ಗುಲಾಬಿ ತೋಟದಲ್ಲಿ ಖಾಲಿ ಖಾಲಿಯಾಗಿದ್ದ ಜಾಗಕ್ಕೆ ಮೆಕ್ಸಿಕನ್ ಹುಲ್ಲುಹಾಸು ಹಾಕುವುದು, ಗಿಡಗಳ ವೈಜ್ಞಾನಿಕ ಮಾಹಿತಿ ಫಲಕಗಳನ್ನು ಅಳವಡಿಸುವುದು, ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ 11 ಲಕ್ಷ ರೂ. ವೆಚ್ಚದಲ್ಲಿ ನಾನಾ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಗುಲಾಬಿ ವನಕ್ಕೆ ವಿಶೇಷ ಮೆರುಗು ನೀಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಕಳೆದ ವರ್ಷವಷ್ಟೇ ಉದ್ಯಾನದ ಸೆಂಟ್ರಲ್ ಲೈಬ್ರರಿ ಮುಂಭಾಗದಲ್ಲಿ ಸುಮಾರು 3.5 ಎಕರೆ ವಿಸ್ತೀರ್ಣದಲ್ಲಿ ನೂರಾರು ಬಣ್ಣ ಮತ್ತು ವಿವಿಧ ತಳಿಯ ಗುಲಾಬಿ ಗಿಡಗಳ ವನ ನಿರ್ಮಿಸಲಾಗಿತ್ತು. ಎರಡು ಫಸಲು ಹೂವು ಬಂದಿದೆ. ಆದರೆ ತೋಟದ ಮಧ್ಯಭಾಗ ಖಾಲಿಯಿತ್ತು. ಜತೆಗೆ ಗಿಡಗಳ ನಡುವಿನ ಅಂತರದ ಜಾಗದಲ್ಲೂ ಖಾಲಿ ಖಾಲಿ ಇದ್ದುದರಿಂದ ಗುಲಾಬಿ ತೋಟಕ್ಕೆ ಕಳೆ ಇರಲಿಲ್ಲ. ಇದರ ನಡುವೆ ಕಳೆ ಬೆಳೆದು ತೋಟ ಕಳಾಹೀನವಾಗಿತ್ತು. ಹೀಗಾಗಿ ಅಂದ ಕಳೆದುಕೊಂಡಿದ್ದ ಗುಲಾಬಿ ವನವನ್ನು ವಿಶೇಷವಾಗಿ ಸಿದ್ದಪಡಿಸಲಾಗುತ್ತಿದೆ.
ಒಟ್ಟಾರೆ 3.5 ಎಕರೆ ವಿಸ್ತೀರ್ಣದ ಗುಲಾಬಿ ತೋಟದ ಪೈಕಿ 6,200 ಚದರ ಮೀಟರ್ (ಒಂದೂವರೆ ಎಕರೆ) ಜಾಗಕ್ಕೆ ಮೆಕ್ಸಿಕನ್ ಹುಲ್ಲು ಹಾಸು ನೆಡಲಾಗುವುದು. ಇದರಲ್ಲಿ 4 ಲಕ್ಷ ರೂ. ವೆಚ್ಚದಲ್ಲಿ ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತ್ಯೇಕ ಗಿಡಗಳಿಗೆ ಅವುಗಳ ಹೆಸರು, ವೈಜ್ಞಾನಿಕ ಹೆಸರು, ಅವುಗಳ ಮೂಲ, ಆ ತಳಿಯ ವಿಶೇಷತೆ ಇತ್ಯಾದಿಗಳ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು. ಇದೆಲ್ಲದರ ಒಟ್ಟು ವೆಚ್ಚ 11 ಲಕ್ಷ ರೂ. ಈಗಾಗಲೇ ಕೆಲಸಗಳು ಆರಂಭವಾಗಿವೆ. ಸುಮಾರು 20 ದಿನಗಳಲ್ಲಿ ಹುಲ್ಲುಹಾಸು ನಾಟಿ ಕಾರ್ಯ ಪೂರ್ಣಗೊಳ್ಳುತ್ತದೆ. ನಂತರ ತುಂತುರು ನೀರಾವರಿ, ಆನಂತರ ಮಾಹಿತಿ ಫಲಕಗಳನ್ನು ಅಳವಡಿಸುವುದು. ಹೀಗೆ ಎಲ್ಲಾ ಕಾರ್ಯಗಳು ಹಂತ ಹಂತವಾಗಿ ನಡೆದು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿವೆ. ಜನವರಿಯಲ್ಲಿ ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದ ವೇಳೆಗೆ ಕಬ್ಬನ್‌ಪಾರ್ಕ್‌ನಲ್ಲಿ ಸುಸಜ್ಜಿತ, ಸುಂದರ ಗುಲಾಬಿ ತೋಟ ಸಿದ್ಧವಾಗಲಿದೆ.
ಗುಲಾಬಿ ತೋಟದ ವಿಶೇಷತೆಯೇನು?
ಹೇಳಿಕೇಳಿ ಕಬ್ಬನ್‌ಪಾರ್ಕ್ ಹಚ್ಚ-ಹಸುರಿನ ತಾಣ. ಎಲ್ಲೆಲ್ಲೂ ಅಪರೂಪದ ಹಾಗೂ ಆಕರ್ಷಕ ಗಿಡ-ಮರ, ವಿವಿಧ ಪಕ್ಷಿಗಳು ಇಂಚರ, ಪ್ರತಿಮೆಗಳ ಗಾಂಭೀರ್ಯವಿದೆ. ಇಂತಹ ಪ್ರತಿಷ್ಠಿತ ಕಬ್ಬನ್‌ಪಾರ್ಕ್‌ನ ಹೃದಯ ಭಾಗವಾದ ಸೆಂಟ್ರಲ್ ಲೈಬ್ರರಿ ಮುಂಭಾಗದಲ್ಲಿ 3.5 ಎಕರೆ ಜಾಗದಲ್ಲಿ ಗುಲಾಬಿ ತೋಟವನ್ನು ನಿರ್ಮಿಸಲಾಗಿದೆ. ಇಲ್ಲಿ 4,642 ಗುಲಾಬಿ ಗಿಡಗಳಿವೆ. 183 ಬಣ್ಣದ ಗುಲಾಬಿ ಹೂವಿನ ಗಿಡಗಳು ಇದರಲ್ಲಿವೆ. 258 ವಿದೇಶಿ ತಳಿ, 140 ಹೈಬ್ರಿಡ್, 78 ಫ್ಲೋರಿಬಂಡ ಗಿಡಗಳು ಈ ಗುಲಾಬಿ ತೋಟದ ವಿಶೇಷತೆ. ಸಾಮಾನ್ಯವಾಗಿ ಗುಲಾಬಿ ಹೂವೆಂದರೆ ನೋಡಲು ಬಲು ಅಂದ. ಇನ್ನು ಗಿಡದಲ್ಲೇ ಗುಲಾಬಿ ಸೊಬಗು ಸವಿಯುವುದೆಂದರೆ ಇನ್ನೂ ಚೆಂದ. ಈ ಎಲ್ಲಾ ಚೆಂದಗಳ ಜತೆಗೆ ತಂಪಾದ ವಾತಾವರಣದಲ್ಲಿ, ಸೊಂಪಾದ ಹಚ್ಚ-ಹಸುರಿನ ಹುಲ್ಲುಹಾಸು ಸೇರಿದರೆ ಆಹಾ ನೋಡಲು ಎರಡು ಕಣ್ಣು ಸಾಲದು!
ಗುಲಾಬಿ ತೋಟಕ್ಕೆ ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸುವುದರಿಂದ ನೀರು ವ್ಯರ್ಥವಾಗುವುದನ್ನು ತಪ್ಪಿಸಬಹುದು. ಕೂಲಿಕಾರರ ಸಂಖ್ಯೆ ಕಡಿಮೆಯಾಗುತ್ತದೆ. ಗಿಡಗಳ ಬಳಿ ಮಾಹಿತಿ ಫಲಕ ಹಾಕುವ ಮೂಲಕ ಗುಲಾಬಿಯ ಬಗ್ಗೆ ಅಧ್ಯಯನ ಮಾಡುವವರಿಗೆ ಹಾಗೂ ಇತರ ಕಲಿಕಾಸಕ್ತರಿಗೆ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶ.
-ಮಹಾಂತೇಶ್ ಮುರಗೋಡ್, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ