ಬಿರು ಬೇಸಿಗೆಗೂ ಕೆಂಪು ಕಲ್ಲಂಗಡಿಗೂ ಅವಿನಾಭಾವ ನಂಟು. ಉರಿವ ಸೂರ್ಯ ನೆತ್ತಿ ಸುಡುವಾಗ ಕೈಲಿ ತಂಪಾದ ಕಲ್ಲಂಗಡಿ ಹಣ್ಣಿನ ಹೋಳೊಂದನ್ನು ಹಿಡಿದು ಸವಿಯುತ್ತಿದ್ದರೆ ಅದರ ಮಜವೇ ಬೇರೆ. ಸ್ವಲ್ಪ ಸ್ವಲ್ಪ ಹಣ್ಣು ನುಂಗುತ್ತಿದ್ದರೆ ಗಂಟಲ ಒಳಗಿಂದ ಐಸ್ ಕ್ಯಾಂಡಿ ಇಳಿದಂತೆ ತಣ್ಣನೆಯ ಅನುಭವ. ಆ ಮೋಜಿನ ಪರಿ ಅನುಭವಿಸಿದವರಿಗೇ ಗೊತ್ತು. ಹೀಗಿರುವ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಣ್ಣನೆಯ ಅನುಭವ ನೀಡುವುದು ಮಾತ್ರವಲ್ಲ, ಹಲವು ಆರೋಗ್ಯ ಪೂರಕ ಅಂಶಗಳನ್ನೂ ತನ್ನಲ್ಲಿ ಅಡಕವಾಗಿಸಿಕೊಂಡಿದೆ. ಕಲ್ಲಂಗಡಿಯ ಬೀಜಗಳು ಕೂಡ ಹಲವು ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತವೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ನಾವೆಲ್ಲ ಮನೆಗೆ ಕಲ್ಲಂಗಡಿ ಹಣ್ಣು ಕೊಂಡು ತರುತ್ತೇವೆ. ಹಸಿರು ತೊಗಟೆಯ ಒಳಗೆ ಅವಿತು ಕುಳಿತ ಕೆಂಪು ತಿರುಳಿನ ಸಿಹಿ ಸವಿದು ಮನೆಯವರೆಲ್ಲಾ ಆನಂದಿಸುತ್ತೇವೆ. ಈ ಕಲ್ಲಂಗಡಿ ರೈತನಿಂದ ವ್ಯಾಪಾರಿಗೆ ಬಂದಿದೆ. ರೈತ ಬೀಜ ಬಿತ್ತಿ, ಬಳ್ಳಿ ಬೆಳೆಸಿ ಹಣ್ಣಿನ ಬೆಳೆ ತೆಗೆಯುತ್ತಾನೆ. ಆದರೆ ಆ ಬೀಜಕ್ಕೊಂದು ಮೂಲ ಇರಬೇಕಲ್ಲವೇ. ಈ ಕಲ್ಲಂಗಡಿಯನ್ನು ಮೊದಲು ಬೆಳೆದವರು ಯಾರು? ಇದು ಭಾರತದಲ್ಲೇ ಹುಟ್ಟಿ ಬೆಳೆದದ್ದಾ ಅಥವಾ ಬೇರೆ ದೇಶದಿಂದ ಬಂದಿದ್ದಾ? ಬೇರೆ ದೇಶದ್ದಾದರೆ ಯಾವ ದೇಶದಿಂದ ಬಂತು? ಯಾವಾಗ ಬಂತು? ಇದನ್ನು ನಮ್ಮ ನಾಡಿಗೆ ತಂದವರಾರು ಎಂಬ ಬಗ್ಗೆ ನಾವೆಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಂತಾ ಕಲ್ಲಂಗಡಿ ಹಣ್ಣಿನ ಮೂಲ ತಿಳಿಯಲು ನೀವೇನೂ ಹರಸಾಹಸ ಪಡಬೇಕಿಲ್ಲ. ಏಕೆಂದರೆ, ಕಲ್ಲಂಗಡಿಯ ಕಂಪ್ಲೀಟ್ ಕಥೆಯನ್ನು ಈ ಲೇಖನದ ಮೂಲಕ ಕೃಷಿ ಜಾಗರಣ ನಿಮ್ಮ ಮುಂದೆ ತಂದಿದೆ.
ಈಜಿಪ್ಟಿನಲ್ಲಿ ಕುರುಹು
ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಕಲ್ಲಂಗಡಿ ಹಣ್ಣಿಗೆ ಸುಮಾರು 5 ಸಾವಿರ ವರ್ಷಗಳ ಇತಿಹಾಸ ಇದೆ ಎಂದರೆ ನೀವು ನಂಬಲೇಬೇಕು. ಉತ್ತರ ಆಫ್ರಿಕಾದ ಲಿಬಿಯಾದಲ್ಲಿ ೫೦೦೦ ವರ್ಷಗಳಷ್ಟು ಹಳೆಯ ಕಲ್ಲಂಗಡಿ ಬೀಜಗಳು ದೊರೆತಿವೆ. ಇದರೊಂದಿಗೆ ಈಜಿಪ್ಟಿನ ಸಕ್ಕಾರ್ ಎಂಬಲ್ಲಿ ಇರುವ ಬ್ಲುಮ್ ಹೋಟೆಪ್ ಎಂಬ ರಾಜನ ಸಮಾಧಿಯ ಮೇಲೆ ಕಲ್ಲಂಗಡಿ ಹಣ್ಣಿನ ಚಿತ್ರವಿದೆ. ಇದಕ್ಕೂ ಮೊದಲು ಕ್ರಿಸ್ತ ಪೂರ್ವ 2000-1001ರ ನಡುವೆ ದೊರೆ ಫರೌಹ್ ಟುಟಾಂಖಮುನ್ ಅಥವಾ ಕಿಂಗ್ ಟುಟ್ ಎಂಬಾತನ ಸಮಾಧಿ ಸ್ಥಳದಲ್ಲೂ ಕಲ್ಲಂಗಡಿ ಹಣ್ಣಿನ ಬೀಜಗಳು ದೊರೆತಿದ್ದವಂತೆ. ಆದರೆ, ಆರಂಭದಲ್ಲಿ ನೈಲ್ ನದಿಯ ತೀರದುದ್ದಕ್ಕೂ ಕಲ್ಲಂಗಡಿ ಅಥವಾ ಅದರ ಪ್ರಜಾತಿಯ ಯಾವುದೇ ಹಣ್ಣುಗಳನ್ನು ಬೆಳೆದ ಕುರಿತು ಒಂದೇ ಒಂದು ಸುಳಿವು ಕೂಡ ದೊರೆತಿಲ್ಲ. ಹೀಗಾಗಿ ಈ ಕಲ್ಲಂಗಡಿ ಹಣ್ಣು ಈಜಿಪ್ಟಿಗೆ ಬಂದದ್ದಾದರೂ ಎಲ್ಲಿಂದ ಎಂಬ ಪ್ರಶ್ನೆ ತಳಿ ಸಂಶೋಧಕರನ್ನು ಕಾಡದೆ ಬಿಟ್ಟಿಲ್ಲ.
ಆಫ್ರಿಕಾ ಮೂಲ:
ಕಲ್ಲಂಗಡಿಯ ಕುರುಹುಗಳು ಮೊದಲು ದೊರೆತದ್ದು ಈಜಿಪ್ಟ್ನಲ್ಲಾದರೂ ಅದರ ಮೂಲ ಮಾತ್ರ ಆಫ್ರಿಕಾ ಖಂಡ ಎಂದು ಸಂಶೋಧಕರು ಸ್ಪಷ್ಟವಾಗಿ ಹೇಳುತ್ತಾರೆ. ಮೊದಲು ಆಫ್ರಿಕಾದಲ್ಲಿ ಬೆಳೆದ ಈ ಸಿಹಿಯಾದ ಹಣ್ಣು ಕಾಲಾನಂತರದಲ್ಲಿ ಈಜಿಪ್ಟ್ಗೆ ಬಂದಿರಬಹುದು ಎಂದು ಹೇಳಲಾಗುತ್ತದೆ. ಇನ್ನು ಸಿಟ್ಟಲಸ್ ಜಾತಿಗೆ ಸೇರಿರುವ ಕಲ್ಲಂಗಡಿಯ ಮೂಲ ತಳಿ ಕುರ್ದೂಫಾನ್ ಮೆಲನ್ ಎಂದು ನಂಬಲಾಗಿದೆ. ವಿಶೇಷವೆಂದರೆ ಕಲ್ಲಂಗಡಿ ಹೊರತುಪಡಿಸಿದರೆ ಕುರ್ದೂಫಾನ್ ಮೆಲನ್‌ನ ಬೇರಾವುದೇ ತಳಿಯ ಹಣ್ಣುಗಳ ತಿರುಳು ಸಿಹಿಯಾಗಿಲ್ಲ!
ಮರಳುಗಾಡಲ್ಲಿ ನೀರಿನ ಆಕರ
ಆಫ್ರಿಕಾದಲ್ಲಿ ಹುಟ್ಟಿದ ಕಲ್ಲಂಗಡಿ ಹಣ್ಣಿನ ಬಳ್ಳಿಗಳು ಮರಳು ಅಥವಾ ಮರಳು ಮಿಶ್ರಿತ ಮಣ್ಣಿನಲ್ಲಿ ಹುಲುಸಾಗಿ ಬೆಳೆಯುತ್ತವೆ. ಹೀಗಾಗಿ ಈಜಿಪ್ಟ್ನ ಮಣ್ಣು ಹಾಗೂ ಹವಾಗುಣಕ್ಕೆ ಹೇಳಿಮಾಡಿಸಿರುವ ಈ ಹಣ್ಣನ್ನು ಅಲ್ಲಿನ ದೊರೆ ಅಥವಾ ಜನ ಆಫ್ರಿಕಾದಿಂದ ಆಮದು ಮಾಡಿಕೊಂಡು ಬೆಳೆದಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲೂ ಕೂಡ ಬಿಸಿಲು ಹೆಚ್ಚಿರುವ ಹಾಗೂ ಮರಳು ಮಿಶ್ರಿತ ಮಣ್ಣು ಹೊಂದಿರುವ ಜಿಲ್ಲೆಗಳಲ್ಲಿ ಕಲ್ಲಂಗಡಿಯನ್ನು ಹೆಚ್ಚಾಗಿ ಬೆಳೆಯುತ್ತಿರುವುದು ಈ ವಾದಕ್ಕೆ ಮತ್ತಷ್ಟು ಬಲ ನೀಡುತ್ತದೆ. ಅದೂ ಅಲ್ಲದೆ ಕಲ್ಲಂಗಡಿ ಹಣ್ಣುಗಳು ನೀರಿನ ಆಕರಗಳಾಗಿವೆ. ಹೀಗಾಗಿ ಮರುಭೂಮಿ ನಾಡಿನಲ್ಲಿ ಅವುಗಳ ಅವಶ್ಯಕತೆ ಅರಿತು ಈಜಿಪ್ಟ್ ಜನ ಅನಾದಿಕಾಲದಲ್ಲೇ ಅದನ್ನು ಬೆಳೆದಿದ್ದಾರೆ.
ಭಾರತಕ್ಕೆ ಬಂದದ್ದು ಯಾವಾಗ?
ಸುಮಾರು ಕ್ರಿ.ಶ 7ನೇ ಶತಮಾನದಲ್ಲಿ ಕಲ್ಲಂಗಡಿ ಹಣ್ಣುಗಳು ಭಾರತಕ್ಕೆ ಬಂದಿವೆ. ಆದರೆ ಭಾರತದ ಶಸ್ತç ವೈದ್ಯ ನಿಪುಣ ಸುಶ್ರುತರು ಬರೆದಿರುವ ‘ಸುಶ್ರುತ ಸಂಹಿತ’ದಲ್ಲಿ ಕಲ್ಲಂಗಡಿಯ ಉಲ್ಲೇಖವಿರುವುದರಿಂದ ಈ ಹಣ್ಣನ್ನು ನಾಲ್ಕನೇ ಶತಮಾನದ ವೇಳೆಯೇ ಭಾರತದಲ್ಲಿ ಬೆಳೆಯಲಾಗಿತ್ತು ಎನ್ನಲಾಗಿದೆ. ಆರಂಭದಲ್ಲಿ ಕಲಿಂದ ಅಥವಾ ಕಲಿಂಗಾ ಎಂದು ಕರೆಯಲಾಗುತ್ತಿದ್ದ ಈ ಹಣ್ಣುಗಳನ್ನು ಸಿಂಧೂ ನದಿ ತೀರದ ಕೃಷಿ ಭೂಮಿಯಲ್ಲಿ ಬೆಳೆಯಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಭಾರತಕ್ಕೆ ಬಂದ ಹಲವು ಶತಮಾನಗಳ ಬಳಿಕ, ಅಂದರೆ ಸರಿಸುಮಾರು 10ನೇ ಶತಮಾನದ ವೇಳೆಗೆ ಕಲ್ಲಂಗಡಿ ಹಣ್ಣುಗಳನ್ನು ಚೀನಾದಲ್ಲಿ ಬೆಳೆಯಲಾಯಿತು. ಆದರೆ, ಇಂದು ಜಗತ್ತಿಲ್ಲೇ ಅತಿ ಹೆಚ್ಚು ಕಲ್ಲಂಗಡಿ ಬೆಳೆಯುವ ದೇಶವಾಗಿ ಚೀನಾ ಗುರುತಿಸಿಕೊಂಡಿದೆ.
1000ಕ್ಕೂ ಹೆಚ್ಚು ತಳಿ
ಸಿಟ್ರಲಸ್ ಲನಾಟಸ್ ಎಂಬ ವೈಜ್ಞಾನಿಕ ಹೆಸರಿನಿಂದ ಕಲ್ಲಂಗಡಿ ಹಣ್ಣನ್ನು ಕರೆಯಲಾಗುತ್ತದೆ. ಸಸ್ಯಶಾಸ್ತçಜ್ಞರಿಂದ ಪಿಪೋ ಎಂದು ಕರೆಸಿಕೊಳ್ಳುವ ಈ ಹಣ್ಣಿಗೆ ಸಂಬAಧಿಸಿದ 1000ಕ್ಕೂ ಅಧಿಕ ತಳಿಗಳು ಜಗತ್ತಿನಾದ್ಯಂತ ಕಾಣಸಿಗುತ್ತವೆ. ಹಣ್ಣಿನ ಆಕಾರ, ಗಾತ್ರ, ತಿರುಳಿನ ಬಣ್ಣ ಸೇರಿ ಹಲವು ವಿಶೇಷತೆಗಳನ್ನು ಆಧರಿಸಿ ತಳಿಗಳನ್ನು ಗುರುತಿಸಲಾಗುತ್ತದೆ. ಗೌಡ, ಸೆಲೆಕ್ಷನ್ ನಂ.1, ಸೆಲೆಕ್ಷನ್ ನಂ.2 ಮುಂತಾದುವು ಮೈಸೂರು ರಾಜ್ಯದ ತಳಿಗಳಾದರೆ, ಷಹಜಾನ್ ಪುರಿ, ಜಾನ್ ಪುರಿ, ಫರೂಕಾಬಾದಿ, ಅಲಾಹಾಬಾದಿ ಎಂಬ ಉತ್ತರ ಭಾರತದ ಕಲ್ಲಂಗಡಿ ತಳಿಗಳನ್ನು ಭಾರತದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ.