Government Schemes

ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಹಾಯಧನದಲ್ಲಿ ಸಾಲಸೌಲಭ್ಯ ನೀಡಲು ಕೈಮಗ್ಗ ನೇಕಾರರಿಂದ ಅರ್ಜಿ ಆಹ್ವಾನ

13 August, 2021 7:52 PM IST By:

ಪ್ರಸಕ್ತ 2021-22ನೇ ಸಾಲಿಗೆ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ದುಡಿಮೆ ಬಂಡವಾಳ ಸಾಲ ಒದಗಿಸುವ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ಸಾಲ ಪಡೆಯಲು ಉದ್ದೇಶಿಸಿರುವ ಕೈಮಗ್ಗ ನೇಕಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಪ್ರಸಕ್ತ ಸಾಲಿಗೆ ಈ ಯೋಜನೆಯಡಿ ಜಿಲ್ಲೆಯ 10 ಕೈಮಗ್ಗ ನೇಕಾರರಿಗೆ ಬ್ಯಾಂಕ್‌ಗಳಿಂದ ಸಾಲ ಒದಗಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ಶೇ. 6ರ ಬಡ್ಡಿ ದರದಲ್ಲಿ ಕೈಮಗ್ಗ ನೇಕಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲವನ್ನು ಒದಗಿಸಲಾಗುತ್ತದೆ

ಬ್ಯಾಂಕ್‌ನವರು ವಿಧಿಸುವ ಸಾಲದ ಮೇಲಿನ ಗರಿಷ್ಠ ಬಡ್ಡಿ ದರ ಶೇ. 7 ರಂತೆ ಸಾಲ ಮಂಜೂರಾದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರವು ಬಡ್ಡಿ ಸಹಾಯಧನವಾಗಿ ನೀಡಲಿದೆ. ಸಾಲದ ಮೊಬಲಗಿನ ಶೇ. 20 ಗರಿಷ್ಠ 10,000 ರೂಪಾಯಿಗಳನ್ನು ಮಾರ್ಜಿನ್ ಮನಿಯಾಗಿ ಸಾಲದ ಖಾತೆಗೆ ಜಮಾ ಮಾಡಲಾಗುವುದು. ನೇಕಾರರ ಕೈಮಗ್ಗ ನೇಕಾರಿಕೆ ವ್ಯವಹಾರವನ್ನು ಆಧರಿಸಿ ಈ ಯೋಜನೆಯಡಿ ಗರಿಷ್ಠ 5,00,000 ರೂ.ಗಳ ಸಾಲವನ್ನು ಒದಗಿಸಲಾಗುತ್ತದೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಪಡೆಯಲು ಉದ್ದೇಶಿಸಿರುವ ಕೈಮಗ್ಗ ನೇಕಾರರು ಭರ್ತಿ ಮಾಡಿದ ಅರ್ಜಿಯೊಂದಿಗೆ  ಅವಶ್ಯಕ ದಾಖಲಾತಿಗಳನ್ನು ಲಗತ್ತಿಸಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಕಲಬುರಗಿ, ಗುರು ಬಸವ ಕಟ್ಟಡ, ಮನೆ ನಂ.2-910, ಓಕಳಿ ಕ್ಯಾಂಪ್, ಸೌಭಾಗ್ಯ ಕಲ್ಯಾಣ ಮಂಟಪ ಹತ್ತಿರ, ಸೇಡಂ ರಸ್ತೆ, ಕಲಬುರಗಿ-585102 ಕಚೇರಿಗೆ 2021ರ ಆಗಸ್ಟ್ 31 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08472-278629 ಗೆ ಸಂಪರ್ಕಿಸಲು ಕೋರಲಾಗಿದೆ.

ಏನಿದು ‘ಮುದ್ರಾ ಯೋಜನೆ’..?

ಸ್ವಉದ್ಯೋಗ ಮಾಡ್ಬೇಕು ಅಂತ ಆಸಕ್ತಿ ಹೊಂದಿರುವವರಿಗೆ ಈ ಯೋಜನೆ ಅಡಿಯಲ್ಲಿ ಸಾಲ ನೀಡಲಾಗುತ್ತದೆ. ಈ ಯೋಜನೆಯ ಫಲಾನುಭವಿಗಳು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಆರ್ಥಿಕ ಚಟುವಟಿಕೆಗಳಿಗೆ ಅಥವಾ ಕಿರು ಉದ್ಯಮಕ್ಕೆ ಸಾಲ ನೀಡಲಾಗುತ್ತದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ “ಮುದ್ರಾ” ಬ್ಯಾಂಕ್ ಸ್ಥಾಪಿಸಿ, ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಣ್ಣ ಉದ್ಯಮದಾರರಿಗೆ ಸಾಲವನ್ನು ನೀಡುತ್ತಿದೆ. ಈ ಸಾಲ ನೀಡೋ ಯೋಜನೆಯನ್ನು ಮೊತ್ತದ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಿದ್ದಾರೆ.

ಫಲಾನುಭವಿಯ ಅರ್ಹತೆ:

ಪ್ರಧಾನಮಂತ್ರಿ ಮುದ್ರಾಯೋಜನೆಯಡಿ ಉತ್ಪಾದನೆ, ವ್ಯಾಪಾರ, ಸೇವಾ ವಲಯ, ಕೃಷಿಯೇತರ ವಾಣಿಜ್ಯ ಚಟುವಟಿಕೆ ಕೈಗೊಳ್ಳುವವರಿಗೆ ಸಾಲ ನೀಡಲಾಗುತ್ತಿದೆ. ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಾಲ ನೀಡಲಾಗುತ್ತಿದೆ. ಎಲ್ಲಾ ಸಾರ್ವಜನಿಕವಲಯದ ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು, ರಾಜ್ಯ ಸಹಕಾರಿ ಬ್ಯಾಂಕ್ ಗಳು, ನಗರ ಸಹಕಾರಿ ಬ್ಯಾಂಕ್ ಗಳೂ ಕೂಡ ಮುದ್ರಾದ ಅಡಿಯಲ್ಲಿ ಬರುತ್ತವೆ.

ದಾಖಲೆಗಳು:

ಚುನಾವಣ ಗುರುತಿನ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ಪಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅಥವಾ ಪಾಸ್ ಪೋರ್ಟ್ ಅಥವಾ ಯಾವುದಾದರೂ ಸರ್ಕಾರ ನೀಡಿದ ಗುರುತಿನ ಚೀಟಿ ಹೊಂದಿರಬೇಕು.* ವಾಸಸ್ಥಳ ಪುರಾವೆಗಾಗಿ , ಇತ್ತೀಚಿನ ಟೆಲಿಫೋನ್ ಬಿಲ್ ಅಥವಾ ಎಲೆಕ್ಟ್ರಿಸಿಟಿ ಬಿಲ್, ಕಂದಾಯ ರಶೀದಿ( ಎರಡು ತಿಂಗಳಿಗಿಂತ ಹಳೆಯದಾಗಿರಬಾರದು) ಅಥವಾ ಚುನಾವಣ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಅಥವಾ ಪಾಸ್ ಪೋರ್ಟ್ ಅಥವಾ ವಸತಿ ಪ್ರಮಾಣ ಪತ್ರ ಅಥವಾ ಸ್ಥಳೀಯ ಅಧಿಕಾರಿಯಿಂದ ಕೊಡಲಾದ ಯಾವುದೇ ಗುರುತಿನ ಪತ್ರ ಹೊಂದಿರಬೇಕು.