Health & Lifestyle

ಪರಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಲ್ಲಿವೆ ನೂರೆಂಟು ಆರೋಗ್ಯ ಪ್ರಯೋಜನಗಳು

26 June, 2021 10:32 PM IST By:

ಬಿಲ್ವಪತ್ರೆ, ಪರಶಿವನಿಗೆ ಪ್ರಿಯವಾಗಿರುವ ಮರ. ಅದೆಷ್ಟೇ ಸುಂದರವಾಗಿರುವ, ದುಬಾರಿ ಹೂವನ್ನು ಕೊಂಡು ತಂದು ಮುಡಿಗೇರಿಸಿದರೂ ಪರಮೇಶ್ವರ ಪ್ರಸನ್ನನಾಗಲಾರ. ಆದರೆ, ಒಂದೇ ಒಂದು ಬಿಲ್ವಪತ್ರೆಯನ್ನು ಏರಿಸಿದರೆ ಕೈಲಾಸ ವಾಸಿ ಶಂಕರನು ಬೇಡಿದ ವರವನ್ನು ನೀಡುತ್ತಾನೆ ಎಂಬುದು ಶಿವ ಭಕ್ತರ ನಂಬಿಕೆ. ಹೀಗಾಗಿಯೇ ಶಿವರಾತ್ರಿ ಹಬ್ಬದಂದು ಬಿಲ್ವಪತ್ರೆಗೆ ಭಾರೀ ಬೇಡಿಕೆ ಇರುತ್ತದೆ. ಶಿವ ಶರಣರ ಮನೆಯಲ್ಲಂತೂ ಪರಮೇಶ್ವರನಿಗೆ ನಿತ್ಯ ಪೂಜೆ ಸಲ್ಲಿಸಲು ಬಿಲ್ವಪತ್ರೆ ಬೇಕೇ ಬೇಕು. ಇಂತಹ ಪೂಜನೀಯ ಸ್ಥಾನದಲ್ಲಿರುವ ಬಿಲ್ವಪತ್ರೆ ತನ್ನೊಳಗೆ ನೂರಾರು ಔಷಧ ಗುಣಗಳನ್ನು ಅಡಗಿಸಿಟ್ಟುಕೊಂಡಿದೆ. ಆದರೆ ಈ ಬಗ್ಗೆ ಅರಿತವರು ಕೆಲವೇ ಕೆಲವರು.

ಬೆಳಗ್ಗೆ ಎದ್ದ ಕುಡಲೇ ಕೆಲವರು ಬಿಲ್ವಪತ್ರೆಯ ದಳಗಳನ್ನು ತಿನ್ನುವುದನ್ನು ನೀವು ನೋಡಿರಬಹುದು. ಹಳ್ಳಿಗಳಲ್ಲಿ ಮಂಜಾನೆಯ ವಾಯುವಿಹಾರ ಮಾಡುವಾಗ ರಸ್ತೆ ಪಕ್ಕ, ಜಮೀನು ಇಲ್ಲವೇ ದೇವಾಲಯಗಳ ಆವರಣದಲ್ಲಿ ಬೆಳೆದಿರುವ ಪತ್ರೆ ಮರದಿಂದ ಬಿಲ್ವ ದಳಗಳನ್ನು ಬಿಡಿಸಿಕೊಂಡು ಖಾಲಿ ಹೊಟ್ಟೆಗೆ ಸೇವಿಸುವುದರಿಂದ, ಅಜೀರ್ಣ, ಆ್ಯಸಿಡಿಟಿ, ಹೊಟ್ಟೆ, ಹಾಗೂ ತಲೆನೋವು ಸೇರಿ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.

ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಸ್ಥಾನವನ್ನು ಹೊಂದಿರುವ ಬಿಲ್ವಪತ್ರೆ ಮರಗಳು ಹೆಚ್ಚಾಗಿ ಕಂಡುಬರುವುದು ದಕ್ಷಿಣ ಏಷ್ಯಾದ ದೇಶಗಳಲ್ಲಿ. ಅದರಲ್ಲೂ ಭಾರತದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಸಾಮಾನ್ಯವಾಗಿ ಇಂಡಿಯನ್ ಬೇಲ್ ಎಂದು ಕರೆಯಲ್ಪಡುವ (ಅಜೆಲ್ ಮರ್ಮೆಲಾಸ್) ಬಿಲ್ವಪತ್ರೆ ಮರದ ಎಲೆಗಳು ಹಾಗೂ ಸಣ್ಣ ಗೊಂಚಲುಗಳಲ್ಲಿ ಕಾಣಬಹುದಾದ ಬಿಳಿಯ ಹುವುಗಳು ಸುವಾಸನೆ ಸೂಸುತ್ತವೆ. ಬಿಲ್ವಪತ್ರೆ ಮರದ ಪ್ರತಿ ಭಾಗ, ಅಂದರೆ ಬೇರು, ತೊಗಟೆ, ಪತ್ರೆ ಹಾಗೂ ಕಾಯಿ, ಹಣ್ಣು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ಹೀಗಾಗಿ ಆಯುರ್ವೇದದಲ್ಲಿ ಈ ಮರಕ್ಕೆ ಶ್ರೇಷ್ಠ ಸ್ಥಾನವಿದೆ. ಬಿಲ್ವಪತ್ರೆ ಕಷಾಯ, ತೊಗಟೆ, ಬೇರುಗಳ ಕಷಾಯ ಸೇವಿಸುವುದರಿಂದ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು. ಇಂತಹ ಬಿಲ್ವಪತ್ರೆಯ ಕೆಲವು ಔಷಧ ಗುಣಗಳ ಪರಿಚಯ ಇಲ್ಲಿದೆ...

ಕೇಶಗಳ ಕುಶಲತೆಗೆ

ಕೂದಲುಗಳ ಚಿಂತೆ ಯಾರಿಗಿಲ್ಲ ಹೇಳಿ? ಇತ್ತೀಚೆಗಂತೂ ಮಾನಸಿಕ ಒತ್ತಡ, ಅಸಮತೋಲಿತ ಆಹಾರ ಪದ್ಧತಿ ಹಾಗೂ ಮಿತಿ ಮೀರಿದ ಮಾಲಿನ್ಯದಿಂದಾಗಿ ಬಹಳಷ್ಟು ಮಂದಿ ಕೂದಲು ಉದುರುವಿಕೆ, ತಲೆ ಹೊಟ್ಟು, ಕೂದಲು ಸೀಳುವಿಕೆ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಇವೆಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುವಲ್ಲಿ ಬಿಲ್ವಪತ್ರೆ ನಿಮಗೆ ನೆರವಾಗಬಲ್ಲದು. ಬಿಲ್ವಪತ್ರೆಯನ್ನು ನುಣುಪಾಗಿ ಅರೆದು ಅದನ್ನು ತಲೆಯ ಕೂದಲಿನ ಬೇರುಗಳಿಗೆ ಇಳಿಯುವಂತೆ ಹಚ್ಚಿಕೊಂಡು, ಅರ್ಧ ಗಂಟೆ ಬಿಟ್ಟು ಹದವಾದ ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡುವುದರಿಂದ ಕೂದಲುಗಳ ಆರೋಗ್ಯ ವೃದ್ಧಿಸುತ್ತದೆ. ಇದರಿಂದ ಕೂದಲುಗಳು ಸೊಂಪಾಗಿ ಬೆಳೆಯುತ್ತವೆ. ಜೊತೆಗೆ ಕೂದಲಿಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು ದೂರವಾಗುತ್ತವೆ.

ದೇಹದ ತೂಕ ಇಳಿಸುತ್ತೆ

ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡುವ ಗುಣ ಬಿಲ್ವಪತ್ರೆ ಹಣ್ಣಿನಲ್ಲಿದೆ. ಪ್ರತಿ ದಿನ ಬಿಲ್ವಪತ್ರೆ ಹಣ್ಣಿನ ಸಿಹಿ ಪಾನಕ ಮಾಡಿಕೊಂಡು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದರೊಂದಿಗೆ ದೇಹದ ಮೇಲೆ ಕುರುಗಳು ಎದ್ದಾಗ ಬಿಲ್ವಪತ್ರೆ ಮರದ ಬೇರನ್ನು ನಿಂಬೆ ರಸದಲ್ಲಿ ತೇಯ್ದು ಕುರುಗಳಿಗೆ ಹಚ್ಚಿದಾಗ ಕುರುಗಳು ಕಡಿಮೆಯಾಗುತ್ತವೆ.

ತಲೆನೋವಿಗೆ ಪರಿಹಾರ

ತಲೆನೋವಿನ ಸಮಸ್ಯೆ ಹೊಂದಿರುವವರು ಬಿಲ್ವಪತ್ರೆ ಮರದ ಬೇರನ್ನು ಒಣಗಿಸಿ, ತೇಯ್ದು, ಹಣೆಗೆ ಹಚ್ಚುವುದರಿಂದ ತಲೆನೋವು ಕಡಿಮೆಯಾಗುತ್ತದೆ. ನಿದ್ರಾಹೀನತೆಯಿಂದ ಬಳಲುವವರು ಹೀಗೆ ಮಾಡಿದಾಗ ಸುಖವಾದ ನಿದ್ರೆ ಬರುತ್ತದೆ. ಜೊತೆಗೆ, ಬಿಲ್ವಪತ್ರೆ ಮರದ ಚೆಕ್ಕೆ ಹಾಗೂ ಬೇವಿನ ಮರದ ಚೆಕ್ಕೆಯನ್ನು ಸಮ ಪ್ರಮಾಣದಲ್ಲಿ ಜಜ್ಜಿ, ಹಾಲಿನಲ್ಲಿ ಕಷಾಯ ಮಾಡಿಕೊಂಡು ಕುಡಿದರೆ, ಹುಳಿ ತೇಗು, ಪಿತ್ತ, ಹೊಟ್ಟೆ ನೋವು, ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.

ದೇಹದ ದುರ್ಗಂಧ ನಿವಾರಣೆ

ಬಿಲ್ವಪತ್ರೆ ರಸವನ್ನು, ಪ್ರತಿ ದಿನ ಮೈಗೆ ಹಚ್ಚಿಕೊಂಡು, ೩೦ ನಿಮಿಷಗಳ ನಂತರ ಸ್ನಾನ ಮಾಡುವುದರಿಂದ ದೇಹದ ದುರ್ಗಂಧ ತಡೆಗಟ್ಟಬಹುದು. ಬಿಲ್ವಪತ್ರೆ ಎಲೆಗಳನ್ನು ಬಿಸಿ ನೀರಿಗೆ ಹಾಕಿ, ಸ್ನಾನ ಮಾಡುವುದರಿಂದ ಚರ್ಮದ ಮೇಲಾಗುವಂತಹ ಕಜ್ಜಿ, ತುರಿಕೆಗಳನ್ನ ಕಡಿಮೆ ಮಾಡಬಹುದು. ಬಿಲ್ವಪತ್ರೆ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ, ದಿನದಲ್ಲಿ 2 ಬಾರಿ ಸೇವಿಸುವುದರಿಂದ ಬಾಯಿಯ ಹುಣ್ಣು ಕಡಿಮೆಯಾಗುತ್ತದೆ. ಇದೇ ಹಣ್ಣಿನ ತೊಗಟೆಯನ್ನು ಅರೆದು, ಜೇನು ತುಪ್ಪದೊಂದಿಗೆ ಸೇವಿಸುವುದರಿಂದ ವಾಕರಿಕೆ, ವಾಂತಿ ಕಡಿಮೆಯಾಗುತ್ತದೆ.

ಹೈ ಬಿಪಿಗೆ ಮದ್ದು

ಬಿಲ್ವಪತ್ರೆ ಮರದ ಬೇರಿನ ಮೇಲ್ಪದರವನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು, ಅಧಿಕ ರಕ್ತದೊತ್ತಡ (ಹೈ ಬಿಪಿ) ಎದುರಾದಾಗ ಒಂದು ಚಮಚ ಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿ, ಕಷಾಯ ಮಾಡಿ, ತಣ್ಣಗಾದ ಬಳಿಕ ಕುಡಿಯುವುದರಿಂದ (ದಿನಕ್ಕೆ 2-3 ಬಾರಿ) ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಬಿಲ್ವಪತ್ರೆಯ ಇತರ ಪ್ರಯೋಜನಗಳು

  • ಪ್ರತಿ ನಿತ್ಯ 2ರಿಂದ 3 ಚಮಚ ಬಿಲ್ವಪತ್ರೆಯ ರಸ ಸೇವಿಸುತ್ತಿದ್ದರೆ ನಿಶ್ಯಕ್ತಿ ದೂರವಾಗುತ್ತದೆ.
  • ಬಿಲ್ವಪತ್ರೆಯ ಕಷಾಯವನ್ನು ಪ್ರತಿ ದಿನ ಕುಡಿಯುವುದರಿಂದ ಮಾನಸಿಕ ಒತ್ತಡಗಳು, ಮಾನಸಿಕ ಉದ್ವೇಗ, ನಿವಾರಣೆಯಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ.
  • ಬಿಲ್ವಪತ್ರೆ ಹಣ್ಣಿನ ತಿರುಳಿಗೆ ಸ್ವಲ್ಪ ಶುಂಠಿ ಮತ್ತು ಜೀರಿಗೆ ಹಾಕಿ ಕಷಾಯ ಮಾಡಿಕೊಂಡು ದಿನಕ್ಕೆ 2 ಬಾರಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಮೂಲವ್ಯಾದಿ ತೊಂದರೆ ನಿಯಂತ್ರಣಕ್ಕೆ ಬರುತ್ತದೆ.
  • ಬಿಲ್ವಪತ್ರೆಯನ್ನು ಅರೆದು (ನೀರು ಸೇರಿಸಿ) ಆ ಮಿಶ್ರಣವನ್ನು ಕಣ್ಣುಗಳ ರೆಪ್ಪೆಯ ಮೇಲೆ ಹಚ್ಚುವುದರಿಂದ ದ್ರಷ್ಟಿ ಸಾಮರ್ಥ್ಯ ವೃದ್ಧಿಯಾಗುತ್ತದೆ.
  • ಪತ್ರೆಯನ್ನು ರಾತ್ರಿ ನೀರಿನಲ್ಲಿ ನೆನೆಯಲು ಬಿಟ್ಟು ಬೆಳಗ್ಗೆ ಆ ನೀರಿನಿಂದ ಕಣ್ಣÄಗಳನ್ನು ತೊಳೆಯುವುದರಿಂದ ಕಣ್ಣಿನ ಉರಿ, ತುರಿಕೆ ಕಡಿಮೆಯಾಗುತ್ತದೆ.

ವಿಶೇಷ ಸೂಚನೆ: ಲೇಖನದಲ್ಲಿ ತಿಳಿಸಿರುವ ಮನೆ ಮದ್ದನ್ನು ಪ್ರಯೋಗಿಸುವ ಮೊದಲು ಆಯುರ್ವೇದ ವೈದ್ಯರ ಸಲಹೆ ಪಡೆದು ದೃಢಪಡಿಸಿಕೊಳ್ಳಬೇಕಾಗಿ ವಿನಂತಿ.