ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಗಿರುವ ಮಹತ್ವದ ಬೆಳವಣಿಗೆ ಒಂದರಲ್ಲಿ ಭಾರತದ ನೆಲದಲ್ಲೇ ಬೆಳೆದ ಡ್ರ್ಯಾಗನ್ ಹಣ್ಣುಗಳು ಇದೇ ಮೊದಲ ಬಾರಿ ವಿದೇಶಕ್ಕೆ ರಫ್ತಾಗಿವೆ. ಭಾರತದಲ್ಲಿ ಬೆಳೆದ ಡ್ರ್ಯಾಗನ್ ಹಣ್ಣುಗಳ ಮೊದಲ ಬ್ಯಾಚ್ ಜೂನ್ 26ರಂದು ಶನಿವಾರ ದುಬೈ ತಲುಪಿದೆ.
ವಿಟಮಿನ್‌ಗಳು, ಖನಿಜಾಂಶಗಳು, ಫೈಬರ್ ಹಾಗೂ ಆ್ಯಂಟಿಆಕ್ಸಿಡೆಂಟ್‌ಗಳ ರೀತಿಯ ಪೌಷ್ಟಿಕಾಂಶಗಳಿಂದ ಶ್ರೀಮಂತವಾಗಿರುವ ಡ್ರ್ಯಾಗನ್ ಫ್ರೂಟ್, ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುವ ಹಣ್ಣಾಗಿದೆ. ಅಂದಹಾಗೆ ಈ ಹಣ್ಣುಗಳು ರಫ್ತಾಗಿರುವುದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಡಸರ್ ಎಂಬ ಸಣ್ಣ ಗ್ರಾಮವೊಂದರಿಂದ. ಈ ಕುರಿತಂತೆ ರೈಲ್ವೆ, ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರು ಶನಿವಾರ ಟ್ವೀಟ್ ಮಾಡಿದ್ದರು. ‘ದುಬೈಗೆ ಹೋದ ಡ್ರ್ಯಾಗನ್ ಹಣ್ಣುಗಳು: ದೇಶದಲ್ಲಿ ಬೆಳೆಯುವ ಹಣ್ಣುಗಳ ರಫ್ತು ಪ್ರಮಾಣವನ್ನು ವೃದ್ಧಿಸುವ ನಿಟ್ಟಿನಲ್ಲಿ ಫೈಬರ್ ಹಾಗೂ ಖನಿಜಾಂಶಗಳಿಂದ ಶ್ರೀಮಂತವಾಗಿರುವ ಡ್ರ್ಯಾಗನ್ (ಕಮಲಂ) ಹಣ್ಣುಗಳ ಮೊದಲ ಸರಕು, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ರೈತರ ಹೊಲಗಳಿಂದ ದುಬೈಗೆ ರವಾನೆಯಾಗಿದೆ’ ಎಂದು ಗೋಯಲ್ ಅವರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.
1990ರಲ್ಲಿ ಭಾರತಕ್ಕೆ ಪ್ರವೇಶ
ಡ್ರ್ಯಾಗನ್ ಹಣ್ಣುಗಳನ್ನು ವಿಯೆಟ್ನಾಂ, ಮಲೇಷ್ಯಾ, ಥೈಲ್ಯಾಂಡ್, ತೈವಾನ್, ಚೀನಾ, ಅಮೆರಿಕ, ಆಸ್ಟ್ರೇಲಿಯಾ, ಇಸ್ರೇಲ್ ಹಾಗೂ ಶ್ರೀಲಂಕಾ ದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಈ ಹಣ್ಣು ಮೊದಲ ಬಾರಿ ಭಾರತಕ್ಕೆ ಬಂದದ್ದು 1990ರಲ್ಲಿ. ಆಗಿನಿಂದಲೇ ಭಾರತದ ಕೆಲ ರಾಜ್ಯಗಳಲ್ಲಿ ಡ್ರ್ಯಾಗನ್ ಹಣ್ಣುಗಳನ್ನು ಬೆಳೆಯಲು ಆರಂಭಿಸಲಾಯಿತು. ಮೊದಲು ಆಸಕ್ತರು ಈ ವಿದೇಶಿ ಹಣ್ಣಿನ ಸಸಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಯ ಕೈತೋಟಗಳಲ್ಲಿ ಬೆಳೆಸಿ ನೋಡಿದರು. ಬಳಿಕ ಈ ಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ ಎಂಬ ಅಂಶ ಪ್ರಚಾರವಾದ ನಂತರ ಭಾರತದಲ್ಲಿ ಜನಪ್ರಿಯವಾಗ ತೊಡಗಿತು. ಪ್ರಸ್ತುತ ಸಣ್ಣ ಪಟ್ಟಣಗಳ ಹಣ್ಣಿನ ಅಂಗಡಿಗಳಲ್ಲೂ ಡ್ರ್ಯಾಗನ್ ಹಣ್ಣುಗಳನ್ನು ಕಾಣಬಹುದಾಗಿದೆ.
ಗುಣಮಟ್ಟದ ಹಣ್ಣು
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಡಸರ್ ಗ್ರಾಮದಲ್ಲಿ ಬಹಳಷ್ಟು ರೈತರು ಡ್ರ್ಯಾಗನ್ ಹಣ್ಣುಗಳನ್ನು ಬೆಳೆಯುತ್ತಾರೆ. ಇಲ್ಲಿ ಬೆಳೆಯುವ ಹಣ್ಣುಗಳು ಅಂತಾರಾಷ್ಟ್ರೀಯ ಗುಣಮಟ್ಟದ ಹಣ್ಣುಗಳಿಗೆ ಇರಬೇಕಾದ ಎಲ್ಲ ಲಕ್ಷಣಗಳನ್ನೂ ಹೊಂದಿವೆ. ಹೀಗಾಗಿ ಹಲವಾರು ಹಂತದ ಪರೀಕ್ಷೆಗಳನ್ನು ನಡೆಸಿದ ಬಳಿಕ ಅವುಗಳನ್ನು ದುಬೈಗೆ ಕಳುಹಿಸಿಕೊಡಲಾಗಿದೆ. ವಿಶೇಷ ಏನೆಂದರೆ 1990ರಲ್ಲೇ ಭಾರತದಲ್ಲಿ ಡ್ರ್ಯಾಗನ್ ಹಣ್ಣುಗಳನ್ನು ಬೆಳೆಯಲು ಆರಂಭಿಸಿದ್ದರೂ ಅವುಗಳು ರಫ್ತಾಗುತ್ತಿರುವುದು ಮಾತ್ರ ಇದೇ ಮೊದಲು. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಮಾನ್ಯತೆ ಪಡೆದಿರುವ ಎಂ/ಎಸ್ ಕೇ ಬೀ ಸಂಸ್ಥೆಯು ಈ ಡ್ರ್ಯಾಗನ್ ಹಣ್ಣುಗಳನ್ನು ಪ್ಯಾಕ್ ಮಾಡಿ, ರಫ್ತು ಮಾಡುವ ಕಾರ್ಯವನ್ನು ನಿರ್ವಹಿಸಿದೆ.
ಇತ್ತೀಚಿನ ದಿನಗಳಲ್ಲಿ ಡ್ರ್ಯಾಗನ್ ಹಣ್ಣುಗಳು ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿವೆ. ರೋಗ ನಿರೋಧಕ ಶಕ್ತಿ ವೃದ್ಧಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುವ ಕಾರಣದಿಂದ ಈಚೆಗೆ ಭಾರತದಲ್ಲಿ ಈ ಹಣ್ಣುಗಳ ಸೇವನೆಗೆ ಜನ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಪ್ರಸ್ತುತ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಹೆಚ್ಚಿನ ಪ್ರಮಾಣದ ಡ್ರಾಗನ್ ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಈ ಪೈಕಿ ಅತ್ಯುತ್ತಮ ಗುಣಮಟ್ಟದ ಹಣ್ಣುಗಳನ್ನು ಬೆಳೆಯುವ ಮಹರಾಷ್ಟ್ರ, ಮೊದಲ ಬಾರಿ ಡ್ರ್ಯಾಗನ್ ಹಣ್ಣುಗಳನ್ನು ರಫ್ತು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪ
ಈಗ್ಗೆ ಸರಿಯಾಗಿ ವರ್ಷದ ಹಿಂದೆ, ಅಂದರೆ 2020ರ ಜೂನ್‌ನಲ್ಲಿ ಪ್ರಸಾರವಾಗಿದ್ದ ಮನ್‌ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡ್ರಾಗನ್ ಹಣ್ಣುಗಳ ಬಗ್ಗೆ ಪ್ರಸ್ತಾಪಿಸಿದ್ದರು. ಆಗ ಗುಜರಾತ್‌ನ ಕಚ್ ಪ್ರಾಂತ್ಯದಲ್ಲಿ ಡ್ರಾಗನ್ ಹಣ್ಣುಗಳನ್ನು ಬೆಳೆಯಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ಪ್ರಧಾನಿ, ಉತ್ತಮ ಇಳುವರಿ ಪಡೆದಿದ್ದ ಅಲ್ಲಿನ ರೈತರನ್ನು ಅಭಿನಂದಿಸಿದ್ದರು. 2021ರ ಆರಂಭದಲ್ಲಿ ಗುಜರಾತ್ ಸರ್ಕಾರ ಡ್ರ್ಯಾಗನ್ ಫ್ರೂಟ್ ಎಂಬ ಹೆಸರಿನ ಬದಲಿಗೆ ‘ಕಮಲಮ್’ ಎಂದು ಮರು ನಾಮಕರಣ ಮಾಡಿತ್ತು. ಪ್ರಸ್ತುತ ದೇಶದಲ್ಲಿ ಈ ಹೆಸರೇ ಪ್ರಚಲಿತಕ್ಕೆ ಬರುತ್ತಿದೆ.
ಈ ಹಣ್ಣಿಗೇಕೆ ಡ್ರ್ಯಾಗನ್ ಹೆಸರು?
ಅಮೆರಿಕ ದೇಶದಲ್ಲಿ ಮೊದಲು ಬೆಳೆದ ಡ್ರ್ಯಾಗನ್ ಫ್ರೂಟ್, ಸಿಟ್ರಸ್ ಜಾತಿಗೆ ಸೇರಿದ ಹಣ್ಣು. ಇದರಲ್ಲಿ ಕೆಂಪು ತೊಗಟೆ-ಬಿಳಿ ತಿರುಳು, ಕೆಂಪು ತೊಗಟೆ-ಕೆಂಪು ತಿರುಳು ಹಾಗೂ ಹಳದಿ ತೊಗಟೆ-ಬಿಳಿ ತಿರುಳು ಒಳಗೊಂಡ ಮೂರು ವಿಧಗಳಿವೆ. ದಕ್ಷಿಣ ಮತ್ತು ಮಧ್ಯ ಅಮೆರಿಕದಲ್ಲಿ ಇದನ್ನು ಪಿಟಾಯ ಅಥವಾ ಪಿಟಾಹಯ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕಿವಿ ಹಣ್ಣಿನಲ್ಲಿ ಇರುವಂತೆ ತಿರುಳಿನಲ್ಲಿ ಸಣ್ಣ ಸಣ್ಣ ಬೀಜಗಳನ್ನು ಹೊಂದಿರುವ ಡ್ರಾಗನ್ ಹಣ್ಣನ್ನು ಅತಿ ಹೆಚ್ಚು ಬೆಳೆಯುವ ದೇಶ ವಿಯೆಟ್ನಾಂ. ಅಲ್ಲಿ ಈ ಹಣ್ಣನ್ನು ಥಾನ್ಹ್ ಲಾಂಗ್ (ಡ್ರ್ಯಾಗನ್ ಕಣ್ಣು) ಎಂದು ಕರೆಯಲಾಗುತ್ತಿತ್ತು. ಕಾಲಾ ನಂತರ ಆ ಹೆಸರು ಡ್ರ್ಯಾಗನ್ ಫ್ರೂಟ್ ಆಗಿ ಬದಲಾಗಿದೆ. ವಿಟಮಿನ್‌ಗಳು, ಖನಿಜಾಂಶಗಳು, ಫೈಬರ್ ಹಾಗೂ ಆ್ಯಂಟಿಆಕ್ಸಿಡೆಂಟ್ ಗಳಿಂದ ಶ್ರೀಮಂತವಾಗಿರುವ ಡ್ರಾಗನ್ ಹಣ್ಣುಗಳು, ಹಾನಿಗೊಳಗಾಗಿರುವ ಜೀವಕೋಶಗಳನ್ನು ಸುಸ್ಥಿತಿಗೆ ತರುವ ಗುಣ ಹೊಂದಿವೆ. ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣ ಪ್ರಕ್ರಿಯೆಯನ್ನು ಉತ್ತಮಗೊಳ್ಳುವ ಜೊತೆಗೆ, ಅಧಿಕ ಒತ್ತಡ, ಉರಿಯೂತ ಸೇರಿ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗಬಲ್ಲದು ಎಂದು ತಜ್ಞರು ಹೇಳುತ್ತಾರೆ.