ದಿನವೊಂದಕ್ಕೆ 150 ಕಿ.ಮೀ. ದೂರದವರೆಗೆ ಹಾರಾಡುವ ಸಾಮರ್ಥ್ಯ ಹೊಂದಿದ್ದ ಮಿಡತೆಗಳು ಕಳೆದ ಮೇನಲ್ಲಿ ಗುಜರಾತ್, ಮಧ್ಯಪ್ರದೇಶ, ಪಂಜಾಬ್‌ನಲ್ಲಿ ದಾಳಿ ನಡೆದಿತ್ತು. ಕ್ಷಣಾರ್ಧದಲ್ಲಿಯೇ ನೂರಾರು ಎಕರೆ ಭೂಮಿಯಲ್ಲಿರುವ ಬೆಳೆ ಸರ್ವನಾಶ ಮಾಡುವ ಈ ಮಿಡತೆಗಳ ಗುಂಪು ಈಗ ದಿಲ್ಲಿಯ ಪ್ರವೇಶದ್ವಾರ ಎನ್ನಲಾಗುವ ಗುರುಗ್ರಾಮಕ್ಕೆ ಬಂದು ಕುಳಿತಿದೆ.
ಮಿಡತೆಗಳ ಹಿಂಡು ಶನಿವಾರ ಗುರುಗ್ರಾಮದತ್ತ ಧಾವಿಸಿ ಬಂದಿದ್ದರಿಂದ ಹಲವೆಡೆ ಕತ್ತಲೆ ಆವರಿಸಿದಂತಹ ವಾತಾವರಣ ಸೃಷ್ಟಿಯಾಗಿತ್ತು. 2 ಕಿ.ಮೀನಷ್ಟು ಉದ್ದನೆಯ ಮಿಡತೆಗಳ ಸೈನ್ಯ ಆಕಾಶದಲ್ಲಿ ಕಾಣಿಸಿದೆ. ಸಾವಿರಾರು ಸಂಖ್ಯೆಯ ಮಿಡತೆಗಳು ಫರೀದಾಬಾದ್ ಮತ್ತು ಹರಿಯಾಣ ಪಲ್ವಾಲ್‌ನಲ್ಲಿನ ಕೃಷಿ ಭೂಮಿಗಳನ್ನು ಆವರಿಸತೊಡಗಿವೆ. ಶೀಘ್ರದಲ್ಲೇ ದಿಲ್ಲಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಕೃಷಿ ಸಚಿವಾಲಯ ಮಿಡತೆಗಳ ಎಚ್ಚರಿಕೆ ವಿಭಾಗದ ಅಧಿಕಾರಿ ಕೆ.ಎಲ್. ಗುರ್ಜರ್ ಹೇಳಿದ ಅವರು ಮಿಡತೆಗಳು ಹರಿಯಾಣದ ಪಾಲ್ವಾಲ್ ಕಡೆಗೆ ಸಾಗುತ್ತಿವೆ ಎಂದಿದ್ದಾರೆ.,
ಮಿಡತೆಗಳು ಕೃಷಿ ಭೂಮಿಯಲ್ಲಿನ ಬೆಳೆಗಳನ್ನು ತಿಂದು ಮುಗಿಸುವ ಆತಂಕದಲ್ಲಿ ಕೃಷಿಕರು ಸರಕಾರಕ್ಕೆ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಸ್ಪಂದಿಸಿರುವ ದಿಲ್ಲಿ ಪರಿಸರ ಸಚಿವ ಗೋಪಾಲ್ ರಾಯ್ ಅವರು ರಾಷ್ಟ್ರ ರಾಜಧಾನಿಯ ದಕ್ಷಿಣ ಮತ್ತು ಪಶ್ಚಿಮ ಜಿಲ್ಲೆಗಳ ಆಡಳಿತಕ್ಕೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.
ಈ ಮಿಡತೆಗಳು ಮನೆಯ ಚಾವಣಿ, ಮರ–ಗಿಡಗಳಲ್ಲಿ ಕುಳಿತಿರುವ ವಿಡಿಯೊವನ್ನು ಗುರುಗ್ರಾಮದ ನಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗುರುಗ್ರಾಮದಲ್ಲಿ ಮಿಡತೆಗಳು ದಾಳಿ ನಡೆಸಿದ್ದರಿಂದ ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಶನಿವಾರ ಅಧಿಕಾರಿಗಳ ತುರ್ತು ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು. ಹರಿಯಾಣ ಸರ್ಕಾರವೂ ಕಟ್ಟೆಚ್ಚರ ಘೋಷಿಸಿದೆ. ಮಿಡತೆಗಳನ್ನು ನಿಯಂತ್ರಿಸಲು ಟ್ರ್ಯಾಕ್ಟರ್ ಮೂಲಕ ರಾಸಾಯನಿಕಗಳನ್ನು ಸಿಂಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಡತೆಗಳು ಕಂಡು ಬಂದ ಕೂಡಲೇ ಅರಣ್ಯ ಇಲಾಖೆ ವತಿಯಿಂದ ಭಾರಿ ಗಾತ್ರದ ಡ್ರಮ್‌ಗಳು ಮತ್ತು ಡೊಳ್ಳುಗಳ ವ್ಯವಸ್ಥೆ ಮಾಡಿ ಬಾರಿಸಿ ಆ ಮೂಲಕ ಮಿಡತೆಗಳನ್ನು ಓಡಿಸಲು ಸೂಚಿಸಲಾಗಿದೆ.