ನಿತ್ಯ ಜೀವನಕ್ಕೆ ವಿಧವಿಧವಾದ ಪೌಷ್ಟಿಕ ತರಕಾರಿಗಳನ್ನು ಕಡಿಮೆ ಜಾಗದಲ್ಲಿ ಬೆಳೆಯುವ ತರಕಾರಿ ತೋಟವನ್ನು ಪೌಷ್ಟಿಕ ಕೈತೋಟ ಎನ್ನಲಾಗುತ್ತದೆ.
ಪೌಷ್ಟಿಕ ಕೈತೋಟವನ್ನು ಬೆಳೆಸುವುದರಿಂದ ರುಚಿ ಶುಚಿಯಾದ ಹಣ್ಣು, ತರಕಾರಿ ಸಿಗುವುದರೊಂದಿಗೆ ಮನುಷ್ಯನ ದೇಹ ರಕ್ಷಣೆಗೆ
ಬೇಕಾಗುವ ಪೋಷಕಾಂಶಗಳಾದ ಖನಿಜ ಮತ್ತು ಜೀವ ಸತ್ವಗಳು ಸಹ ಸಿಗಲಿವೆ.
ನಿತ್ಯ ಜೀವನಕ್ಕೆ ವಿಧವಿಧವಾದ ಪೌಷ್ಟಿಕ ತರಕಾರಿಗಳನ್ನು ಕಡಿಮೆ ಜಾಗದಲ್ಲಿ ಬೆಳೆಯುವ ತರಕಾರಿ ತೋಟವನ್ನು ಪೌಷ್ಟಿಕ ಕೈತೋಟ ಎನ್ನಲಾಗುತ್ತದೆ.
ಅಲ್ಲದೇ ಪೌಷ್ಟಿಕ ಕೈತೋಟವನ್ನು ಕಿಚನ್ ಗಾರ್ಡನ್, ನ್ಯೂಟ್ರಿಶನ್ ಗಾರ್ಡನ್, ವೆಜಿಟೇಬಲ್ ಗಾರ್ಡನ್ (ತರಕಾರಿ ತೋಟ).
ಬ್ಯಾಕಯಾರ್ಡ ಗಾರ್ಡನ್ (ಹಿತ್ತಲ ತೋಟ) ಎಂದು ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ.
ಪೌಷ್ಟಿಕ ಕೈತೋಟವನ್ನು ಬೆಳೆಸುವುದರಿಂದ ಕೇವಲ ರುಚಿ ಶುಚಿಯಾದ ಹಣ್ಣು, ತರಕಾರಿ ದೊರೆಯುವದಷ್ಟೇ ಅಲ್ಲ ತರಕಾರಿಗಳಲ್ಲಿ
ಮನುಷ್ಯನ ದೇಹ ರಕ್ಷಣೆಗೆ ಬೇಕಾಗುವ ಪೋಷಕಾಂಶಗಳಾದ ಖನಿಜ ಮತ್ತು ಜೀವ ಸತ್ವಗಳು ಹೇರಳವಾಗಿದ್ದು, ಅವುಗಳ ಲಾಭವೂ ಸಿಗಲಿದೆ.
ತರಕಾರಿಗಳು ದೈನಂದಿನ ಜೀವನದಲ್ಲಿ ಅತೀ ಮುಖ್ಯಸ್ಥಾನವನ್ನು ಪಡೆದಿವೆ.
ಅದು ವಿಶೇಷವಾಗಿ ಶಾಖಾಹಾರಿಗಳ ಆಹಾರದಲ್ಲಿ ದಿನವೂ ಸೇವಿಸಬೇಕು.
ಪೌಷ್ಟಿಕ ಕೈತೋಟದ ಮುಖ್ಯ ಉದ್ದೇಶ ಆರ್ಥಿಕ ಲಾಭವಲ್ಲದೇ ಕುಟುಂಬದ ಪೋಷಣೆಯನ್ನು ಹೆಚ್ಚುಸುವುದು ಆಗಿರುತ್ತದೆ.
ಈ ಮೂಲಕ ರಾಸಾಯನಿಕವನ್ನು ಹಾಕದ ಶುದ್ಧ ತರಕಾರಿಗಳನ್ನು ಮನೆ ಮಂದಿಗೆ ಉಣಬಡಿಸುವುದಾಗಿದೆ.
ಪೌಷ್ಟಿಕ ಕೈತೋಟದ ಉಪಯೋಗಗಳು
* ಕುಟುಂಬಕ್ಕೆ ಬೇಕಾಗುವ ಕಡಿಮೆ ಅಥವಾ ಯಾವುದೇ ವೆಚ್ಚವಿಲ್ಲದ ತಾಜಾ ಮತ್ತು ಪೌಷ್ಟಿಕ ತರಕಾರಿಗಳ ಪೂರೈಕೆ
* ವರ್ಷಪೂರ್ತಿ ಕೀಟನಾಶಕ ಮತ್ತು ರಾಸಾಯನಿಕ ಮುಕ್ತ ತರಕಾರಿಗಳ ಲಭ್ಯತೆ
* ಮನೆಯಲ್ಲಿ ತೋಟದ ಹೆಚ್ಚುವರಿ ತರಕಾರಿಗಳ ಮಾರಾಟದ ಮೂಲಕ ಆದಾಯವನ್ನು ಗಳಿಸಬಹುದು
* ಮನೆಯ ಸುತ್ತಮುತ್ತಲಿನ ಖಾಲಿ ಜಾಗವನ್ನು ಉಪಯೋಗ ಮಾಡಿಕೊಳ್ಳಬಹುದು
* ವಿರಾಮದ ವೇಳೆಯನ್ನು ಸದುಪಯೋಗ ಮಾಡಿಕೊಳ್ಳಬಹುದು
* ಒತ್ತಡ ನಿರ್ವಣೆ ಮಾಡಲು ಕೈತೋಟದಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ ಚಟುವಟಿಕೆಯಾಗಿದೆ
* ಮಕ್ಕಳು ಮತ್ತು ವಯಸ್ಕರಲ್ಲಿ ಪೋಷಣೆಯ, ಹವಾಮಾನ, ಪರಿಸರ, ಸಸ್ಯಗಳು, ಕೀಟಗಳು, ನೀರಿನ ಬಳಕೆ, ತ್ಯಾಜ್ಯ ನಿರ್ವಹಣೆಯ ಬಗ್ಗೆ ತಿಳುವಳಿಕೆ ನೀಡಲು ಸಹಾಯವಾಗುವುದು
* ಮಕ್ಕಳು ಕೈತೋಟ ನಿರ್ವಹಣೆಯಲ್ಲಿ ತೊಡಗಿಕೊಳ್ಳುವುದರಿಂದ ವಿಜ್ಞಾನದ ವಿಷಯದಲ್ಲಿ ಆಸಕ್ತಿ ಹೆಚ್ಚಾಗುವುದಲ್ಲದೆ ಮನಸ್ಸು ಸಮ ಸ್ಥಿತಿಯಲ್ಲಿರುತ್ತದೆ
* ವಿಶೇಷವಾಗಿ ಮಹಿಳೆಯರಿಗೆ ಕೈತೋಟ ಸಂರಕ್ಷಿಸುವ ಮೂಲಕ ಹೆಚ್ಚಾದ ತರಕಾರಿಗಳನ್ನು ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆಯಲ್ಲಿ
ಬಳಸಿ ಗೃಹ ಉದ್ಯಮ ಕೈಗೊಳ್ಳಲು ಅನುಕೂಲವಾಗುತ್ತದೆ
ಉದಾ: ನಿಂಬೆ- ಉಪ್ಪಿನಕಾಯಿ, ಸ್ಕ್ವಾಶ್ ಕರಿಬೇವು- ಚಟ್ನಿ ಪುಡಿ, ಮಸಾಲೆ ಪುಡಿಗಳು, ಕರಿಬೇವಿನ ಪುಡಿ ಇತ್ಯಾದಿ
ಪೌಷ್ಟಿಕ ಕೈತೋಟ ಮಾಡುವ ಸಂದರ್ಭದಲ್ಲಿ ಪರಿಗಣಿಸಬೇಕಾದ ಕ್ರಮಗಳು
- ಪೌಷ್ಟಿಕ ಕೈತೋಟದ ಸ್ಥಳ ಆಯ್ಕೆ
ಕೈತೋಟದ ಸ್ಥಳ ಆಯ್ಕೆ ಮಾಡುವಾಗ ಈ ಎರಡು ಅಂಶಗಳನ್ನು ಗಮನಿಸಬೇಕು
* ಪ್ರತಿದಿನ ಕೈತೋಟಕ್ಕೆ ಸೂರ್ಯನ ಬೆಳಕು ಬೀಳುವಂತಿರಬೇಕು
- ಪೌಷ್ಟಿಕ ಕೈತೋಟದ ವಿನ್ಯಾಸ ಮತ್ತು ಗಾತ್ರ
ಸಾಮಾನ್ಯವಾಗಿ ಆಯತಾಕಾರದ ವಿನ್ಯಾಸವು ಕೈತೋಟಕ್ಕೆ ಸೂಕ್ತವಾಗಿರುವುದು. 5-6 ಜನರಿರುವ ಕುಟುಂಬಕ್ಕೆ ಪ್ರತಿನಿತ್ಯ 700 ಗ್ರಾಂ ನಿಂದ 800 ಗ್ರಾಂ ನಷ್ಟು
ತರಕಾರಿಗಳನ್ನು ಒದಗಿಸಲು 25 ಅಡಿ ಉದ್ದ 4 ಅಡಿ ಅಗಲ ದಷ್ಟು ಸ್ಥಳದ ಆಯ್ಕೆ ಮಾಡಬೇಕು.
ಕುಟುಂಬದ ಸದಸ್ಯರಿಗೆ ಅನುಗುಣವಾಗಿ ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಕೈತೋಟವನ್ನು ಬೆಳೆಸಬಹುದು.
- ಸೂರ್ಯನ ಬೆಳೆಕು
ಮನೆಯ ಆವರಣದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಸೂರ್ಯನ ಬೆಳಕು ಬೀಳುವಂತಹ ಸ್ಥಳವನ್ನು ಆಯ್ಕೆಮಾಡಿಕೊಳ್ಳಬೇಕು.
ಬೆಳಕಿನ ಅತ್ಯುತ್ತಮ ಮತ್ತು ಅತ್ಯಂತ ಸಮರ್ಥ ಮೂಲ ಸೂರ್ಯ. ಸೂರ್ಯನ ಬೆಳಕು ತರಕಾರಿ ಬೆಳೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೂರ್ಯನ ಬೆಳಕು ಸಸ್ಯಗಳಿಗೆ ಶಕ್ತಿಯ ಮೂಲವಾಗಿರುವುದರಿಂದ ಪ್ರತಿದಿನ ಕನಿಷ್ಟ ಆರು ಗಂಟೆಗಳ ಕಾಲ ಸಸ್ಯಗಳಿಗೆ ಸೂರ್ಯನ ಬೆಳಕು
ಸಿಗುವ ಸ್ಥಳವನ್ನು ಆಯ್ಕೆ ಮಾಡಬೇಕು. ತರಕಾರಿಗಳ ಎತ್ತರಕ್ಕನುಗುಣವಾಗಿ ಪಶ್ಚಿಮದಿಂದ ಪೂರ್ವಕ್ಕೆ ಗಿಡಗಳನ್ನು ನೆಡಬೇಕು
* ನೀರಿನ ಸೌಲಭ್ಯ ಇರುವ ಕಡೆಗೆ ಅಥವಾ ಅಡುಗೆ ಮನೆಯ ನೀರು ಸುಲಭವಾಗಿ ಕೈತೋಟದತ್ತ ಹಾಯುವಂತಿರಬೇಕು
- ಮಣ್ಣು ಮತ್ತು ನೀರು
ತರಕಾರಿ ತೋಟ ಮಾಡಲು ಆಯ್ಕೆ ಮಾಡಿದ ಜಾಗದ ಮಣ್ಣನ್ನು ಮೊದಲು ಹದಗೊಳಿಸಬೇಕು.
ಅಲ್ಲಿರುವ ಕಲ್ಲುಗಳು ಮತ್ತು ಬಿರುಕು ಬಿಟ್ಟಿರುವ ಜಾಗವನ್ನು ಸರಿಪಡಿಸಬೇಕು.
ಸಾವಯವ ಗೊಬ್ಬರ ಪೋಷಕಾಂಶಗಳನ್ನು ಸೇರಿಸುವ ಮೂಲಕ ಮಣ್ಣನ್ನು ಸುಧಾರಿಸಬಹುದು.
ಇದು ಮಣ್ಣಿಗೆ ಸರಿಯಾದ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಉತ್ತಮಗೊಳಿಸುತ್ತದೆ.
ಏಕೆಂದರೆ ನೀರು ಸಸ್ಯಗಳಿಗೆ ಅತ್ಯಗತ್ಯವಾಗಿರುತ್ತದೆ.
ಹಣ್ಣುಗಳು ಮತ್ತು ತರಕಾರಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ.
ಆದ್ದರಿಂದ, ಸಸ್ಯಗಳಿಗೆ ಬೆಳೆಯಲು ಸಾಕಷ್ಟು ನೀರಿನ ಅವಶ್ಯಕತೆ ಇರುತ್ತದೆ.
ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಸಲ ಕೈತೋಟಕ್ಕೆ ನೀರು ಹಾಕಲು ಉತ್ತಮ ಸಮಯ ಮಧ್ಯಾಹ್ನ ಹಾಕಿದರೆ
ಸೂರ್ಯನ ತಾಪಮಾನಕ್ಕೆ ನೀರು ಆವಿಯಾಗುತ್ತದೆ.
- ಪೌಷ್ಟಿಕ ಕೈತೋಟದಲ್ಲಿನ ಸಸ್ಯಗಳ ಆಯ್ಕೆ
ಕೈತೋಟ ಮಾಡುವ ಮೊದಲು ನೀವು ಯಾವ ತರಕಾರಿ ಮತ್ತು ಹಣ್ಣಗಳನ್ನು ಆಯ್ಕೆ ಮಾಡುತ್ತೀರಿ ಎಂದು ಮೊದಲು ನಿರ್ಧರಿಸಬೇಕು.
ಮಣ್ಣಿನ ಗುಣ ಹವಾಮಾನ ಮತ್ತು ಸಸ್ಯಕ್ಕೆ ಬೇಕಾಗಿರುವ ದೈನಂದಿನ ಅಗತ್ಯತೆಗಳು ಗಮನಿಸಿ ಸಸ್ಯಗಳನ್ನು ಆಯ್ಕೆ ಮಾಡಬೇಕು.
ಸಾಮಾನ್ಯವಾಗಿ ಹಿಂಗಾರು, ಮುಂಗಾರು ಮತ್ತು ಬೇಸಿಗೆಯಲ್ಲಿ ನೀರಿನ ಲಭ್ಯತೆ ಇದ್ದರೆ ವರ್ಷವಿಡೀ ಮನೆಯಲ್ಲಿಯೇ
ತರಕಾರಿಗಳನ್ನು ಬೆಳೆಯಬಹುದು. ಆದರೆ, ತರಕಾರಿಗಳನ್ನು ಋತುಗಳಿಗನುಸಾರವಾಗಿ ಆಯ್ಕೆ ಮಾಡುವುದು ಸೂಕ್ತವಾಗಿರುವುದು.
ಇದರಿಂದ ಮಣ್ಣು ಫಲವತ್ತಾಗಿರುತ್ತದೆ ಮತ್ತು ನಿಮಗೆ ತರಕಾರಿ ಮತ್ತು ಹಣ್ಣುಗಳಲ್ಲಿ ವೈವಿದ್ಯತೆ ಸಿಗುತ್ತದೆ.
ಋತುಗಳಿಗನುಸಾರವಾಗಿ ಸೂಕ್ತವಾಗಿರುವ ಸಸ್ಯಗಳು
ಮುಂಗಾರು ಋತುವಿನ ತರಕಾರಿ ಸಸ್ಯಗಳು (ಜೂನ್ ರಿಂದ ಸಪ್ಟೆಂಬರ್) |
ಹಿಂಗಾರು ಋತುವಿನ ತರಕಾರಿ ಸಸ್ಯಗಳು (ಅಕ್ಟೋಬರ್ ರಿಂದ ಜನವರಿ) |
ಬೇಸಿಗೆ ಋತುವಿನ ತರಕಾರಿ ಸಸ್ಯಗಳು (ಫೆಬ್ರವರಿ ರಿಂದ ಜೂನ್ ) |
ಬದನೆ |
ಎಲೆಕೋಸು |
ಬದನೆಕಾಯಿ |
ಮೆಣಸಿನಕಾಯಿ |
ಹೂಕೋಸು |
ಮೆಣಸಿನಕಾಯಿ |
ಟೊಮೆಟೋ |
ಮೂಲಂಗಿ |
ಟೊಮೆಟೋ |
ಬೆಂಡಿಕಾಯಿ |
ಗಜ್ಜರಿ |
ಬೆಂಡಿಕಾಯಿ |
ಚವಳಿಕಾಯಿ |
ಮೆಂತೆ |
ಚವಳಿಕಾಯಿ |
ಹುರಳಿ(ಪ್ರೇಂಚ್ ಬೀನ್ಸ್) |
ಕೊತ್ತಂಬರಿ |
ಹಾಗಲಕಾಯಿ |
ಹಾಗಲಕಾಯಿ |
ಟೊಮೆಟೋ |
ಸೋರೆಕಾಯಿ |
ಸೋರೆಕಾಯಿ |
ಈರುಳ್ಳಿ |
ಹೀರೆಕಾಯಿ |
ಹೀರೆಕಾಯಿ |
ಆಲೂಗಡ್ಡೆ |
ಸೌತೆಕಾಯಿ |
ತುಪ್ಪದ ಹೀರೆಕಾಯಿ |
ಬೆಳ್ಳುಳ್ಳಿ |
ಪಡವಲಕಾಯಿ |
ಸೌತೆಕಾಯಿ |
ಚುಕ್ಕೆಸೊಪ್ಪು |
ಕೊತ್ತಂಬರಿ |
ಈರುಳ್ಳಿ |
ಮೆಣಸಿನಕಾಯಿ |
ತಿಂಗಳಅವರೆ |
ಕೊತ್ತಂಬರಿ |
ಬದನೆಕಾಯಿ |
ತೊಂಡೆಕಾಯಿ |
ಹುರುಳಿಕಾಯಿ |
ಬಟಾಣೆ |
ಕುಂಬಳಕಾಯಿ |
ತೊಂಡೆಕಾಯಿ |
ಅವರೆಕಾಯಿ |
ರಾಜಗಿರಿ |
ಕುಂಬಳಕಾಯಿ |
ಬೀಟರೂಟ್ |
ತುಪ್ಪದ ಹಿರೇಕಾಯಿ |
- ಪೌಷ್ಟಿಕ ಕೈತೋಟದಲ್ಲಿ ಸಸ್ಯಗಳನ್ನು ನೆಡುವುದು
ಸಾಮಾನ್ಯವಾಗಿ ತೋಟದಲ್ಲಿ ಬೆಳೆಯುವ ತರಕಾರಿಗಳನ್ನು ಎರಡು ರೀತಿಯಲ್ಲಿ ಬೆಳೆಸಲಾಗುವುದು.
ಬಿತ್ತನೆ ಬೀಜಗಳ ಮುಖಾಂತರ: ಬಿತ್ತನೆ ಬೀಜಗಳ ಮುಖಾಂತರ ಕೆಲವು ತರಕಾರಿಗಳು ಉದಾಹರಣೆಗೆ ಮೂಲಂಗಿ, ಗಜ್ಜರಿ, ಟರ್ನಿಪ್,
ಸೋರೆ, ಕುಂಬಳಕಾಯಿ, ತೊಂಡೆಕಾಯಿ, ಬೆಂಡಿಕಾಯಿ, ಹಾಗಲಕಾಯಿ ಬೀಜಗಳನ್ನು ನೇರವಾಗಿ ಮಣ್ಣಿನಲ್ಲಿ ನೆಡಬಹದು.
ತಪ್ಪಲು ಪಲ್ಯಗಳಾದ ಮೆಂತೆ, ಪಾಲಕ, ಕೊತ್ತಂಬರಿ, ಸಬ್ಬಸಗಿ, ರಾಜಗಿರಿ ಇಂತಹ ತರಕಾರಿಗಳನ್ನು 2*1 ಅಡಿ
ಮಣ್ಣಿನ ಮಡಿ ಮಾಡಿ ಅದರ ಮೇಲೆ ನೇರವಾಗಿ ನೆಡಬೇಕು.
ಸಸಿಗಳನ್ನು ನೆಡುವ ಮುಖಾಂತರ. ಟೊಮೆಟೋ, ಹೂಕೋಸು, ಮೆಣಸಿನಕಾಯಿ, ಬದನೆಕಾಯಿ, ಈರುಳ್ಳಿ
ಇತ್ಯಾದಿ ತರಕಾರಿಗಳನ್ನು ನೇರ ಬೀಜ ಬಿತ್ತನೆ ಬದಲಿಗೆ ಸಸಿಗಳನ್ನು ನೆಡುವ ಮುಖಾಂತರ ಬೆಳೆಸಬಹುದು.
ಸ್ಥಳದ ಅವಕಾಶವಿದ್ದಲ್ಲಿ ಕೆಲವು ಹಣ್ಣಿನ ಗಿಡಗಳಾದ ನಿಂಬೆ, ಪೇರಲ, ಚಿಕ್ಕು, ನೆಲ್ಲಿ ಇತ್ಯಾದಿಗಳನ್ನು ಬದುವಿನಲ್ಲಿ ಬೆಳೆಸಬಹುದು.
ರೋಗ ನಿರೋಧಕತೆ ಹೆಚ್ಚಿಸಲು ಕೈತೋಟದಲ್ಲಿ ಬೆಳೆಸಬೇಕಾದ ಔಷಧೀಯ ಸಸ್ಯಗಳು
ಕೈತೋಟದಿಂದ ತಾಜಾ ತರಕಾರಿ ಮತ್ತು ಹಣ್ಣುಗಳ ಜೊತೆಗೆ ಆರೋಗ್ಯ ರಕ್ಷಣೆ ಹಾಗೂ ರೋಗ ನಿರೋಧಕತೆಯನ್ನು ಹೆಚ್ಚಿಸುವ ಸುಲಭವಾಗಿ
ಬೆಳೆಯಬಹುದಾದ ಔಷಧಿ ಸಸ್ಯಗಳನ್ನು ಬೆಳೆಸಬಹುದು.
ಉದಾ: ತುಳಸಿ, ಪುದಿನಾ, ದೊಡ್ಡಪತ್ರೆ, ಕೆಸುವಿನ ಎಲೆ(ಶ್ಯಾವಿ ಪಲ್ಯ), ಅಮೃತ ಬಳ್ಳಿ, ನಿಂಬೆ ಹುಲ್ಲು ಇತ್ಯಾದಿ
“ಆರೋಗ್ಯವೇ ಭಾಗ್ಯ” ಎನ್ನುವ ಉಕ್ತಿ ಪ್ರಸ್ತುತ ಪರಿಸ್ಥಿಯಲ್ಲಿ ತುಂಬಾ ಸೂಕ್ತವಾಗಿದೆ.
ಮನೆಯ ಸುತ್ತ ಇರುವ ಗಿಡಗಳು ಉಸಿರಾಡಲು ಸ್ವಚ್ಛ ಗಾಳಿಯನ್ನು ನೀಡಿ ಪರಿಸರ ಸಂರಕ್ಷಣೆಯನ್ನು ಮಾಡುತ್ತವೆ.
ಆರೋಗ್ಯ ರಕ್ಷಣೆಗೆಂದು ಹೆಚ್ಚು ಖರ್ಚು ಮಾಡದೆ ಲಭ್ಯವಿರುವ ಜಾಗದಲ್ಲಿ ಸಾವಯವ ಪದ್ಧತಿಯಲ್ಲಿ
ತಾಜಾ ಹಣ್ಣು ಮತ್ತು ತರಕಾರಿಗಳನ್ನು ಬೆಳೆದು ಕುಟುಂಬದ ಆರೋಗ್ಯ ನಿರ್ವಹಣೆ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ.
ವಯೋವೃದ್ಧರಿಗೆ ಒತ್ತಡ ನಿರ್ವಹಣೆಯ ವಿಧಾನವಾಗಿದೆ. ಇಷ್ಟೆಲ್ಲಾದರ ಜೊತೆಗೆ ಆರೋಗ್ಯ ಮತ್ತು ಸಂತೋಷದಿಂದಿರಲು ಕೂಡ ದಾರಿಯಾಗಿದೆ.
ಲೇಖನ ಮಾಹಿತಿ: ಅರವಿಂದ ರಾಥೋಡ್, ವಿಷಯ ತಜ್ಞರು, ತೋಟಗಾರಿಕೆ ಮತ್ತು ಡಾ. ವಾಣಿಶ್ರೀ. ಎಸ್, ಸಹಾಯಕ ಪ್ರಾಧ್ಯಾಪಕರು(ಗೃ.ವಿ), ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಲಿಂಗಸುಗೂರು.