ನೆಲ್ಲಿಕಾಯಿ ಅಥವಾ ಆಮ್ಲ (Indian gooseberry),ಸಾಮಾನ್ಯವಾಗಿ ತಿನ್ನಲು ಕಹಿ ಮತ್ತು ಒಗರು ಒಗರಾಗಿದ್ದರೂ ಇದನ್ನು ತಿಂದ ಬಳಿಕ ನೀರು ಮಾತ್ರ ಸಿಹಿಯಾಗಿರುತ್ತದೆ. ನೆಲ್ಲಿಕಾಯಿ ತಿಂದ ಬಳಿಕ ಹೊಳೆಯ ನೀರು ಸಿಹಿಯಾಗಿದ್ದಕ್ಕೇ ಹಿಂದೆ ಹೊಳೆಯೊಂದರಲ್ಲಿ ದೀಪಕ್ಕೆಂದು ಕಳಿಸಿದ್ದ ಡಬ್ಬಿಯ ಎಣ್ಣೆಯನ್ನೆಲ್ಲಾ ಚೆಲ್ಲಿ ನೀರನ್ನು ತುಂಬಿಕೊಂಡು ಬಂದ ಎಂಬ ಒಂದು ಕಥೆಯನ್ನು ಆಧರಿಸಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವ ನದಿಗೆ 'ಎಣ್ಣೆಹೊಳೆ'ಎಂದೇ ಹೆಸರಿದೆ, ಈ ನದಿಯ ತೀರದಲ್ಲಿರುವ ಗ್ರಾಮದ ಹೆಸರೂ ಎಣ್ಣೆಹೊಳೆ ಎಂದೇ ಇದೆ. ಕಥೆ ಏನೇ ಇರಲಿ, ನಾಲಿಗೆಯನ್ನು ಸಿಹಿಯಾಗಿಸಬೇಕಾದರೆ ನೆಲ್ಲಿಕಾಯಿಯಲ್ಲೇನೋ ವಿಶೇಷವಿರಲೇಬೇಕಲ್ಲ? ಹೌದು, ಆಯುರ್ವೇದ ಈ ಶಕ್ತಿಯನ್ನು ಹಲವಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದು ಹಲವಾರು ಕಾಯಿಲೆಗಳಿಗೆ ಟಾನಿಕ್ ನ ರೂಪದಲ್ಲಿ ಬಳಸುತ್ತಾ ಬಂದಿದೆ. ವಿಶೇಷವಾಗಿ ತ್ವಚೆ, ಕೂದಲಿಗೆ ಹೊಳಪನ್ನು ನೀಡಲು ಬಳಸಬಹುದಾದ ಸೌಂದರ್ಯವರ್ಧಕವಾಗಿಯೂ, ತೂಕ ಇಳಿಸಲು ನೆರವಾಗುವ ಆಹಾರದ ರೂಪದಲ್ಲಿಯೂ ಬಳಕೆಯಲ್ಲಿದೆ...
ಆರೋಗ್ಯವನ್ನು ವೃದ್ಧಿಸುವ ಹಲವಾರು ಗುಣಗಳು ಇದರಲ್ಲಿದೆ
ನೆಲ್ಲಿಕಾಯಿಯಲ್ಲಿ ಆರೋಗ್ಯವನ್ನು ವೃದ್ದಿಸುವ ಹಲವಾರು ಗುಣಗಳಿದ್ದು ಹಲವು ರೂಪದಲ್ಲಿ ಇವನ್ನು ಪಡೆಯಬಹುದು. ಈ ಹುಳಿ-ಕಹಿ-ಒಗರು ರುಚಿಯ ಹಣ್ಣನ್ನು ಸಾಮಾನ್ಯವಾಗಿ ಹಾಗೇ ತಿನ್ನಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದ್ದರಿಂದ ಇವನ್ನು ಸಕ್ಕರೆಪಾಕದಲ್ಲಿ ಮುಳುಗಿಸಿಟ್ಟು ಕೆಲವು ದಿನಗಳ ಬಳಿಕ ತೆಗೆದು ತಿನ್ನಬಹುದು. ಉತ್ತರ ಭಾರತದಲ್ಲಿ ಇದು 'ಆಮ್ಲೇ ಕಾ ಮುರಬ್ಬಾ'ಎಂದೇ ಹೆಚ್ಚು ಜನಪ್ರಿಯಗೊಂಡಿದೆ. ನೆಲ್ಲಿಕಾಯಿಯಲ್ಲಿ ಅದ್ಭುತ ಪ್ರಮಾಣದ ವಿಟಮಿನ್ ಸಿ, ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಗಂಧಕ, ಕ್ರೋಮಿಯಂ ಮೊದಲಾದವುಗಳಿದ್ದು ಒಟ್ಟಾರೆಯಾಗಿ ಸಂಪೂರ್ಣ ಆರೋಗ್ಯಕ್ಕೆ ಒಳ್ಳೆಯ ಆಹಾರವೇ ಆಗಿದೆ. ಆದರೆ, ನೆಲ್ಲಿಕಾಯಿ ಮಧುಮೇಹವನ್ನು ನಿಯಂತ್ರಿಸಲೂ ನೆರವಾಗುತ್ತದೆ ಎಂದು ಇದಕ್ಕೂ ಮುನ್ನ ನಿಮಗೆ ಗೊತ್ತಿತ್ತೇ? ಅಚ್ಚರಿ ಮೂಡಿತೇ? ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನೆಲ್ಲಿಕಾಯಿ ಹೇಗೆ ನಿಯಂತ್ರಣದಲ್ಲಿರಿಸುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ:
ಮಧುಮೇಹವನ್ನು ನೆಲ್ಲಿಕಾಯಿ ಹೇಗೆ ನಿಯಂತ್ರಿಸುತ್ತದೆ? ನೈಸರ್ಗಿಕವಾಗಿ?
ಆರೋಗ್ಯ ತಜ್ಞೆ ಹಾಗೂ ಆರೋಗ್ಯವೃದ್ದಿ ಆಹಾರತಜ್ಞೆ ಶಿಲ್ಪಾ ಅರೋರಾರವ ಪ್ರಕಾರ "ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹಾಗೂ ತ್ವಚೆಯ ಆರೋಗ್ಯವನ್ನು ವೃದ್ದಿಸುವ ಪೋಷಕಾಂಶಗಳಿವೆ ಹಾಗೂ ಇವು ಕರುಳಿನಲ್ಲಿರುವ ಆರೋಗ್ಯಸ್ನೇಹಿ ಸೂಕ್ಷ್ಮಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಅಪಾರವಾಗಿ ವೃದ್ದಿಸುತ್ತವೆ. ಅಲ್ಲದೇ ಇವು ದೇಹ ಇನ್ಸುಲಿನ್ ಅನ್ನು ತಾಳಿಕೊಳ್ಳುವ ಕ್ಷಮತೆಯನ್ನೂ ಹೆಚ್ಚಿಸಿ ರಕ್ತದಲ್ಲಿ ಅಧಿಕ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತವೆ. ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ ಹಾಗೂ ಜೀವಕೋಶಗಳ ಮಟ್ಟದಲ್ಲಿ ನಡೆಯುವ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇವೆಲ್ಲವೂ ಮಧುಮೇಹಿಗಳಿಗೆ ಪೂರಕವಾಗಿದ್ದು ಆದಷ್ಟೂ ನೈಸರ್ಗಿಕ ರೂಪದಲ್ಲಿ ಇದನ್ನು ಸೇವಿಸುವುದು ಅಗತ್ಯವಾಗಿದೆ. ಸಿಹಿಲೇಪಿತ ನೆಲ್ಲಿಕಾಯಿಯ ಸೇವನೆಯಿಂದ ಪ್ರಯೋಜನವಿಲ್ಲ, ಏಕೆಂದರೆ ಇದರಲ್ಲಿರುವ ಸಕ್ಕರೆ ನೆಲ್ಲಿಕಾಯಿಯ ಸಹಜಗುಣಗಳನ್ನು ಕುಂದಿಸುತ್ತದೆ"
ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ
Medical Food ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ನೆಲ್ಲಿಕಾಯಿಯಿಂದ ಪ್ರತ್ಯೇಕಿಸಲ್ಪಟ್ಟ ಪೋಷಕಾಂಶಗಳ ಸೇವನೆಯಿಂದ ಮಧುಮೇಹ ಇರುವ ಇಲಿಗಳಲ್ಲಿ ಸಕ್ಕರೆಯ ಮಟ್ಟ ಗಮನಾರ್ಹವಾಗಿ ಕಡಿಮೆಯಾಗಿದೆ. ದೇಹದಲ್ಲಿ ನುಸುಳಿಕೊಂಡಿರುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಈ ಪೋಷಕಾಂಶಗಳು ಹುಡುಕಿ ಇವುಗಳ ಚಟುವಟಿಕೆಯನ್ನು ಸ್ಥಗಿತಗೊಳಿಸುವ ಮೂಲಕ ಉತ್ಕರ್ಷಣಶೀಲ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಇದು ಮಧುಮೇಹಿ ಇಲಿಗಳಲ್ಲಿ ಗ್ಲುಕೋಸ್ ಅನ್ನು ಸಂಸ್ಕರಿಸುವ ಕ್ಷಮತೆ ಹೆಚ್ಚಿಸಲು ನೆರವಾಗುವುದನ್ನು ಕಂಡುಕೊಳ್ಳಲಾಗಿದೆ.
ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ
ನೆಲ್ಲಿಕಾಯಿಯಲ್ಲಿ ಇತರ ಫಲಗಳಲ್ಲಿ ಅತಿ ವಿರಳವಾಗಿರುವ ಕ್ರೋಮಿಯಂ ಎಂಬ ಖನಿಜವಿದೆ. ಇದು ಮೇದೋಜೀರಕ ಗ್ರಂಥಿಯ ಮೇಲೆ ನೇರವಾದ ಪ್ರಭಾವ ಬೀರುತ್ತದೆ. ನಮ್ಮ ದೇಹಕ್ಕೆ ಅಗತ್ಯವಾಗಿರುವ ಇನ್ಸುಲಿನ್ ಮೇದೋಜೀರಕ ಗ್ರಂಥಿಯೇ ಉತ್ಪಾದಿಸುತ್ತದೆ ಹಾಗೂ ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೇ ದೇಹದ ಜೀವರಾಸಾಯನಿಕ ಕ್ರಿಯೆಯನ್ನು ನಿಯಂತ್ರಿಸಲೂ ಕ್ರೋಮಿಯಂ ನೆರವಾಗುತ್ತದೆ ಹಾಗೂ ಇನ್ಸುಲಿನ್ ಗೆ ದೇಹ ಹೆಚ್ಚಿನ ಸ್ಪಂದನೆ ಒದಗಿಸಲು ಸಾಧ್ಯವಾಗುತ್ತದೆ. ತನ್ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಲು ಸಾಧ್ಯವಾಗುತ್ತದೆ. ಈ ಪ್ರಕಾರ ನೆಲ್ಲಿಕಾಯಿಯ ಪ್ರಯೋಜನಗಳು ಅಪಾರವಾಗಿವೆ.
ನೆಲ್ಲಿಕಾಯಿಯಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿವೆ
ಹೌದು, ನೆಲ್ಲಿಕಾಯಿಯಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿವೆ ಹಾಗೂ ಇದೇ ಗುಣ ತೂಕವನ್ನು ನಿಯಂತ್ರಿಸಲೂ ನೆರವಾಗುತ್ತದೆ. ಆಹಾರದಲ್ಲಿ ಹೆಚ್ಚಿನ ಕ್ಯಾಲೋರಿಗಳಿದ್ದಾಗ ತೂಕ ಏರುತ್ತದೆ ಹಾಗೂ ಇದರ ಪರಿಣಾಮವಾಗಿ ದೇಹದಲ್ಲಿ ಇನ್ಸುಲಿನ್ ನಿರೋಧಕತೆ ಹೆಚ್ಚುತ್ತದೆ ಹಾಗೂ ಹೀಗಾದಾಗ ಮಧುಮೇಹವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಮಧುಮೇಹವನ್ನು ನಿಯಂತ್ರಿಸಲು ಆರೋಗ್ಯಕರ ಮಿತಿಗಳಲ್ಲಿ ದೇಹದ ತೂಕ ಇರುವುದು ಅಗತ್ಯವಾಗಿದ್ದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಉತ್ತಮವಾಗಿ ಕಾಯ್ದುಕೊಳ್ಳಲು ನೆರವಾಗುತ್ತದೆ.
ಏರಿದ ಸಕ್ಕರೆಯ ಮಟ್ಟ ಇಳಿಯಲು ನೆಲ್ಲಿಕಾಯಿ ನೆರವಾಗುತ್ತದೆ
ನೆಲ್ಲಿಕಾಯಿಯಲ್ಲಿರುವ ಪಾಲಿಫೆನಾಲ್ ಎಂಬ ಪೋಷಕಾಂಶಗಳಲ್ಲಿ ನಮ್ಮ ದೇಹದ ರಕ್ತದಲ್ಲಿ ಅಧಿಕವಿರುವ ಸಕ್ಕರೆಯ ಮಟ್ಟದಿಂದಾಗಿ ಎದುರಾಗುವ ಉತ್ಕರ್ಷಣಶೀಲ ಒತ್ತಡದಿಂದ ರಕ್ಷಿಸುವ ಗುಣವಿದೆ. ಅಲ್ಲದೇ ದೇಹ ಹೆಚ್ಚಿನ ಇನ್ಸುಲಿನ್ ಅನ್ನು ಬಳಸಿಕೊಳ್ಳಲು ನೆಲ್ಲಿಕಾಯಿ ನೆರವಾಗುವುದರಿಂದ ಏರಿದ ಸಕ್ಕರೆಯ ಮಟ್ಟ ಇಳಿಯಲು ಸಾಧ್ಯವಾಗುತ್ತದೆ.
ನೈಸರ್ಗಿಕವಾಗಿ ಮಧುಮೇಹವನ್ನು ನಿಯಂತ್ರಿಸಲು ನೆಲ್ಲಿಕಾಯಿಯ ಬಳಕೆ ಹೇಗೆ?
ನೆಲ್ಲಿಕಾಯಿ ಸಾಮಾನ್ಯವಾಗಿ ಹಸಿಕಾಯಿಯ ರೂಪದಲ್ಲಿ ಮಾರುಕಟ್ಟೆಯಲ್ಲಿ ದೊರಕುತ್ತದೆ. ಆದರೆ ಒಣಪುಡಿಯ ರೂಪದಲ್ಲಿ ಇದು ಸದಾ ಲಭ್ಯವಿದೆ. ನೆಲ್ಲಿಕಾಯಿಯ ಅತ್ಯಂತ ಉತ್ತಮ ಸೇವನೆಯಿಂದರೆ ಬೆಳಿಗ್ಗೆದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ತಾಜಾ ನೆಲ್ಲಿಕಾಯಿಗಳನ್ನು ಗೊಟಾಯಿಸಿ ತಯಾರಿಸಿದ ಜ್ಯೂಸ್ ಕುಡಿಯುವುದಾಗಿದೆ. ಇದು ಸಾಧ್ಯವಾಗದಿದ್ದರೆ ಕೊಂಚ ನೆಲ್ಲಿಕಾಯಿಯ ಪುಡಿಯನ್ನು ನಿತ್ಯದ ಆಹಾರದ ಮೇಲೆ ಚಿಮುಕಿಸಿಕೊಂಡು ಕಲಸಿ ಸೇವಿಸಬಹುದು. ಇದರಿಂದ ರುಚಿ ಮತ್ತು ಪರಿಮಳವೂ ಹೆಚ್ಚುವುದಲ್ಲದೇ ಆಹಾರದಲ್ಲಿ ನೆಲ್ಲಿಕಾಯಿಯ ಗುಣಗಳೂ ಸೇರಿಸಲ್ಪಡುತ್ತವೆ. ನೆಲ್ಲಿಕಾಯಿಯನ್ನು ಸಕ್ಕರೆಯ ಪಾಕದಲ್ಲಿ ಮುಳುಗಿಸಿಟ್ಟು ಬಳಿಕ ಕಡೆದು ಮಾಡುವ ಮುರಬ್ಬಾವನ್ನೂ ಕೊಂಚ ಪ್ರಮಾಣದಲ್ಲಿ ನಿತ್ಯವೂ ಸೇವಿಸಬಹುದು. ಆದರೆ ನಿಮ್ಮ ಆಹಾರದಲ್ಲಿ ನೆಲ್ಲಿಕಾಯಿಯನ್ನು ಸೇರಿಸಿಕೊಳ್ಳುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯುವುದು ಮುಖ್ಯ. ಏಕೆಂದರೆ ನೀವು ಈಗಾಗಲೇ ಸೇವಿಸುತ್ತಿರುವ ಔಷಧಿಗಳು ಹಾಗೂ ನೆಲ್ಲಿಕಾಯಿ ಎರಡೂ ಏಕಕಾಲದಲ್ಲಿ ಕಾರ್ಯನಿರ್ವಹಿಸಿದರೆ ಸಕ್ಕರೆಯ ಮಟ್ಟ ಆಗಾಧವಾಗಿ ಕುಸಿಯಬಹುದು.