Government Schemes

ರಾಷ್ಟ್ರೀಯ ಬಿದಿರು ಮಿಷನ್‌ ಯೋಜನೆಯಡಿ ಬಿದಿರು ಬೆಳೆಸಿ 50 ಸಾವಿರ ಪ್ರೋತ್ಸಾಹ ಧನ ಪಡೆಯಿರಿ

15 October, 2020 4:56 PM IST By:

ಕೇಂದ್ರ ಸರಕಾರ ರಾಷ್ಟ್ರೀಯ ಬಿದಿರು ಮಿಷನ್‌ ಯೋಜನೆಯಡಿ ಬಿದಿರು ಬೆಳೆಯುವ ರೈತರಿಗೆ 50 ಸಾವಿರ ರೂಪಾಯಿಯವರೆಗೆ ಪ್ರೋತ್ಸಾಹ ನೀಡಲು ಮುಂದಾಗಿದೆ.  ಇತ್ತೀಚೆಗೆ ಬಿದಿರು ಮೌಲ್ಯ ಹೆಚ್ಚಿಸಿಕೊಂಡಿದ್ದರಿಂದ ಬಿದಿರು ಬೆಳೆಯುವ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಮರುಚಾಲನೆ ನೀಡಿದೆ.

ರಾಷ್ಟ್ರೀಯ ಬಿದಿರು ಮಿಷನ್‌ ಯೋಜನೆ ಯಡಿ 2020-21ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯದ 60:40 ಅನುಪಾತದಲ್ಲಿ 2091.64 ರೂ. ಮೊತ್ತದ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆ ನೀಡಲಾಗಿದೆ. ವಿವಿಧ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗಗಳಿಗೆ ಭೌತಿಕ ಮತ್ತು ಆರ್ಥಿಕ ಗುರಿ ಹಂಚಿಕೆ ಮಾಡಿದೆ.

ಏನಿದು ರಾಷ್ಟ್ರೀಯ ಬಿದಿರು ಮಿಷನ್?

ರಾಷ್ಟ್ರೀಯ ಬಿದಿರು ಮಿಷನ್ (ಎನ್.ಬಿ.ಎಂ) 2006-07 ನೇ ಸಾಲಿನಲ್ಲಿಪ್ರಾರಂಭವಾಗಿ 2015 ರವರೆಗೂ ಮುಂದುವರೆದಿತ್ತು. ಮೊದಲು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಅಭಿಯಾನ (ಎಂಐಡಿಎಚ್) ದಡಿ ಜಾರಿಯಾಗಿದ್ದ ಕಾರ್ಯಕ್ರಮವನ್ನು ಈಗ 2018-19ನೇ ಸಾಲಿನಲ್ಲಿ ಸುಸ್ಥಿರ ಕೃಷಿ ಅಭಿವೃದ್ಧಿ ಅಭಿಯಾನ (ಎನ್.ಎಂ.ಎಸ್.ಎ) ಅಡಿ ಜೋಡಿಸಿ ಮರು ರಚನೆ ಮಾಡಲಾಗಿದೆ. ಖಾಸಗಿ ಜಾಗದಲ್ಲಿ ಬಿದಿರು ಬೆಳೆಯಲು ಪ್ರೋತ್ಸಾಹ, ಗೃಹ ಕೈಗಾರಿಕೆಗಳ ಅಭಿವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿಸಲು ಯೋಜಿಸಲಾಗಿದೆ.. ಬಿದಿರು ಬೆಳೆ ಯಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಹಣ ಮೀಸಲಿಡುತ್ತ ಬಂದಿದೆ. ವಿವಿಧ ರಾಜ್ಯಗಳು ಬಿದಿರು ಬೆಳೆಸಲು ಯೋಜನೆಗಳನ್ನು ಪ್ರತಿ ವರ್ಷ ರೂಪಿಸುತ್ತಿವೆ. ಕುಂದಾಪುರ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ಸುಮಾರು 1125 ಹೆಕ್ಟೇರ್‌ ಬಿದಿರು ಬೆಳೆಯಲು ಯೋಜನೆ ರೂಪಿಸಲಾಗಿದೆ.

ಪ್ರತಿ ಹೆಕ್ಟೇರಿಗೆ ಒಟ್ಟು 50 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. ಮೊದಲ ವರ್ಷ-25 ಸಾವಿರ ರೂಪಾಯಿ ಎರಡನೇ ವರ್ಷ-15 ಸಾವಿರ ರೂಪಾಯಿ, ಮೂರನೇ ವರ್ಷ-10 ಸಾವಿರ ರೂಪಾಯಿ ನೀಡಲಾಗುವುದು. ಪ್ರತಿ ಸಸಿಗೆ 120 ರೂ. ನಿರ್ವಹಣೆ ಹಣವನ್ನು ಬದುಕುಳಿದ ಸಸಿಗಳ ಅಧಾರದ ಮೇಲೆ ರೈತರಿಗೆ ನೀಡಲಾಗುತ್ತದೆ. ಪ್ರತಿ ಹೆಕ್ಟೇರಿಗೆ 375ರಿಂದ 450 ಸಸಿಗಳನ್ನು ನೆಡುವುದು. ಇದರಲ್ಲಿ 260 ಸಸಿಗಳು ಟಿಶ್ಯೂ ಕಲ್ಚರ್‌ ಒರಿಜಿನ್‌ನಿಂದ ಶಿಫಾರಸು ಪಡೆದ ಸಸಿಗಳಾಗಿರಬೇಕು. ಉಳಿದ 140 ಸಸಿಗಳನ್ನು ಸ್ಥಳಿಯ ನರ್ಸರಿಗಳಿಂದ ಪಡೆಯಬಹುದು.

2 ಹೆಕ್ಟೇರ್‌ ಭೂಮಿ ಮಿತಿ:

ಬಿದಿರು ಬೆಳೆಯಲು ಯಾವುದೇ ಮಿತಿ ಇರುವುದಿಲ್ಲ. ಸಹಾಯಧನ ಪಡೆಯಲು 2 ಹೆಕ್ಟೇರ್‌ನ ಮಿತಿಯಿದೆ. ರೈತರು ಪಹಣಿಯಲ್ಲಿನ ಸರ್ವೆ ನಂಬರಿನ ಆಧಾರಿತ ಕನಿಷ್ಠ 400 ಬಿದಿರು ಸಸಿ ನೆಟ್ಟಲ್ಲಿ ಸಹಾಯಧನ ಸಿಗುತ್ತದೆ. ಒಂದೇ ಸ್ಥಳದಲ್ಲಿ ಅರಣ್ಯ ಕೃಷಿಯನ್ನಾಗಿ 1 ಎಕರೆ, ಅರ್ಧ ಎಕರೆ, ಎರಡು ಎಕರೆ ಹೀಗೆ ಎಷ್ಟೇ ಪ್ರದೇಶದಲ್ಲಿ ನಾಟಿ ಮಾಡಿಕೊಂಡಿದ್ದರೂ ಸಹಾಯಧನ ಸಿಗುತ್ತದೆ.

ಪ್ರೋತ್ಸಾಹ ಧನ ಪಡೆಯುವ ಅವಧಿ ಮೂರು ವರ್ಷ

ಪ್ರತಿ ಹೆಕ್ಟೆರಿಗೆ ಗರಿಷ್ಠ ಸಸಿಗಳು- 375ರಿಂದ 450 ಸಸಿಗಳು ಬೇಕಾಗುತ್ತವೆ.  ಇದರ ಅವಧಿ ಮೂರು ವರ್ಷವಾಗಿರುತ್ತದೆ.3 ವರ್ಷದಲ್ಲಿ 3 ಹಂತದಲ್ಲಿ ದೊರಕುತ್ತದೆ. ನಾಟಿ ಮಾಡಿದ ಗಿಡಗಳು ಶೇ. 100 ಬೆಳೆದಿರಬೇಕು. ಗಿಡಗಳು ಸತ್ತು ಹೋದಲ್ಲಿ ಅಥವಾ ಬೆಳವಣಿಗೆ ಆಗದೇ ಇದ್ದಲ್ಲಿ ಬದಲಿ ಗಿಡ ನಾಟಿ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಬಿದಿರು ಬೆಳೆಯಲು ಇಚ್ಛಿಸುವ ರೈತರು ಆನ್‌ಲೈನ್‌ನ ಮೂಲಕ  www.nbm.nic.in ಅಥವಾ https://www.nbm.nic.in/  ಕ್ಲಿಕ್ ಮಾಡಿ  ಅರ್ಜಿ ಹಾಕಬೇಕು. ಆನ್‌ಲೈನ್‌ ಅರ್ಜಿ ಖಾತರಿಪಡಿಸಿಕೊಂಡ ಬಳಿಕ ಲಿಖೀತ ಅರ್ಜಿಯನ್ನು ಹೆಸರು, ವಿಳಾಸ, ಸರ್ವೇ ನಂಬರ್‌, ವಿಸ್ತೀರ್ಣ, ವೈಯಕ್ತಿಕ ಬ್ಯಾಂಕ್‌ ಖಾತೆ ಸಹಿತ ಅಗತ್ಯ ವಿವರಗಳ ದಾಖಲೆ ಗಳೊಂದಿಗೆ ತಾಲೂಕು ಅರಣ್ಯಾಧಿಕಾರಿ ಗಳಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 080-23563931 ಗೆ ಕರೆ ಮಾಡಬಹುದು.

ಬಿದಿರಿನ ಮಹತ್ವವನ್ನು ಬಹಳಷ್ಟು ವರ್ಷಗಳ ಹಿಂದೆಯೇ ಜಾನಪದರು  ಹಾಡಿನ ಮೂಲಕ ಸಾರಿದ್ದಾರೆ. ಆ ಹಾಡಿನ ನಾಲ್ಕು ಸಾಲನ್ನು ಮೆಲಕು ಹಾಕುತಿದ್ದೇನೆ

ಹುಟ್ಟುತ್ತ ಹುಲ್ಲಾದೆ ಬೆಳೆಯುತ್ತಾ ಬಿದಿರಾದೆ

ಬೆಟ್ಟದ ಕೆಳಗೆ ಇದ್ದೆ ಅದುರುದ್ದ ಬೆಳೆದೆ

ರಂಗನಿಗೆ ಕೊಳಲಾದೆ ಕಂದನಿಗೆ ತೊಟ್ಟಿಲಾದೆ

ಆಡುವ ಮಕ್ಕಳಿಗೆ ಓಢುವ ಕುದುರೆಯಾದೆ

ಊರೂರು ಸೂರು ಆದೆ ಕೂರಿಗೆಯ ಕೊಳವೆ ಆದೆ

ಮುಪ್ಪಿನ ಮುದುಕರಿಗೆ ಊರಂಬೋ ದೊಣ್ಣೆಯಾದೆ

ಅಂಬಿಗನಿಗೆ ಹುಟ್ಟು ಆದೆ ಮ್ಯಾದರ್ಗೆ ಬುಟ್ಟಿ ಆದೆ

ಹತ್ತುವವನಿಗೆ ಏಣಿಯೆದೆ ಸತ್ತವಂಗೆ ಚಟ್ಟವಾದೆ.