Horticulture

ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೊಳಗಾದ ಹೂ ಬೆಳೆ ನಷ್ಟ ಪರಿಹಾರಕ್ಕಾಗಿ ಅರ್ಜಿ ಆಹ್ವಾನ

20 May, 2020 9:11 PM IST By:
ಕೊರೋನಾ ವೈರಸ್ ಸೋಂಕು ತಡೆಯುವುದಕ್ಕಾಗಿ ಸರ್ಕಾರ ಹೇರಿದ್ದ ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೊಳಗಾದ ಕಲಬುರಗಿ ಜಿಲ್ಲೆಯ ಹೂ ಬೆಳೆಯುವ ರೈತರಿಗೆ ಗರಿಷ್ಟ 1 ಹೆಕ್ಟೇರ್‍ವರೆಗೆ 25,000 ರುಪಾಯಿಗಳಂತೆ ಪರಿಹಾರ ಧನ ನೀಡಲಾಗುತ್ತಿದ್ದು, ಇದಕ್ಕಾಗಿ ಜಿಲ್ಲೆಯ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿಲ್ಲಾ ಪಂಚಾಯತ್) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಒಂದು ಹೆಕ್ಟೇರ್‍ಗಿಂತ ಕಡಿಮೆ ವಿಸ್ತೀರ್ಣದಲ್ಲಿನ ಹೂ ಬೆಳೆಗಾರರಿಗೆ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಹಾರಧನ ನೀಡಲಾಗುತ್ತದೆ. 2019-20ನೇ ಸಾಲಿನ ಬೆಳೆ ಸಮೀಕ್ಷೆಯಲ್ಲಿನ ಹೂ ಬೆಳೆಗಾರರ (ಬಹುವಾರ್ಷಿಕ ಹೂ ಬೆಳೆಗಳ ಮುಂಗಾರು ಬೆಳೆ ಸಮೀಕ್ಷೆ ಹಾಗೂ ವಾರ್ಷಿಕ ಹೂ ಬೆಳೆಗಳ ಹಿಂಗಾರು ಬೆಳೆ ಸಮೀಕ್ಷೆ) ದೃಢೀಕರಿಸಿದ ಪಟ್ಟಿಯನ್ನು ತಾಲೂಕು ಮಟ್ಟದ ತೋಟಗಾರಿಕೆ ಕಚೇರಿಗಳಲ್ಲಿ, ಗ್ರಾಮ ಪಂಚಾಯಿತಿ ಹಾಗೂ ರೈತ ಸಂಪರ್ಕ ಕೇಂದ್ರಗಳ ನಾಮಫಲಕಗಳಲ್ಲಿ ಪ್ರದರ್ಶಿಸಲಾಗುವುದು.
ಈ ಸಮೀಕ್ಷೆ ಪಟ್ಟಿಯಲ್ಲಿ ಹೆಸರು ಇರುವ ರೈತರು ಅರ್ಜಿ ಹಾಗೂ ದಾಖಲಾತಿಗಳನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಬೆಳೆ ಸಮೀಕ್ಷೆ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಇತರೆ ರೈತರು ಪ್ರಾಮಾಣಿಕವಾಗಿ ಹೂ ಬೆಳೆದಿದ್ದಲ್ಲಿ ಸಂಬಂಧಪಟ್ಟ ಆಯಾ ತಾಲೂಕಿನ ತೋಟಗಾರಿಕೆ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳಾದ ಪಹಣಿ ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಪಾಸ್‍ಬುಕ್ ಪ್ರತಿ, ಬೆಳೆಯ ಸ್ವಯಂ ದೃಢೀಕರಣದೊಂದಿಗೆ 2020ರ ಮೇ 28 ರೊಳಗಾಗಿ ಆಯಾ ತಾಲೂಕುಗಳ ತೋಟಗಾರಿಕೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು.
2020ರ ಮಾರ್ಚ್ 24 ರ ನಂತರ ನಾಟಿ ಮಾಡಿರುವ ಹೂ ಬೆಳೆಗಾರರಿಗೆ ಈ ಯೋಜನೆಯಡಿ ಪರಿಹಾರಕ್ಕೆ ಪರಿಗಣಿಸಲು ಅವಕಾಶವಿರುವುದಿಲ್ಲ. ಈ  ರೈತರು ತಾಕುಗಳನ್ನು ನಿಯಮಾನುಸಾರ ಹೋಬಳಿ ಮಟ್ಟದ ಜಂಟಿ ಸಮೀಕ್ಷಾ ಸಮಿತಿಯೊಂದಿಗೆ ತಾಕು ಪರಿಶೀಲಿಸಿದ ನಂತರ ಪರಿಹಾರಧನ ವಿತರಿಸಲು  ಕ್ರಮವಹಿಸಲಾಗುವುದು.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ತಾಲೂಕುಗಳಲ್ಲಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದೆ.