ತೊಗರಿ ಬೆಳೆಯ ಸೊರಗು ಮತ್ತು ಬಂಜೆ ರೋಗಗಳ ಸಮಗ್ರ ನಿರ್ವಹಣೆ
ತೊಗರಿ ಕರ್ನಾಟಕದ ಪ್ರಮುಖ ಬೇಳೆಕಾಳು ಬೆಳೆಯಾಗಿದ್ದು. ತೊಗರಿ ಬೆಳೆಯು ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಇದು ಪ್ರತಿ ಹೆಕ್ಟೇರಿಗೆ 20 ಕಿ.ಗ್ರಾಂ. ನಂತೆ ಸಾರಜನಕವನ್ನು ಮಣ್ಣಿನಲ್ಲಿ ಸ್ಥಿರೀಕರಿಸುವುದಲ್ಲದೆ, ಕಟಾವಿನ ನಂತರ ಬೇರುಗಳು ಭೂಮಿಯಲ್ಲಿ ಉಳಿಯುವುದರಿಂದ ಹಾಗೂ ಬೆಳವಣಿಗೆಯ ಹಂತದಲ್ಲಿ ಎಲೆಗಳು ಉದುರುವುದರಿಂದ ಭೂಮಿಯ ಭೌತಿಕ, ರಸಾಯನಿಕ, ಜೈವಿಕ ಕಿೃಯೆಗಳಿಗೆ ಚಾಲನೆ ದೊರೆತು ಮಣ್ಣಿನ ಫಲವತ್ತತೆಯಲ್ಲಿ ಸ್ಥಿರತೆಯನ್ನು ಕಾಪಾಡುತ್ತದೆ. ಈ ಲೇಖನದಲ್ಲಿ ತೊಗರಿ ಬೆಳೆಯ ಸೊರಗು ಮತ್ತು ಬಂಜೆ ರೋಗಗಳ ಪರಿಚಯದೊಂದಿಗೆ ಅವುಗಳ ನಿರ್ವಹಣಾ ಕ್ರಮಗಳನ್ನು ಸಹ ಸೂಚಿಸಲಾಗಿದೆ. ರೈತರು ಇವರ ಉಪಯೋಗ ಪಡೆದು ಕೀಟ ಹತೋಟಿ ಮಾಡಿ ಇಳುವರಿಯನ್ನು ಹೆಚ್ಚಿಸಬಹುದು.
ಸೊರಗು ರೋಗ:
ಸೊರಗು ರೋಗವು ತೊಗರಿಯಲ್ಲಿ ಹೆಚ್ಚು ಹಾನಿಯನ್ನುಂಟು ಮಾಡುವ ಶಿಲೀಂದ್ರ ರೋಗವಾಗಿದ್ದು, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತಿದೆ. ಸೊರಗು ರೋಗವು ಬೀಜ ಮತ್ತು ವ್ಮಣ್ಣಿನ ಮುಖಾಂತರ ಹರಡುತ್ತಿದ್ದು ಮೊಟ್ಟ ಮೊದಲಿಗೆ 1906ರಲ್ಲಿ ಬಿಹಾರ ರಾಜ್ಯದಲ್ಲಿ ಕಂಡು ಬಂದಿತು. ತೊಗರಿ ಬೆಳೆಯ ಯಾವದೇ ಹಂತದಲ್ಲಿ ಸೊರಗು ರೋಗ ಬರುವಂತೆ ಸಾಧ್ಯತೆ ಇದೆ. ಅದರಲ್ಲಿಯೂ ಹೂವಾಡುವ ಮತ್ತು ಕಾಯಿ ಗಟ್ಟಿಯಾಗುವ ಹಂತದಲ್ಲಿ ಬೆಳೆಯು ರೋಗಕ್ಕೆ ತುತ್ತಾದರೆ ಶೇ. 100 ರಷ್ಟು ಹಾನಿಯಾಗುವ ಸಂಭವವಿರುತ್ತದೆ. ತೊಗರಿಯನ್ನು ಕುಳೆ ಅಥವಾ ಬಹುವಾರ್ಷಿಕ ಬೆಳೆಯಾಗಿ ತೆಗೆದುಕೊಂಡರೆ ಸೊರಗು ರೋಗದ ಬಾಧೆ ದ್ವಿಗುಣಗೊಳ್ಳುವುದು.
ರೊಗದ ಲಕ್ಷಣಗಳು:
ತೊಗರಿ ಬೆಳೆಯ ಯಾವದೇ ಹಂತದಲ್ಲಿ ಸೊರಗು ರೋಗ ಬರುವಂತೆ ಸಾಧ್ಯತೆ ಇದೆ ಅದರಲ್ಲಿಯೂ ಬಿತ್ತಿದ 5-6 ವಾರಗಳ ನಂತರ ರೋಗದ ಬಾಧೆ ಸಾಮಾನ್ಯವಾಗಿ ಕಂಡುಬರುತ್ತದೆ. ಮೊದಮೊದಲಿಗೆ ಗಿಡಗಳು ಅಲ್ಲಲ್ಲಿ ನೀರಿನ ಅಭಾವದಿಂದ ಒಣಗಿರುವಂತೆ ಕಂಡು ಬರುತ್ತವೆ. ಮೊದಲಿಗೆ ನಿಧಾನವಾಗಿ ಎಲೆಗಳು ಹಳದಿ ವರ್ಣಕ್ಕೆ ತಿರುಗಿ, ಜೋತು ಬಿದ್ದು ನಂತರ ಇಡೀ ಗಿಡವೇ ಒಣಗುತ್ತದೆ. ಎಲೆಗಳಲ್ಲಿಯೂ ನರಗಳನ್ನು ನಿಖರವಾಗಿ ಗುರುತಿಸಬಹುದಾಗಿದೆ. ರೋಗ ಭಾದಿತ ಗಿಡವನ್ನು ಕಿತ್ತಾಗ ಅದು ಸುಲಭವಾಗಿ ಬರುವುದಿಲ್ಲ ಬೇರುಗಳು ಆರೋಗ್ಯಕರವಾಗಿ ಕಂಡು ಬರುತ್ತವೆ. ಗಿಡದ ಕಾಂಡವನ್ನು ಉದ್ದವಾಗಿ ಸೀಳಿ ನೋಡಿದಾಗ ನೀರು ಮತ್ತು ಆಹಾರ ಸಾಗಿಸುವ ಅಂಗಾಂಶವು ಕಂದು ಬಣ್ಣಕ್ಕೆ ತಿರುಗಿರುವುದು ಕಾಣುತ್ತದೆ. ಸೊರಗು ರೋಗಕ್ಕೆ ತುತ್ತಾದ ಗಿಡದ ಕಾಂಡದ ಮೇಲೆ ನೇರಳೆ ಬಣ್ಣದ ಪಟ್ಟಿಗಳು ಭೂಮಿಯ ಮಟ್ಟದಿಂದ ಮೇಲಕ್ಕೆ ಹಬ್ಬಿರುವುದು ಕಂಡು ಬರುತ್ತದೆ. ತಾಯಿ ಬೇರು ಬಾಧೆಗೊಳಗಾಗಿದ್ದಲ್ಲಿ ಪೂರ್ಣ ಗಿಡ ಮತ್ತು ತಂತು ಬೇರುಗಳು ಬಾಧೆಗೊಳಗಾಗಿದ್ದಲ್ಲಿ ಅರ್ಧ ಗಿಡ ಸೊರಗುವುದು.
ಹತೋಟಿ ಕ್ರಮಗಳು:
- ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದರಿಂದ ಬಿಸಿಲಿನ ತಾಪಕ್ಕೆ ರೋಗಾಣುಗಳು ಸಾಯುತ್ತವೆ.
- ಭೂಮಿಗೆ ಹೆಚ್ಚು ಪ್ರಮಾಣದಲ್ಲಿ ಸಾವಯವ ಗೊಬ್ಬರಗಳನ್ನು ಸೇರಿಸುವುದರಿಂದ ಮಣ್ಣಿನಲ್ಲಿನ ಈ ರೋಗಾಣುಗಳನ್ನು ನಾಶ ಮಾಡುವ ಕೆಲ ಸೂಕ್ಷ್ಮ ಜೀವಿಗಳು ಅಭಿವೃದ್ಧಿಯಾಗಿ ರೋಗಾಣುವಿನ ಪ್ರಮಾಣ ಕಡಿಮೆ ಮಾಡುತ್ತವೆ.
- ರೋಗಗ್ರÀ್ರಸ್ಥ ಮಣ್ಣಿನಲ್ಲಿ ಜೋಳ ಮತ್ತು ಔಡಲ ಬೆಳೆ ಪರಿವರ್ತನೆ ಮಾಡುವುದು, ಜೋಳ ಅಥವಾ ಮುಸುಕಿನಜೋಳವನ್ನು ಮಿಶ್ರ ಬೆಳೆಯಾಗಿ ಬೆಳೆಯುವುದರಿಂದ ಈ ಬೆಳೆಗಳ ಬೇರುಗಳು ಉತ್ಪಾದಿಸುವ ಹೈಡ್ರೋಸೈನಿಕ್ ಆಮ್ಲ ಎಂಬ ರಾಸಾಯನಿಕವು ಈ ರೋಗಾಣುವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು.
- ಬೇಸಿಗೆಯಲ್ಲಿ ಪಾಲಿಥೀನ್ ಹಾಳೆಯನ್ನು ಭೂಮಿಯ ಮೇಲೆ ಹೊದಿಸುವುದರಿಂದ ರೋಗಾಣುಗಳ ಪ್ರಮಾಣ ಕಡಿಮೆಯಾಗುವುದು.
- ಬಿತ್ತನೆಗೆ ಮುಂಚೆ ಟ್ರೈಕೋಡರ್ಮಾ ಎನ್ನುವ ಜೈವಿಕ ಶೀಲಿಂಧ್ರನಾಷಕದಿಂದ ಬೀಜೋಪಚಾರ (4 ಗ್ರಾಂ. ಪ್ರತಿ ಕಿ.ಗ್ರಾಂ. ಬೀಜಕ್ಕೆ) ಮಾಡುವುದರಿಂದ ಈ ರೋಗವನ್ನು ನಿಯಂತ್ರಿಸಬಹುದು.
ಬಂಜೆ ರೋಗ
ರೋಗ ಬಾಧಿತ ಗಿಡಗಳು ಹೂ ಮತ್ತು ಕಾಯಿಗಳಿಲ್ಲದೆ ಹೆಚ್ಚಿಗೆ ಎಲೆಗಳನ್ನು ಹೊಂದಿ ಗೊಡ್ಡಾಗಿ ಉಳಿಯುತ್ತವೆ. ಎಲೆಗಳು ಚಿಕ್ಕದಾಗಿದ್ದು ಮೇಲ್ಬಾಗದಲ್ಲಿ ತಿಳಿ ಮತ್ತು ದಟ್ಟ ಹಳದಿ ಬಣ್ಣದ ಮೊಜಾಯಿಕ ತರಹದ ಮಚ್ಚೆಗಳನ್ನು ಹೊಂದಿ ಮುಟುರಿಕೊಳ್ಳುತ್ತವೆ. ರೋಗದ ಪ್ರಾರಂಭಿಕ ಹಂತದಲ್ಲಿ ಮೊಜಾಯಿಕ್ ತಿಳಿ ಹಳದಿ ಬಣ್ಣವು ಎಲೆಯ ನರಗಳ ಗುಂಟ ಪಸರಿಸಿ ನರಗಳು ಎದ್ದು ಕಾಣಿಸುವುವು. ರೋಗವು ಬೆಳೆಯ ಎಳೆ ವಯಸ್ಸಿನಲ್ಲಿ ಕಂಡು ಬಂದರೆ ಕಾಂಡವೂ ಬೆಳೆಯದೆ ತಿಳಿ ಹಳದಿ ಬಣ್ಣದ ಚಿಕ್ಕ ಗಾತ್ರದ ಮುಟುರಿ ಕೊಂಡಿರುವ ಎಲೆಗಳ ಗುಂಪಿನಿಂದ ಕೂಡಿದ ಕಂಟಿಯಂತೆ ಗೊಡ್ಡಾಗಿ ಉಳಿಯುವುದು. ಬಿತ್ತಿದ 40-45 ದಿವಸಗಳ ನಂತರ ರೋಗ ಬಂದರೆ ಕೆಲವೇ ಟೊಂಗೆಗಳಲ್ಲಿ ಮಾತ್ರ ರೋಗದ ಲಕ್ಷಣ ಕಾಣಿಸುವವು. ನಂಜಾಣುವಿನಂತಹ ರೋಗಾಣುವಿನಿಂದ ಉಂಟಾಗುವ ಈ ರೋಗವು ಅಂತರವ್ಯಾಪಿಯಾಗಿದ್ದು ಅಸೆರಿಯಾ ಕಜಾನಿ ಎನ್ನುವ ರಸ ಹೀರುವ ಮೈಟ್ ನುಶಿಗಳಿಂದ ಪ್ರಸಾರವಾಗುವುದು. ಈ ಮೈಟ ನುಶಿಗಳು ಗಾಳಿಯ ಜೊತೆಗೆ ರೋಗದ ಸ್ಥಳದಿಂದ ಸುಮಾರು 2 ಕಿ.ಮೀ. ವರೆಗೂ ಪ್ರಸಾರವಾಗುವವು. ರೋಗಾಣು ವಾಹಕ ಮೈಟ ನುಶಿಗಳು ಬಂಜರು ಭೂಮಿ ಮತ್ತು ಹೊಲದ ಒಡ್ಡಿನ ಮೇಲೆ ಬೆಳೆದ ತೊಗರಿ ಮತ್ತು ಕಾಡುತೊಗರಿ ಮಾತ್ರ ಮೀಸಲಾಗಿದ್ದು ಬೇರೆ ಬೆಳೆಯ ಮೇಲೆ ಬರುವುದಿಲ್ಲ. ಬಹುವಾರ್ಷಿಕ ತೊಗರಿ ತಾನಾಗಿಯೇ ಬೆಳೆದ ತೊಗರಿ ಗಿಡಗಳು ಮತ್ತು ಕುಳೆ ತೊಗರಿಯು ರೋಗಾಣುವಿಗೆ ಮತ್ತು ರೋಗಾಣುವಿನ ವಾಹಕ ಮೈಟ್ ನುಶಿಗಳಿಗೆ ಆಸರೆ ನೀಡಿ ರೋಗಾಣುವಿನ ಸಂತತಿ ಮುಂದುವರೆಸಲು ಸಹಾಯಕವಾಗುವುವು. ಸಾಮಾನ್ಯವಾಗಿ ರೋಗದ ಲಕ್ಷಣಗಳು ಬೇಸಿಗೆಯ ಬಿಸಿಲಿನಲ್ಲಿ ಕಡಿಮೆಯಾಗಿ ಮುಂಗಾರಿನಲ್ಲಿ ಪುನಃ ಮರುಕಳಿಸುವುದು. ಬೇಸಿಗೆಯ ನೆರಳು ಮತ್ತು ಆದ್ರ್ರತೆ ಮೈಟ್ ನುಶಿಗಳ ಅಭಿವೃದ್ಧಿಗೆ ಸಹಕಾರಿಯಾಗುವುವು.
ಹತೋಟಿ ಕ್ರಮಗಳು:
- ತೊಗರಿ ಬೆಳೆಯನ್ನು ಬಹುವಾರ್ಷಿಕ ತೊಗರಿ ಮತ್ತು ಕುಳೆ ತೊಗರಿ ಬೆಳೆಯಿಂದ ಸಾಕಷ್ಟು ದೂರದಲ್ಲಿ ಬೆಳೆಯಬೇಕು.
- ರೋಗಾಣುವಿನ ಆದರೆ ಸಸ್ಯಗಳಾದ ಬಹುವಾರ್ಷಿಕ ತೊಗರಿ ಮತ್ತು ಕುಳೆ ತೊಗರಿ ಬೆಳೆಯನ್ನು ಕಿತ್ತು ನಾಶ ಮಾಡಬೇಕು.
- ರೋಗದ ಪ್ರಾರಂಭದ ಹಂತದಲ್ಲಿ ರೋಗ ಬಂದ ಗಿಡಗಳನ್ನು ಕಿತ್ತು ನಾಶ ಮಾಡಬೇಕು.
- ರೋಗಾಣುವಿನ ಮತ್ತು ರೋಗ ವಾಹಕ ಮೈಟ್ ನುಶಿಗಳ ಪ್ರಮಾಣ ಕಡಿಮೆ ಮಾಡಲು ಪರ್ಯಾಯ ಬೆಳೆಗಳನ್ನು ಬೆಳೆಯಬೇಕು.
- ಬೆಳೆಯ ಪ್ರಾರಂಭಿಕ ಹಂತದಲ್ಲಿ ನುಶಿ ನಾಶಕಗಳಾದ ಡೈಕೋಪಾಲ 20 ಇಸಿ 2.5 ಮಿ.ಲೀ. ಅಥವಾ ಆಕ್ಸಿಡೆಮಟಾನ್ ಮಿಥೈಲ್ 25 ಇಸಿ 1.5 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ, ಬೆಳೆಯ ಮೇಲೆ ಸಿಂಪಡಿಸಿ, ನುಶಿಗಳ ನಿಯಂತ್ರಣ ಮಾಡಬೇಕು.