ರೈತರಿಗೆ ಸಂತಸದ ಸುದ್ದಿ. ರೈತರ ಆದಾಯ ದುಪ್ಪಟ್ಟು ಆಗಬೇಕೆಂದು ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯೋಜನೆಗಳನ್ನು ತಂದಿವೆ. ರೈತರು ಸಹ ಸರ್ಕಾರದ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಇನ್ನೂ ಹೆಚ್ಚಿನ ರೈತರು ಸ್ವಾವಲಂಬಿಯಾಗಿ ಜೀವನ ಸಾಗಿಸಬೇಕೆಂದು ಬೀಜಗ್ರಾಮ ಯೋಜನೆಯನ್ನು ಜಾರಿಗೆ ತಂದಿದೆ.
ಹೌದು, ಬೀಜೋತ್ಪಾದನೆಯಲ್ಲಿ ರೈತರು ಸ್ವಾವಲಂಬನೆ ಜೀವನ ಸಾಗಿಸಲು ಕೇಂದ್ರ ಸರ್ಕಾರವು ಬೀಜಗ್ರಾಮ ಯೋಜನೆಯನ್ನು ಹತ್ತು ವರ್ಷಗಳ ಹಿಂದೆ ಆರಂಭಿಸಿದೆ. ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ರೈತರಿಗೆ ಕಡಿಮೆ ದರದಲ್ಲಿ ಮೂಲ ಬಿತ್ತನೆ ಬೀಜಗಳನ್ನು ರೈತರಿಗೆ ನೀಡಲಾಗುವುದು. ಈ ಬೀಜಗಳನ್ನು ಬಳಕೆ ಮಾಡಿ ರೈತರು ಉತ್ತಮ ಬೆಳೆ ಬೆಳೆದು ಇತರ ರೈತರಿಗೆ ಬೀಜ ನೀಡುವ ಯೋಜನೆ ಇದಾಗಿದೆ..
ಬೀಜಗ್ರಾಮ ಯೋಜನೆ ಎಂದರೇನು? ಇದರಿಂದ ರೈತರಿಗಾಗುವ ಉಪಯೋಗ? ಹಾಗೂ ಈ ಯೋಜನೆಯಡಿ ಸೌಲಭ್ಯ ಹೇಗೆ ಪಡೆದುಕೊಳ್ಳಬೇಕೆಂಬುದರ ಕುರಿತು ರೈತರಲ್ಲಿ ಮಾಹಿತಿಯ ಕೊರತೆಯಿದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ಬೀಜ ನಿಗಮ ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಅರಿವು ಮೂಡಿಸಿದರೆ ಇನ್ನೂ ಹೆಚ್ಚಿನ ರೈತರು ಬೀಜ ಗ್ರಾಮ ಯೋಜನೆಯಡಿಯಲ್ಲಿ ಬೀಜ ಉತ್ಪಾದನೆ ಮಾಡಲು ಮುಂದಾಗುತ್ತಾರೆ.
ಬೀಜ ಗ್ರಾಮ ಕಾರ್ಯಕ್ರಮವು ಕೇಂದ್ರ ಸರ್ಕಾರದ ಯೋಜನೆ, ಅಭಿವೃದ್ಧಿ ಮತ್ತು ಗುಣಮಟ್ಟದ ಬೀಜದ ಉತ್ಪಾದನೆ ಮತ್ತು ವಿತರಣೆಗೆ ಬೆಂಬಲ ನೀಡಲು ಹಾಗೂ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಲು ಆರಂಭವಾದ ಯೋಜನೆಯಾಗಿದೆ.
ಈಗಾಗಲೇ ಗುರುತಿಸಿರುವ ರೈತರಿಗೆ ಸಂಬಂಧಪಟ್ಟ ಅನುಷ್ಠಾನ ಸಂಸ್ಥೆಗಳು ಅಡಿಪಾಯ/ಪ್ರಮಾಣೀಕೃತ ಬೀಜಗಳನ್ನು ಶೇ.50-60 ರಷ್ಟು ದರದಲ್ಲಿ ವಿತರಿಸಲಿವೆ. ಪ್ರತಿ ರೈತನಿಗೆ ಒಂದು ಎಕರೆಗೆ ಬೀತ್ತನೆ ಬೀಜಗಳನ್ನು ಅನುಮತಿ ನೀಡಲಾಗುವುದು. ನಂತರ ಬೀಜಗಳನ್ನು ರಾಜ್ಯ ಬೀಜಗಳ ನಿಗಮ/ ಅಗ್ರಿಕಲ್ಯುಯೇಟ್ ಯೂನಿವರ್ಸಿಟಿಗಳಿಂದ ಅನುಷ್ಠಾನ ಏಜೆನ್ಸಿಗಳು ಖರೀದಿಸುತ್ತವೆ. ಈ ಯೋಜನೆಯಡಿ ರೈತರಿಗೆ 50% ಸಹಾಯಧನ ನೀಡಲಾಗುವುದು..
ಬೀಜ ಗ್ರಾಮ ಯೋಜನೆಯಡಿ ಭತ್ತ, ಗೋಧಿ, ಜೋಳ, ತೊಗರಿ, ಹೆಸರು, ಉದ್ದು, ಶೇಂಗಾ, ಸೂರ್ಯಕಾಂತಿ, ಅಲಸಂಧಿ ಸೇರಿದಂತೆ ಇನ್ನಿತರ ಧಾನ್ಯಗಳ ಬೀಜಗಳನ್ನು ರೈತರು ಉತ್ಪಾದನೆ ಮಾಡಬಹುದು. ಇದರೊಂದಿಗೆ ಸಿರಿಧಾನ್ಯಗಳನ್ನು ಸಹ ಉತ್ಪಾದನೆ ಮಾಡಬಹುದು. ಇದಕ್ಕಾಗಿ ಕೇಂದ್ರ ಸರ್ಕಾರದ ವತಿಯಿಂದ ಬೀಜಗ್ರಾಮ ಯೋಜನೆಯಡಿಯಲ್ಲಿ ಪ್ರೋತ್ಸಾಹ ಧನ ಸಿಗುತ್ತದೆ.
ಬೀಜಗ್ರಾಮ ಯೋಜನೆಯಡಿಯಲ್ಲಿ ರೈತರು ಬೀಜೋತ್ಪಾದನೆ ಮಾಡಲು ಆಸಕ್ತಿವಹಿಸಿದರೆ ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ಬೀಜ ನಿಗಮದಿಂದ ತರಬೇತಿ ನೀಡಲಾಗುವುದು. ಕೃಷಿ ವಿಜ್ಞಾನಿಗಳು ಬೀಜೋತ್ಪಾದನೆ ಮಾಡುತ್ತಿರುವ ರೈತರ ಹೊಲಗಳಿಗೆ ಭೇಟಿ ನೀಡುತ್ತಾರೆ. ಕಾಲಕಾಲಕ್ಕೆ ಅವರಿಗೆ ಮಾರ್ಗದರ್ಶನ ಮಾಡುತ್ತಾರೆ. ಇದರಿಂದ ಇಳುವರಿಯೂ ಹೆಚ್ಚಿಸಲು ಸಹಾಯವಾಗುತ್ತದೆ.
ಬೀಜಗ್ರಾಮ ಯೋಜನೆಯಡಿಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳು
ಕೃಷಿ ವಿಜ್ಞಾನಕೇಂದ್ರ ಹಾಗೂ ಕರ್ನಾಟಕ ಬೀಜ ನಿಗಮದಿಂದ ರೈತರಿಗೆ ಉಚಿತ ತರಬೇತಿ ನೀಡಲಾಗುವುದು. ರೈತರಿಗೆ ಶೇ. 60 ರಷ್ಟು ರಿಯಾಯಿತಿ ದರದಲ್ಲಿ ಬೀಜ ನೀಡಲಾಗುವುದು. ಬೆಳೆಗಳಿಗೆ ರೋಗ, ಕೀಟಬಾಧೆ ತಗುಲಿದರೆ ಕೃಷಿ ತಜ್ಞರಿಂದ ಸಲಹೆ ನೀಡಾಲಾಗುವುದು. ಕೃಷಿ ತಜ್ಞರು ಕಾಲಕಾಲಕ್ಕೆ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವರು. ಬೀಜಗಳ ಗುಣಮಟ್ಟದ ಬಗ್ಗೆ ತಪಾಸಣೆ ನಡೆಸುವರು. ರೈತರಿಂದ ಬೀಜಗಳನ್ನು ಖರೀದಿ ಮಾಡುವರು. ರೈತರು ಬೀಜ ಗ್ರಾಮ ಯೋಜನೆಯಡಿ ಹೆಚ್ಚಿನ ಲಾಭ ಪಡೆದು ಇನ್ನೂ ಆಸಕ್ತಿರುವ ರೈತರಿಗೆ ಈ ಮಾಹಿತಿಯನ್ನು ತಿಳಿಸಿದರೆ ಯೋಜನೆಗಳು ರೈತರಿಗೆ ಉಪಯೋಗವಾಗಲಿವೆ