ಬಾಳೆಹಣ್ಣು ತಿನ್ನದವರು ಯಾರಿದ್ದಾರ ಹೇಳಿ. ಪ್ರತಿಯೊಬ್ಬರೂ ಬಾಳಿಹಣ್ಣು ತಿಂದೇ ತಿಂದಿರುತ್ತಾರೆ. ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ ಎಂಬುದೊಂದು ಕೇಳಿದ್ದೀರಿ. ದಿನಕ್ಕೆರಡು ಬಾಳೆಹಣ್ಣು ಸಹಾ ವೈದ್ಯರನ್ನು ದೂರವಿಡುವಲ್ಲಿ ಸಮರ್ಥವಾಗಿದೆ ಎಂಬುದು ಸಹ ಸತ್ಯ. ಏಕೆಂದರೆ ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವು ಪೋಷಕಾಂಶಗಳು, ಕರಗುವ ಮತ್ತು ಕರಗದ ನಾರು ಹಾಗೂ ಉತ್ತಮ ಪ್ರಮಾಣದ ಸಕ್ಕರೆ, ಖನಿಜಗಳೂ ಇವೆ.
ಊಟವಾದ ಮೇಲೆ ತಕ್ಷಣಕ್ಕೆ ಯಾವುದಾದರೂ ಒಂದು ಫಲಹಾರ ತಿನ್ನಬೇಕೆಂದು ಅಂದುಕೊಂಡ ತಕ್ಷಣ ನಮ್ಮ ಮೆದುಳಿಗೆ ಥಟ್ಟನೆ ಹೊಳೆಯುವ ಒಂದು ಆರೋಗ್ಯಕರ ಹಣ್ಣು ಎಂದರೆ ಅದು ಬಾಳೆಹಣ್ಣು. ಏಕೆಂದರೆ ಬಾಳೆ ಹಣ್ಣಿನಲ್ಲಿರುವ ಅನೇಕ ರೀತಿಯ ಪೌಷ್ಟಿಕ ಸತ್ವಗಳು ದೇಹಕ್ಕೆ ಸೇರಿದ ತಕ್ಷಣ ನಾವು ಎಂತಹದೇ ಆಹಾರವನ್ನು ಸೇವಿಸಿದ್ದರೂ ಕೂಡ ಅದನ್ನು ಜೀರ್ಣಿಸುವ ಶಕ್ತಿ ಅವುಗಳಿಗಿದೆ. ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ. ಅದಕ್ಕಾಗಿಯೇ ಬಾಳೆ ಹಣ್ಣು ಜನಪ್ರಿಯ ಹಣ್ಣಾಗಿದೆ.
ವ್ಯಾಯಾಮಕ್ಕೆ ಪ್ರಯೋಜನ: ನಿತ್ಯವೂ ವ್ಯಾಯಾಮ ಮಾಡುವವರು ವ್ಯಾಯಾಮ ಪ್ರಾರಂಭಿಸುವ ಸುಮಾರು ಇಪ್ಪತ್ತು ನಿಮಿಷಕ್ಕೂ ಮುನ್ನ ಎರಡು ಬಾಳೆಹಣ್ಣು ತಿಂದರೆ ವ್ಯಾಯಾಮದ ಅವಧಿಯಲ್ಲಿ ಅತಿ ಕಡಿಮೆ ಆಯಾಸ ಅನುಭವಿಸುತ್ತಾರೆ. ಬಾಳೆಹಣ್ಣಿನಲ್ಲಿರುವ ಸಕ್ಕರೆ ರಕ್ತದಲ್ಲಿ ನಿಧಾನವಾಗಿ ಮಿಳಿತಗೊಂಡು ಸೂಕ್ತ ಪ್ರಮಾಣದಲ್ಲಿ ಸ್ನಾಯುಗಳಿಗೆ ಪೂರೈಸುವುದೇ ಇದಕ್ಕೆ ಕಾರಣ. ವ್ಯಾಯಾಮದಿಂದ ಉಂಟಾಗುವ ಸ್ನಾಯು ಸೆಳೆತವನ್ನು ನಿವಾರಿಸಲು ಈ ಹಣ್ಣು ಸಹಾಯ ಮಾಡುತ್ತದೆ.
ಮೂಳೆ ಗಟ್ಟಿಯಾಗುತ್ತದೆ: ಆಹಾರದ ಮೂಲಕ ಲಭ್ಯವಾಗುವ ಕ್ಯಾಲ್ಸಿಯಂ ಮೂಳೆಗಳು ಹೀರಿಕೊಳ್ಳುವಂತಾಗಲು ಬಾಳೆಹಣ್ಣು ಸಹಕರಿಸುತ್ತದೆ. ಮೂಳೆಗಳು ಗಟ್ಟಿಗೊಳ್ಳಲು ಜೇನು ಸೇರಿಸಿದ ಹಾಲು ಮತ್ತು ಬಾಳೆಹಣ್ಣನ್ನು ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ಕ್ಯಾಲ್ಸಿಯಂ ಸೋರಿಹೋಗುವುದನ್ನು ತಪ್ಪಿಸಿ ಮೂಳೆಗಳ ದೃಢತೆ ಹೆಚ್ಚಿಸಬಹುದು. ಬಾಳೆಹಣ್ಣು ಸೇವಿಸುವದರಿಂದ ಮೂತ್ರಪಿಂಡದ ಕಾಯಿಲೆಯ ಅಪಾಯವನ್ನುಶೇ.50% ರಷ್ಟುಕಡಿಮೆ ಮಾಡುತ್ತದೆ.
ತೂಕ ಇಳಿಕೆಗೆ ಸಹಾಯ: ಈ ಹಣ್ಣುಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ ಮತ್ತು ಫೈಬರ್ ಹೊಂದಿರುತ್ತದೆ.ಇವೆಲ್ಲವು ತೂಕ ಇಳಿಕೆಗೆ ಸಹಾಯ ಮಾಡುತ್ತವೆ.
ಜೀರ್ಣಕ್ರಿಯೆಗೆ ಸಹಕಾರಿ: ಈ ಹಣ್ಣಿನಲ್ಲಿ ಫೈಬರ್ ಸಾಕಷ್ಟು ಪ್ರಮಾಣದಲ್ಲಿದೆ.ನಮ್ಮ ಜೀರ್ಣರಸದಲ್ಲಿರುವ ಅಂಶಗಳಲ್ಲಿ ಪೆಕ್ಟಿನ್ ಸಹಾ ಒಂದು. ಇದು ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ದೇಹ ಅರಗಿಸಿಕೊಳ್ಳಲಾರದ ಖನಿಜಗಳನ್ನು ನಿವಾರಿಸಲೂ ಬಳಕೆಯಾಗುತ್ತದೆ.
ಲೇಖಕರು: ಶಗುಪ್ತಾ ಅ ಶೇಖ