Horticulture

ಈ ಮಾವಿನ ಹಣ್ಣಿನ ಬೆಲೆ ಕೇಳಿದರೆ ಬೆಚ್ಚಿ ಬೀಳ್ತೀರ!

07 June, 2021 3:31 PM IST By: KJ Staff
Mango

ನೀವು ನಿಮ್ಮ ಜೀವನದಲ್ಲಿ ಒಂದು ಕೆ.ಜಿ ಮಾವಿನ ಹಣ್ಣಿಗೆ ಹೆಚ್ಚೆಂದರೆ ಎಷ್ಟು ಹಣ ಕೊಟ್ಟಿರಬಹುದು... 150 ರೂಪಾಯಿ! ಅದಕ್ಕೂ ಜಾಸ್ತಿ ಎಂದರೆ ಯಾವುದೋ ಸ್ಪೆಷೆಲ್ ತಳಿ ಮಾವು ಅಂತಾ 200 ರೂಪಾಯಿ ಕೊಟ್ಟು ಖರೀದಿಸಿರಬಹುದು. ಆದರೆ ಇಲ್ಲೊಂದು ಮಾವಿನ ಹಣ್ಣಿನ ತಳಿ ಇದೆ. ಅದರ ಒಂದು ಮಾವಿನ ಹಣ್ಣಿನ ಬೆಲೆ 1200 ರೂಪಾಯಿ!

ನಮ್ಮಲ್ಲೆಲ್ಲಾ ಒಂದು ಸಿಂಗಲ್ ಪೀಸ್ ಮಾವಿನ ಹಣ್ಣು ಕೊಂಡು ಅಭ್ಯಾಸವೇ ಇಲ್ಲ. ಏನಿದ್ದರೂ ಕೇಜಿಗಟ್ಟಲೆ ಕೊಂಡೊಯ್ದು ಮನೆಮಂದಿಯೆಲ್ಲಾ ತಿನ್ನುತ್ತೇವೆ. ತೋತಾಪುರಿ ಮಾವಿನ ಹಣ್ಣುಗಳನ್ನು ಮಾತ್ರ ಪೀಸ್ ಲೆಕ್ಕದಲ್ಲಿ ಮಾರುತ್ತಾರೆ. ಕೆಲವೆಡೆ ಅವುಗಳೂ ಕೆ.ಜಿ ಲೆಕ್ಕವೇ. ಅಲ್ಲದೆ, ನಮ್ಮ ರಾಜ್ಯದಲ್ಲಿ ಬೆಳೆಯುವ ಮಾವಿನ ಹಣ್ಣಿನ ತಳಿಗಳ ಬೆಲೆ ಕೂಡ ಅಷ್ಟೇನೂ ಹೆಚ್ಚಿಲ್ಲ. ಮೊದಲೇ ಹೇಳಿದಂತೆ ಹೆಚ್ಚೆಂದರೆ 200-250 ರೂಪಾಯಿ ಇರಬಹುದು. ಆದರೆ, ಮಧ್ಯಪ್ರದೇಶದ ರೈತರು ಬೆಳೆಯುತ್ತಿರುವ ‘ನೂರ್‌ಜಹಾನ್’ ತಳಿಯ ಒಂದು ಮಾವಿನ ಹಣ್ಣಿನ ಬೆಲೆ ಬರೋಬ್ಬರಿ 500ರಿಂದ 1200 ರೂಪಾಯಿ ಇದೆ ಎಂದರೆ ನೀವು ನಂಬಲೇಬೇಕು.

ಮಧ್ಯಪ್ರದೇಶದ ದೊಡ್ಡ ನಗರಗಳಲ್ಲಿ ಒಂದಾಗಿರುವ ಇಂದೋರ್‌ನಿAದ 250 ಕಿ.ಮೀ ದೂರದಲ್ಲಿ ಕಟ್ಟಿವಾಡ ಎಂಬ ಗ್ರಾಮವಿದೆ. ಆ ಗ್ರಾಮದಲ್ಲಿರುವ ಕೆಲವೇ ಕೆಲವು ರೈತರು ನೂರ್‌ಜಹಾನ್ ತಳಿಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರೆ. ಗಾತ್ರದಲ್ಲಿ ತೆಂಗಿನ ಕಾಯಿಯಷ್ಟು ದೊಡ್ಡದಾಗಿರುವ ಈ ಹಣ್ಣುಗಳು, ಕನಿಷ್ಠ ಒಂದೂವರೆ ಕೆ.ಜಿ ತೂಗುತ್ತವೆ. ಅಲ್ಲದೆ ಇವುಗಳ ರುಚಿ ಕೂಡ ಅತ್ಯದ್ಭುತ. ಹೀಗಾಗಿ ಈ ಹಣ್ಣುಗಳ ಬೆಲೆ ಯಾವಾಗಲೂ ಗಗನಮುಖಿಯಾಗೇ ಇರುತ್ತದೆ. ಬೇಡಿಕೆ ಕೂಡ ಕುಗ್ಗುವುದಿಲ್ಲ.

ಈ ಹೆಸರು ಹೇಗೆ ಬಂತು?

ನೂರ್‌ಜಹಾನ್ ಎಂಬುದು ಒಬ್ಬ ಮೊಗಲ್ ರಾಣಿಯ ಹೆಸರು. ನೀವು ಇತಿಹಾಸ ಓದಿದ್ದರೆ ನೂರ್‌ಜಹಾನ್‌ಳ ಹೆಸರನ್ನು ಕೇಳಿರುತ್ತೀರ. ಏಕೆಂದರೆ, ಈಕೆ ಮೊಗಲ್ ದೊರೆ ಜಹಂಗೀರನ 20ನೇ ಮಡದಿ. ಈಕೆಯ ಮೂಲ ಅಪ್ಘಾನಿಸ್ತಾನ. ಹಾಗೇ ಈಗ ಹೇಳುತ್ತಿರುವ ಮಾವಿನ ಹಣ್ಣಿನ ಮೂಲ ಕೂಡ ಅದೇ ಅಫ್ಘಾನಿಸ್ತಾನ. ಅಲ್ಲಿ ಮೊದಲ ಬಾರಿ ಈ ಹಣ್ಣಿನ ತಳಿಯನ್ನು ಕಂಡುಹಿಡಿದು ಬೆಳೆದ ವ್ಯಕ್ತಿ, ನೋಡಲು ಕ್ವೀನ್ ಸೈಸ್‌ನಲ್ಲಿ ಸುಂದರವಾಗಿದ್ದ ಈ ಹಣ್ಣಿಗೆ ರಾಣಿಯ ಸ್ಮರಣಾರ್ಥ ನೂರ್‌ಜಹಾನ್ ಎಂದು ಹೆಸರಿಟ್ಟನಂತೆ. ಕಾಲಾನಂತರ ಈ ತಳಿ ಭಾರತಕ್ಕೆ ವಲಸೆ ಬಂದಿದ್ದು, ಇಲ್ಲೂ ಅದೇ ಹೆಸರು ಪ್ರಚಲಿತದಲ್ಲಿದೆ.

ಒಂದು ಬೀಜದಿಂದ ಬೆಳೆದ ಸಂತತಿ

ಬಹಳ ವರ್ಷಗಳ ಹಿಂದೆ ಅಫ್ಘಾನಿಸ್ತಾನದಿಂದ ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಕಟ್ಟಿವಾಡ ಗ್ರಾಮಕ್ಕೆ ವ್ಯಕ್ತಿಯೊಬ್ಬ ಈ ನೂರ್‌ಜಹಾನ್ ಹಣ್ಣನ್ನು ತಂದಿದ್ದರು. ಈ ಹಣ್ಣು ತಿಂದ ಬಳಿಕ ಅದರ ವಾಟೆಯನ್ನು ಮಣ್ಣಲ್ಲಿ ಊರಿದ್ದರು. ಅದು ಮೊಳಕೆಯೊಡೆದು, ಗಿಡವಾಗಿ ಚಿಗುರಿ, ಮರವಾಗಿ ಬೆಳೆದು ಮೂಲ ಹಣ್ಣಿನಷ್ಟೇ ದಷ್ಟಪುಷ್ಟ ಹಾಗೂ ರುಚಿಯಾಗಿರುವ ಹಣ್ಣುಗಳನ್ನು ಕೊಡಲಾರಂಭಿಸಿತು. ಆರಂAಭದಲ್ಲಿ ಆ ಮರದ ಯಜಮಾನ ತನ್ನ ಮನೆಯವರು ತಿಂದು ಮಿಕ್ಕಿದ ಹಣ್ಣುಗಳನ್ನು ಮಾರುತ್ತಿದ್ದ. ಬಳಿಕ ಕಟ್ಟಿವಾಡ ಗ್ರಾಮದಲ್ಲಿನ ಹಲವಾರು ರೈತರು ನೂರ್‌ಜಹಾನ್ ಮಾವಿನ ಹಣ್ಣುಗಳಳನ್ನು ಬೆಳೆಯಲಾರಂಭಿಸಿದರು. ಪ್ರಸ್ತುತ ಈ ಗ್ರಾಮದಲ್ಲಿ ನೂರ್‌ಜಹಾನ್ ಮಾವಿನ ತೋಪುಗಳೇ ಇವೆ. ಅಷ್ಟೇ ಅಲ್ಲ, ಮನೆ ಮುಂದೆ ಜಾಗ ಇರುವವರು ಕೂಡ ಈ ಮರ ಬೆಳೆಸಿದ್ದಾರೆ.

ಈ ಬಾರಿ ಉತ್ತಮ ಫಸಲು

ಕರ್ನಾಟಕದಲ್ಲಿ ಈ ಬಾರಿ ಮಾವಿನ ಇಳುವರಿ ಕುಸಿದಿದೆ. ಪ್ರತಿ ಬಾರಿ ಮಾವಿನ ಇಳುವರಿ ಕುಸಿದಾಗ ಬೆಲೆ ಹೆಚ್ಚಳವಾಗಿ ರೈತರಿಗೆ ಒಂದಷ್ಟು ಲಾಭವಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಲಾಡೌನ್ ಕಾರಣದಿಂದಾಗಿ ಬೇಡಿಕೆ ಹಾಗೂ ಬೆಲೆ ಎರಡೂ ಇಲ್ಲವಾಗಿದೆ. ಅತ್ತ ಮಧ್ಯಪ್ರದೇಶದಲ್ಲಿ ಈ ವಿಶೇಷ ಮಾವಿನ ಹಣ್ಣಿನ ಇಳುವರಿ ಈ ಬಾರಿ ಉತ್ತಮವಾಗಿ ಬಂದಿದೆ. ಕಟ್ಟಿವಾಡ ಗ್ರಾಮದ ಶಿವರಾಜ್ ಸಿಂಗ್ ಎಂಬುವರ ತೋಟದಲ್ಲಿನ ಮೂರು ನೂರ್‌ಜಹಾನ್ ಮರಗಳಿಂದ ಭಾರೀ ಗಾತ್ರದ 250 ಹಣ್ಣುಗಳು ಸಿಕ್ಕಿವೆಯಂತೆ. ಜೊತೆಗೆ ಆನ್‌ಲೈನ್‌ನಲ್ಲಿ ಮಾರಾಟ ಕೂಡ ಜೋರಾಗಿದೆ.

ಮುಂಗಡ ಬುಕಿಂಗ್!

ನೂರ್‌ಜಹಾನ್ ಮಾವಿನ ಹಣ್ಣುಗಳಿಗೆ ಅದೆಷ್ಟು ಬೇಡಿಕೆ ಇದೆ ಎಂದರೆ, ಜನ ತಮಗೆ ಬೇಕಿರುವಷ್ಟು ಸಂಖ್ಯೆಯ ಹಣ್ಣುಗಳನ್ನು ಆನ್‌ಲೈನ್ ಮೂಲಕ ಮುಂಗಡವಾಗಿ ಕಾಯ್ದಿರಿಸುತ್ತಾರೆ. ಬಳಿಕ ರೈತರು ಆ ಹಣ್ಣುಗಳನ್ನು ಪೆಟ್ಟಿಗೆಯೊಂದರಲ್ಲಿ ಸುರಕ್ಷಿತವಾಗಿ ಪ್ಯಾಕ್ ಮಾಡಿ, ಮುಂಗಡವಾಗಿ ಕಾಯ್ದಿರಿಸಿದ ಗ್ರಾಹಕರ ವಿಳಾಸಕ್ಕೆ ಕೊರಿಯರ್ ಮೂಲಕ ಕಳುಹಿಸಿಕೊಡುತ್ತಾರೆ. ಸಾಮಾನ್ಯವಾಗಿ ಹಣ್ಣಿನ ತೂಕದ ಆಧಾರದಲ್ಲಿ ಬೆಲೆ ನಿಗದಿ ಮಾಡಲಾಗುತ್ತದೆ. ಗಾತ್ರ, ತೂಕ ಎಷ್ಟೇ ಇರಲಿ ಒಂದು ಹಣ್ಣು ಕನಿಷ್ಠ 500 ರೂಪಾಯಿಗೆ ಮಾರಾಟವಾಗುತ್ತದೆ.

3.5 ಕೆ.ಜಿ ತೂಕ!

ಈ ಬಾರಿ ಹವಾಗುಣವು ನೂರ್‌ಜಹಾನ್ ಮಾವಿನ ಬೆಳೆಗೆ ಪೂರಕವಾಗಿದ್ದ ಕಾರಣ ಇಳುವರಿ ಉತ್ತಮವಾಗಿ ಬಂದಿದೆ. ಜೊತೆಗೆ, ಹಣ್ಣುಗಳ ಗಾತ್ರ ಕೂಡ ದೊಡ್ಡದಿದೆ. ಈ ಬಾರಿ ಹಣ್ಣುಗಳ ಕನಿಷ್ಠ ತೂಕ 2 ಕೆ.ಜಿ ಹಾಗೂ ಗರಿಷ್ಠ ತೂಕ 3.5 ಕೆ.ಜಿ ಇದೆ. 3 ಕೆ.ಜಿ.ಗಿಂತ ಹೆಚ್ಚು ತೂಕವಿರುವ ಹಣ್ಣುಗಳು 1000 ರೂ. ನಿಂದ 1200 ರೂ.ವರೆಗೆ ಮಾರಾಟವಾಗುತ್ತಿವೆ. ಆನ್‌ಲೈನ್ ಮೂಲಕ ಎಷ್ಟೇ ವ್ಯಾಪಾರ ನಡೆದರೂ, ಕೋವಿಡ್-19 ಇರುವ ಕಾರಣ ವ್ಯಾಪಾರ ಮಂಕಾಗಿದೆ ಎಂಬುದು ರೈತರ ಅಭಿಪ್ರಾಯ.

ವಾಟೆಯೇ 200 ಗ್ರಾಂ!

ಜೂನ್ ವೇಳೆಗೆ ನಮ್ಮಲ್ಲಿ ಮಾವಿನ ಹಣ್ಣುಗಳ ಸೀಸನ್ ಮುಗಿಯುವ ಹಂತದಲ್ಲಿರುತ್ತದೆ. ಈ ವೇಳೆ ಮಧ್ಯಪ್ರದೇಶದಲ್ಲಿ ನೂರ್‌ಜಹಾನ್ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರಲಾರಂಭಿಸುತ್ತವೆ. ಜನವರಿ-ಫೆಬ್ರವರಿ ತಿಂಗಳ ಅವಧಿಯಲ್ಲಿ ಹೂವು ಬಿಡುವ ಈ ಮರಗಳಿಂದ ಮೇ ಎರಡನೇ ವಾರದ ಹೊತ್ತಿಗೆ ಮಾವಿನ ಕಾಯಿಗಳನ್ನು ಇಳಿಸಿ, ಹಣ್ಣು ಮಾಡಲಾಗುತ್ತದೆ. ನೂರ್‌ಜಹಾನ್ ತಳಿಯ ಮತ್ತೊಂದು ವಿಶೇಷವೆಂದರೆ, ಈ ಹಣ್ಣಿನ ಒಂದು ವಾಟೆ 150ರಿಂದ 200 ಗ್ರಾಂ. ತೂಕವಿರತ್ತದೆ!