ಮದುವೆ ಎಂದಾಕ್ಷಣ ಸಹಜವಾಗಿ ಅಲ್ಲಿ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ಬಂಧು ಬಳಗದವರು ಸೇರಿರುತ್ತಾರೆ. ಬಾಜಾ ಭಜಂತ್ರಿ, ಪಟಾಕಿ, ನೃತ್ಯ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಂದ ಸಂಭ್ರಮದಲ್ಲಿ ತೇಲಿರುತ್ತದೆ. ಆದರೆ ಇಲ್ಲಿ ಮಾತ್ರ ಎಲ್ಲಾ ತದ್ವಿರುದ್ಧ. ಮನೆಯನ್ನು ವಿದ್ಯುತ್ ದೀಪಾಲಂಕಾರದಿಂದ ಅಲಂಕಾರ ಮಾಡಲಾಗಿತ್ತು. ಕನಿಷ್ಟ ವರನ ಮನೆಯವರಾದರೂ ಬರುತ್ತಾರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಮದುವೆ ಮಾಡಿ ಕಳುಹಿಸೋಣವೆಂದು ವಧುವಿನ ಕಡೆಯವರ ನಿರೀಕ್ಷೆಯಾಗಿತ್ತು. ಆದರೆ ಹಾಲು ತಂದು ಹಾಕುವ ವ್ಯಕ್ತಿಯ ರೀತಿಯಲ್ಲಿ ಮದುವೆ ಗಂಡು ಏಕಾಂಗಿಯಾಗಿ ಬೈಕ್ ಮೇಲೆ ಬರುತ್ತಾನೆ. ಮದುವೆ ಕಾರ್ಯ ಪ್ರಾರಂಭಿಸಿ, ಬೈಕ್ ಮೇಲೆಯೇ ಮನೆಗೆ ಹೋಗುತ್ತೇವೆಂದು ಹೇಳಿ ಆಶ್ಚರ್ಯ ಮೂಡಿಸುತ್ತಾನೆ.
ಇದೇನು ಆಶ್ಚರ್ಯ, ಈ ಮದುವೆ ಎಲ್ಲಿ ನಡೆಯಿತು. ಹೀಗೇಕೆ ನಡೆಯಿತು ಅಂದುಕೊಂಡಿರಾ. ಹೌದು ಈ ಮದುವೆ ನಡೆದದ್ದು ಉತ್ತರಪ್ರದೇಶದ ಸಂಭಲ್‍ನಲ್ಲಿ. ಈ ಮದುವೆ ಹೀಗೆ ನಡೆಯಲು ಲಾಕ್‍ಡೌನ್ ಕಾರಣ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿ ಭಾರೀ ಸದ್ದು ಮಾಡಿದೆ.
ದೇಶಾದ್ಯಾಂತ ಲಾಕ್‍ಡೌನ್ ಇದೆ. ಮದುವೆ ಸೇರಿದಂತೆ ಇತರ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಸರ್ಕಾರ ಸೂಚನೆ ನೀಡಿದ್ದರಿಂದ ಮದುಮಗ ಯಾವುದೇ ಸಂಭ್ರಮವಿಲ್ಲದೆ ಬೈಕ್‍ನಲ್ಲಿ ಬಂದ ಮದುವೆ ಗಂಡು ನೇರವಾಗಿ ಮನೆ ಒಳಗೆ ಬಂದಾಗ ಆತನನ್ನು ಕುಳ್ಳರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವಿಧಿವಿಧಾನದ ಮೂಲಕ ಮದುವೆಯ ಶಾಸ್ತ್ರ, ಸಂಪ್ರದಾಯಗಳನ್ನು ನೆರವೇರಿಸುತ್ತಾರೆ. ನಂತರ ಮದುಮಗ ತಾನು ಬಂದಿದ್ದ ಬೈಕ್‍ನಲ್ಲೇ ಹೊಸ ಹೆಂಡತಿಯನ್ನು ಕುಳಿತುಕೊಳ್ಳಲು ಹೇಳುತ್ತಾನೆ. ಲಾಕ್‍ಡೌನ್‍ನಿಂದಾಗಿ ಈ ರೀತಿ ಮಾಡುತ್ತಿದ್ದೇನೆಂದು ಹೇಳಿ ಹೆಂಡತಿಯನ್ನು ಹಿಂಬದಿಯಲ್ಲಿ ಕುಳ್ಳಿರಸಿ ನಸುನಗುತ್ತಲೇ ಅಲ್ಲಿಂದ ತೆರಳುತ್ತಾನೆ. ಗಂಡಿನ ಮನೆಯತ್ತ ಹೊರಟ ಜೋಡಿಗೆ ಹೆಂಡತಿಯ ಮನೆಯವರು ಶುಭಹಾರೈಸಿ ಕಳುಹಿಸುತ್ತಿರುವ ವೀಡಿಯೋ ವೈರಲ್ ಆಗಿದೆ.