ಹಲಸು ಮರವೊಂದು ಪ್ರಪಂಚದಲ್ಲಿ ಅತೀ ದೊಡ್ಡ ಹಲಸು ಹಣ್ಣು ನೀಡಿದೆ. ತೂಕದಲ್ಲಿ 50ಕಿ.ಗ್ರಾಂ.ಗೂ ಮಿಗಿಲಾಗಿ ತೂಗಬಲ್ಲ, ಉದ್ದ 60-90 ಸೆಂ.ಮೀ. ವಯಸ್ಸಾದ ಮರವೊಂದು ವರ್ಷಕ್ಕೆ 0.50 ಕಿ.ಗ್ರಾಂ ನಿಂದ 50 ಕಿ.ಗ್ರಾಂ ತೂಗಬಲ್ಲ 500 ಹಣ್ಣುಗಳನ್ನು ನೀಡಬಲ್ಲದು. ಹೆಕ್ಟೇರ್‍ವೊಂದರಿಂದ ಸರಾಸರಿ 50-80 ಟನ್ ಇಳುವರಿ ಪಡೆಯಬಹುದು. ಪ್ರಪಂಚದ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನವಾಗಿದ್ದು, ಹಲಸಿನ ತವರು ದೇಶ ಭಾರತವಾಗಿದೆ. ಅಸ್ಸಾಂ, ತ್ರಿಪುರ, ಬಿಹಾರ, ಉತ್ತರಪ್ರದೇಶ, ಕೇರಳ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಹಲಸನ್ನು ಈ ರಾಜ್ಯಗಳಲ್ಲಿ “ಬಡವರ ಹಣ್ಣು” ಎಂದೇ ಜನಪ್ರಿಯವಾಗಿದೆ. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧ್ಯಯನದ ಕೆಲವು ವಿವರಗಳನ್ನು ಇಲ್ಲಿದೆ.
ಕರ್ನಾಟಕದಲ್ಲಿ ಸಾಮಾನ್ಯವಾಗಿ ತೋಟಗಳ ಬೇಲಿಯಂಚಿನಲ್ಲಿ ಹಲಸು ಹಾಕಿರುವುದನ್ನು ಕಾಣಬಹುದು. ಅಲ್ಲದೇ ಕಾಫೀ ತೋಟಗಳಲ್ಲಿ ನೆರಳು ಬೆಳೆಯಾಗಿಯೂ ಬೆಳೆಯಲಾಗುತ್ತಿದೆ. ಏಕಬೆಳೆಯಾಗಿ ಇದನ್ನು ಪೂರ್ಣ ಪ್ರದೇಶದಲ್ಲಿ ಬೆಳೆಯದೇ ಇರುವುದರಿಂದ ಈ ಬೆಳೆಯ ನಿಖರವಾದ ವಿಸ್ತೀರ್ಣ, ಉತ್ಪಾದನೆ, ಇಳುವರಿ ಹಾಗೂ ಮಾರುಕಟ್ಟೆಯ ಕುರಿತಾದ ಅಂಕಿ-ಅಂಶಗಳ ಲಭ್ಯತೆ ಕಷ್ಟ. ಆದಾಗ್ಯೂ, ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಇದರ ವಿಸ್ತೀರ್ಣ 5300 ಹೆಕ್ಟೇರ್, ಉತ್ಪಾದನೆ 0.2 ಮೆ.ಟನ್ ಹಾಗೂ ಹೆಕ್ಟೇರ್‍ವಾರು ಉತ್ಪಾದಕತೆ 37ಟನ್ (ಕೋಷ್ಟಕ-1) ಆಗಿದೆ. ಮಂಡ್ಯ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಹಲಸಿನ ವಿಸ್ತೀರ್ಣ 533-975ಹೆಕ್ಟೇರ್. ರಾಜ್ಯದಲ್ಲಿ ಗಣನೀಯ ಪ್ರಮಾಣದ ಒಣ ಭೂಮಿಯ ಲಭ್ಯತೆಯಿರುವುದರಿಂದ ಅಂತಹ ಪ್ರದೇಶಗಳಲ್ಲಿ ಇದರ ಕೃಷಿಯನ್ನು ಉತ್ತೇಜಿಸಬಹುದಾಗಿದೆ. ಅಲ್ಲದೇ, ತೆಂಗು/ಅಡಿಕೆಯಂತಹ ವಾಣಿಜ್ಯ ಬೆಳೆಗಳಿಗೆ ಹೋಲಿಸಿದಾಗ ತೇವಾಂಶದ ಕೊರತೆಯನ್ನು ಸಹಿಸಿಕೊಳ್ಳಬಲ್ಲ ಹಲಸಿಗೆ ಕೀಟ-ರೋಗ ನಿರೋಧಕ ಗುಣವೂ ಹೆಚ್ಚು. ಅದಮ್ಯ ಅನುಕೂಲಕರ ಗುಣಗಳನ್ನು ಹೊಂದಿರುವ ಹಲಸನ್ನು ನಾವು ಇದುವರೆಗೂ ಸೂಕ್ತ ರೀತಿಯಲ್ಲಿ ಬಳಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತವಾಗಿ ರಾಜ್ಯದ ವಿವಿಧ ಅಭಿವೃದ್ಧಿ ಇಲಾಖೆಗಳು ಹಾಗೂ ವಿಶ್ವವಿದ್ಯಾಲಯಗಳು ಹಲಸನ್ನು “ಭವಿಷ್ಯದ ಬೆಳೆಯಾಗಿ” ರೂಪಿಸುವಲ್ಲಿ ತಮ್ಮ ನಿರಂತರ ಪ್ರಯತ್ನವನ್ನು ಮುಂದುವರೆಸಿದೆ.
ಈ ಹಣ್ಣಿನ ಮಾರಾಟವೂ ಸಹ ಬಹುತೇಕ ಅವ್ಯವಸ್ಥಿತ. ವಿಸ್ತøತ ಉತ್ಪಾದನೆ ಹಾಗೂ ಸಂಸ್ಕರಣೆಯ ವಿಫುಲ ಅವಕಾಶಗಳಿರುವ ಮಾರಾಟದ ಕುರಿತಾಗಿ ಸರ್ವೇಕ್ಷಣೆ ಕೈಗೊಂಡಿದ್ದು ಪ್ರಸ್ತುತ ಮಾರಾಟದ ವಿಧಾನಗಳು ಹಾಗೂ ಪ್ರಕ್ರಿಯೆಗಳನ್ನು ಅಭ್ಯಸಿಸುವುದು ಪ್ರಮುಖ ಉದ್ದೇಶವಾಗಿದೆ. ಈ ವಿಶ್ಲೇಷಣೆಯು ಮಾರಾಟದ ಬಗ್ಗೆ ಮಾರುಕಟ್ಟೆ ವೆಚ್ಚ, ಗುಣಮಟ್ಟದ ಮಾನದಂಡಗಳು, ದರನಿಗದಿ, ಮಾರಾಟದಲ್ಲಿನ ತೊಂದರೆಗಳು, ಸಂಸ್ಕರಣೆಯಲ್ಲಿನ ಅವಕಾಶಗಳು, ಮೌಲ್ಯ ಸರಪಳಿ ಉನ್ನತೀಕರಿಸುವುದು ಹಾಗೂ ಯೋಜನೆ ರೂಪಿಸಲು ಅಗತ್ಯವಿರುವ ಅಂಶಗಳ ಬಗೆಗೆ ಬೆಳಕು ಚೆಲ್ಲುವಂತದ್ದಾಗಿದ್ದು ಇದರಿಂದ ಹಲಸು ಕೃಷಿಕರ ಆದಾಯ ವೃದ್ಧಿಯೂ ಸಹ ಸಾಧ್ಯವಿದೆ. ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕಿನ ಚೇಳೂರು ರಾಜ್ಯದ ಅತಿ ದೊಡ್ಡ ಮಾರುಕಟ್ಟೆ ಎನಿಸಿಕೊಂಡಿದೆ. ಇಲ್ಲಿಂದ ರಾಜ್ಯದ ವಿವಿಧ ಭಾಗಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಹಲಸು ಸಾಗಾಣಿಕೆಯಾಗುತ್ತದೆ. ಆದಕಾರಣ ಸರ್ವೇಕ್ಷಣೆಗೆ ಚೇಳೂರು ಮಾರುಕಟ್ಟೆಯನ್ನು ಆಯ್ದುಕೊಳ್ಳಲಾಗಿದೆ.
ಚೇಳೂರು, ತುಮಕೂರು ಜಿಲ್ಲೆಯ ಹಲಸು ವಹಿವಾಟಿನ ಕೇಂದ್ರ :
ತುಮಕೂರು ಜಿಲ್ಲೆಯ ಹಲಸಿನ ವಿಸ್ತೀರ್ಣ 191ಹೆಕ್ಟೇರ್ ಆಗಿದೆ. ಉತ್ಪಾದನೆ 7831ಟನ್ ಇದೆ. ವಿವಿಧ ಹಲಸಿನ ತಳಿಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ. ಅದರಲ್ಲಿ ಬಹುತೇಕ ಸ್ಥಳೀಯ ತಳಿಗಳಾಗಿವೆ. ಉದಾ: ಹೆಬ್ಬಲಸು, ರುದ್ರಾಕ್ಷಿ ಹಲಸು, ಚಂದ್ರಾಹಲಸು ಇತ್ಯಾದಿ. ನವೆಂಬರ್-ಡಿಸೆಂಬರ್‍ನಲ್ಲಿ ತರಕಾರಿಯಾಗಿ ಬಳಸಲೆಂದು ಎಳೆಯ ಹಲಸಿನ ಕಾಯಿಯನ್ನು ಕಟಾವು ಮಾಡಲಾಗುತ್ತದೆ. ಹಣ್ಣಿಗಾಗಿ ಕಟಾವು ಮಾಡುವುದು, ಫೆಬ್ರುವರಿಯಿಂದ – ಆಗಸ್ಟ್ ತನಕ. ಸಾಮಾನ್ಯವಾಗಿ ವರ್ಷದಲ್ಲಿ ಹಲಸಿನ ಕಟಾವು 8-10 ಸಲ ಆಗುತ್ತದೆ. ಸರಾಸರಿಯಾಗಿ ಮರವೊಂದು 200-300 ಹಣ್ಣುಗಳನ್ನು ಆಯಾ ಪ್ರದೇಶದ ಮಳೆ ಪ್ರಮಾಣ ಹಾಗೂ ಹವಾಗುಣದ ಆಧಾರದ ಮೇಲೆ ನೀಡುತ್ತದೆ. ಹಣ್ಣಿನ ಸರಾಸರಿ ತೂಕ 15-20ಕಿ.ಗ್ರಾಂ. 2-3ಮರಗಳನ್ನು ಸಾಮಾನ್ಯವಾಗಿ ಹೊಲ/ತೋಟದ ಬೇಲಿಗಳಲ್ಲಿ ಕಾಣಬಹುದಾಗಿದ್ದು, ಅವುಗಳಿಂದ ಕಾಯಿ/ಹಣ್ಣುಗಳನ್ನು ಗೃಹ ಬಳಕೆಗಾಗಿ ಕಟಾವು ಮಾಡುವುದು ವಾಡಿಕೆ. ಚೇಳೂರು ಹೋಬಳಿಯ ಪ್ರತಿ ಮನೆಯಲ್ಲೂ ಸಾಧಾರಣವಾಗಿ 2-3 ಮರಗಳನ್ನು ಕಾಣಬಹುದು. ಬೇಡಿಕೆ ಹೆಚ್ಚಾದಂತೆ ಗೃಹ ಬಳಕೆಗೆ ಸೀಮಿತವಾಗಿದ್ದ ಹಲಸಿಗೆ ಮಾರುಕಟ್ಟೆಯಲ್ಲಿ ಸ್ಥಾನ ಸಿಕ್ಕಿದೆ. ಪಕ್ಕದ ಜಿಲ್ಲೆಗಳ ಕೃಷಿಕರು ಮಾರಾಟ ಮಾಡಲು ಚೇಳೂರಿಗೆ ತಮ್ಮ ಹಲಸನ್ನು ತರುತ್ತಿದ್ದಾರೆ. ಹೆಚ್ಚಿದ ಬೇಡಿಕೆ ಪೂರೈಸಲು ರೈತರು ಸುಧಾರಿತ ತಳಿಗಳ ಸಸಿಗಳನ್ನು ನಾಟಿಗೆ ಬಳಸುತ್ತಿದ್ದಾರೆ. ದಶಕಗಳ ಹಿಂದೆ ಕೇವಲ 5ರೂಗೆ ಮಾರಾಟವಾಗುತ್ತಿದ್ದು ಒಂದು ಹಣ್ಣು ಈಗಿನ ಬೆಲೆ ಸರಿಸುಮಾರು ರೂ.40 ರಿಂದ 50. ಹಲಸಿನ ಮರವೊಂದು ರೈತನಿಗೆ ಸರಾಸರಿಯಾಗಿ ರೂ.2000-3000 ಆದಾಯವನ್ನು ಯಾವುದೇ ಬಂಡವಾಳ ಹೂಡಿಕೆಯಿಲ್ಲದೇ ತಂದು ಕೊಡುತ್ತಿದೆ.
ಮಾರುಕಟ್ಟೆಯ ಆವಕ:
ಚೇಳೂರು ಮಾರುಕಟ್ಟೆಗೆ ಅದರ 40ಕಿ.ಮೀ. ವ್ಯಾಪ್ತಿಯ ಸುತ್ತ-ಮುತ್ತಲ ಹಳ್ಳಿಗಳಿಂದ ಹಲಸು ಆವಕವಾಗುತ್ತದೆ. ಪ್ರತಿ ಹಳ್ಳಿಯಿಂದ 2-4 ರೈತರು ತಮ್ಮ 60-70 ಹಣ್ಣುಗಳನ್ನು ಒಟ್ಟಾಗಿ ಸೇರಿಸಿ ರಿಕ್ಷಾ ಅಥವಾ ಟೆಂಪೋ ಮೂಲಕ ಹಲಸನ್ನು ಚೇಳೂರು ಮಾರುಕಟ್ಟೆಗೆ ಸಾಗಿಸುತ್ತಾರೆ. ಆವಕ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಿ ಆಗಸ್ಟ್‍ವರೆಗೂ ಇರುತ್ತದೆ. ಮೇ-ಜೂನ್‍ನಲ್ಲಿ ಅಧಿಕ ಪ್ರಮಾಣದ ಹಲಸು ಮಾರುಕಟ್ಟೆಗೆ ಬರುತ್ತಿದೆ. ಡಿಸೆಂಬರ್-ಏಪ್ರಿಲ್ ಅವಧಿಯಲ್ಲಿ ಪ್ರತಿ ವಾರಕ್ಕೆ ಸರಾಸರಿ 20ಟನ್ ಹಣ್ಣಿನ ವಹಿವಾಟು ಚೇಳೂರಿನಲ್ಲಿ ನಡೆಯುತ್ತಿದೆ. ಈ ಪ್ರಮಾಣದ ಮೇ-ಜುಲೈ ತಿಂಗಳಿನಲ್ಲಿ 100ಟನ್ ದಾಟುತ್ತಿದೆ. ಹಲಸು ಹಣ್ಣಿನ ವ್ಯಾಪಾರ ವಾರದ ಪ್ರತಿ ಶುಕ್ರವಾರ ನಡೆಯುತ್ತದೆ. ಮಾರುಕಟ್ಟೆಗೆ ರೈತರು, ವ್ಯಾಪಾರಿಗಳು ಹಾಗೂ ಕೊಯ್ಲ ಪೂರ್ವದಲ್ಲಿ ಕಂಟ್ರಾಕ್ಟರ್‍ಗಳು ಬರುತ್ತಾರೆ. ಇವರುಗಳು ಮಾರಾಟಕ್ಕೆ ತರುವ ಹಣ್ಣಿನ ಪ್ರಮಾಣ ಒಂದೇ ತೆರನಾಗಿರುವುದಿಲ್ಲ. ಕೊಯ್ಲ ಪೂರ್ವದಲ್ಲಿ ಮೌಖಿಕ ಒಪ್ಪಂದ ಮಾಡಿಕೊಳ್ಳುವ ವ್ಯಾಪಾರಸ್ಥರು ಸಾಮಾನ್ಯವಾಗಿ ಹಳ್ಳಿಗಳಿಗೆ ಹೋಗಿ ಮರವೊಂದನ್ನು ರೂ.2000ದಿಂದ 4000 ಗಳಿಗೆ ಗುತ್ತಿಗೆ ಪಡೆಯುತ್ತಾರೆ. ಅವರು ನಿರ್ಧರಿಸುವ ದರ ಮರದಲ್ಲಿನ ಹಣ್ಣಿನ ಗಾತ್ರ ಹಾಗೂ ಹಣ್ಣುಗಳ ಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತದೆ.
ಇನ್ನು ಕೆಲವು ವ್ಯಾಪಾರಸ್ಥರು ಪ್ರತಿವಾರ ಹಳ್ಳಿಗಳಿಗೆ ಹೋಗಿ ಹಣ್ಣುಗಳನ್ನು ಅದರ ಗಾತ್ರ/ತೂಕ ಆಧರಿಸಿಕೊಂಡು ಒಟ್ಟಾಗಿ ಸೇರಿಸಿ ಮಾರುಕಟ್ಟೆಗೆ ತರುವುದೂ ಇದೆ. ಈ ವ್ಯಾಪಾರಸ್ಥರು ಸಾಮಾನ್ಯವಾಗಿ ಪ್ರತಿ ಹಣ್ಣನ್ನು ರೂ.20-30ರ ದರದಲ್ಲಿ ಖರೀದಿಸುತ್ತಾರೆ. ಇನ್ನು ಕೆಲವು ರೈತರು ಸ್ವತ: ತಾವೇ ಹಣ್ಣುಗಳನ್ನು ಮಾರುಕಟ್ಟೆಗೆ ತಂದು ನೇರವಾಗಿ ಮಾರಾಟ ಮಾಡುತ್ತಾರೆ. ಮಾರುಕಟ್ಟೆಗೆ ವಿವಿಧ ರೀತಿಯಲ್ಲಿ ಆವಕವಾಗುವ ಹಣ್ಣಿನ ವಿವರವನ್ನು ಕೋಷ್ಟಕ – 2ರಲ್ಲಿ ನೀಡಲಾಗಿದೆ. ಚೇಳೂರು ಸುತ್ತಮುತ್ತಲ ಹಳ್ಳಿಗರಷ್ಟೇ ಅಲ್ಲದೇ ಈ ಮಾರುಕಟ್ಟೆಗೆ ಹಾಸನ, ಸಕಲೇಶಪುರ ಹಾಗೂ ತುಮಕೂರು ಜಿಲ್ಲೆಯ ಇತರೆ ತಾಲ್ಲೂಕುಗಳಿಂದಲೂ ಸಹ ಹಲಸಿನ ಆವಕವಾಗುತ್ತಿದೆ. ಪ್ರತಿವಾರ ಸರಾಸರಿ 200ಖರೀದಿದಾರರು ವಿವಿಧ ಸ್ಥಳಗಳಿಂದ (ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು) ಆಗಮಿಸಿ ಖರೀದಿ ಮಾಡುತ್ತಾರೆ. ಖರೀದಿಯು ಪ್ರತೀವಾರದ ಖರೀದಿದಾರರ ಬೇಡಿಕೆಗೆ ತಕ್ಕಂತೆ ನಡೆಯುತ್ತದೆ. ಸಾಮಾನ್ಯವಾಗಿ ಹಲಸಿನ ದರ ಫೆಬ್ರುವರಿ-ಏಪ್ರಿಲ್ ತಿಂಗಳುಗಳಲ್ಲಿ ಹೆಚ್ಚಾಗಿದ್ದು, ಗರಿಷ್ಟ ಆವಕವಾಗುವ ಮೇ-ಆಗಸ್ಟ್‍ನಲ್ಲಿ ಕಡಿಮೆಯಾಗುತ್ತದೆ. ಈ ತಿಂಗಳುಗಳಲ್ಲಿ ಮಾರುಕಟ್ಟೆಗೆ ಮಾವಿನ ಹಣ್ಣು ಬರುವುದೂ ಸಹ ಹಲಸಿನ ದರ ಕಡಿಮೆಯಾಗಲು ಒಂದು ಕಾರಣವೂ ಆಗಿದೆ.
ಕೋಷ್ಟಕ – 2 ಚೇಳೂರು ಮಾರುಕಟ್ಟೆಗೆ ವಿವಿಧ ಸಾಗಾಣಿಕೆ ಮೂಲಗಳಿಂದ ಆವಕವಾಗುವ ಹಲಸಿನ ವಿವರ 2018.
ಸಾರಿಗೆ ಮೂಲ ಸಂಖ್ಯೆ/ವಾರ ಹಣ್ಣುಗಳ ಸಂಖ್ಯೆ/ಸಾರಿಗೆ ಸರಾಸರಿ ಟನ್/ವಾರ
ಆಟೋ ರಿಕ್ಷಾ 150-200 50-80 112-240
ಟಾಟಾ ಏಸ್ 40-50 170-200 102-150
ಟೆಂಪೊ (ಬೊಲೆರೋ) 30-40 300-400 180-240
ಚಿತ್ರ – 1 ಚೇಳೂರು ಮಾರುಕಟ್ಟೆಯಲ್ಲಿ ಹಲಸಿನ ಆವಕದ ತಿಂಗಳುವಾರು ಪ್ರಮಾಣ
ಮಾರುಕಟ್ಟೆಗೆ ಹಲಸಿನ ಗುಣಮಟ್ಟ ಹೀಗಿರಲಿ:
ಹಲಸಿನ ಮಾರಾಟ ನೇರ ಹರಾಜು ಹಾಗೂ ಬಿಡ್ಡಿಂಗ್ ಮೂಲಕ ಚೇಳೂರು ಮಾರುಕಟ್ಟೆಯಲ್ಲಿ ನಡೆಯುತ್ತದೆ. ಉತ್ಪನ್ನ ತರುವ ಪ್ರತಿಯೊಬ್ಬರೂ ತಾವು ತಂದ ಉತ್ಪನ್ನವನ್ನು ಪ್ರತ್ಯೇಕ ಗುಂಪು(ಲಾಟ್) ಮಾಡಿ ಇಲ್ಲವೇ ತಂದ ವಾಹನದಲ್ಲಿಯೇ ಇಡುತ್ತಾರೆ. ನಂತರ ಖರೀದಿದಾರರು ಬಿಡ್ಡಿಂಗ್ ಮೂಲಕ ಖರೀದಿಸುತ್ತಾರೆ. ಖರೀದಿದಾರರ ಬಿಡ್ಡಿಂಗ್ ಮೊತ್ತಕ್ಕೆ ಉತ್ಪನ್ನವನ್ನು ಮಾರಾಟ ಮಾಡುವ ಅಂತಿಮ ನಿರ್ಧಾರ ಹಣ್ಣು ತಂದವರದ್ದಾಗಿರುತ್ತದೆ. ಪ್ರತಿ ವಾರ ಸರಾಸರಿ 200 ಖರೀದಿದಾರರು ಇಲ್ಲಿಗೆ ಆಗಮಿಸುತ್ತಾರೆ. ಹಣ್ಣಿನ ಬಣ್ಣ ಹಾಗೂ ಗಾತ್ರದ ಆಧಾರದ ಮೇಲೆ ಬಿಡ್ಡಿಂಗ್ ನಡೆಯುತ್ತದೆ. ಖರೀದಿದಾರರು ಖರೀದಿಗೆ ಮುನ್ನ ಮಾದರಿ ಹಣ್ನೊಂದನ್ನು ಕತ್ತರಿಸಿ ತೊಳೆಗಳ ಬಣ್ಣ ಹಾಗೂ ಗಾತ್ರವನ್ನು ಪರೀಕ್ಷಿಸಿ ಖರೀದಿ ದರ ಪ್ರಕಟಿಸುತ್ತಾರೆ. ಒಂದು ಲಾಟ್/ಗುಂಪಿನಿಂದ ಪರೀಕ್ಷೆಗೋಸ್ಕರ ಸಾಮಾನ್ಯವಾಗಿ ಒಂದು ಹಣ್ಣನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವೊಂದು ಸಲ ಬೇರೆ ಬೇರೆ ಖರೀದಿದಾರರು ಲಾಟ್/ಗುಂಪೊಂದರ ಅದೇ ಹಣ್ಣನ್ನು ಅಥವಾ ಬೇರೆ ಹಣ್ಣುಗಳ ಪರೀಕ್ಷೆಗೆ ಒಳಪಟ್ಟ ಹಣ್ಣುಗಳ ಗುಣಮಟ್ಟ ಹಾಳಾಗುವುದೂ ಸಹ ಇದೆ. ಸಾಮಾನ್ಯವಾಗಿ ಕೆಂಪು ಮತ್ತು ಹಳದಿ ಬಣ್ಣದ ತೊಳೆಗಳ ಹಣ್ಣುಗಳ ಖರೀದಿಗೆ ಆದ್ಯತೆ ಹೆಚ್ಚು. ತೊಳೆಯ ಬಣ್ಣ ಕೆಂಪಿದ್ದಲ್ಲಿ ಹೆಚ್ಚಿನ ದರಕ್ಕೆ ಹಣ್ಣು ಮಾರಾಟವಾಗುತ್ತದೆ. ಬಿಳಿ ಬಣ್ಣದ ತೊಳೆಗಳಿರುವ ಹಣ್ಣುಗಳು ಕನಿಷ್ಟ ದರದಲ್ಲಿ ಮಾರಾಟವಾಗುತ್ತದೆ.
ಹಲಸಿನ ಮೌಲ್ಯ ಸರಪಳಿಯ ನಕಾಶೆ:
ಉತ್ಪಾದನೆಯಿಂದ ಅಂತಿಮ ಗ್ರಾಹಕರಿಗೆ ತಲುಪುವ ನಡುವಿನ ಎಲ್ಲಾ ಚಟುವಟಿಕೆಗಳು ಮೌಲ್ಯ ಸರಪಳಿಯ ವ್ಯಾಪ್ತಿಗೆ ಒಳಪಡುತ್ತದೆ. ಇದು ಮೌಲ್ಯ ಸರಪಳಿಯ ನಕಾಶೆ ಅಷ್ಟೇನೂ ಸಂಕೀರ್ಣವಲ್ಲ. ಬಹುತೇಕ ಹಲಸು ಮೌಲ್ಯವರ್ಧಿತ ಉತ್ಪನ್ನವಾಗಿ ಸಂಸ್ಕರಣೆಗೊಳ್ಳದಿರುವುದು ಇದಕ್ಕೆ ಕಾರಣ. ಮೌಲ್ಯಸರಪಳಿಯಲ್ಲಿ ಒಳಪಡುವುದು ಹಾಗೂ ಸಂಸ್ಥೆಗಳನ್ನು ಕೆಳಗಿನ ಚಿತ್ರ 2 ರಲ್ಲಿ ತೋರಿಸಲಾಗಿದೆ.
ಹಲಸು ಮೌಲ್ಯ ಸರಪಳಿಯಲ್ಲಿ ಉತ್ಪಾದನೆಯ ನಂತರ ಒಂದು ಪ್ರಮುಖವಾದ ಅಂಗ. ಅದರ ವಹಿವಾಟು, ವಹಿವಾಟಿನ ಪ್ರಮುಖ ಪಾತ್ರಧಾರಿಗಳು ಕ್ರೂೀಢೀಕರಿಸುವವರು. ಕೋಯ್ಲ ಪೂರ್ವ ಗುತ್ತಿಗೆದಾರರು ಹಾಗೂ ಮಾರುಕಟ್ಟೆಯ ಖರೀದಿದಾರರು. ಈ ನಿಟ್ಟಿನಲ್ಲಿ ಮಾರುಕಟ್ಟೆ ಸೇವಾ ಪೂರೈಕೆದಾರರೆಂದರೆ ಅದು ಎಪಿಎಂಸಿ. ಇಲ್ಲಿಗೆ ಬರುವ ಸಾಗಾಣಿಕಾ ವಾಹನಗಳಿಗೆ ರೂ.25ರ ಶುಲ್ಕವನ್ನು ಎಪಿಎಂಸಿ ನಿಗದಿಪಡಿಸಿದ್ದು, ಮಾರಾಟಕ್ಕೆ ಬೇಕಾದ ಮೂಲ ಸೌಕರ್ಯ ಕಲ್ಪಿಸಿಕೊಡುತ್ತದೆ. ಮಾರಾಟ ಕಾರ್ಯಾಚರಣೆ ಸೇವಾ ಪೂರೈಕೆದಾರರಾಗಿ ಕಾರ್ಮಿಕರು ಹಾಗೂ ಸಾಗಾಣಿಕೆದಾರರು ಇರುತ್ತಾರೆ. ಮಾರುಕಟ್ಟೆಗೆ ಉತ್ಪನ್ನ ಆವಕವಾದ ಮೇಲೆ ಮಾರಾಟದಾರರು ಅದನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸುತ್ತಾರೆ. ನಂತರ ವ್ಯಾಪಾರಸ್ಥರು/ಖರೀದಿದಾರರು ಗುಣಮಟ್ಟ ಪರೀಕ್ಷಿಸಿಕೊಳ್ಳುವ ಬೆಲೆಯನ್ನು ಸೂಚಿಸುತ್ತಾರೆ. ಅತೀ ಹೆಚ್ಚು ಬೆಲೆ/ದರ ಸೂಚಿಸಿದ ಖರೀದಿದಾರರಿಗೆ ಉತ್ಪನ್ನ ಮಾರಾಟವಾದಂತೆ. ಹಲಸಿನ ಮಾರಾಟ ಪ್ರಕ್ರಿಯೆಯಲ್ಲಿ ದಲ್ಲಾಳಿಗಳಿರುವುದಿಲ್ಲವೆಂಬುದು ಗಮನಾರ್ಹ ಅಂಶ. ಹಾಗಾಗಿ ಮಾರಾಟಗಾರರಿಗೆ/ ಉತ್ಪಾದಕರಿಗೆ ಕಮೀಷನ್ ಉಳಿಯುತ್ತದೆ. ಉತ್ಪನ್ನ ಖರೀದಿಸಿದವರು ಚಿಲ್ಲರೆ ವ್ಯಾಪಾರಿಗಳಿಗೆ ಅಥವಾ ಬೇರೆ ರಾಜ್ಯದ ಮಾರುಕಟ್ಟೆಗಳಿಗೆ ಖರೀದಿಸಿದ ಹಲಸನ್ನು ಮರು ಮಾರಾಟ ಮಾಡುತ್ತಾರೆ.
ಉತ್ಪಾದಕರಿಗೆ ತಗಲುವ ವೆಚ್ಚ:
ಉತ್ಪಾದಕರಿಗೆ, ಹಣ್ಣು ಕ್ರೂೀಢೀಕರಿಸುವವರಿಗೆ ಹಾಗೂ ಕೋಯ್ಲ ಪೂರ್ವ ಗುತ್ತಿಗೆದಾರರಿಗೆ ತಗಲುವ ಪ್ರಮುಖ ಮಾರಾಟದ ವೆಚ್ಚ, ಹಣ್ಣಿನ ಸಾಗಣೆ, ವಾಹನಕ್ಕೆ ಹಣ್ಣನ್ನು ತುಂಬಲು ಹಾಗೂ ಕೆಳಗಿಳಿಸಲು ಬೇಕಾಗುವ ಕಾರ್ಮಿಕರ ವೆಚ್ಚ, ಸಾಮಾನ್ಯವಾಗಿ ಚೇಳೂರಿಗೆ ಸುತ್ತಮುತ್ತಲ 10-40ಕಿ.ಮೀ. ವ್ಯಾಪ್ತಿಯ ಹಳ್ಳಿಗಳಿಂದ ಹಲಸು ಆವಕವಾಗುವುದರಿಂದ ಹಣ್ಣೊಂದಕ್ಕೆ ತಗಲುವ ಸಾಗಣಿಕೆ ವೆಚ್ಚ ರೂ.10 ಅಥವಾ ರಿಕ್ಷಾವೊಂದಕ್ಕೆ ರೂ.1400 (100-130 ಹಣ್ಣುಗಳು). ಬಹಳ ಸಲ ಅನೇಕ ರೈತರು ಒಟ್ಟಾಗಿ ಸೇರಿ ಸಾಗಾಣಿಕೆ ಮಾಡುವುದರಿಂದ ಅದರ ವೆಚ್ಚ ವೈಯಕ್ತಿಕವಾಗಿ ಕಡಿಮೆಯಾಗುತ್ತದೆ. ಹಣ್ಣುಗಳನ್ನು ವಾಹನಕ್ಕೆ ತುಂಬುವ ಹಾಗೂ ಇಳಿಸುವ ಸಲುವಾಗಿ ಪ್ರತಿ ಹಣ್ಣಿಗೆ ರೂ.1 ಖರ್ಚು ತಗಲುತ್ತದೆ. ಇದರ ಜೊತೆಗೆ ವಾಹನವೊಂದಕ್ಕೆ ಮಾರುಕಟ್ಟೆ ಶುಲ್ಕ ರೂ.25/- ಪಾವತಿಸಬೇಕು.
ವಹಿವಾಟು- ಮೌಲ್ಯ ಸರಪಳಿಯ ಒಂದು ಬಹು ಮುಖ್ಯ ಅಂಗ:
ಉತ್ಪಾದನೆಯ ನಂತರ ಮೌಲ್ಯ ಸರಪಳಿಯಲ್ಲಿನ ಎರಡನೇಯ ಪ್ರಮುಖ ಅಂಗ ಹಣ್ಣಿನ ವಹಿವಾಟು. ವಹಿವಾಟಿನಲ್ಲಿ ಪಾಲ್ಗೊಳ್ಳುವರರು ಇತರೇ ರಾಜ್ಯಗಳಿಂದ ಬಂದ ಖರೀದಿದಾರರು, ಆ ರಾಜ್ಯಗಳ ಬಹುತೇಕ ಖರೀದಿದಾರರ ಜೊತೆಗೆ ಚಿಲ್ಲರೆ ವ್ಯಾಪಾರಿಗಳೂ ಸಹ ಇರುತ್ತಾರೆ. ಕೆಲ ಖರೀದಿದಾರರು ಹಲಸನ್ನು ಖರೀದಿಸಿ ಚಿಲ್ಲರೆ ವ್ಯಾಪಾರಿಗಳಿಗೆ ಪೂರೈಸುವವರೂ ಇದ್ದಾರೆ. ಇಲ್ಲಿ ಖರೀದಿಸಿ ಇತರ ರಾಜ್ಯಗಳಿಗೆ ತಮ್ಮದೇ ಅಥವಾ ಬಾಡಿಗೆ ಸಾಗಾಣಿಕೆ ವಾಹನದ ಮೂಲಕ ರಾಜ್ಯದ ದಾವಣಗೆರೆ, ಹುಬ್ಬಳ್ಳಿ, ಹಾವೇರಿ, ವಿಜಯಪುರ ಮತ್ತು ಇತರ ಸ್ಥಳಗಳಿಗೆ ಕಳುಹಿಸಿರುತ್ತಾರೆ. ವಹಿವಾಟು ವಾರಕ್ಕೊಮ್ಮೆ ಮಾತ್ರ ನಡೆಸುವುದರಿಂದ, ಖರೀದಿದಾರರು ಅವರ ವಾರದ ಬೇಡಿಕೆಗೆ ಅನುಗುಣವಾಗಿ ಖರೀದಿಸಿರುತ್ತಾರೆ ಹಾಗೂ ಮುಂಬರುವ ವಾರಗಳಲ್ಲಿಯೂ ಅದರ ಖರೀದಿ ಮುಂದುವರೆಯುತ್ತದೆ. ಸಾಮಾನ್ಯವಾಗಿ ಚಿಲ್ಲರೆ ವ್ಯಾಪಾರಿಗಳಾಗಿರುವುದರಿಂದ ಅವರು ಖರೀದಿಸಿದ ಹಲಸಿನ ಹಣ್ಣುಗಳ ತೊಳೆಗಳನ್ನು ಬಿಡಿಸಿ ಮಾರಾಟ ಮಾಡುತ್ತಾರೆ. ಇಲ್ಲವೇ ಖರೀದಿದಾರರು ಇತರೇ ರಾಜ್ಯದ ಅಥವಾ ರಾಜ್ಯದ ಇತರೇ ಪ್ರದೇಶಗಳ ಚಿಲ್ಲರೆ ವ್ಯಾಪಾರಿಗಳಿಗೆ ತಾವು ಖರೀದಿಸಿದ ಹಣ್ಣುಗಳನ್ನು ಮರು ಮಾರಾಟ ಮಾಡುತ್ತಾರೆ.
ಖರೀದಿದಾರರಿಗೆ ತಗಲುವ ಮಾರಾಟದ ವೆಚ್ಚ:
ಖರೀದಿದಾರರಿಗೆ ತಗಲುವ ಪ್ರಮುಖ ಮಾರಾಟದ ವೆಚ್ಚಗಳೆಂದರೆ ಸಾಗಾಣಿಕೆ ವೆಚ್ಚ. ಹಣ್ಣುಗಳನ್ನು ಸಾಗಾಣಿಕೆ ವಾಹನಕ್ಕೆ ತುಂಬುವ ಹಾಗೂ ಇಳಿಸುವ ವೆಚ್ಚವಾಗಿರುತ್ತದೆ. ಉತ್ಪಾದಕದಂತೆ ಖರೀದಿದಾರರೂ ಸಹ ಹಣ್ಣುಗಳನ್ನು ಕ್ರೂೀಢೀಕರಿಸಿ ಅನಂತಪುರಂ, ಕರ್ನೂಲ, ಕಡಪ, ಹೊಸೂರು ಮುಂತಾದ ಸ್ಥಳಗಳಿಗೆ ಕಳುಹಿಸುತ್ತಾರೆ. ಸುಮಾರು 250ಹಣ್ಣುಗಳನ್ನು ಸಾಗಿಸುವ ಸಾಮಥ್ರ್ಯವಿರುವ ಸಾಗಾಣಿಕಾ ವಾಹನವೊಂದಕ್ಕೆ ಸರಾಸರಿ ರೂ.5000 ಬಾಡಿಗೆ ತಗಲುವುದು. ದೂರದ ಮಾರುಕಟ್ಟೆ/ ಸ್ಥಳಗಳಿಗಾದರೆ ರೂ.6000 (300 ಹಣ್ಣುಗಳ ಸಾಮಥ್ರ್ಯ), ಮುಂಬಯಿಗೆ ಸಾಗಿಸಲು ರೂ.20,000-25,000 ವೆಚ್ಚವಾಗುವುದು. ಲಾರಿಯೊಂದಕ್ಕೆ ಹಣ್ಣು ತುಂಬಲು ಹಾಗೂ ಅದರಿಂದ ಇಳಿಸಲು ತಗಲುವ ವೆಚ್ಚ ರೂ.2,000 ಖರೀದಿದಾರರೊಬ್ಬರಿಗೆ ತಗಲುವ ಸರಾಸರಿ ವೆಚ್ಚ ಕರ್ನಾಟಕದಲ್ಲಿಯೇ ಮಾರುವುದಾದರೆ ರೂ.6300, ಮಹಾರಾಷ್ಟ್ರಕ್ಕೆ ಕಳುಹಿಸುವುದಾದರೆ ರೂ.27,000. ಆಗುತ್ತದೆ.
ಮುಂಬಯಿಯ ಚಿಲ್ಲರೆ ಮಾರಾಟಗಾರರಿಗೆ ಮಾರಾಟ ಮಾಡಿದಲ್ಲಿ ಖರೀದಿದಾರರಿಗೆ ಪ್ರತಿ ಹಣ್ಣಿನ ಮಾರಾಟದಿಂದ ಸಿಗುವ ಲಾಭ ರೂ.127 (ಕೋಷ್ಟಕ-3). ಸೆಕೆಂಡರಿ ಮಾರುಕಟ್ಟೆಗಳು ಹೆಚ್ಚಾಗಿ ಹಲಸನ್ನು ಖರೀದಿಸುವುದರಿಂದ ಅವು ಚೇಳೂರು ಮಾರುಕಟ್ಟೆಯ ವಹಿವಾಟಿನ ಬೇಡಿಕೆಯ ಕೇಂದ್ರಗಳೂ ಆಗಿವೆ. ಉತ್ಪಾದಕರು, ಕ್ರೂೀಢೀಕರಿಸುವವರು ಹಾಗೂ ಕೋಯ್ಲ ಪೂರ್ವ ಗುತ್ತಿಗೆದಾರರಿಗೆ ಸಿಗುವ ಲಾಭ ಅನುಕ್ರಮವಾಗಿ ಹಣ್ಣೊಂದಕ್ಕೆ ರೂ.29 ಹಾಗೂ ರೂ.17 ಆಗಿದೆ. ಈ ಕಡಿಮೆ ಲಾಭಕ್ಕೆ ಕಾರಣ ಅವರು ನಡೆಸುವ ವಹಿವಾಟು ವೈಯಕ್ತಿಕವಾಗಿ ಸಣ್ಣ ಪ್ರಮಾಣದ್ದಾಗಿರುತ್ತದೆ. ಅಲ್ಲದೇ ಅವರುಗಳು ಹೊರ ರಾಜ್ಯಗಳಿಗೆ ಕಳುಹಿಸುವುದಕ್ಕೆ ಹಿಂಜರಿಯುವುದಾಗಿದೆ.
ಹಲಸು ಒಂದು - ಅವಕಾಶ ಹಲವು :
ಮೌಲ್ಯ ಸರಪಳಿಯನ್ನು ಮೇಲ್ದರ್ಜೆಗೇರಿಸುವ ಪ್ರಮುಖ ಉದ್ದೇಶ ಹೆಚ್ಚಿನ ಪ್ರಮಾಣದ ಲಾಭ ಪಡೆಯುವುದಾಗಿದೆ. ಸರಪಳಿಗೆ ನಿರ್ದಿಷ್ಟ ಭಾಗಿದಾರರನ್ನು ಸೇರಿಸುವುದರ ಮೂಲಕ ಮೌಲ್ಯ ಹೆಚ್ಚಿಸಬಹುದಾಗಿದೆ. ಸಾಮಾನ್ಯವಾಗಿ 4 ರೀತಿಯಲ್ಲಿ ಮೇಲ್ದರ್ಜೆಗೇರಿಸುವುದನ್ನು ಕಾಣಬಹುದಾಗಿದೆ. ಉತ್ಪನ್ನ ಮೇಲ್ದರ್ಜೆಗೇರಿಸುವುದು, ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವುದು, ಪ್ರಕ್ರಿಯೆ ಮೇಲ್ದರ್ಜೆಗೇರಿಸಲು ಉತ್ಪನ್ನ ಹಾಗೂ ಪ್ರಕ್ರಿಯೆಗಳ ಮೇಲ್ದರ್ಜೆಗೇರಿಸಿದ ಎರಡೂ ರೀತಿಯ ಅವಕಾಶಗಳಿವೆ. ಚೇಳೂರು ಮಾರುಕಟ್ಟೆಯ ಅಭ್ಯಾಸದ ನಂತರ ತಿಳಿದ ಪ್ರಮುಖ ಅಂಶವೆಂದರೆ ಪ್ರಮುಖವಾಗಿ ಇಲ್ಲಿ ವಹಿವಾಟಾದ ಹಲಸು ಚಿಲ್ಲರೆ ಮಾರಾಟದಾರರಿಗೆ ಮಾರಾಟವಾಗುತ್ತದೆ. ವಹಿವಾಟಿನ ನಂತರ ಖರೀದಿಸಿದವರು ತೊಳೆಗಳನ್ನು ಪ್ರತ್ಯೇಕಿಸಿ ತೊಳೆಗಳನ್ನು ರೂ.2ರಿಂದ 4ರಂತೆ ಅದರ ಗುಣಮಟ್ಟ, ಬಣ್ಣ ಹಾಗೂ ಗಾತ್ರದ ಆಧಾರದ ಮೇಲೆ ಮಾರಾಟ ಮಾಡುತ್ತಾರೆ. ಸರಾಸರಿ ಹಣ್ಣೊಂದು 200ರಿಂದ 300 ತೊಳೆಗಳನ್ನು ನೀಡಬಲ್ಲದಾಗಿದ್ದು, ಇದರ ಮಾರಾಟದಿಂದ ಬರುವ ಆದಾಯ ರೂ.400-600 ಆಗಿದೆ.
ಮಾರುಕಟ್ಟೆ ಪ್ರಕ್ರೀಯೆ ಹಾಗೂ ಮೇಲ್ದರ್ಜೆಗೇರಿಸುವಲ್ಲಿನ ಅವಕಾಶಗಳು:
ಪ್ರಸ್ತುತ ಹಲಸಿನ ಹಣ್ಣನ್ನು ಮಾರಾಟ ಮಾಡುವುದನ್ನು ಗಮನಿಸಿದಾಗ ಅಲ್ಲಿ ನೈರ್ಮಲ್ಯತೆಯ ಕೊರತೆಯಿದೆ. ಹಣ್ಣು ಕತ್ತರಿಸುವಾಗ ಎಣ್ಣೆಯ ಬಳಕೆ, ದಿಂಡು ತೆಗೆಯುವುದು, ತೊಳೆಗಳನ್ನು ಬರಿಗೈಯಿಂದ ಬೇರ್ಪಡಿಸುವುದು ಹಾಗೂ ತೆರದ ರೀತಿಯಲ್ಲಿ ಶೇಖರಿಸುವುದು ಈಗ ಅನುಸರಿಸಲಾಗುತ್ತಿರುವ ಪದ್ಧತಿ. ಸ್ವಚ್ಛತೆಯಿಂದ ಕೂಡಿದ, ವಿಂಗಡಿಸಿದ ಹಾಗೂ ಸಣ್ಣ ಪ್ರಮಾಣದಲ್ಲಿ ಪ್ಯಾಕಿಂಗ್ ಮಾಡಿದ ಹಲಸಿನ ಹಣ್ಣಿಗೆ ನಗರ/ಪಟ್ಟಣ ಪ್ರದೇಶಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅಂತಹ ಉತ್ಪನ್ನಗಳನ್ನು ಪೂರೈಸಲು ಸಾಕಷ್ಟು ಅವಕಾಶಗಳಿವೆ. ಉತ್ಪನ್ನದ ದೃಷ್ಟಿಯಿಂದ ನೋಡುವುದಾರೆ ಅನೇಕ ಸಂಸ್ಕರಿಸಿದ ಹಲಸಿನ ಉತ್ಪನ್ನಗಳ ಉತ್ಪಾದನೆಗೆ ಸಾಕಷ್ಟು ಅವಕಾಶಗಳಿವೆ. ಜಾಮ್, ಒಣ ತಿರುಳು, ಬೀಜದ ಪೌಡರ್, ಪೇಡ, ಸ್ಕ್ವಾಷ್ ಮುಂತಾದ ಸಂಸ್ಕರಿಸಿದ ಪದಾರ್ಥಗಳ ತಯಾರಿಸಿ ಅವಶ್ಯವಿರುವ ಎಲ್ಲ ತಂತ್ರಜ್ಞಾನಗಳು ಲಭ್ಯವಿದೆ. ಅಲ್ಲದೆ, ಹಲಸು ಪೋಷಕಾಂಶಗಳ ಆಗರವಾಗಿದ್ದು, ಅನೇಕ ಆರೋಗ್ಯವರ್ಧಕ ಗುಣಗಳನ್ನು ಹೊಂದಿದೆ. ಸಂಸ್ಕರಿಸಿದ ಪದಾರ್ಥಗಳಿಗೆ ಹೆಚ್ಚು ಹಣ ಕೊಟ್ಟು ಖರೀದಿಸುವ ಗ್ರಾಹಕರೂ ಕೂಡ ಇರುವುದು ಒಳ್ಳೆಯ ಬೆಳವಣಿಗೆ. ಪೋಷಕಾಂಶ/ಆರೋಗ್ಯವರ್ಧನೆಯ ಲಾಭಗಳನ್ನು ಹೆಚ್ಚು ಪ್ರಚುರಪಡಿಸುವ ಕಾರ್ಯ ಆಗಬೇಕಿದೆ. ಈ ಹಣ್ಣಿಗೆ ಉತ್ತಮ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳು ಹಾಗೂ ಆಸಕ್ತ ರೈತ ಗುಂಪುಗಳನ್ನು ಮಾಡಿ ಅವುಗಳಿಗೆ ಉತ್ತೇಜನಕೊಟ್ಟು ಹಲಸಿನ ಅನೇಕ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಬಹುದಾದ ಸಾಕಷ್ಟು ಅವಕಾಶಗಳಿವೆ. ಅಂತಹ ಗುಂಪುಗಳಿಗೆ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಅವಶ್ಯ ಸಣ್ಣ ಪ್ರಮಾಣದ ಸಂಸ್ಕರಣಾ ಯಂತ್ರಗಳನ್ನು ಖರೀದಿಸಲು ಬೇಕಾಗುವ ಹಣಕಾಸು ವ್ಯವಸ್ಥೆಯನ್ನು ಮಾಡಬಹುದಾಗಿದೆ.
ಸಾರಾಂಶ:
ಹಲಸಿನ ಮೌಲ್ಯಸರಪಳಿ ಮೇಲ್ದರ್ಜೆಗೇರಿಸುವಲ್ಲಿ ಪ್ರಕ್ರೀಯೆ ಹಾಗೂ ಉತ್ಪನ್ನ ಮೇಲ್ದರ್ಜಗೇರಿಸುವುದು ಅತ್ಯಂತ ಪ್ರಮುಖವಾದ ಆದ್ಯತೆಯ ಕ್ಷೇತ್ರಗಳಾಗಿವೆ. ಬಳಕೆ ಹಾಗೂ ಸ್ವೀಕೃತಿಯಲ್ಲಿ ಉತ್ಪನ್ನದ ಆಯ್ಕೆ ಅತೀ ಮುಖ್ಯ. ಕಳೆದೆರಡು ದಶಕಗಳಲ್ಲಿ ಹಲಸಿನ ಬಳಕೆಯ ಬಗ್ಗೆ ಗಮನಾರ್ಹವಾಗಿ ಭಾರತದಲ್ಲಿ ಬದಲಾವಣೆಗಳಾಗಿವೆ. ನಗರೀಕರಣ, ಆಹಾರ ಪದ್ಧತಿಯಲ್ಲಿನ ವೈವಿಧ್ಯತೆ, ಪೋಷಣೆ ಹಾಗೂ ಆರೋಗ್ಯದ ಮೇಲಿನ ಆದ್ಯತೆ, ಬಳಸಲು ಸುಲಭದ ಆಹಾರದ ಲಭ್ಯತೆ, ಮೌಲ್ಯವರ್ಧಿತ ಉತ್ಪನ್ನಗಳ ಬೇಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಸ್ವಸಹಾಯ ಸಂಘಗಳು ಹಾಗೂ ಅಸಂಘಟಿತ ರೈತ ಗುಂಪುಗಳ ಉತ್ತೇಜನಕ್ಕೂ ಸಾಕಷ್ಟು ಅವಕಾಶಗಳಿವೆ. ಮೌಲ್ಯ ಸರಪಳಿಯನ್ನು ಮೇಲ್ದರ್ಜೆಗೇರಿಸುವುದರಿಂದ ಹಲಸು ಕೃಷಿಕರಿಗೆ ಹೆಚ್ಚಿನ ಲಾಭವಾಗಿ ಅವರ ಆದಾಯವೂ ಕೂಡ ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹ ಇಲ್ಲಾ ಅಲ್ಲವೆ?