ಸಾಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸು ಅಥವಾ ಕರಿಮೆಣಸು ಒಂದು ದಿವ್ಯೌಷಧ ಎಂಬುದು ಅನೇಕರಿಗೆ ಗೊತ್ತಿರದ ವಿಷಯ. ಕಪ್ಪು ಬಂಗಾರ ಎನ್ನಲಾಗುವ ಈ ಸಂಬಾರ ಪದಾರ್ಥದಲ್ಲಿ ಸಾಕಷ್ಟು ಔಷಧಿ ಗುಣವಿದೆ. ಸಲಾಡ್, ಸೂಪ್, ಮಿಶ್ರಹಣ್ಣುಗಳಿಗೆ ಇದನ್ನು ಬೆರೆಸಿ ತಿನ್ನಲಾಗುತ್ತದೆ. ಅಲ್ಲದೆ ಮನೆ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ.
ಕಾಳು ಮೆಣಸು ಸೇವನೆಯಿಂದ ತಲೆ ನೋವು ಕಡಿಮೆಯಾಗುತ್ತದೆ. ಇದಲ್ಲದೆ ಬಿಕ್ಕಳಿಕೆ ಬರುವುದು ನಿಲ್ಲುತ್ತದೆ. ಜೇನು ತುಪ್ಪದ ಜೊತೆ ಕಾಳು ಮೆಣಸಿನ ಪುಡಿಯನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವನೆ ಮಾಡುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.
ಮನೆಯಲ್ಲಿ ಮಗು ಹುಟ್ಟುವ ಸೂಚನೆಯಿದ್ದರೆ ಕರಿಮೆಣಸು ಅಥವಾ ಬಿಳಿಮೆಣಸಿನ ದಾಸ್ತಾನು ಎಷ್ಟಿದೆ ಎಂದು ನೋಡಿಕೊಳ್ಳುತ್ತಿದ್ದು ಕಾಲವೊಂದಿತ್ತು. ಮಗು ಬಾಣಂತಿಯನ್ನು ನೋಡಲು ಬರುವವರೂ ಮೆಣಸಿನ ಕಾಳನ್ನು ತರುವ ಪದ್ಧತಿಯಿತ್ತು. ಬಾಣಂತಿಗೆ ಮೆಣಸಿನ ಕಾಳಿನಿಂದ ತಯಾರಿಸಿದ ಅನೇಕ ಮನೆಮದ್ದನ್ನು ಹಿಂದಿನವರು ತಯಾರಿಸಿ ಕೊಡುತಿದ್ದರು. ಉಳಿದಂತೆ ಮೆಣಸಿನಕಾಳಿನ ಉಪಯೋಗ ಮಲೆನಾಡಿನ ಭಾಗದಲ್ಲಿ ಸ್ವಲ್ಪ ಹೆಚ್ಚು ಎಂದೇ ಹೇಳಬಹುದು. ಇನ್ನು ಮಳೆಗಾಲದಂತೂ ಈ ಭಾಗದ ಜನರು ಮೆಣಸಿನ ಕಾಳು ಹಾಕಿ ಮಾಡಿದ ಕಷಾಯವನ್ನು ಸಂಜೆಯ ವೇಳೆಯಲ್ಲಿ ಕುಡಿಯುವ ಅಭ್ಯಾಸವನ್ನಿಟ್ಟುಕೊಂಡಿರುತ್ತಾರೆ. ಮೆಣಸಿನ ಸಾರು, ಮೆಣಸಿನ ಕಷಾಯ, ಎಳೆ ಮೆಣಸಿನ ಗೊಜ್ಜು ಇವೆಲ್ಲ ಮಲೆನಾಡಿನ ಭಾಗದಲ್ಲಿ ಸರ್ವೆಸಾಮಾನ್ಯ. ಮಳೆಗಾಲದ ಅಡುಗೆಯಲ್ಲಿ ಆಗಾಗ ಮೆಣಸಿನ ಗೊಜ್ಜು ಇದ್ದೇ ಇರುತ್ತದೆ. ಸಿಹಿಖಾರದ ರುಚಿಯ ಗೊಜ್ಜನ್ನು ನೆನಪಿಸಿಕೊಂಡರೇ ಬಾಯಲ್ಲಿ ನೀರೂರುವದು. ಇದನ್ನು ಗರಂ ಮಸಾಲಾ ಮತ್ತು ಚ್ಯಾಟ್ ಮಸಾಲಾಗಳಲ್ಲಿ ಬಳಸಲಾಗುತ್ತದೆ.
ಕರಿಮೆಣಸು ಜೀರ್ಣಕಾರಿ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ.ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಮೆಣಸಿನಕಾಯಿಗಳನ್ನು ಸೇರಿಸಿಕೊಳ್ಳಬೇಕು.ಇದರ ಕಟುವಾದ ಪರಿಮಳವು ಮೂಗು ಹಾಗೂ ಗಂಟಲಿನಲ್ಲಿರು ಲೋಳೆಯು ಬಿಡುಗಡೆಯಾಗುತ್ತದೆ.ಈ ಕಾಯಿಗಳು ಹೆರಿಗೆಯಾದ ಮಹಿಳೆಯರಿಗೆ ಆಂತರಿಕ ವ್ಯವಸ್ಥೆಯನ್ನು ಗುಣಪಡಿಸುತ್ತವೆ ಮತ್ತು ಹೀಗಾಗಿ ಮೆಣಸು ಸಮೃದ್ಧವಾಗಿರವ ಆಹಾರವನ್ನು ಹೊಸ ತಾಯಂದರಿಗೆ ನೀಡಲಾಗುತ್ತದೆ. ಮೆಣಸಿನಲ್ಲಿ ಪೈಪರೀನ್ ಎಂಬ ಕಿಣ್ವವಿದೆ, ಇದು ವಿಟಮಿನ್ ಬಿ, ಸೆಲೆನಿಯಂ ಮತ್ತು ಬೀಟಾ ಕ್ಯಾರೋಟಿನ್ ನಂತಹ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಅತಿಸಾರ, ಮಲಬದ್ಧತೆ, ಕೀಲು ನೋವು, ಅಜೀರ್ಣ, ಹಲ್ಲು ಹುಟ್ಟುವದು, ಹಲ್ಲಿನ ನೋವು ಮುಂತಾದ ಕಾಯಿಲೆಗಳಲ್ಲಿ ಸಹಕಾರಿ. ಜೀರ್ಣಕಾರಿ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ. ದೇಹವನ್ನು ಕ್ಯಾನ್ಸರ್ ಮತ್ತು ಇತರ ರೋಗಗಳಿಂದ ಮುಕ್ತಗೊಳಿಸುತ್ತದೆ.
ಕರಿಮೆಣಸಿನ ಬಳ್ಳಿ ನೋಡಲು ವೀಳ್ಯದೆಲೆ ಬಳ್ಳಿಯಂತಿರುತ್ತದೆ. ಆದರೆ ಎಲೆ ಸ್ವಲ್ಪ ದಪ್ಪ ಹಾಗೂ ದೊಡ್ಡದಾಗಿರುತ್ತದೆ. ವಿಶೇಷವೆಂದರೆ ಇದರ ಎಲೆ ಹಾಗೂ ಬಳ್ಳಿಯ ಕಾಂಡ ಕೂಡ ತುಂಬಾ ಖಾರವಾಗಿರುತ್ತದೆ. ಹಿಂದಿನವರು ಹಲ್ಲುಜ್ಜಲು ಇದರ ದಂಟನ್ನು ಬಳಸುತ್ತಿದ್ದರು. ಇದು ಹಲ್ಲನ್ನು ಚೊಕ್ಕಟ ಮಾಡುವದರ ಜೊತೆಗೆ ಬಾಯಿಯನ್ನು ಶುದ್ಧವಾಗಿಡುತ್ತದೆ. ಇದರ ದಂಟಿನಿಂದ ಹಲ್ಲುಜ್ಜಿದರೆ ಬಾಯಿಯೆಲ್ಲ ಜುಮು-ಜುಮುಗುಡುತ್ತಿರುತ್ತದೆ. ಟಂಗ್ ಕ್ಲೀನರ್‍ಗಿಂತ ಚೆನ್ನಾಗಿ ಪರಿಣಾಮಕಾರಿಯಾಗಿ ನಾಲಿಗೆಯನ್ನು ತೊಳೆಯುತ್ತದೆ.
ಲೇಖಕರು: ಶಗುಪ್ತಾ ಅ. ಶೇಖ