ಭಾರತೀಯ ಆಯುರ್ವೇದ ಔಷಧಿಯಲ್ಲಿ ಹಿಂದಿನಿಂದಲೂ ತನ್ನದೇ ಆದ ಸ್ಥಾನ ಪಡೆದುಕೊಂಡು ಬಂದಿರುವಂತಹ ಮೆಂತೆ ಕಾಳಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಇದು ಕಾಯಿಲೆಗಳನ್ನು ನಿವಾರಿಸುವುದು ಮಾತ್ರವಲ್ಲದೆ ಕೆಲವೊಂದು ರೋಗಗಳು ಬಾರದಂತೆ ತಡೆಯುವುದು.
ಮೆಂತೆ ಬೀಜಗಳನ್ನು ನೆನೆಸಿ ಈ ಬೀಜಗಳನ್ನು ಮೊಸರಿನಜೊತೆಗೆ ಮಿಶ್ರಣ ಮಾಡಿ ತಲೆಗೆ ಹಚ್ಚುವದರಿಂದ ಕೂದಲು ಉದರುವದಿಲ್ಲ. ಆಂತೆಯೆ ಕೂದಲಿಗೆ ಹೊಳಪು ಬರುತ್ತದೆ. ಉದ್ದಿನ ದೋಸೆಗೆ ರುಬ್ಬಲು ಅಕ್ಕಿ ನೆನೆ ಹಾಕುವಾಗ ನಾಲ್ಕು ಮೆಂತೆ ಕಾಳುಗಳನ್ನು ಸೇರಿಸುವದು ಸರ್ವೆ ಸಾಮಾನ್ಯ. ಹಾಗೆಯೆ ಇದನ್ನ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಬಗೆಯ ಪ್ರಯೋಜನಗಳಿವೆ. ಮೆಂತೆ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳು ಇಲ್ಲಿವೆ ನೋಡಿ
ಹೃದಯದ ಆರೋಗ್ಯ ಕಾಪಾಡುವುದು:
ಇದು ಹೆಚ್ಚಿನ ಪ್ರಮಾಣದ ಪೋಟ್ಯಾಸಿಯಂಅನ್ನು ಹೊಂದಿರುತ್ತದೆ. ಇದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಮಾಡುತ್ತದೆ. ಮೆಂತೆ ನೀರನ್ನು ಕುಡಿಯುವ ಜತೆಗೆ ಅದನ್ನು ಬಾಯಿಗೆ ಹಾಕಿಕೊಂಡು ಜಗಿದು ತಿನ್ನಬೇಕು. ಇದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯದ ಕಾಯಿಲೆಗಳು ದೂರವಿರುವಂತೆ ಮಾಡುವುದು.
ಮಧುಮೇಹಿಗಳಿಗೆ ತುಂಬಾ ಒಳ್ಳೆಯದು:
ಮೆಂತ್ಯೆ ಕಾಳಿನಲ್ಲಿ ಗ್ಯಾಲಕ್ಟೋಮನ್ನನ್ ಎನ್ನುವ ನಾರಿನಾಂಶವಿದೆ. ಇದು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ತುಂಬಾ ನಿಧಾನವಾಗಿ ಹೀರಿಕೊಳ್ಳುವಂತೆ ಮಾಡುವುದು. ಇದರಿಂದ ಮಧುಮೇಹ ತಡೆಯಲಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ:
ಮೆಂತ್ಯವು ಫೈಬರ್ ಮತ್ತು ಆಂಟಿಆಕ್ಸಿಡೆಂಟಗಳಿಂದ ಸಮೃದ್ಧವಾಗಿರುವ ಕಾರಣ ಇದು ದೇಹದಿಂದ ಹಾನಿಕಾರಕ ಜೀವಾಣುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ ಮೆಂತೆ ಅಜೀರ್ಣ ಮತ್ತು ಹೊಟ್ಟೆ ನೋವನ್ನು ನಿವಾರಿಸಲು ಬಳಸಲಾಗುತ್ತದೆ.
ತೂಕ ಇಳಿಸಿಕೊಳ್ಳಿ:
ಬೆಳಗ್ಗೆ ನೆನೆಸಿದ ಮೆಥಿ ಬೀಜಗಳನ್ನು ಖಾಲಿ ಹೊಟ್ಟೆಯಲ್ಲಿ ಅಗಿಯುವ ಮೂಲಕ ಮೆಂತೆವನ್ನು ನಮ್ಮತೂಕ ಇಳಿಸುವ ಆಹಾರದಲ್ಲಿ ಸೇರಿಸಿ. ದೇಹದಲ್ಲಿ ನೀರು ನಿಲ್ಲುವಂತಹ ಸಮಸ್ಯೆಯನ್ನು ನಿವಾರಣೆ ಮಾಡಲು ಎರಡು ಲೋಟ ಮೆಂತೆ ಕಾಳಿನ ಬಿಸಿ ನೀರನ್ನು ಕುಡಿಯಬೇಕು. ಇದರಿಂದ ಹೊಟ್ಟೆ ಉಬ್ಬರ ಉಂಟಾಗದು,
ಜ್ವರ ನಿವಾರಣೆ:
ಒಂದು ಚಮಚ ಜೇನುತುಪ್ಪ ಮತ್ತು ಲಿಂಬೆಯೊಂದಿಗೆ ಮೆಂತೆ ಕಾಳಿನ ಸೇವನೆ ಮಾಡಿದರೆ ಆಗ ಖಂಡಿತವಾಗಿಯೂ ಜ್ವರ ನಿವಾರಣೆ ಮಾಡಬಹುದು. ಇದು ಗಂಟಲಿನ ಕಿರಿಕಿರಿ ನಿವಾರಣೆ ಮಾಡುವುದು. ಕೆಮ್ಮು ಮತ್ತು ಗಂಟಲಿನ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಲೇಖಕರು: ಶಗುಪ್ತಾ ಅ ಶೇಖ