Horticulture

ಹನಿ ನೀರಾವರಿ ಅಳವಡಿಸಲು ಯಾದಗಿರಿ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನ

14 March, 2021 7:46 PM IST By:

ಪ್ರಧಾನ ಮಂತ್ರಿಗಳ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ತುಂತುರು ನೀರಾವರಿ ಮತ್ತು ಹನಿ ನೀರಾವರಿ ಘಟಕ ಅಳವಡಿಕೆಗೆ ಯಾದಗಿರಿ ಜಿಲ್ಲೆಯ ಪರಿಶಿಷ್ಟ  ಪಂಗಡ ಮತ್ತು ಪರಿಶಿಷ್ಟ ಜಾತಿಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ರೈತರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಂಟಿ ಕೃಷಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋಟಗಾರಿಕಾ ಬೆಳೆಗಳಿಗೆ ಹಾಗೂ ಕೃಷಿ ಬೆಳೆಗಳಿಗೆ ಸೂಕ್ಷ್ಮ ನೀರಾವರಿಯನ್ನು ಅಳವಡಿಸಲು ರೈತರ ನೀರಾವರಿ ಉಪಕರಣಗಳಿಗೆ ಶೇ. 90 ರಷ್ಟು ಸಹಾಯಧನವನ್ನು ಸರ್ಕಾರ ನೀಡುತ್ತದೆ. ಹತ್ತಿರದ ಕೃಷಿ ತಾಲೂಕು ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರಗಳಿಂದ ಅರ್ಜಿ ಪಡೆದು ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ ನಂತರ 40 ದಿನದೊಳಗೆ ಈ ಸಹಾಯಧನ ಮಂಜೂರಾಗುತ್ತದೆ.

ತೋಟಗಾರಿಕೆ ಮಾಡುತ್ತಿರುವ ಸಣ್ಣ ರೈತರಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ನೀಡುವ ಸಹಾಯಧನ ಅನುಕೂಲವಾಗುತ್ತದೆ.ಆರ್ಥಿಕವಾಗಿ ಹಿಂದುಳಿದ ಜನರಿಗೆ ನೀರಾವರಿ ಮಾಡಲು ಹಣವಿಲ್ಲದೆ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ಅನುಕೂಲವಾಗಲೆಂದು ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ.

ಗ್ರಾಮಾಂತರ ರೈತರು ನೀರಾವರಿ ಮಾಡಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಅರ್ಜಿ ಸಲ್ಲಿಸಿ ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬಹುದು.

ಹನಿ ನೀರಾವರಿಯಿಂದ ನೀರಿನ ಸದ್ಭಳಕೆಯಾಗುತ್ತದೆ. ಬೆಳೆಯ ಉತ್ಪಾದನೆಯೂ ಹೆಚ್ಚಾಗುತ್ತದೆ. ಬೆಳೆಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ನೀಡಬಹುದು. ಶೇ. 50 ರಿಂದ 80 ರಷ್ಟು ನೀರಿನ ಉಳಿತಾಯ ಸಾಧ್ಯವಿದೆ. ಸಾಂಪ್ರದಾಯಿಕ ಪದ್ಧತಿ ಅಂದರೆ ಕಾಲುವೆಗಳ ಮೂಲಕ ನೀರು ಹಾಯಿಸುವುದರಿಂದ ಶೇ. 30 ರಿಂದ 40 ರಷ್ಟು ನೀರು ಪೋಲಾಗುತ್ತದೆ. ಜೊತೆಗೆ ಜಮೀನಿನ ಗುಣಮಟ್ಟವೂ ಕಡಿಮೆಯಾಗುತ್ತದೆ.