Success stories

ನೈಸರ್ಗಿಕ ಬೆಲ್ಲ (Natural jagggery) ಮಾರಾಟ ಮಾಡಿ ದೊಡ್ಡವನಾದ ದ್ಯಾವೇಗೌಡ

26 July, 2020 1:10 PM IST By:

ಕೃಷಿಯಲ್ಲಿ ರೈತರನ್ನು ಸದಾ ಪೆಡಂಭೂತದಂತೆ ಕಾಡುತ್ತಿರುವ ಅತೀವೃಷ್ಠಿ ಅನಾವೃಷ್ಠಿಗಳ ನಡುವೆ ಇಲ್ಲೊಬ್ಬ ರೈತ ಸಹಜ ಬೇಸಾಯದಿಂದ ವಿಷಮುಕ್ತ ಬೆಳೆಯನ್ನು ಬೆಳೆಯುವ ಮೂಲಕ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ಅವರೇ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರ ಗ್ರಾಮದ ದ್ಯಾವೇಗೌಡ. ನೈಸರ್ಗಿಕ ಕೃಷಿಯನ್ನೇ ಕಸುಬಾಗಿಸಿಕೊಂಡು ಬದುಕು ಕಟ್ಟುಕೊಂಡಿದ್ದಾರೆ. ಬೆಳೆ ನಷ್ಟ, ಬೆಲೆ ಕುಸಿತ, ಸಾಲ ಮತ್ತಿತರ ಕಾರಣಗಳಿಂದ ಕೃಷಿ ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ದ್ಯಾವೇಗೌಡ ಮಾತ್ರ ನಗರ ಪ್ರದೇಶಗಳಿಗೆ ವಲಸೆ ಹೋಗದೆ ಇದ್ದ ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದು ಬಾಳು ಬೆಳಗಿಸಿಕೊಂಡಿದ್ದಾರೆ. ಹಣಕ್ಕಾಗಿ ಆಹಾರ ಬೆಳೆಯುವುದನ್ನು ಬಿಟ್ಟು ಆರೋಗ್ಯಕ್ಕಾಗಿ ಆಹಾರ ಬೆಳೆಯಬೇಕೆಂಬುದು(to grow food for health) ಇವರ ಮಂತ್ರ.

ತಮ್ಮ ಪಾಲಿಗೆ ಬಂದ 4 ಎಕರೆ ಜಮೀನಿನಲ್ಲಿ ನೈಸರ್ಗಿಕ ಕೃಷಿಯೊಂದಿಗೆ ಹೈನುಗಾರಿಕೆ, ನೈಸರ್ಗಿಕ ಬೆಲ್ಲ ಉತ್ಪಾದನೆಯಂತಹ ಉಪ ಕಸುಬುಗಳನ್ನು ಅಳವಡಿಸಿಕೊಂಡು ಉತ್ತಮ ಆದಾಯ ಗಳಿಸಿಕೊಂಡು ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿದ್ದಾರೆ. ತಾವೇ ಸಾವಯವ ಬೆಲ್ಲ ಮಾಡಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ವಿಷಮುಕ್ತ ಬೆಲ್ಲ ನೀಡಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೆ ಭೂ ತಾಯಿಯ ಆರೋಗ್ಯವನ್ನೂ ಕಾಪಾಡಬೇಕೆಂದು ಸಲಹೆ ನೀಡುತ್ತಾರೆ.

ನೈಸರ್ಗಿಕ ಬೆಲ್ಲ (Natural jagggery):  

ಸಾವಯವ ಕಬ್ಬು ಬೆಳೆಯುವದರ ಜೊತೆಗೆ ಸಾವಯವ ಬೆಲ್ಲವನ್ನೂ ತಯಾರಿಸುತ್ತಾರೆ. ತಾವು ಬೆಳೆದ ಕಬ್ಬನ್ನು ತಮ್ಮ ಆಲೆಮನೆಯಲ್ಲೇ ಅರೆದು, ರಾಸಾಯನಿಕ ಮುಕ್ತ ನೈಸರ್ಗಿಕ ಬೆಲ್ಲ ತಯಾರಿಸುತ್ತಾರೆ.  ಆಪ್ತರನ್ನು ಆಹ್ವಾನಿಸಿ ಬಂದವರಿಗೆಲ್ಲ ಕಬ್ಬಿನಹಾಲು, ನೊರೆ ಬೆಲ್ಲ, ಕಬ್ಬು ಇತ್ಯಾದಿ ಕೊಟ್ಟು ಕಳಿಸುತ್ತಾರೆ.  ರೈತ ತಾನು ಬೆಳೆದ ಬೆಳೆಯನ್ನು ಸ್ವತಃ ವ್ಯಾಪಾರ ಮಾಡಿದರೆ ಮಾತ್ರ ಲಾಭ ಗಳಿಸುತ್ತಾನೆಂದು ಗ್ರಾಹಕರಿಗೆ ವ್ಯಾಪಾರದ ಜ್ಞಾನವನ್ನೂ ನೀಡುತ್ತಿರುತ್ತಾರೆ. ತಮ್ಮ ಪಾಲಿಗೆ ಬಂದ ನಾಲ್ಕು ಎಕರೆ ಜಮೀನಿನಲ್ಲಿ 6 ಲಕ್ಕೂ ಹೆಚ್ಚು ನಿವ್ವಳ ಲಾಭ ಪಡೆದು ಸುತ್ತಮುತ್ತಲಿನ ರೈತರಿಗೆ ಆದರ್ಶರಾಗಿದ್ದಾರೆ.

ಜೀವಸಾರ ಘಟಕ:

ಜಮೀನಿನಲ್ಲಿ  ಜೀವಸಾರದ ಘಟಕ ನಿರ್ಮಿಸಿ ಅದರಲ್ಲಿ ಅಲಸಂದೆ, ಸಗಣಿ, ಗಂಜಲ, ಭತ್ತದ ಜೊಳ್ಳು, ಹಿಪ್ಪನೇರಳೆ ಎಲೆಗಳನ್ನು ಹಾಕಿ ಕೊಳೆಸಿ ಆ ನೀರನ್ನು ಪೈಪ್‌ಲೈನ್ ಮೂಲಕ ಜಮೀನಿಗೆ ಹಾಯಿಸುವ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದ್ದಾರೆ.

ಬದುವಿನಲ್ಲಿ ಬಾಳೆ(Banana): 

ಕಬ್ಬಿನ ಗದ್ದೆಯ ಬದುವಿನಲ್ಲಿ ಬಾಳೆ ಸಸಿ ಹಚ್ಚಿದ್ದಾರೆ. ಇದ್ದ ಖಾಲಿ ಜಾಗದಲ್ಲಿಯೇ ದ್ವಿದಳ, ಏಕದಳ ಸಮ್ಮಿಶ್ರ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಯಾವುದೇ ಬೆಳೆಗಳಿಗೂ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ನೈಸರ್ಗಿಕ ಪದ್ಧತಿಯಲ್ಲೇ ಕೃಷಿ ಮಾಡುತ್ತಿರುವುದು ಇವರ ವಿಶೇಷ.

ಗೊಬ್ಬರಕ್ಕೆ(Manure) ಪೂರಕ ವಾತಾವರಣ:

ತೋಟದಲ್ಲಿ ಬೆಳೆಯುವ ಸಣ್ಣ ಪುಟ್ಟ ಬಳ್ಳಿಗಳು, ತರಕಾರಿ ಬೆಳೆಗಳು ಹಾಗೂ ಇತರೆ ಗಿಡಗಳಿಂದ ಉದುರಿದ ಎಲೆ ಕಾಯಿ ಗರಿಗಳನ್ನು ತೋಟದಲ್ಲೇ ಬಿಡುವುದರಿಂದ, ಅದು ಕೊಳೆತು ಮಣ್ಣಿನ ಹೊದಿಕೆಯಾಗಿ ಒಂದಿಷ್ಟು ಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಬೆಳಗೆ ಗೊಬ್ಬರವಾಗಿಯೂ ಕಾರ್ಯನಿರ್ವಹಿಸುವುದಲ್ಲದೆ ರೈತನ ಮಿತ್ರ ಎರೆಹುಳುವಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿದ್ದಾರೆ.

ಜೀವಾಮೃತ:

ತೋಟದ ಬೆಳೆ ಅಂದ ಮೇಲೆ ಅದಕ್ಕೆ ಹಲವು ರೋಗಗಳು ಕಾಡುವುದು ಸಾಮಾನ್ಯ. ಬೆಳೆಗಳನ್ನು ಕಾಡುವ ರೋಗ ಬಾಧೆಯಿಂದ ಪಾರಾಗಲು ಇವರು ರಾಸಾಯನಿಕಕ್ಕೆ ಮೊರೆ ಹೋಗಿಲ್ಲ. ಬದಲಾಗಿ ಜೀವಾಮೃತ  ತಯಾರಿಸುತ್ತಾರೆ.

--------------

ನೈಸರ್ಗಿಕ ಕೃಷಿಯಿಂದಲೂ ಸಹ ದುಪ್ಪಟ್ಟು ಆದಾಯ ಗಳಿಸಬಹುದು. ಹೆಚ್ಚುಇಳುವರಿ ಪಡೆಯಬೇಕೆಂಬ ಧಾವಂತದಲ್ಲಿ ಭೂಮಿಗೆ ರಾಸಾಯನಿಕ ಎಂಬ ವಿಷ ನೀಡಿದರೆ ಭೂ ತಾಯಿ ತನ್ನ ಸತ್ವವನ್ನೇ ಕಳೆದುಕೊಳ್ಳುತ್ತದೆ. ವಿಶೇಷವಾಗಿ ಕಳೆನಾಶಕ ಸಿಂಪರಣೆ ಮಾಡಬಾರದು.  ರೈತರು ರಾಸಾಯನಿಕ ಬೇಸಾಯ ಪದ್ಧತಿಯನ್ನು ಬಿಟ್ಟು, ನೈಸರ್ಗಿಕ ಬೇಸಾಯದತ್ತ ಬರುವುದು ತುಂಬಾ ಅವಶ್ಯಕ. ನೈಸರ್ಗಿಕ ಕೃಷಿಯಿಂದ ಕುಟುಂಬದ ಆರೋಗ್ಯದಲ್ಲಿಯೂ ಸುಧಾರಣೆಯಾಗುತ್ತದೆ.

ದ್ಯಾವೇಗೌಡ, ಪ್ರಗತಿಪರ ರೈತ

ಸುಂಕಾತೊಣ್ಣೂರು

ಮೊ. 9900388803

ಬಹುಬೆಳೆಯಲ್ಲಿ ಬದುಕು ಕಟ್ಟಿಕೊಂಡ ರಾಜೇಗೌಡ ಬಿದರಕಟ್ಟೆ