ಕೃಷಿಯಲ್ಲಿ ರಾಸಾಯನಿಕ ಸಸ್ಯರಕ್ಷಕ ಹಾಗೂ ಪ್ರಚೋದಕಗಳ ಪರ್ಯಾಯವಾಗಿ ದೊರೆಯುವ ಪಂಚಗವ್ಯದ ತಯಾರಿಕಾ ವಿಧಾನ ಹಾಗೂ ಉಪಯೋಗಗಳು.
ಕೃಷಿ ಭೂಮಿಯನ್ನು ಯೋಜನಾ ಬದ್ಧವಾಗಿ ವಿನ್ಯಾಸ ಮಾಡುವ ಕುರಿತು ಇಲ್ಲಿದೆ ಮಹತ್ವದ ಮಾಹಿತಿ
ಭಾರತವು ಕೃಷಿ ಪ್ರಧಾನ ದೇಶವಾಗಿದ್ದು ಶೇ. 70 ರಷ್ಟು ಜನರು ಕೃಷಿಯನ್ನೇ ಅವಲಂಭಿಸಿರುತ್ತಾರೆ. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ, ಕೈಗಾರೀಕರಣ ಹಾಗೂ ನಗರೀಕರಣವು ಗಣನೀಯವಾಗಿ ಹೆಚ್ಚುತ್ತಿದೆ.
ಇದರಿಂದಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರವನ್ನು ಉಣಬಡಿಸಲು ಕೃಷಿ ಕಾರ್ಮಿಕರ ಸಮಸ್ಯೆ ತಲೆದೋರಿರುವುದರಿಂದ ಇಂದು ರೈತ ಅತಿ ಹೆಚ್ಚು ಬೆಳೆಯನ್ನು ಉತ್ಪಾದಿಸುವ ಹಾಗೂ ಹಣಗಳಿಸುವ ಸಲುವಾಗಿ ರಾಸಾಯನಿಕ ಪೋಷಕಾಂಶಗಳು ಹಾಗೂ ಕ್ರಿಮಿ ಕೀಟನಾಶಕಗಳ ಮೊರೆ ಹೋಗುತ್ತಿದ್ದಾರೆ.
ಇದರಿಂದ ಮಣ್ಣಿನ ಫಲವತ್ತತೆ, ಭೌತ್ತಿಕ, ರಾಸಾಯನಿಕ ಹಾಗೂ ಜೈವಿಕ ಫಲವತ್ತತೆಯು ಹಾಳಾಗುತ್ತಿದೆ. ಇದನ್ನು ಮನಗಂಡ ನಾವು ಮುಂದಿನ ಯುವ ಪೀಳಿಗೆಗೆ ಬೇಕಾದ ಪರಿಶುದ್ಧ ಸಂಪನ್ಮೂಲಗಳು ಹಾಗೂ ಆರೋಗ್ಯದ ಹಿತದೃಷ್ಠಿಯಿಂದ
ಮತ್ತು ಪ್ರಮುಖವಾಗಿ ಮಣ್ಣಿನ ಆರೋಗ್ಯದ ಹಿತದೃಷ್ಠಿಯಿಂದ ಕೃಷಿಯಲ್ಲಿ ರಾಸಾಯನಿಕ ಸಸ್ಯರಕ್ಷಕ ಹಾಗೂ ಪ್ರಚೋದಕಗಳ ಪರ್ಯಾಯವಾಗಿ ದೊರೆಯುವ ಪಂಚಗವ್ಯ ಜೀವಾಮೃತ ಮತ್ತು ಬೀಜಾಮೃತವನ್ನು ಬಳಕೆಯನ್ನು ಮಾಡುವುದು ಒಳಿತೆನ್ನಬಹುದು.
Green manure: ಹಸಿರು ಗೊಬ್ಬರದ ಪ್ರಯೋಜನ ಹಾಗೂ ಗುಣಗಳು
ಸಾವಯವ ಸಸ್ಯರಕ್ಷಕ ಹಾಗೂ ಪ್ರಚೋದಕವಾದ ಪಂಚಗವ್ಯದ ತಯಾರಿಕಾ ವಿಧಾನ ಹಾಗೂ ಉಪಯೋಗಗಳನ್ನು ಈ ಕೆಳಗೆ ನೀಡಲಾಗಿದೆ.
ಪಂಚಗವ್ಯವನ್ನು ತಯಾರಿ ಮಾಡಲು ಬೇಕಾಗುವ ವಸ್ತುಗಳು
- ನಾಟಿ ಹಸುವಿನ ಸಗಣಿ/ತಪ್ಪೆ– 10 ಕೆ.ಜಿ.
- ನಾಟಿ ಹಸುವಿನ ಮೂತ್ರ/ಗಂಜಲ - 10 ಲೀ.
- ನಾಟಿ ಹಸುವಿನ ಹಾಲು – 6 ಲೀ.
- ನಾಟಿ ಹಸುವಿನ ತುಪ್ಪ– 5 ಕೆ.ಜಿ.
- ನಾಟಿ ಹಸುವಿನ ಮೊಸರು– 6 ಲೀ.
- ಕಬ್ಬಿನ ಹಾಲು 3 ಲೀ.
- ಬಾಳೆ ಹಣ್ಣು 12 (ನಂ)
- ಸೇಂದಿ - 2 ಲೀ ಅಥವಾ 100 ಗ್ರಾಂ ಯೀಸ್ಟ್ ಅಥವಾ 100 ಗ್ರಾಂ ಬೆಲ್ಲ
ಮಣ್ಣಿನ ಸಂರಕ್ಷಣೆ ಮತ್ತು ಕೃಷಿಯಲ್ಲಿ ಮಣ್ಣಿನ ನಿರ್ವಹಣೆ
ಪಂಚಗವ್ಯ ತಯಾರಿಸುವ ಹಂತ
25 ಲೀ ಸಾಮರ್ಥ್ಯವುಳ್ಳ ಪ್ಲಾಸ್ಟಿಕ್ ಬಕೇಟ್‌ನಲ್ಲಿ 10 ಕೆ.ಜಿ. ಸಗಣಿ ಮತ್ತು ಗಂಜಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 10 ದಿನ ಕೊಳೆಯಲು ಬಿಡಬೇಕು.
- ಮೊದಲನೇ ದಿನವೇ ಹಸುವಿನ ಮೊಸರನ್ನು ಸಗಣಿ ಮತ್ತು ಗಂಜಲದ ಮಿಶ್ರಣದಲ್ಲಿ ಹಾಕಿ 10 ದಿನಗಳ ಕಾಲ ಚೆನ್ನಾಗಿ ಕೊಳೆಯಲು ಬಿಡಬೇಕು.
- 10 ದಿನಗಳ ನಂತರ ಕಾಯಿಸಿ/ಬಿಸಿಮಾಡಿ ತಣ್ಣಗೆ ಮಾಡಿದ ತುಪ್ಪ ಮತ್ತು ಹಾಲನ್ನು ಮಿಶ್ರಣ ಮಾಡಬೇಕು. ಜೊತೆಗೆ ಕಬ್ಬಿನ ಹಾಲು 3 ಲೀ, 12 ಬಾಳೆಹಣ್ಣು ಮತ್ತು 2 ಲೀ ಸೇಂದಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. (ಸೇಂದಿಯ ಬದಲಿಗೆ 100 ಗ್ರಾಂ. ಬೆಲ್ಲ ಅಥವಾ ಯೀಸ್ಟನ್ನು ಕೂಡ ಬಳಸಬಹುದು)
- ಎಲ್ಲಾ ವಸ್ತುಗಳನ್ನು ಪ್ಲಾಸ್ಟಿಕ್ ಬಕೆಟ್‌ನಲ್ಲಿ ಮಿಶ್ರಣ ಮಾಡಿದ ನಂತರ 10 ದಿನಗಳ ವರೆಗೆ ಪ್ರತಿದಿನ ಎರಡು ಬಾರಿ ಕಲಕುತ್ತಾ ಬಕೆಟ್ ಬಾಯಿಯನ್ನು ಮುಚ್ಚಬೇಕು. ತಯಾರಿ ಮಾಡಿದ 22 ದಿನಗಳೊಳಗೆ ಪಂಚಗವ್ಯ ಸಿದ್ಧವಾಗುತ್ತದೆ.
ಪಂಚಗವ್ಯದ ಪ್ರಮುಖ ಉಪಯೋಗಗಳು:
ಪೋಷಕಾಂಶಗಳು, ಖನಿಜಾಂಶಗಳು ಮತ್ತು ನೀರನ್ನು ಹೀರುವ ಮತ್ತು ಅದನ್ನು ಕಾದಿಡುವ ಸಾಮರ್ಥ್ಯವೂ ಹೆಚ್ಚುತ್ತದೆ.
- ಬೇರುಗಳಲ್ಲಿ ಹೆಚ್ಚಳ, ಉದ್ದ ಹಾಗೂ ಆರೋಗ್ಯ ವರ್ಧನೆ.
- ಸಸ್ಯಗಳ ಅಡುಗೆ ಮನೆಯಾದ ಎಲೆಗಳ ಅಗಲ ಮತ್ತು ಆರೋಗ್ಯವರ್ಧನೆ.
- ಎಲೆ ಮತ್ತು ಕಾಂಡಗಳ ಹೊಳಪು ಹೆಚ್ಚುತ್ತದೆ. ತೆಳುವಾದ ಎಣ್ಣೆಯ ಪದರವೊಂದು ಮೂಡುವುದರಿಂದ ನೀರು ಆವಿಯಾಗುವುದು ತಪ್ಪುತ್ತದೆ.
- ಟೊಂಗೆಗಳ ಸಾಮರ್ಥ್ಯ ಹೆಚ್ಚುವುದರಿಂದ ಕಾಯಿಯ ಭಾರವನ್ನು ಹೊರಲು ಹೆಚ್ಚಿನ ತಾಕತ್ತು ಬರುತ್ತದೆ.
- ಹಾನಿಕಾರಕ ಕೀಟ ಹಾಗೂ ರೋಗಗಳ ನಿಯಂತ್ರಣ.
- ಇಳುವರಿ ಹೆಚ್ಚುವುದರೊಂದಿಗೆ ಬೇಗ ಕೊಯ್ಲಿಗೆ ಬರುತ್ತದೆ.
- ಪಂಚಗವ್ಯವನ್ನು ಎಲ್ಲಾ ರೀತಿಯ ಹೊಲದ ಬೆಳೆಗಳು, ತೋಟಗಾರಿಕಾ ಬೆಳೆಗಳು ಮತ್ತು ತರಕಾರಿಗಳಿಗೂ ಬಳಸಬಹುದು.
ಪಂಚಗವ್ಯದ ಬಳಕೆ ಹೇಗೆ?
ಮಿಶ್ರಣದಿಂದ 70 – 100 ಮಿ.ಲೀ. ಎತ್ತಿಕೊಳ್ಳಿ. ಅದನ್ನು ಚೆನ್ನಾಗಿ ಸೋಸಿರಿ, ಅದನ್ನು 10 ಲೀ. ನೀರಿಗೆ ಬೆರೆಸಿ ಬೆಳೆಗೆ ಸಿಂಪರಣೆ ಮಾಡಿ.
ಉದಾ: ಬೆಳೆ ಸಿಂಪರಣಾ ಸಮಯ
- ಭತ್ತ 10, 15, 30 ಮತ್ತು 50 ದಿನಗಳು ಬಿತ್ತನೆ ಮಾಡಿದ ನಂತರ.
- ಉದ್ದಿನಕಾಳು 15,25 ಮತ್ತು 40 ದಿನಗಳು ಬಿತ್ತನೆ ಮಾಡಿದ ನಂತರ
- ಹೆಸರುಕಾಳು 15, 25, 45 ಮತ್ತು 50 ದಿನಗಳು ಬಿತ್ತನೆ ಮಾಡಿದ ನಂತರ.
ಪಂಚಗವ್ಯವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡುವುದರ ಜೊತೆಗೆ ಬೀಜೋಪಚಾರ ಮಾಡಲು ಸಹ ಬೆಳೆಸಬಹುದು.
ಲೇಖನ: ನಾಗೇಶ್, ಸಿ. ಆರ್. ಸಹಾಯಕ ಪ್ರಾಧ್ಯಾಪಕರು, ಬೇಸಾಯ ಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ, ವಿ. ಸಿ. ಫಾರಂ., ಮಂಡ್ಯ