Food and Others

ಆರೋಗ್ಯದ ಆಗರವಾಗಿರುವ ನವಣೆ ಉಪ್ಪಿಟ್ಟು

21 November, 2020 1:59 PM IST By:

ಬೆಳಗ್ಗೆ ಉಪ್ಪಿಟ್ಟು, ಇಡ್ಲಿ, ದೋಸೆ, ಪುರಿ, ಉತ್ತಪ್ಪ, ಚೌಚೌಬಾತ್, ಆಲೂಬಾತ್, ಹೀಗೆ ಬಗೆಬಗೆಯ ತಿಂಡಿಗಲನ್ನು ಕೇಳಿದ್ದೀರಿ. ಸವಿದಿದ್ದೀರಿ. ಆದರೆ ನವಣೆ ಉಪ್ಪಿಟ್ಟು ಕೇಳಿದವರು ವಿರಳ. ಹೌದು ನಾನು ಇಲ್ಲಿ ಹೇಳುತ್ತಿರುವುದು ಸಿರಿಧಾನ್ಯಗಳಲ್ಲಿ ಪ್ರಸಿದ್ಧವಾದ ನವಣೆ ಉಪ್ಪಿಟ್ಟು ಕುರಿತು.

ನವಣೆ ಅಧಿಕ ನಾರಿನಂಶವಿದ್ದು ಐರನ್, ಕ್ಯಾಲ್ಸಿಯಂ,  ಕಾಪರ್ ಮುಂತಾದ ಮಿನರಲ್ಸ್ ಇದ್ದು ರಕ್ತದಲ್ಲಿನ ಸಕ್ಕರೆ ಅಂಶವನ್ನು ತಡೆಗಟ್ಟುವ ಸಾಮರ್ಥ್ಯ ಇದೆ. ನವಣೆಯ ಸೇವನೆಯಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶವು ಕಡಿಮೆಯಾಗಿ, ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ವಾರಕ್ಕೊಮ್ಮೆಯಾದರೂ ಇಂತಹಾ ಆರೋಗ್ಯದ ಆಗರವಾಗಿರುವ ನವಣೆಯನ್ನು ಉಪಯೋಗಿಸಿ, ಜೊತೆಯಲ್ಲಿ ಒಂದಿಷ್ಟು ತರಕಾರಿಗಳನ್ನು ಸೇರಿಸಿ ಉಪ್ಪಿಟ್ಟನ್ನು ಮಾಡುವುದು ಒಳಿತಲ್ಲವೆ? ಬನ್ನಿ ನವಣೆ ಉಪ್ಪಿಟ್ಟು ಹೇಗೆ ಮಾಡಬೇಕೆಂಬುದನ್ನು ಇಲ್ಲಿ ತಿಳಿಸಿದ್ದೇನೆ.

ನವಣೆ ಉಪ್ಪಿಟ್ಟು:

ಬೇಕಾಗುವ ಪದಾರ್ಥಗಳು (ಅಳತೆ ಕಪ್ 250 ಎಂಎಲ್)

1 ಕಪ್ ನವಣೆ

2.5 ಕಪ್ ನೀರು

1/2 ಟೀಸ್ಪೂನ್ ಸಾಸಿವೆ

1 ಟೀಸ್ಪೂನ್ ಉದ್ದಿನ ಬೇಳೆ

1 ಟೀಸ್ಪೂನ್ ಕಡ್ಲೆ ಬೇಳೆ

 1 ದೊಡ್ಡ ಈರುಳ್ಳಿ

1 ಟೊಮ್ಯಾಟೊ

1 ಹಸಿರು ಮೆಣಸಿನಕಾಯಿ

4 ಕರಿಬೇವಿನ ಎಲೆ

1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ

1/4 ಟೀಸ್ಪೂನ್ ಅರಶಿನ ಪುಡಿ

8 ಟೀಸ್ಪೂನ್ ಎಣ್ಣೆ

ರುಚಿಗೆ ತಕ್ಕಷ್ಟು ಉಪ್ಪು

2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು

1/2 ಕಪ್ ತೆಂಗಿನ ತುರಿ

ನವಣೆ ಉಪ್ಪಿಟ್ಟು ಮಾಡುವ ವಿಧಾನ:

ನವಣೆಯನ್ನು ತೊಳೆದು ನೀರು ಸೋಸಿ ಪಕ್ಕಕ್ಕಿಡಿ. ಈರುಳ್ಳಿ, ಟೊಮ್ಯಾಟೊ, ಶುಂಠಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಗಳನ್ನು ಕತ್ತರಿಸಿಟ್ಟುಕೊಳ್ಳಿ. ಒಂದು ಕುಕ್ಕರ್ ಬಿಸಿ ಮಾಡಿ, ಎಣ್ಣೆ, ಸಾಸಿವೆ, ಉದ್ದಿನ ಬೇಳೆ  ಮತ್ತು ಕಢ್ಳೆ ಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೆ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿಕಾಯಿ ಸೇರಿಸಿ. ಈರುಳ್ಳಿ ಕಂದು ಬಣ್ಣಕ್ಕೆ ಬರುವವರಿಗೆ ಹುರಿಯಿರಿ. ಆಮೇಲೆ ಟೊಮ್ಯಾಟೊ ಹಾಕಿ. ಅರಶಿನ ಪುಡಿ ಸೇರಿಸಿ ಒಂದೆರಡು ನಿಮಿಷ ಹುರಿಯಿರಿ. ನಂತರ ತೊಳೆದಿಟ್ಟ ನವಣೆಯನ್ನು ಹಾಕಿ ಒಂದು ನಿಮಿಷ ಹುರಿಯಿರಿ.

2.5 ಕಪ್ ನೀರು ಹಾಕಿ ಕುದಿಸಿ. ಕುಕ್ಕರ್ ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ ಬೇಯಿಸಿ. ಕುಕ್ಕರ್ ಒತ್ತಡ ಕಡಿಮೆ ಆದ ಮೇಲೆ ಮುಚ್ಚಳ ತೆಗೆದು ತೆಂಗಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಹೀಗೆ ಆರೋಗ್ಯಕರ ನವಣೆ ಉಪ್ಪಿಟ್ಟು ತಿಂದು ಆನಂದಿಸಿ.

ಲೇಖಕರು: ಶಗುಪ್ತಾ ಅ ಶೇಖ