Food and Others

ಬಾಯಿಗೆ ಸಖತ್ ರುಚಿ ಕೊಡುವ ಕ್ಯಾಪ್ಸಿಕಂ ಮಸಾಲಾ ಬಾತ್

26 October, 2020 2:51 PM IST By:

ಕ್ಯಾಪ್ಸಿಕಂ ಅಥವಾ ದೊಡ್ಡ ಮೆಣಸಿನಕಾಯಿ. ತರಕಾರಿಗಳಲ್ಲಿಯೇ ವಿಶೇಷ ರುಚಿ ಹೊಂದಿರುವ ಈ ಕ್ಯಾಪ್ಸಿಕಂ, ಅದರ ಜೊತೆ ಹೊಂದುವ ಯಾವುದೇ ಅಡುಗೆಯೂ ಸೂಪರ್.‌ ಕ್ಯಾಪ್ಸಿಕಂನಲ್ಲಿ ಕೇವಲ ಬಜ್ಜಿ, ಬೋಂಡ, ಗ್ರೇವಿ ಮಾತ್ರವಲ್ಲ ಕ್ಯಾಪ್ಸಿಕಂ ಮಸಾಲಾ ಬಾತ್‌ ಬಾಯಿಗೆ ಸಖತ್‌ ರುಚಿ ನೀಡುತ್ತದೆ.

ಇವತ್ತು ಕ್ಯಾಪ್ಸಿಕಂ ಮಸಾಲಾ ಬಾತ್ ಮಾಡುವುದು ಹೇಗೆ ಅನ್ನೋದನ್ನ ನಿಮಗೆ ತಿಳಿಸಿ ಕೊಡುತ್ತೇನೆ. ಉತ್ತಮ ರುಚಿ ನೀಡುವ ಈ ಕ್ಯಾಪ್ಸಿಕಂ ಮಸಾಲಾ ಬಾತ್ ಅನ್ನು ಮಾಡುವುದು ಬಹಳ ಸರಳ ಮತ್ತು ಸುಲಭ ವಿಧಾನ. ಕ್ಯಾಪ್ಸಿಕಂ ಮಸಾಲಾ ಬಾತ್ ದೇಹಕ್ಕೆ ಗಟ್ಟಿ ಆಹಾರವನ್ನು ಒದಗಿಸುತ್ತದೆ. ಬೆಳಗಿನ ಜಾವದ ಉಪಾಹಾರ ಅಥವಾ ಊಟಕ್ಕೆ ಮುಖ್ಯ ಖಾದ್ಯವನ್ನಾಗಿಯೂ ನೀವು ಇದನ್ನು ತಯಾರಿಸಬಹುದು. ಅನ್ನ, ಉದ್ದಿನ ಬೇಳೆ, ಕ್ಯಾಪ್ಸಿಕಂನ ಮಿಶ್ರಣವು ಅತ್ಯುತ್ತಮ ಪರಿಮಳ ಹಾಗೂ ರುಚಿಯಿಂದ ಕೂಡಿರುತ್ತದೆ. ಆರೋಗ್ಯಕರ ಮಸಾಲ ಪದಾರ್ಥಗಳಿಂದ ತಯಾರಿಸಲಾಗುವ ಈ ಅಡುಗೆಯ ವಿಧಾನವನ್ನು ನೀವು ಮನೆಯಲ್ಲಿ ತಯಾರಿಸಿ, ಮನೆಯವರಿಗೆ, ಸ್ನೇಹಿತರಿಗೆ ಪ್ರೀತಿಯಿಂದ ಸವಿಯಲು ನೀಡಬಹುದು. ಹಾಗಿದ್ರೆ ಈ ಕ್ಯಾಪ್ಸಿಕಂ ಮಸಾಲಾ ಬಾತ್‌ ಮಾಡೋದು ಹೇಗೆ? ಇಲ್ಲಿದೆ ನೋಡಿ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು:

  • ಅಕ್ಕಿ- 1 ಕಪ್‌
  • ದೊಣ್ಣೆ ಮೆಣಸಿನಕಾಯಿ-  3
  • ಟೊಮೆಟೊ- 1
  • ತುರಿದ ತೆಂಗಿನಕಾಯಿ - 1/2 ಕಪ್‌
  • ನಿಂಬೆಹಣ್ಣು- 1/2 ಹಣ್ಣು
  • ಉಪ್ಪು- ರುಚಿಗೆ ತಕ್ಕಷ್ಟು
  • ಬಾತ್‌ ಪೌಡರ್‌- 1 ಚಮಚ
  • ಇಂಗು- ಚಿಟಿಕೆ

ಒಗ್ಗರಣೆಗೆ:

  • ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
  • ಸಾಸಿವೆ- 1/2 ಚಮಚ
  • ಉದ್ದಿನ ಬೇಳೆ- 1/2 ಚಮಚ
  • ಕಡಲೆ ಬೇಳೆ- 1/2 ಚಮಚ
  • ಕರಿಬೇವಿನ ಸೊಪ್ಪು- ಸ್ವಲ್ಪ
  • ಕೊತ್ತಂಬರಿ ಸೊಪ್ಪು - ಸ್ವಲ್ಪ

ಮಾಡುವ ವಿಧಾನ ಹೇಗೆ:

ಸ್ಟೌವ್‌ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆಯನ್ನು ಸೇರಿಸಿ, ಬಿಸಿ ಮಾಡಿ. ಎಣ್ಣೆ ಬಿಸಿಯಾಗುತ್ತಿದ್ದ ಹಾಗೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಇಂಗು, ಕರಿಬೇವಿನ ಸೊಪ್ಪನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಸ್ವೌವ್‌ ಮಧ್ಯಮ ಉರಿಯಲ್ಲಿರಿ. ಇಲ್ಲದಿದ್ದರೆ ಬೇಳೆ ಕಪ್ಪಾಗಿಬಿಡುತ್ತದೆ.

ಇದಕ್ಕೆ ಕ್ಯಾಪ್ಸಿಕಂ, ಟೊಮೆಟೊ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ. ಅದು ಮೃದುವಾಗಿ ಬೇಯುವ ಹಾಗೆ ಹತ್ತು ನಿಮಿಷಗಳ ಕಾಲ ಎಣ್ಣೆಯಲ್ಲಿಯೇ ಹುರಿಯಿರಿ.

 ಬಳಿಕ ಇದಕ್ಕೆ ಬಾತ್ ಪೌಡರ್ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ ಒಂದು ನಿಮಿಷಗಳ ಕಾಲ ಚನ್ನಾಗಿ ಹುರಿಯಿರಿ. ನಂತರ ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಸೇರಿಸಿ, ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ.

ತಯಾರಿಸಿಕೊಂಡ ಮಸಾಲವನ್ನು ಅನ್ನದೊಂದಿಗೆ ಬೆರೆಸಿ ಚನ್ನಾಗಿ ಮಿಶ್ರಣ ಮಾಡಿ. ಇದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ, ರುಚಿ ರುಚಿಯಾದ ಕ್ಯಾಪ್ಸಿಕಂ ಮಾಸಾಲಾ ಬಾತ್‌ ಸವಿಯಲು ಸಿದ್ಧ. ಬಿಸಿ-ಬಿಸಿಯಾದ ಕ್ಯಾಪ್ಸಿಕಂ ಮಸಾಲಾ ಬಾತ್ ಅನ್ನು ಚಟ್ನಿ, ರಾಯ್ತದೊಂದಿಗೆ ಸವಿಯಲು ಸರ್ವ್ ಮಾಡಿ.

ಲೇಖಕರು: ಕುಸುಮಾ ಎಲ್. ಆಚಾರ್ಯ