ಸೊರಗು ರೋಗವು ದಾಳಿಂಬೆಯ ಒಂದು ಪ್ರಮುಖ ರೋಗವಾಗಿದ್ದು, ಸಾಮಾನ್ಯವಾಗಿ ದಾಳಿಂಬೆ ಬೆಳೆಯುವ ಎಲ್ಲ ಪ್ರದೇಶಗಳಲ್ಲಿ ಕಂಡು ಬರುತ್ತದೆ. ರೋಗದ ತೀವ್ರತೆ ಹೆಚ್ಚಾದರೆ ಶೇ. 40-50 ಹಾನಿಯಾಗುವ ಸಾಧ್ಯತೆಯಿದೆ.. ಈ ರೋಗ ಬಂದ ಗಿಡಗಳು ತಕ್ಷ ಣ ಸಾಯುವುದರಿಂದ ಎಕರೆವಾರು ಉತ್ಪಾದನೆ ಪ್ರಮಾಣ ಇಳಿಮುಖವಾಗುತ್ತದೆ.
★ಸೊರಗು ರೋಗದ ಲಕ್ಷಣಗಳು :
ರೋಗ ತಗುಲಿದ ಗಿಡದಲ್ಲಿ ಒಂದು ಟೊಂಗೆ ಹಳದಿ ಬಣ್ಣಕ್ಕೆ ತಿರುಗಿ ಸುಮಾರು 15 ದಿವಸಗಳ ನಂತರ ಒಣಗಲು ಪ್ರಾರಂಭಿಸುತ್ತದೆ. ಈ ಟೊಂಗೆ ಒಣಗಿದ 15 ದಿನಗಳ ನಂತರ ಮತ್ತೊಂದು ಟೊಂಗೆ ಒಣಗುತ್ತಾ ಹೀಗೆ ಮುಂದುವರೆದು ಇಡಿ ಗಿಡವೂ ಒಣಗುತ್ತದೆ. ಕಾಯಿ ಕಟ್ಟುವ ಹಂತದಲ್ಲಿ ಈ ಲಕ್ಷಣಗಳು ಹೆಚ್ಚಿಗೆ ಕಂಡುಬರುತ್ತವೆ.
ಒಣಗಿದ ಗಿಡದ ಕಾಂಡವನ್ನು ಕತ್ತರಿಸಿ ನೋಡಿದಾಗ ಕಂದು ಬಣ್ಣದ ಅಥವಾ ನೇರಳೆ ಬಣ್ಣದ ಮಚ್ಚೆಗಳು ಕಂಡು ಬರುವವು. ಗಿಡ ಸಾಯುವುದಕ್ಕೆ ಮುಂಚೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವವು,ಬುಡಭಾಗದ ಕಾಂಡವು ನೇರವಾಗಿ ಸೀಳುವ ಲಕ್ಷಣಗಳನ್ನು ಕಾಣಬಹುದು.
★ ನಿರ್ವಹಣಾ ಕ್ರಮಗಳು :
*ಒಣಗುತ್ತಿರುವ ದಾಳಿಂಬೆ ಗಿಡಗಳಲ್ಲಿ ಕಾಂಡದ ಗುಂಡು ರಂಧ್ರ ಕೊರಕಗಳು ( ಶಾಟ್ ಹೋಲ್ ಬೋರೆರ್ ) ಮತ್ತು ಸೊರಗು ರೋಗಕ್ಕೆ ಕಾರಣವಾಗುವ ಶಿಲೀಂದ್ರ ರೋಗಾಣು ( ಸೆರೆಟೊಸಿಸ್ಟಿಸ್ ಪಿಂಬ್ರಿಯೇಟ್ ) ಹಾಗೂ ಸಸ್ಯ ಜಂತುಗಳು ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು.
* ತೋಟದಲ್ಲಿನ ಎಲ್ಲಾ ದಾಳಿಂಬೆ ಗಿಡಗಳಿಗೆ ಪ್ರತಿ ಗಿಡಕ್ಕೆ ನೆಲದಿಂದ ಮೇಲೆ ಎರಡು ಅಡಿ ಎತ್ತರದ ಕಾಂಡದ ಸುತ್ತಲೂ 4 ಮಿ.ಲೀ ಕ್ಲೋರೋಪೈರಿಫಾಸ್20 ಇ.ಸಿ. ಔಷಧದ ಜೊತೆಗೆ 2 ಗ್ರಾಂ ಕಾರ್ಬನ್‌ಡೈಜಿಮ್ 50 ಡಬ್ಲೂ.ಪಿ . ಅಥವಾ 1 ಮಿ.ಲೀ ಪ್ರೋಪಿಕೋನೋಜೋಲ 25 ಇ.ಸಿ, ಬೆಳೆ ಕಾಂಡ ಹೊಯ್ಯವಂತ ಹಾಗೂ ಬೇರುಗಂಟು ಬುಡದ ಮಣ್ಣಿನಲ್ಲಿ ಸೇರುವಂತೆ ಚೆನ್ನಾಗಿ ಉಣಿಸಬೇಕು.
*ಇದೇ ಉಪಚಾರವನ್ನು ಒಂದು ತಿಂಗಳ ನಂತರ ಮತ್ತೊಮ್ಮೆ ಮಾಡಬೇಕು, ಮೂರು ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನ ಪ್ರತಿ ಗಿಡಕ್ಕೆ ಸುಮಾರು 5-8 ಲೀಟರ್ ಸಿದ್ದಪಡಿಸಿದ ದ್ರಾವಣ ಬೇಕಾಗುತ್ತದೆ.
*ಉಪಚಾರದ ಪೂರ್ವದಲ್ಲಿ ಕನಿಷ್ಠ ಒಂದು ವಾರ ಮುಂಚೆ ಮತ್ತು ಉಪಚರಿಸಿದ ನಂತರ ಎರಡು ದಿನಗಳವರೆಗೆ ಗಿಡಗಳಿಗೆ ನೀರು ಉಣಿಸಬಾರದು, ಬಾಧಿತ ಪ್ರದೇಶದಲ್ಲಿ ಈ ಉಪಚಾರವನ್ನು ವರ್ಷದಲ್ಲಿ ಕನಿಷ್ಠ ಎರಡು ಸಲ ಅಂದರೆ ಮೇ -ಜೂನ್ ಹಾಗೂ ನವೆಂಬರ್- ಡಿಸೆಂಬರ್ ತಿಂಗಳುಗಳಲ್ಲಿ ತಪ್ಪದೇ ಅನುಸರಿಸಬೇಕು ಜೈವಿಕ ಮಿಶ್ರಣ ( ಟ್ರೈಕೊಡರ್ಮಾ ಹಾರ್ಜಿಯಾನಮ್, ಸೊಡೋಮೋನಾಸ್ ಫ್ಲೋರೆಸೆನ್ಸ್, ಪೆಸಿಲೊಮೈಸಿಸ್ ಲಿಲಾಸಿನಸ್ 50 ಗ್ರಾಂ, ನಂತ ಗಿಡಕ್ಕೆ ನಾಟಿ ಮಾಡುವ ಸಮಯದಲ್ಲಿ ಮಣ್ಣಿಗೆ ಹಾಕಬೇಕು ಹಾಗೂ 6 ತಿಂಗಳ ಅಂತರದಲ್ಲಿ ಪುನರಾವರ್ತಿಸಬೇಕು.
* ಚಾಟನಿಯಾದ ನಂತರ ಮಣ್ಣಿಗೆ ಪೆಸಿಲೋಮೈಸಿಸ್ ಲಿಲಾಸಿನಸ್ 50 ಗ್ರಾಂ , ಫೋರೇಟ್ 10 ಜಿ . 10-20 ಗ್ರಾಂ ಅಥವಾ ಕಾರ್ಬೋಫ್ಯೂರಾನ್ 3 ಜಿ. 20-40 ಗ್ರಾಂ ನಂತೆ ಒಂದು ಗಿಡಕ್ಕೆ ಹಾಕಬೇಕು.
* ಅಂತರ ಬೆಳೆಯಾಗಿ ಆಫ್ರಿಕನ್ ಚಂಡು ಹೂವನ್ನು ಬೆಳೆಯುವುದು . ಅಜಾಡಿರಕ್ಟಿನ್ 1 % 2 ಮಿ.ಲೀ / ಲೀ ದ್ರಾವಣವನ್ನು ಪ್ರತಿ ಗಿಡಕ್ಕೆ 5 ಲೀಟರ್ ನಂತೆ ಮಣ್ಣಿಗೆ ಸುರಿಯಬೇಕು.
ಲೇಖನ:ಮುತ್ತಣ್ಣ ಬ್ಯಾಗೆಳ್ಳಿ