ಬೆಳಗಿನ ತಿಂಡಿ ಯಾವುದೇ ಇರಲಿ ಅದು ವಿಶೇಷ ಅನಿಸಿಕೊಳ್ಳೋದಿಲ್ಲ. ಆದರೆ ಅಡುಗೆ ಮನೆಯಿಂದ ಅಮ್ಮ ಬಿಸಿಬೇಳೆ ಬಾತ್ ಮಾಡುತ್ತಿರುವ ಪರಿಮಳ ಬಂದರೆ ಸಾಕು. ಇದ್ದ ಕೆಲಸ ಬಿಟ್ಟು ಮೊದಲು ಕಾಲು ಅಡುಗೆ ಮನೆ ಕಡೆ ಓಡುತ್ತೆ.
ಕೆಲವರಿಗೆ ಅಡುಗೆಯ ರುಚಿ ಗೊತ್ತಿದ್ದರೂ ಅದನ್ನು ಮಾಡುವ ವಿಧಾನ ಗೊತ್ತಿರುವುದಿಲ್ಲ. ಓದು, ಕೆಲಸ ಅಂತ ಮನೆಯಿಂದ ದೂರ ಬಂದು ಹಾಸ್ಟೆಲ್, ಸ್ನೇಹಿತರ ಜೊತೆ ಒಂದು ಬಾಡಿಗೆ ಮನೆ ಅಥವಾ ಫ್ಲಾಟ್‌ನಲ್ಲಿ ಇರುವಾಗ ಬಾಯಿಗೆ ರುಚಿಕರವಾದ ಆಹಾರ ಬೇಕು ಅನಿಸುತ್ತೆ. ಆದರೆ ಅಡುಗೆ ಮಾಡಲು ಗೊತ್ತಿರುವುದಿಲ್ಲ. ಆದರೆ ಈ ಬಿಸಿ ಬೇಳೆ ಬಾತ್ ಅಡುಗೆ ಮಾಡಲು ಕಲಿತರೆ ಸುಲಭವಾಗಿ ತಯಾರಿಸಬಹುದು ಮತ್ತು ಬಾಯಿಗೂ ರುಚಿಯಾಗಿರುತ್ತದೆ.
ಮನೆಯಲ್ಲೆ ಬಿಸಿ ಬೇಳೆ ಬಾತ್ ಮಾಡಲು ಕಲಿಯಿರಿ. ಇಲ್ಲಿದೆ ರೆಸಿಪಿ..
ಬೇಕಾಗುವ ಸಾಮಾಗ್ರಿಗಳು:
ಅಕ್ಕಿ - 1 ಕಪ್
ತೊಗರಿ ಬೇಳೆ - 1/2 ಕಪ್
ಈರುಳ್ಳಿ - 1
ಟೊಮೆಟೊ - 2
ಬಟಾಣಿ - 1 ಕಪ್
ಕ್ಯಾರೆಟ್ - 1/2 ಕಪ್
ಬೀನ್ಸ್ - 1/2 ಕಪ್
ಹುಣಸೆ ಹಣ್ಣಿನ ರಸ - ಸ್ವಲ್ಪ
ಕರಿಬೇವು - ಸ್ವಲ್ಪ
ಇಂಗು - ಚಿಟಿಕೆ
ಎಣ್ಣೆ - ಒಗ್ಗರಣೆಗೆ
ಬ್ಯಾಡಗೆ ಮೆಣಸು - 4
ಉಪ್ಪು - ರುಚಿಗೆ ತಕ್ಕಷ್ಟು
ಗೋಡಂಬಿ - 8-10
ಬಿಸಿಬೇಳೆ ಬಾತ್ ಪುಡಿ- 2 ಚಮಚ
ಬಿಸಿಬೇಳೆ ಬಾತ್ ವಿಧಾನ:
ಹುಣಸೆ ಹಣ್ಣನ್ನು ಒಂದು ಚಿಕ್ಕ ಬಟ್ಟಲಿಗೆ ಹಾಕಿ ಅದಕ್ಕೆ ನೀರು ಹಾಕಿ, ಹುಣಸೆಯನ್ನು ಚೆನ್ನಾಗಿ ಹಿಂಡಿ ರಸವನ್ನು ತೆಗೆದಿಡಬೇಕು.
ಸ್ಟೌವ್ ಮೇಲೆ ಒಂದು ಪಾತ್ರೆಗೆ ಹೆಚ್ಚಿದ ತರಕಾರಿಗಳನ್ನು ಹಾಕಿ, ನೀರು ಮತ್ತು ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು.
ಈಗ ಕುಕ್ಕರ್ ತೆಗೆದುಕೊಂಡು ಅಕ್ಕಿ, ತೊಗರಿಬೇಳೆಯನ್ನು ತೊಳೆದು ಬೇರೆ-ಬೇರೆ ಪಾತ್ರೆಯಲ್ಲಿ ಹಾಕಿ ಕುಕ್ಕರಿನಲ್ಲಿ ಬೇಯಿಸಬೇಕು. ಬೇಳೆಗೆ ಸ್ವಲ್ಪ ನೀರು ಹೆಚ್ಚಿಗೆ ಹಾಕಿರಬೇಕು. ಅನ್ನ ಸ್ವಲ್ಪ ಹೆಚ್ಚು ಬೆಂದಿದ್ದರೆ ರುಚಿ ಹೆಚ್ಚು. ಕುಕ್ಕರ್ 3 ವಿಸಿಲ್ ಬಂದ ಮೇಲೆ ಬೇಳೆಯನ್ನು ಸೌಟ್‌ನಿಂದ ಸ್ಮ್ಯಾಶ್ ಮಾಡಿಕೊಳ್ಳಬೇಕು.
ಸ್ಟೌವ್ ಮೇಲೆ ಬಾಣಲೆಯನ್ನು ತೆಗೆದುಕೊಂಡು ಅದನ್ನು ಸಣ್ಣ ಉರಿಯಲ್ಲಿಟ್ಟು ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ, ಕರಿಬೇವಿನ ಸೊಪ್ಪು, ಬ್ಯಾಡಗಿ ಮೆಣಸು, ಇಂಗು, ಗೋಡಂಬಿ ಚೂರು ಹಾಕಿ 2-3 ನಿಮಿಷ ಹುರಿಯಬೇಕು.
ಅದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ, ಅದು ಕಂದು ಬಣ್ಣ ಬಂದ ನಂತರ ಟೊಮೆಟೊ ಹಾಕಿ, ಮೆತ್ತಗಾಗುವವರೆಗೆ ಬೇಯಿಸಬೇಕು. ಈಗ ಬೇಯಿಸಿದ ತರಕಾರಿಯನ್ನು ಸೇರಿಸಿ ಚೆನ್ನಾಗಿ ತಿರುಗಿಸಬೇಕು. ಈಗ ಬಿಸಿ ಬೇಳೆ ಬಾತ್ ಪುಡಿ, ಹುಣಸೆ ಹಣ್ಣಿನ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಂದು ಕುದಿಬರುವವರೆಗೆ ಬೇಯಿಸಬೇಕು.
ಈಗ ಅದಕ್ಕೆ ಬೇಯಿಸಿದ ಅನ್ನ ಮತ್ತು ಹಿಸುಕಿದ ಬೇಳೆಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಬಿಸಿ ಬೇಳೆ ಬಾತ್ ತುಂಬಾ ತೆಳ್ಳಗೆ ಬೇಕೆಂದರೆ ಸ್ವಲ್ಪ ನೀರು ಸೇರಿಸಬಹುದು. ನಂತರ 15 ನಿಮಿಷ ಬೇಯಿಸಿದ ನಂತರ ಸ್ವಲ್ಪ ತುಪ್ಪ ಸೇರಿಸಿದರೆ ರುಚಿ ರುಚಿಯಾದ ಬಿಸಿ ಬೇಳೆ ಬಾತ್ ಸಿದ್ಧ. ಇದನ್ನು ಖಾರ ಬೂಂದಿ ಜೊತೆ, ರಾಯ್ತ, ಆಲೂ ಚಿಪ್ಸ್ ತಿನ್ನಲು ತುಂಬಾ ರುಚಿಯಾಗಿರುತ್ತೆ.
ರುಚಿ ರುಚಿಯಾದ ಬಿಸಿ ಬೇಳೆ ಬಾತ್ ಮನೆಯಲ್ಲೆ ಮಾಡಿ ಸವಿಯಿರಿ.. ಆರೋಗ್ಯವಾಗಿರಿ..
ಲೇಖಕರು: ಕುಸುಮಾ ಎಲ್. ಆಚಾರ್ಯ