಿಸಿ ಅಥವಾ ಬೇಯಿಸದೆ ಅನೇಕ ರೀತಿಯ ಖಾದ್ಯಗಳನ್ನು ಮಾಡಿ ಸೇವಿಸಬಹುದು.

ಆಲೂಗಡ್ಡೆಯು ನಿರೋಧಕ ಪಿಷ್ಟವನ್ನು ಅಧಿಕ ಪ್ರಮಾಣದಲ್ಲಿ ಹೊಂದಿದ್ದು, ಇದನ್ನು ಬೇಯಿಸದೇ ಸೇವಿಸಿದರೆ ಹೆಚ್ಚು ಪರಿಣಾಮಕಾರಿ ಹಾಗೂ ಬೇಯಿಸದ ಆಲೂಗಡ್ಡೆಯಿಂದ ಸಲಾಡ್ ತಯಾರಿಸಿಯೂ ತಿನ್ನಬಹುದಾಗಿದೆ.

ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ಅಗಸೆ ಬೀಜಗಳು ನಿರೋಧಕ ಪಿಷ್ಟದ ಮೂಲಗಳಾಗಿವೆ. ಜೋಳವೂ ಕೂಡ ಅಧಿಕ ಪ್ರಮಾಣದಲ್ಲಿ ನಿರೋಧಕ ಪಿಷ್ಟವನ್ನು ಹೊಂದಿದ್ದು, ಇವುಗಳ ಸೇವನೆಯು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.

ನಿರೋಧಕ ಪಿಷ್ಟದಲ್ಲಿ ನಾಲ್ಕು ಪ್ರಮುಖ ವಿಧಗಳಿವೆ. ಅವುಗಳೆಂದರೆ, ನಿರೋಧಕ ಪಿಷ್ಟ-1, ನಿರೋಧಕ ಪಿಷ್ಟ-2, ನಿರೋಧಕ ಪಿಷ್ಟ-3 ಮತ್ತು ನಿರೋಧಕ ಪಿಷ್ಟ-4.

ನಿರೋಧಕ ಪಿಷ್ಟ-1: ಇದು ಸಸ್ಯಮೂಲ ಆಹಾರಗಳಾದ ಸಂಪೂರ್ಣ ಧಾನ್ಯಗಳು, ದ್ವಿದಳಧಾನ್ಯಗಳು ಮತ್ತು ಅನೇಕ ಕಾಳುಗಳಲ್ಲಿ ಕಂಡುಬರುತ್ತದೆ. ಈ ರೀತಿಯ ನಿರೋಧಕ ಪಿಷ್ಟವು ಸಸ್ಯಮೂಲ ಆಹಾರಗಳ ಜೀವಕೋಶದ ಗೋಡೆಗಳಿಂದ ಸುತ್ತುವರೆದಿದ್ದು, ಜೀರ್ಣಕಾರಿ ಕಿಣ್ವಗಳು ಇವುಗಳನ್ನು ತಲುಪಲು ಸಾಧ್ಯವಾಗುವುದಿಲ್ಲ.

ನಿರೋಧಕ ಪಿಷ್ಟ-2: ಇದರ ಹರಳಿನಂತಹ ರಚನೆಯು ಇದನ್ನು ಜೀರ್ಣವಾಗದಂತೆ ತಡೆಯುತ್ತದೆ ಹಾಗೂ ಇದು ಬೇಯಿಸಿದ ಆಲೂಗಡ್ಡೆ, ಬಾಳೆಕಾಯಿ, ಚೆನ್ನಂಗಿ ಬೆಳೆ, ಕಡಲೆ ಮುಂತಾದವುಗಳಲ್ಲಿ ಇರುತ್ತದೆ.

ನಿರೋಧಕ ಪಿಷ್ಟ-3: ಇದನ್ನು ಪಿಷ್ಟಯುಕ್ತ ಆಹಾರ ಪದಾರ್ಥವನ್ನು ಬೇಯಿಸಿ ತಂಪಾಗಿಸಿದ ನಂತರ ಪಡೆಯಬಹುದಾಗಿದೆ. ಈ ತಂಪಾಗಿಸುವ ಪ್ರಕ್ರಿಯೆಯು ಪಿಷ್ಟಗಳಲ್ಲಿ ಬೇರ್ಪಡಿಸಲಾಗದ ಬಂಧವನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ ಜೀರ್ಣಕ್ರಿಯೆಗೆ ಇದು ಪ್ರತಿರೋಧ ಉಂಟುಮಾಡುತ್ತದೆ.

ನಿರೋಧಕ ಪಿಷ್ಟ-4: ಇದು ಕೃತತವಾಗಿ ಸಂಸ್ಕರಿಸಿದ ಪಿಷ್ಟವಾಗಿದೆ. ಈ ರೀತಿಯ ನಿರೋಧಕ ಪಿಷ್ಟವನ್ನು ಜೀರ್ಣಕ್ರಿಯೆಯನ್ನು ಪ್ರತಿರೋಧಿಸಲೆಂದೇ ರಾಸಾಯನಿಕವಾಗಿ ಮಾರ್ಪಡಿಸಲಾಗಿರುತ್ತದೆ. ಇದು ಆಹಾರದಲ್ಲಿ ನೈರ್ಸಗಿಕವಾಗಿ ಕಂಡುಬರುವುದಿಲ್ಲ.

ಸಣ್ಣ ಕರುಳಿನಲ್ಲಿ ಜೀರ್ಣವಾಗದ ಈ ನಿರೋಧಕ ಪಿಷ್ಟವು ಮಾನವನ ಆರೋಗ್ಯದ ಮೇಲೆ ಅನೇಕ ಸಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ನಿರೋಧಕ ಪಿಷ್ಟವು ಕರುಳಿನಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಪೋಷಿಸುವುದರ ಮೂಲಕ ಪ್ರಿಬಯಾಟಿಕ್ ಎನಿಸಿಕೊಂಡಿದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ, ಉರಿಯೂತವನ್ನು ಕಡಿಮೆಗೊಳಿಸುತ್ತದೆ.

ಒಟ್ಟಾರೆಯಾಗಿ, ನಿರೋಧಕ ಪಿಷ್ಟವು ಆಹಾರ ತಂತ್ರಜ್ಞಾನದಲ್ಲಿ ಅನೇಕ ಸಂಭಾವ್ಯ ಅನ್ವಯಿಕೆಗಳನ್ನು ಹೊಂದಿದೆ ಮತ್ತು ಅದರ ಆರೋಗ್ಯ ಪ್ರಯೋಜನಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಸುವುದರಿಂದ ಅದರ ಬಳಕೆಯು ಹೆಚ್ಚಾಗುವ ಸಾಧ್ಯತೆ ಇದೆ.

ನಿರೋಧಕ ಪಿಷ್ಟವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಕೆಲವು ಸಂಭಾವ್ಯ ಅನಾನೂಕೂಲಗಳನ್ನು ಹೊಂದಿದೆ. ಕೆಲವು ವ್ಯಕ್ತಿಗಳಲ್ಲಿ ಹೆಚ್ಚಿನ ಪ್ರಮಾಣದ ನಿರೋಧಕ ಪಿಷ್ಟ ಸೇವನೆಯಿಂದ ಹೊಟ್ಟೆ ಉಬ್ಬುವುದು ಮತ್ತು ಅತಿಸಾರದಂತಹ ಜೀರ್ಣಕಾರಿ ಅಸ್ವಸ್ಥತೆ ಉಂಟಾಗಬಹುದು.

ನಿರೋಧಕ ಪಿಷ್ಟವು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುಗಳಂತಹ ಖನಿಜಗಳನ್ನು ಬಂಧಿಸಿ ದೇಹದಲ್ಲಿ ಅವುಗಳ ಹೀರಿಕೊಳ್ಳುವಿಕೆಯನ್ನು ಕಡಿಮೆಗೊಳಿಸುತ್ತದೆ. ಇದು ಕಾಲಾನಂತರದಲ್ಲಿ ಖನಿಜಗಳ ಕೊರತೆಗೆ ಕಾರಣವಾಗಬಹುದು.

ಕೆಲವು ಅಧ್ಯಯನಗಳ ಪ್ರಕಾರ ನಿರೋಧಕ ಪಿಷ್ಟದ ಅತಿಯಾದ ಸೇವನೆಯು ಕರುಳಿನ ಕ್ಯಾನ್ಸರ್‌ಗೆ ಕಾರಣವಾಗಬಹುದು. ಇದು ಒಂದು ರೀತಿಯ ಶರ್ಕರ ಪಿಷ್ಟವಾಗಿದ್ದು ಅತಿಯಾದ ಸೇವನೆಯಿಂದ ತೂಕ ಹೆಚ್ಚಾಗಬಹುದು.

ನಿರೋಧಕ ಪಿಷ್ಟವು ಸಣ್ಣಕರುಳಿನಲ್ಲಿ ಗ್ಲುಕೋಸ್ ಆಗಿ ಪರಿವರ್ತನೆಗೊಳ್ಳದಿರುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ನಿರೋಧಕ ಪಿಷ್ಟವು ಹೆಚ್ಚು ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇದರಿಂದ ಲಘು ಆಹಾರದ ಪ್ರಚೋದನೆಯನ್ನು ಕಡಿಮೆಗೊಳಿಸಬಹುದು ಹಾಗೂ ತೂಕ ನಷ್ಟಕ್ಕೆ ಸಹಕಾರಿಯಾಗಿದೆ.

ನಿರೋಧಕ ಪಿಷ್ಟವು ಕರುಳಿನಲ್ಲಿ ಉರಿಯೂತವನ್ನು ಕಡಿಮೆಗೊಳಿಸುತ್ತದೆ. ಇದು ಕ್ಯಾಲ್ಸಿಯಂ ನಂತಹ ಖನಿಜಗಳ ಹಿರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ. ಇದು ಬಲವಾದ ಮೂಳೆಗಳು ಮತ್ತು ಹಲ್ಲುಗಳನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ.

ನಿರೋಧಕ ಪಿಷ್ಟವು ಐಆಐ ಕೊಲೆಸ್ಟ್‌ರಾಲ್‌ ಮಟ್ಟವನ್ನು ಕಡಿಮೆಗೊಳಿಸಿ ಹೃದ್ರೋಗದ ಅಪಾಯವನ್ನು ಕಡಿಮೆಮಾಡುತ್ತದೆ. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ರೋಗ ಪ್ರತಿರೋಧಕ ಶಕ್ತಿಯು ಉತ್ತಮಗುಳ್ಳುತ್ತದೆ.

ನಿರೋಧಕ ಪಿಷ್ಟವು ನರಪ್ರೇರಕ ಸಿರೊಟೋನಿನ ಮಟ್ಟವನ್ನು ಹೆಚ್ಚಿಸಿ ಉತ್ತಮ ನಿದ್ರೆ ಮತ್ತು ಸುಧಾರಿತ ಮನಸ್ಥಿತಿಯನ್ನು ಉತ್ತೇಜಿಸುತ್ತದೆ. ಒಟ್ಟಾರೆಯಾಗಿ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ನಿರೋಧಕ ಪಿಷ್ಟವನ್ನು ಸೇವಿಸುವುದರಿಂದ ಆರೋಗ್ಯ ಮತ್ತು ಕ್ಷೇಮವನ್ನು ಉತ್ತಮಗೊಳಿಸಬಹುದು. ಇದು ಆರೋಗ್ಯಕರ ಆಹಾರ ಕ್ರಮಕ್ಕೆ ಉತ್ತಮ ಸೇರ್ಪಡೆಯಾಗಬಲ್ಲದು.

ಆಹಾರ ತಂತ್ರಜ್ಞಾನದಲ್ಲಿ ನಿರೋಧಕ ಪಿಷ್ಟವು ಹಲವಾರು ಅನ್ವಯಗಳನ್ನು ಹೊಂದಿದೆ. ನಿರೋಧಕ ಪಿಷ್ಟಗಳು ಬೇಕರಿ ಉತ್ಪನ್ನಗಳ ಹದ ಮತ್ತು ಜೀವಿತಾವಧಿಯನ್ನು ಹೆಚ್ಚಿಸಲು ಬಳಸಲ್ಪಡುತ್ತದೆ. ಇದು ಬ್ರೇಡನ ಮೃದುತ್ವವನ್ನು ಹೆಚ್ಚಿಸುತ್ತದೆ.

ಕುಕ್ಕಿಸ್ ಮತ್ತು ಕೇಕ್‌ಗಳಲ್ಲಿ ಕೊಬ್ಬಿನ ಜೊತೆಗೆ ನಿರೋಧಕ ಪಿಷ್ಟಗಳನ್ನು ಬಳಸುವುದರಿಂದ ಕೊಬ್ಬಿನ ಹೀರಿಕೊಳ್ಳುವಿಕೆಯನ್ನು ಕಡಿಮೆಗೊಳಿಸಬಹುದು. ಆಹಾರಗಳ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಲು ನಿರೋಧಕ ಪಿಷ್ಟವನ್ನು ಆಹಾರದಲ್ಲಿ ಸೇರಿಸಬಹುದು ಹಾಗೂ ನಾರಿನಾಂಶವನ್ನು ಹೆಚ್ಚಿಸಲು ಇವುಗಳನ್ನು ಧಾನ್ಯಗಳಿಗೆ ಸೇರಿಸಬಹುದು.

ಆಹಾರದ ಗ್ಲೈಸಿಮಿಕ್‌ ಸೂಚಿಯನ್ನು ಕಡಿಮೆ ಮಾಡಲು ನಿರೋಧಕ ಪಿಷ್ಟವನ್ನು ಬಳಸಬಹುದು. ಇದು ಮಧುಮೇಹ ಹೊಂದಿರುವ ಜನರಿಗೆ ಪ್ರಯೋಜನಕಾರಿಯಾಗಿದ್ದು ಇನ್ಸ್ಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ.

Authors: ಶಿದ್ದನಗೌಡ ಯಡಚಿ, ಕಿರಣ್ ನಾಗಜ್ಜನವರ, ತಿಪ್ಪಣ್ಣ ಕೆ.ಎಸ್,  ದಾನವೀರ ಶಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ದೇವಿಹೊಸೂರು, ಹಾವೇರಿ.