Health & Lifestyle

ಹಲವು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣ; ರಸ್ತೆ ಬದಿ ಸಿಗುವ ಸಂಜೀವಿನಿ ಎಕ್ಕೆ ಗಿಡ

26 July, 2021 9:12 PM IST By:

ಎಕ್ಕದ (ಎಕ್ಕೆ) ಗಿಡ ಎಲ್ಲರಿಗೂ ಚಿರಪರಿಚಿತ. ಎಕ್ಕದ ಎಲೆ ಹಾಗೂ ಹೂವುಗಳಿಗೆ ಪೂಜಾ ವಿಧಿ ವಿಧಾನಗಳಲ್ಲಿ ಅತ್ಯಂತ ಅಗ್ರ ಹಾಗೂ ಶ್ರೇಷ್ಠ ಸ್ಥಾನವಿದೆ. ಹಿಂದೂ ಪುರಾಣದಲ್ಲಿ ಈ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ. ರಥಸಪ್ತಮಿಯ ದಿನದಂದು ಎಕ್ಕದ ಗಿಡದ ಎಲೆಗಳನ್ನು ಧರಿಸಿ ನದಿಯಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಗಿಡದಲ್ಲಿ ಎರಡು ಬಗೆಗಳಿದ್ದು, ಒಂದು ಗಿಡ ಬಿಳಿ ಹುವುಗಳನನ್ನು ಬಿಟ್ಟರೆ ಮತ್ತೊಂದು ನೀಲಿ (ಪರ್ಪಲ್) ಹೂವುಗಳನ್ನು ಬಿಡುತ್ತದೆ. ಬಿಳಿ ಎಕ್ಕದ ಗಿಡದ ಎಲೆಗಳನ್ನ ವಿಶೇಷವಾಗಿ ಗಣೇಶ ಪೂಜೆಗೆ ಬಳಸುತ್ತಾರೆ. ಜೊತೆಗೆ ಪರಮೇಶ್ವರನ ಪೂಜೆಗೂ ಎಕ್ಕದ ಹೂವುಗಳನ್ನು ಬಳಸಲಾಗುತ್ತದೆ.

ಕೇವಲ ಪೂಜೆ, ಧಾರ್ಮಿಕವಾಗಿ ಮಾತ್ರವಲ್ಲದೆ ಆಯುರ್ವೇದದಲ್ಲೂ ಎಕ್ಕದ ಗಿಡಕ್ಕೆ ಶ್ರೇಷ್ಠ ಸ್ಥಾನವಿದೆ. ಇದರ ಎಲೆಗಳನ್ನ ಅನಾದಿಕಾಲದಿಂದಲೂ ಔಷಧವಾಗಿ ಬಳಸಲಾಗುತ್ತಿದೆ. ಅರ್ಕ ಅಥವಾ ದೇವ ರೇಖಾ ಎಂಬ ಹೆಸರಿನಿಂದ ಕರೆಯಲ್ಪಡುವ ಎಕ್ಕದ ಗಿಡ, ಔಷಧ ಗುಣಗಳಿಂದ ಶ್ರೀಮಂತವಾಗಿದೆ. ಚರ್ಮ ಸುಕ್ಕುಗಟ್ಟಿದರೆ, ವಿಷದ ಮುಳ್ಳು ತಾಗಿದರೆ, ಚೇಳು ಕಡಿದಾಗ, ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದಾಗ ಈ ಸಸ್ಯದ ಔಷಧ ರಾಮಬಾಣವಾಗಿದೆ. ಈ ಸಸ್ಯದ ಬಹು ಉಪಯೋಗಗಳ ಬಗ್ಗೆ ಯುವ ಸಮುದಾಯಕ್ಕೆ ಅಷ್ಟಾಗಿ ಅರಿವಿಲ್ಲ. ಔಷಧ ಗುಣವುಳ್ಳ ಈ ಸಸ್ಯ ಪ್ರಬೇಧವನ್ನು ಯಾರೂ ನೆಟ್ಟು ಬೆಳೆಸುವುದಿಲ್ಲ. ಬದಲಿಗೆ, ಪ್ರಕೃತಿದತ್ತವಾಗಿ ಬೆಳೆಯುವ ಎಕ್ಕದ ಗಿಡವನ್ನು ‘ರಸ್ತೆ ಬದಿಯ ಸಂಜೀವಿನಿ’ ಎಂದರೂ ತಪ್ಪಾಗಲಾರದು. ಇಂತಹ ಎಕ್ಕದ ಗಿಡದಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬ ಮಾಹಿತಿ ಇಲ್ಲಿದೆ.

ಹಾಲಿನಲ್ಲಿದೆ ಔಷಧ ಗುಣ

ಸ್ವಲ್ಪ ಚಿವುಟಿದರೂ ಧಾರಾಳವಾಗಿ ಚಿಮ್ಮುವಷ್ಟು ಹಾಲು ಎಕ್ಕದ ಗಿಡಿದ ಎಲೆಯಲ್ಲಿ ಇರುತ್ತದೆ. ಈ ಹಾಲು ಭಾರೀ ಖಾರವಿದ್ದು, ಕಣ್ಣಿಗೆ ಸಿಡಿದರೆ ಅಪಾಯ. ಆದರೆ, ಈ ಹಾಲು ಅಪಾಯಕ್ಕಿಂತಲೂ ಹೆಚ್ಚು ಔಷಧ ಗುಣ ಹೊಂದಿದೆ.

*  ಕಾಲು ಅಥವಾ ದೇಹದ ಯಾವುದೇ ಭಾಗಕ್ಕೆ ವಿಷದ ಮುಳ್ಳು ಚುಚ್ಚಿ, ಗಾಯವಾಗಿದ್ದರೆ ಅದಕ್ಕೆ ಎಕ್ಕದ ಹಾಲನ್ನು ನೇರವಾಗಿ ಹಚ್ಚಿದರೆ ನೋವು ತಕ್ಷಣ ಕಡಿಮೆಯಾಗುತ್ತದೆ. ಕಾಲಿಗೆ ಚೇಳು ಕಚ್ಚಿದರೆ ಎಕ್ಕದ ಎಲೆಯ ಹಾಲನ್ನು ಉಪಯೋಗಿಸಿದರೆ ನೋವು ಬೇಗ ಉಪಶಮನವಾಗುತ್ತದೆ.

* ಮಹಿಳೆಯರ ಮುಖದಲ್ಲಿ ಚರ್ಮ ಸುಕ್ಕುಗಟ್ಟಿದ ರೀತಿಯ ಕಪ್ಪು ಕಲೆಗಳು ಕಾಣಿಸಿಕೊಂಡಾಗ ಎಕ್ಕದ ಹಾಲಿನ ಜತೆ ಆ ಗಿಡದ ಬೇರನ್ನು ಅರೆದು ನಿಂಬೆ ರಸದ ಜತೆ ಬೆರೆಸಿ ಮುಖಕ್ಕೆ ಹಚ್ಚಿದರೆ ಕಪ್ಪು ಕಲೆಗಳು ಮಾಯವಾಗುತ್ತವೆ. ಎಕ್ಕದ ಹಾಲಿನ ಜೊತೆ ಅರಿಶಿಣ ಬೆರೆಸಿ ಹಚ್ಚಿದರೆ ಮುಖದ ಕ್ರಾಂತಿ ಹೆಚ್ಚಾಗುತ್ತದೆ.

* ಎಕ್ಕದ ಎಲೆ, ಕಾಯಿ ಹೂ, ಮತ್ತು ಬೇರನ್ನು ಉಪ್ಪು ಹಾಕಿದ ನೀರಲ್ಲಿ ಬೇಸಿಯಿ, ರಸವನ್ನು ಜಾನುವಾರುಗಳಿಗೆ ಕುಡಿಸಿದರೆ ಕಾಲು-ಬಾಯಿ ಜ್ವರ, ಬಾಯಿ ಹುಣ್ಣು, ನಾಲಗೆ ಹುಣ್ಣು ರೀತಿಯ ಸಮಸ್ಯೆಗಳು ದೂರಾಗುತ್ತವೆ.

* ದನ ಮತ್ತು ಮೇಕೆಗಳಿಗೆ ಅಜೀರ್ಣ ಸಮಸ್ಯೆ ಎದುರಾದಾಗ ಎಕ್ಕದ ಎಲೆಗಳನ್ನು ಬೇಯಿಸಿ, ಹಿಂಡಿ ಅಥವಾ ಬೂಸಾ ಜೊತೆ ತಿನ್ನಿಸಿದರೆ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.

ವಿಷಯುಕ್ತ ಚೇಳು ಕಚ್ಚಿದಾಗ ಎಕ್ಕದ ಗಿಡದ ಬೇರಿನ ರಸವನ್ನು ಅರಿಶಿಣ ಮತ್ತು ಸ್ವಲ್ಪ ನೀರಿನೊಂದಿಗೆ ತೇಯ್ದು ಸೇವಿಸಿದರೆ ಉರಿ, ವಿಷದ ಪ್ರಭಾವ ಇಳಿಯುತ್ತದೆ.

* ಮೂಲವ್ಯಾದಿ ಹೊಂದಿರುವವರು ಎಕ್ಕೆ ಎಲೆಯಲ್ಲಿನ ಹಾಲನ್ನು ಮೂಲಕ್ಕೆ ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.

* ಮಂಡಿ ನೋವು ಇರುವವರು ಎಕ್ಕೆ ಎಲೆಯನ್ನು ಸುಟ್ಟು, ಅದನ್ನು ನೋವಿರುವ ಜಾಗದಲ್ಲಿ ಇರಿಸಿ ಬಟ್ಟೆಯಲ್ಲಿ ಕಟ್ಟಿಕೊಂಡರೆ ನೋವು ಕಡಿಮೆಯಾಗುತ್ತದೆ.

* ಎಕ್ಕದ ಗಿಡದ ಬೇರನ್ನು ತಾಯತದ ಕೊಳವೆಯಲ್ಲಿರಿಸಿ ಕಪ್ಪು ದಾರದೊಂದಿಗೆ ಕುತ್ತಿಗೆಗೆ ಧರಿಸುವುದರಿಂದ ಮತ್ತು ಕೈಗೆ ಕಟ್ಟಿಕೊಳ್ಳುವುದರಿಂದ ಅನಾರೋಗ್ಯ, ಇತರೆ ವೈಯಕ್ತಿಕ ಸಮಸ್ಯೆಗಳು, ಕ್ಷದ್ರ ಶಕ್ತಿಗಳು ಹತ್ತಿರ ಸುಳಿಯುವುದಿಲ್ಲ. ಈ ತಾಯತವು ರಕ್ಷಾ ಕವಚದಂತೆ ಕೆಲಸ ಮಾಡುತ್ತದೆ.

* ಎಕ್ಕೆ ಗಿಡದ ಎಲೆಗಳು ಮಧುಮೇಹ ಕಾಯಿಲೆ ನಿಯಂತ್ರಣದಲ್ಲಿಡುತ್ತವೆ ಎಂಬ ಅಂಶ ವೈಜ್ಞಾನಿಕವಾಗಿ ಸಾಬೀತಾಗಿದೆ. ಮಧುಮೇಹ ಇರುವವರು ಎಕ್ಕೆ ಎಲೆಗಳನ್ನು ಹಿಮ್ಮುಖವಾಗಿ ತಿರುಗಿಸಿ ಪಾದಗಳ ಕೆಳಗೆ ಇರಿಸಿಕೊಂಡು ಕಾಲುಚೀಲ ಧರಿಸಿ, ದಿನಪೂರ್ತಿ ಹಾಗೇ ಬಿಟ್ಟು ರಾತ್ರಿ ತೆಗೆದು ಮಲಗಬೇಕು. ಪ್ರತಿ ದಿನ ಹೀಗೆ ಮಾಡಿದರೆ, 15 ದಿನಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತದೆ.

* ಜಂತು ನಾಶಕ ಗುಣ ಹೊಂದಿರುವ ಎಕ್ಕ, ಅಲ್ಸರ್ ಅನ್ನೂ ಗುಣಪಡಿಸಬಲ್ಲದು, ಕಫ, ಹೊಟ್ಟೆಯ ನೋವು ನಿವಾರಣೆ ಮಾಡಲು ನೆರವಾಗುವ ಎಕ್ಕವನ್ನು ಅಸ್ತಮ ಔಷಧಗಳಲ್ಲಿ ಬಳಸುತ್ತಾರೆ.

* ಕಾಲರಾ ಹರಡಿದಾಗ ಎಕ್ಕದ ಹೂವಿನಿಂದ ಮಾಡುವ ಔಷಧಿ ಬಳಸಲಾಗುತ್ತದೆ. ಈ ಹೂವಿನಲ್ಲಿ ಬಲವರ್ಧಕ ಗುಣವಿದ್ದು, ಹಸಿವು ಹೆಚ್ಚಿಸುತ್ತದೆ. ಎಕ್ಕದ ಬೇರಿನಲ್ಲಿ ಚರ್ಮ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ.

* ಇನ್ನೂ ಬಿರಿಯದಿರುವ ಎಕ್ಕೆಯ 20 ಮೊಗ್ಗುಗಳನ್ನು ತಂದು ಶುಂಠಿ, ಓಮದ ಕಾಳು (ಓಂ ಕಾಳು) ಮತ್ತು ಕರಿ ಉಪ್ಪನ್ನು ಸಮ ಪ್ರಮಾಣದಲ್ಲಿ ಸೇರಿಸಿ, ಶುದ್ಧ ನೀರಿನಲ್ಲಿ ಅರೆದು, ಕಡಲೆ ಗಾತ್ರದ ಗುಳಿಗೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸಬೇಕು. ನಂತರ ದಿನದಲ್ಲಿ ಎರಡು ಬಾರಿ ಒಂದೊAದು ಮಾತ್ರೆ ಮುಂಗುವುದರಿಂದ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.

* ತಲಾ 20 ಗ್ರಾಂ. ಎಕ್ಕದ ಎಲೆಯ ರಸ, ಬೊಂತೆ ಕಳ್ಳಿ ರಸ, ಲಕ್ಕಿ ಎಲೆ ರಸ, ಉಮ್ಮತ್ತಿ ಎಲೆ ರಸವನ್ನು 60 ಎಂ.ಎಲ್ ಹಸುವಿನ ಹಾಲು, 120 ಗ್ರಾಂ. ಎಳ್ಳಣ್ಣೆಗೆ ಸೇರಿಸಿ ಕಾಯಿಸಬೇಕು. ಕಾಯಿಸುವಾಗ ರಾಸ್ಮಿ, ವಿಳಂಗ, ದೇವದಾರು, ಗಜ್ಜುಗದ ತಿರುಳು ಪುಡಿಯನ್ನು ತಲಾ ಎರಡೆರಡು ಟೀ ಚಮಚ ಹಾಕಿ, ಒಳೆ ಮೇಲಿಂದ ಇಳಿಸುವಾಗ 20 ಗ್ರಾಂ. ಆರತಿ ಕರ್ಪೂರ ಹಾಕಬೇಕು. ಈ ಮಿಶ್ರಣ ತಣ್ಣಗಾದ ನಂತರ ಕೀಲು, ಕಾಲು ನೋವು ಇರುವ ಜಾಗದಲ್ಲಿ ಹಚ್ಚಿದರೆ ವಾತ ಕಡಿಮೆಯಾಗುತ್ತದೆ.

* ಎಕ್ಕೆ ಎಲೆಗಳನ್ನು ಒಣಗಿಸಿ ನಯವಾಗಿ ಪುಡಿಮಾಡಿ 10 ಗ್ರಾಂ. ಪುಡಿಯನ್ನು ಬಿಸಿನೀರಿನಲ್ಲಿ ಬೆರೆಸಿ ಕುಡಿದರೆ ಮೂತ್ರ ವಿಸರ್ಜನೆ ಸುಗಮವಾಗುತ್ತದೆ. ಎಕ್ಕೆ ಗಿಡದ ಕಾಂಡದಲ್ಲಿ ಹಲ್ಲುಜ್ಜಿದರೆ ಹಲ್ಲು ನೋವು ನಿವಾರಣೆಯಾಗುತ್ತದೆ.

* ಎಕ್ಕೆ ಗಿಡದ ಬೇರಿನಿಂದ ತಯಾರಿಸಿದ ಭಸ್ಮವನ್ನು ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಪದೇ ಪದೆ ಕಾಣಿಸಿಕೊಳ್ಳುವ ಅಜೀರ್ಣ ಸಮಸ್ಯೆ ನಿವಾರಣೆಯಾಗುತ್ತದೆ.

ವಿಶೇಷ ಸೂಚನೆ: ಇಲ್ಲಿ ನೀಡಲಾಗಿರುವ ಮನೆ ಮದ್ದುಗಳನ್ನು ಪ್ರಯೋಗಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು.