Horticulture

ಕೃಷಿ ವಲಯದ ಅತಿ ದೊಡ್ಡ ಅಚ್ಚರಿ ಬುದ್ಧನ ಆಕಾರದ ಪಿಯರ್ ಹಣ್ಣುಗಳು!

29 June, 2021 1:35 PM IST By:

ಕೃಷಿ ಎಂಬುದು ಎಂದೆಂದೂ ನಿಲ್ಲದ, ಸದಾ ಹರಿಯುತ್ತಿರುವ ನೀರು. ಅದು ಹರಿಯುತ್ತಾ ಹೋದಂತೆ ಹೊಸ ತಿರುವುಗಳು ಸಿಗುತ್ತಾ ಹೋಗುತ್ತವೆ. ಆ ತಿರುವುಗಳನ್ನು ಕೃಷಿಕರು, ತಜ್ಞರು ಹಾಗೂ ವಿಜ್ಞಾನಿಗಳು ಪ್ರಯೋಗ ಎಂಬ ಹೆಸರಿನಿಂದ ಕರೆಯುತ್ತಾರೆ. ಬೆಳೆ, ತಳಿ, ಬೀಜ, ಹಣ್ಣುಗಳು, ಅವುಗಳ ಗುಣ, ಬಣ್ಣ, ಆಕಾರಕ್ಕೆ ಸಂಬಂಧಿಸಿದಂತೆ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಪ್ರತಿ ದಿನವೂ ಒಂದಿಲ್ಲೊAದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಇಂತಹ ಆವಿಷ್ಕಾರ ಮತ್ತು ಪ್ರಯೋಗಗಳ ಪೈಕಿ ಅತಿ ಹೆಚ್ಚು ಗಮನ ಸೆಳೆಯುವುದು ಬೆಳೆಗಳ ಆಕಾರ ಬದಲಿಸುವ ಪ್ರಯೋಗಗಳು. ಅದರಲ್ಲೂ ಹಣ್ಣುಗಳ ಆಕಾರ ಬದಲಿಸುವ ಪ್ರಯತ್ನಗಳು ವಿಶೇಷವಾಗಿ ಗಮನಸೆಳೆಯುತ್ತವೆ.

ಹಣ್ಣುಗಳು ಸಾಮಾನ್ಯವಾಗಿ ವೃತ್ತಾಕಾರ (ದುಂಡಗೆ) ಇಲ್ಲವೇ ಮೊಟ್ಟೆ ಆಕಾರದಲ್ಲಿ ಇರುತ್ತವೆ. ಇಂತಹ ಹಣ್ಣುಗಳಿಗೆ ಚೌಕಾಕಾರ, ಬಾಟಲಿ, ಬಾಕ್ಸ್ನ ಆಕಾರ, ಕೆಲವೊಮ್ಮೆ ಚಕ್ಕುಲಿ, ನಕ್ಷತ್ರದ ಆಕಾರವನ್ನು ನೀಡಲಾಗುತ್ತದೆ. ಕೆಲ ವರ್ಷಗಳ ಹಿಂದೆ ಚೌಕಾಕಾರದ ಕಲ್ಲಂಗಡಿ ಹಣ್ಣುಗಳು ಭಾರೀ ಸುದ್ದಿಯಾಗಿದ್ದವು. ಇದರ ಬೆನ್ನಲ್ಲೇ ಜಪಾನ್‌ನ ರೈತರು ಬೆಳೆದ ಹೃದಯಾಕಾರದ (ಹಾರ್ಟ್ ಶೇಪ್) ಕಲ್ಲಂಗಡಿ ಹಣ್ಣುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇವೆಲ್ಲವುಗಳಿಗಿಂತಲೂ ಭಿನ್ನವಾಗಿರುವ ಹಾಗೂ ಕೃಷಿ ಕ್ಷೇತ್ರದಲ್ಲಿ ಅಚ್ಚರಿ ಹುಟ್ಟಿಸಿದ ಆವಿಷ್ಕಾರವೆಂದರೆ ‘ಬುದ್ಧನ ಆಕಾರದ ಪಿಯರ್ ಹಣ್ಣುಗಳು’.

ಹೌದು, ಬಾಲ ಬುದ್ಧನ ಆಕಾರದ ಪಿಯರ್ ಹಣ್ಣುಗಳು ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು 2014ರಲ್ಲಿ. ಚೀನಾದ ಹಾವ್ ಕ್ಸಿನ್ಜಾಂಗ್ ಎಂಬ ತೋಟಗಾರಿಕೆ ಕೃಷಿಕ ಈ ಬುದ್ಧನ ಆಕಾರದ ಹಣ್ಣುಗಳನ್ನು ಬೆಳೆದು ಅಚ್ಚರಿ ಮೂಡಿಸಿದ್ದ. ಚೀನಾದ ಹೆಬಿ ಪ್ರಾಂತ್ಯದ ಕ್ಸಿನ್ಜಾಂಗ್, ತನ್ನ ಅರ್ಧ ಎಕರೆಯಷ್ಟು ಜಮೀನಿನಲ್ಲಿ ಬೆಳೆಸಿದ್ದ ಪಿಯರ್ ಮರಗಳಲ್ಲಿ ಬಾಲ ಬುದ್ಧನ ಆಕಾರದ ಸುಮಾರು 10,000 ಪಿಯರ್ ಹಣ್ಣುಗಳನ್ನು ಬೆಳೆಸಿದ್ದ. ಆಗಿನ ಮಾರುಕಟ್ಟೆಯಲ್ಲಿ ಒಂದು ಹಣ್ಣು 8 ಅಮೆರಿಕನ್ ಡಾಲರ್‌ಗೆ (ಇಂದಿನ ರೂಪಾಯಿ ಮೌಲ್ಯ 598 ರೂ.) ಮಾರಾಟವಾಗಿತ್ತು. ಈ ವೇಳೆ ಕೆಲವೇ ದಿನಗಳಲ್ಲಿ ಜಗತ್ತಿನಾದ್ಯಂತ ಜನಪ್ರಿಯನಾದ ಹಾವ್ ಕ್ಸಿನ್ಜಾಂಗ್, ತನ್ನ ಬುದ್ಧ ರೂಪಿ ಪಿಯರ್ ಹಣ್ಣುಗಳಿಂದ ಭಾರೀ ಲಾಭವನ್ನೂ ಗಳಿಸಿದ್ದ.

ಆರು ವರ್ಷಗಳ ಪರಿಶ್ರಮ

ಕೃಷಿಯಲ್ಲಿ ಯಾವುದೂ ಸುಲಭವಲ್ಲ. ಒಂದು ಬೆಳೆಯನ್ನು ಬಿತ್ತಿ ಬೆಳೆಸಿ, ಇಳುವರಿ ಪಡೆಯಬೇಕೆಂದರೆ ಹಲವು ತಿಂಗಳುಗಳ ಶ್ರಮ ಬೇಕಾಗುತ್ತದೆ. ಅದರಲ್ಲೂ ಹಣ್ಣುಗಳ ಬೆಳೆ ಬೆಳೆಯಲು ರೈತರು ವರ್ಷಗಳ ಕಾಲ ಶ್ರಮ ವಹಿಸಿ ದುಡಿಯುತ್ತಾರೆ. ಇನ್ನು ಹಣ್ಣುಗಳಿಗೆ ವಿಶೇಷ ಆಕಾರ ಕೊಡುವುದೆಂದರೆ ಸಾಮಾನ್ಯ ವಿಷಯವೇನಲ್ಲ. ಹಾಗೇ ಚೀನಾದ ರೈತ ಹಾವ್ ಕ್ಸಿನ್ಜಾಂಗ್, ತನ್ನ ತೋಟದಲ್ಲಿನ ಪಿಯರ್ ಹಣ್ಣುಗಳಿಗೆ ಬಾಲ ಬುದ್ಧನ ಆಕಾರ ನೀಡಲು ಸತತ ಆರು ವರ್ಷಗಳ ಕಾಲ ಎಡೆಬಿಡದೆ ಶ್ರಮ ವಹಿಸಿದ್ದ. ‘ಅದೃಷ್ಟ’ದ (ಗುಡ್ ಲಕ್) ಸಂಕೇತ ಎಂಬ ಕಾರಣದಿಂದಲೂ ಈ ಪಿಯರ್ ಹಣ್ಣುಗಳು ಚೀನಾದಲ್ಲಿ ಜನಪ್ರಿಯವಾಗಿದ್ದವು. ಕೃಷಿಕನಿಗೂ ಅದೃಷ್ಟ ತಂದುಕೊಟ್ಟ ಈ ಹಣ್ಣುಗಳನ್ನು ಬುದ್ಧನ ಆಕಾರಕ್ಕೆ ತರಲು ಪ್ಲಾಸ್ಟಿಕ್‌ನ ಮೋಲ್ಡ್ ಬಳಸಲಾಗಿತ್ತು. ಮೊದಲ ಬಾರಿ ಮೋಲ್ಡ್ ಬಳಸಿದಾಗ ಹಣ್ಣುಗಳ ಆಕಾರ ಬುದ್ಧನನ್ನು ಹೋಲುತ್ತಿರಲಿಲ್ಲ. ಬದಲಿಗೆ ಗೊಂಬೆಯನ್ನು ಹೋಲುತ್ತಿತ್ತು. ಜೊತೆಗೆ, ಕಣ್ಣು ಮತ್ತಿತರ ಭಾಗಗಳು ಸರಿಯಾಗಿ ಮೂಡಿರಲಿಲ್ಲ. ಆದರೆ ಕಂಗೆಡದ ರೈತ, ತನ್ನ ಪ್ರಯತ್ನವನ್ನು ಬಿಡದೆ, ನಿರಂತರವಾಗಿ ಮುಂದುವರಿಸಿದ. ಪರಿಣಾಮವಾಗಿ ಆರನೇ ವರ್ಷ ಬಾಲ ಬುದ್ಧನನ್ನೇ ಹೋಲುವ ಅಚ್ಚುಪಡಿಯಂತಿರುವ ಪಿಯರ್ ಹಣ್ಣುಗಳು ಬಂದವು.

ಹಣ್ಣುಗಳ ಆಕಾರ ಬದಲಿಸುವುದು ಹೇಗೆ?

ಹಣ್ಣುಗಳ ಆಕಾರ ಬದಲಿಸಲು ಮೋಲ್ಡ್ಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಈ ತಂತ್ರಜ್ಞಾನದ ಬಳಕೆ ಇರುವುದು ಚೀನಾದಲ್ಲಿ. ಹಣ್ಣುಗಳು ಹೂವಿನ ಹಂತ ದಾಟಿ ಸಣ್ಣ ಕಾಯಿಯ ಗಾತ್ರಕ್ಕೆ ಬಂದಾಗ ಅವುಗಳನ್ನು ಪಾರದರ್ಶಕ ಪ್ಲಾಸ್ಟಿಕ್ ಮೋಲ್ಡ್ ಒಳಗೆ ಇರಿಸಲಾಗುತ್ತದೆ. ಕಾಯಿಗಳು ದೊಡ್ಡವಾದಂತೆ ಮೋಲ್ಡ್ನ ಆಕಾರಕ್ಕೆ ತುಂಬಿಕೊಳ್ಳುತ್ತಾ ಹೋಗುತ್ತವೆ. ಇವು ಹಣ್ಣಾಗುವ ವೇಳೆಗೆ ಪರಿಪೂರ್ಣ ಆಕಾರ ಬಂದಿರುತ್ತದೆ. ಇದರರ್ಥ ಹಣ್ಣುಗಳ ಆಕಾರ ಬದಲಿಸಲು ಬೇಕಾಗಿರುವ ಮೂಲ ವಸ್ತು ಪ್ಲಾಸ್ಟಿಕ್‌ನ ಟ್ರಾನ್ಸ್ಪರೆಂಟ್ ಮೋಲ್ಡ್. ಇಂತಹ ಮೋಲ್ಡ್ಗಳು ಚೀನಾದಲ್ಲಿ ಸಿಗುತ್ತವೆ. ಆದರೆ, ಭಾರತದಲ್ಲಿ ಇಂತಹ ಮೊಲ್ಡುಗಳು ಲಭ್ಯತೆ ಬಗ್ಗೆ ಮಾಹಿತಿ ಇಲ್ಲ.

ವಿವಿಧ ಆಕಾರದ ಮೊಲ್ಡುಗಳು

ಚೀನಾದಲ್ಲಿ ವಿವಿಧ ಆಕಾರದ ಹಣ್ಣುಗಳನ್ನು ಬೆಳೆಯುವುದು ಈಗ ದೊಡ್ಡ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಹೀಗಾಗಿ ಅಲ್ಲಿ ವಿವಿಧ ಆಕಾರದ ಪಾರದರ್ಶಕ ಪ್ಲಾಸ್ಟಿಕ್‌ನ ಮೊಲ್ಡುಗಳನ್ನು ತಯಾರಿಸುವ ಘಟಕಗಳು ಹಾಗೂ ಅವುಗಳನ್ನೇ ಮಾರಾಟ ಮಾಟುವ ಪ್ರತ್ಯೇಕ ಅಂಗಡಿಗಳಿವೆ. ಪಿಯರ್‌ಗೆ ಬುದ್ಧನ ರೂಪ ನೀಡುವ ಮೊಲ್ಡುಗಳು ಮಾತ್ರವಲ್ಲದೆ, ಚೌಕಾಕಾರದ ಕಲ್ಲಂಗಡಿ ಹಣ್ಣಿನ ಮೊಲ್ಡುಗಳು, ಸವತೆ ಕಾಯಿಗಳಿಗೆ ಸ್ಟಾರ್ (ನಕ್ಷತ್ರಾಕಾರ) ಆಕಾರದ ಮೊಲ್ಡುಗಳು ಮತ್ತು ಟೊಮೇಟೊ ಬೆಳೆಗಾರರಿಗಾಗಿ ಹೃದಯಾಕಾರದ ಮೋಲ್ಡ್ಗಳು ಕೂಡ ಅಲ್ಲಿ ದೊರೆಯುತ್ತವೆ.

ಚೀನಾದ ರೈತರು ಮೋಲ್ಡ್ಗಳನ್ನು ಬಳಸಿ ಹಣ್ಣು, ತರಕಾರಿಗಳ ಆಕಾರ ಬದಲಿಸುವವರೆಗೂ ಜಗತ್ತಿನಲ್ಲಿ ಯಾರಿಗೂ ಇಂಥದೊಂದು ಪ್ರಯತ್ನ ಮಾಡಬಹುದೆಂಬ ಆಲೋಚನೆಯೂ ಬಂದಿರಲಿಲ್ಲ. ಆದರೆ, ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಆರಂಭವಾದ ಈ ಪ್ರಯತ್ನ, ಜಗತ್ತಿನಾದ್ಯಂತ ಹೊಸ ರೀತಿಯ ಕೃಷಿ ವಿಧಾನವೊಂದಕ್ಕೆ ನಾಂದಿ ಹಾಡಿದೆ. ಈಗ ಜಪಾನ್, ಅಮೆರಿಕ ಸೇರಿ ಹಲವು ದೇಶಗಳಲ್ಲಿ ವಿವಿಧ ಆಕಾರದ ಹಣ್ಣುಗಳನ್ನು ಬೆಳೆಸಲಾಗುತ್ತಿದೆ.