ಅಂಚೆ ಇಲಾಖೆಯು ವಿದ್ಯಾರ್ಥಿಗಳಲ್ಲಿ ಅಂಚೆಚೀಟಿಗಳ ಸಂಗ್ರಹಣೆಯ ಬಗ್ಗೆ ಆಸಕ್ತಿಯನ್ನು ಹುಟ್ಟುಹಾಕಲು 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ, ದೀನ್ ದಯಾಳ್ ಸ್ಪರ್ಶ್ ಯೋಜನೆ ಎಂಬ ಅಂಚೆಚೀಟಿ ಸಂಗ್ರಹ ವಿದ್ಯಾರ್ಥಿವೇತನ ಯೋಜನೆಯನ್ನು ಪ್ರಾರಂಭಿಸಿದೆ.
ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿರುವ ಮತ್ತು ಅಂಚೆಚೀಟಿ ಸಂಗ್ರಹಣೆಯನ್ನು ಹವ್ಯಾಸವಾಗಿ ಮುಂದುವರಿಸಲು ಬಯಸುವ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ.
ಕರ್ನಾಟಕ ವೃತ್ತ ಮಟ್ಟದಲ್ಲಿ ನಡೆಸಲಾಗುವ ಅಂಚೆಚೀಟಿಗಳ ರಸಪ್ರಶ್ನೆ ಮತ್ತು ಅಂಚೆಚೀಟಿ ಸಂಗ್ರಹ ಯೋಜನೆ ಸ್ಪರ್ಧೆಯ ಆಧಾರದ ಮೇಲೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ವಿದ್ಯಾರ್ಥಿವೇತನದ ಮೊತ್ತವು ವಾರ್ಷಿಕ 6000 ರೂ.ಗಳಾಗಿದ್ದು, ಪ್ರತಿ ತಿಂಗಳು 500 ರೂ.ಗಳಂತೆ ನೀಡಲಾಗುವುದು..
ಅರ್ಹತೆಯ ಷರತ್ತುಗಳು
ಎ) ಅಭ್ಯರ್ಥಿಯು ಕರ್ನಾಟಕದ ಮಾನ್ಯತೆ ಪಡೆದ ಶಾಲೆಯ ವಿದ್ಯಾರ್ಥಿಯಾಗಿರಬೇಕು (6 ರಿಂದ 9 ನೇ ತರಗತಿ)
ಬಿ) ಸಂಬಂಧಪಟ್ಟ ಶಾಲೆಯಲ್ಲಿ ಅಂಚೆಚೀಟಿ ಸಂಗ್ರಹ ಕ್ಲಬ್ ಇರಬೇಕು ಮತ್ತು ಅಭ್ಯರ್ಥಿಯು ಕ್ಲಬ್‌ನ ಸದಸ್ಯರಾಗಿರಬೇಕು.
ಸಿ) ಶಾಲೆಯು ಅಂಚೆಚೀಟಿಗಳ ಸಂಗ್ರಹಣೆ ಕ್ಲಬ್ ಅನ್ನು ಸ್ಥಾಪಿಸದಿದ್ದಲ್ಲಿ ತನ್ನದೇ ಆದ ಅಂಚೆಚೀಟಿಗಳ ಸಂಗ್ರಹ ಖಾತೆಯನ್ನು ಹೊಂದಿರುವ ವಿದ್ಯಾರ್ಥಿಯನ್ನು ಸಹ ಪರಿಗಣಿಸಲಾಗುವುದು.
ಡಿ) ಅಭ್ಯರ್ಥಿಯು ಉತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿರಬೇಕು. ಸ್ಕಾಲರ್‌ಶಿಪ್ ಆಯ್ಕೆಯ ಸಮಯದಲ್ಲಿ ಅಭ್ಯರ್ಥಿಯು 2023 ರಲ್ಲಿನ ಇತ್ತೀಚಿನ ಅಂತಿಮ ಪರೀಕ್ಷೆಯಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಅಥವಾ ಸಮಾನವಾದ ಗ್ರೇಡ್/ಗ್ರೇಡ್ ಪಾಯಿಂಟ್‌ಗಳನ್ನು ಗಳಿಸಿರಬೇಕು. (ಅಂದರೆ 6,7,8 ಮತ್ತು 9 ರಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕ್ರಮವಾಗಿ 5,6,7,8 ಅಂತಿಮ ಪರೀಕ್ಷೆಗಳು) ಅರ್ಜಿಯೊಂದಿಗೆ ಶಾಲಾ ಆಡಳಿತವು ನೀಡಿದ ಪ್ರಗತಿ ವರದಿ/ಅಂಕಗಳ ಕಾರ್ಡ್/ಪ್ರಮಾಣಪತ್ರದ ಪ್ರತಿಗಳನ್ನು ಲಗತ್ತಿಸಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ.5 ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ ಆಯ್ಕೆ ಪ್ರಕ್ರಿಯೆಯು 2 ಹಂತಗಳನ್ನು ಒಳಗೊಂಡಿರುತ್ತದೆ, (ಮೊದಲ ಹಂತ, ಅಂಚೆಚೀಟಿಗಳ ಕುರಿತ ಲಿಖಿತ ರಸಪ್ರಶ್ನೆ ಮತ್ತು ಎರಡನೇ ಹಂತ, ಅಂಚೆಚೀಟಿಗಳ ಸಂಗ್ರಹ ಯೋಜನೆ)
ಮೊದಲ ಹಂತ ಪ್ರಾದೇಶಿಕ ಮಟ್ಟದಲ್ಲಿ ಅಂಚೆಚೀಟಿಗಳ ಸಂಗ್ರಹದ ಬಗ್ಗೆ ಲಿಖಿತ ರಸಪ್ರಶ್ನೆಯನ್ನು ಸೆಪ್ಟೆಂಬರ್ 30, 2023 ರಂದು ತಮ್ಮ ವಿಭಾಗಗಳಲ್ಲಿ ಅಂಚೆ ಇಲಾಖೆಯ ಅಧಿಕಾರಿಗಳು ಎರಡನೇ ಹಂತಕ್ಕೆ ಸ್ಕ್ರೀನಿಂಗ್ ಪರೀಕ್ಷೆಯಾಗಿ ನಡೆಸುತ್ತದೆ. ಮೊದಲ ಹಂತಕ್ಕೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 15ನೇ ಸೆಪ್ಟೆಂಬರ್ 2023. ಲಿಖಿತ ರಸಪ್ರಶ್ನೆ ಪರೀಕ್ಷೆಯ ಸಮಯವು ಒಂದು ಗಂಟೆಯಾಗಿರುತ್ತದೆ. ದಿನಾಂಕಗಳನ್ನು ಬದಲಾಯಿಸುವ ಹಕ್ಕನ್ನು ಅಂಚೆ ಇಲಾಖೆ ಕಾಯ್ದಿರಿಸಿಕೊಂಡಿದೆ. ಲಿಖಿತ ರಸಪ್ರಶ್ನೆಗೆ ಅರ್ಜಿ ಸಲ್ಲಿಕೆ ದಿನಾಂಕದಲ್ಲಿ ಬದಲಾವಣೆ ಇತ್ಯಾದಿಗಳು ಇದ್ದರೆ www.karnatakapost.gov.in ವೆಬ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ನೇರ ಸಂವಹನ ನಡೆಸಲಾಗುವುದಿಲ್ಲ.
ಎರಡನೇ ಹಂತ ಪ್ರಾದೇಶಿಕ ಮಟ್ಟದ ಲಿಖಿತ ರಸಪ್ರಶ್ನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಆಯ್ಕೆಯನ್ನು ಪ್ರಕಟಿಸಿದ 15 ದಿನಗಳಲ್ಲಿ ಅಂತಿಮ ಆಯ್ಕೆಗಾಗಿ ಅಂಚೆಚೀಟಿಗಳ ಸಂಗ್ರಹ ಪ್ರಾಜೆಕ್ಟ್ ಅನ್ನು ಸಲ್ಲಿಸಬೇಕಾಗುತ್ತದೆ. ಅಂತಿಮ ಮೌಲ್ಯಮಾಪನದಲ್ಲಿ ಅಂಚೆಚೀಟಿಗಳ ಸಂಗ್ರಹಣೆಯ ರಸಪ್ರಶ್ನೆಯಲ್ಲಿ ಗಳಿಸಿದ ಅಂಕಗಳಿಗೆ ಯಾವುದೇ ತೂಕವಿರುವುದಿಲ್ಲ ಮತ್ತು ಅಂತಿಮ ಆಯ್ಕೆಯನ್ನು ಅಂಚೆಚೀಟಿ ಸಂಗ್ರಹ ಯೋಜನೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮಾತ್ರ ನಿರ್ಧರಿಸಲಾಗುತ್ತದೆ. ಮೊದಲ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಫಲಿತಾಂಶವನ್ನು ಕರ್ನಾಟಕ ಪೋಸ್ಟಲ್ ಸರ್ಕಲ್ ವೆಬ್‌ಸೈಟ್ www.karnatakapost.gov.in ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
ಅಂಚೆಚೀಟಿ ಸಂಗ್ರಹದ ಲಿಖಿತ ರಸಪ್ರಶ್ನೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಪ್ರಾಜೆಕ್ಟ್ ಅನ್ನು 15 ದಿನಗಳೊಳಗೆ ಒದಗಿಸಿದ ಪಟ್ಟಿಯಿಂದ ಯಾವುದಾದರೂ ಒಂದು ವಿಷಯದ ಕುರಿತು ಸಂಬಂಧಪಟ್ಟ ವಿಭಾಗೀಯ ಕಛೇರಿಗೆ ಸಲ್ಲಿಸಬೇಕು (ಅನುಬಂಧದಲ್ಲಿ ಲಗತ್ತಿಸಿರುವಂತೆ). ಭಾಗವಹಿಸುವವರು ನಿಯಮಿತವಾಗಿ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಮತ್ತು ಕಾಲಕಾಲಕ್ಕೆ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳುವಂತೆ ವಿನಂತಿಸಲಾಗಿದೆ.
ವಿದ್ಯಾರ್ಥಿವೇತನದ ಮೊತ್ತ
ಸ್ಕಾಲರ್‌ಶಿಪ್ ಮೊತ್ತವು ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 500ರಂತೆ ವಾರ್ಷಿಕ 6000 ರೂ.ಆಗಿರಯತ್ತದೆ. ಹಂತ 2 ರಿಂದ ಅಗ್ರ 40 ವಿದ್ಯಾರ್ಥಿಗಳಿಗೆ (6,7.8 ಮತ್ತು 9 ನೇ ತರಗತಿಯಿಂದ ತಲಾ 10 ವಿದ್ಯಾರ್ಥಿಗಳು) ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ