Government Schemes

ಸಮಗ್ರ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ರೈತರಿಗೆ 3 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನ

01 August, 2021 8:16 PM IST By:

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಸಮಗ್ರ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಒಣ (ಖುಷ್ಕಿ) ಜಮೀನಿಗೆ ಕೊಳವೆ ಬಾವಿ ಮೂಲಕ ನೀರಾವರಿ ಸೌಲಭ್ಯ ಒದಗಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಹಾಗೂ ಭೂ ಒಡೆತನ ಯೋಜನೆಯಡಿ ಮಂಜೂರಾತಿ ನೀಡಿರುವ ಒಣ ಭೂಮಿ (ಖುಷ್ಕಿ) ಜಮೀನಿಗೆ ವೈಯಕ್ತಿಕ ಕೊಳವೆ ಬಾವಿಗಳನ್ನು ಕೊರೆಸಿ, ಪಂಪ್ ಸೆಟ್ ಅಳವಡಿಸಿ, ವಿದ್ಯುದ್ಧೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.

ಈ ಯೋಜನೆಯಡಿ 6 ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ. 4.50 ಲಕ್ಷಗಳಿದ್ದು ಉಳಿದ 24 ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ. 3.50 ಲಕ್ಷಗಳಿದ್ದು, ಈ ಪೈಕಿ ಸಹಾಯಧನ ಕ್ರಮವಾಗಿ ರೂ. 4.00 ಲಕ್ಷ ಹಾಗೂ ರೂ. 3.00 ಲಕ್ಷ ಹಾಗೂ 50 ಸಾವಿರ ರೂಪಾಯಿ  ಸಾಲವಾಗಿರುತ್ತದೆ. ಕೊಳವೆಬಾವಿಗಳ ವಿದ್ಯುದ್ಧೀಕರಣಕ್ಕಾಗಿ ಘಟಕ ವೆಚ್ಚದ ಪೈಕಿ ಪ್ರತಿ ಕೊಳವೆ ಬಾವಿಗೆ ರೂ. 50 ಸಾವಿರ ರೂಪಾಯಿ ನೇರವಾಗಿ ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗುವುದು.

ಈ ಯೋಜನೆಯನ್ನು ನದಿ, ನಾಲೆ ಮತ್ತು ನೈಸರ್ಗಿಕ ಹಳ್ಳ ಕೊಳ್ಳಗಳ ಅಕ್ಕ ಪಕ್ಕದಲ್ಲಿನ ಪರಿಶಿಷ್ಟ ಜಾತಿ ಮಾದಿಗ ಜಾತಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಒಣ ಭೂಮಿಗೆ ನೆಲದಲ್ಲಿ ಪಿ.ವಿ.ಸಿ. ಪೈಪ್ಗಳನ್ನು ಅಳವಡಿಸಿ ನೀರಿನ ಮೂಲದಿಂದ ಪೈಪ್ ಮೂಲಕ ನೀರನ್ನು ಹಾಯಿಸಿ ನೀರಾವರಿ ಸೌಲಭ್ಯವನ್ನು ಒದಗಿಸಲಾಗುವುದು. ಈ ಯೋಜನೆಯಡಿ ಕನಿಷ್ಟ 3 ಫಲಾಪೇಕ್ಷಿಗಳಿಗೆ ಕನಿಷ್ಟ 8.00 ಎಕರೆ ಹಾಗೂ ಮೇಲ್ಪಟ್ಟ ಜಮೀನುಗಳಿಗೆ ರೂ. 4 ಲಕ್ಷ ಸಹಾಯಧನದಲ್ಲಿ ಹಾಗೂ ಕನಿಷ್ಟ 4 ಫಲಾಪೇಕ್ಷಿಗಳ ಮೇಲ್ಪಟ್ಟು ಗರಿಷ್ಟ 15 ಎಕರೆವರೆಗಿನ ಜಮೀನುಗಳಿಗೆ ರೂ. 6 ಲಕ್ಷದ ಸಹಾಯಧನದಲ್ಲಿ ಸಾಮೂಹಿಕ ಏತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.  ಘಟಕ ವೆಚ್ಚ : ರೂ. 4 ರಿಂದ ರೂ. 6 ಲಕ್ಷಗಳಾಗಿರುತ್ತದೆ.

ರೈತರು ಸೆಪ್ಟೆಂಬರ್  1 ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ನಂತರ ಬಂದ ಅರ್ಜಿಗಳನ್ನು ತಿರಸ್ಕೃರಿಸಲಾಗುವುದು.

ಸೌಲಭ್ಯ ಪಡೆಯಲು ಅರ್ಹತೆ

ಅರ್ಜಿದಾರರು ಪರಿಶಿಷ್ಟ ಜಾತಿಯಲ್ಲಿ ಬರುವ ಮಾದಿಗ ಮತ್ತು ಸಂಬಂಧಿತ ಜಾತಿಗೆ ಸೇರಿದವರಾಗಿರಬೇಕು. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು 21 ವರ್ಷ ಮೇಲ್ಪಟ್ಟ ವಯೋಮಾನದವರಾಗಿರಬೇಕು. ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಲಿರಬಾರದು. ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿದ್ದಲ್ಲಿ, ಅಂತಹ ಫಲಾನುಭವಿಗಳು ಅರ್ಹರಿರುವುದಿಲ್ಲ.

ನಿಯಮಗಳು:

ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ. 1,50,000/- ಹಾಗೂ ನಗರ ಪ್ರದೇಶದಲ್ಲಿ ರೂ.2,00,000/- ಮಿತಿಯೊಳಗಿರಬೇಕು. ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದು ಪಡಿಸಲಾಗುತ್ತದೆ.

ಫಲಾಪೇಕ್ಷಿಯು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:

ಅರ್ಜಿ, ಭಾವಚಿತ್ರ, ಜಾತಿ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಆದಾಯ ಪತ್ರ (ಆರ್.ಡಿ. ಸಂಖ್ಯೆ ಹೊಂದಿರಬೇಕು). ಆಧಾರ್ ಕಾರ್ಡ್ ಹಾಗೂ  ಬ್ಯಾಂಕ್ ಪಾಸ್ಬುಕ್ ಇರಬೇಕು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗಿ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು..

ಫಲಾನುಭವಿಯಾಗಲು ಕಲ್ಪಿಸಲಾಗುವ ಸೌಲಭ್ಯಗಳು

ಫಲಾನುಭವಿಯು ಕನಿಷ್ಟ ಪಕ್ಷ 1-1/2 ಯಿಂದ 5-00 ಎಕರೆ ಒಣ ಭೂಮಿ (ಖುಷ್ಕಿ ಜಮೀನು) ಹೊಂದಿರಬೇಕು. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕನಿಷ್ಟ 1-00 ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಸೌಲಭ್ಯ ಕಲ್ಪಿಸಲಾಗುವುದು. ಕೊಳವೆ ಬಾವಿಯನ್ನುಎಸ್ಕಾಂಗಳ ವತಿಯಿಂದ ವಿದ್ಯುದ್ದೀಕರಣ ಗೊಳಿಸಲಾಗುವುದು. ಘಟಕ ವೆಚ್ಚದ ಪೈಕಿ ರೂ. 0.50 ಲಕ್ಷ ಅವಧಿ ಸಾಲವಾಗಿರುತ್ತದೆ. ಸಾಲದ ಮೊತ್ತವನ್ನು ಶೇ.6ರ ಬಡ್ಡಿ ದರದಲ್ಲಿ 16 ಅರ್ಧ ವಾರ್ಷಿಕ ಕಂತುಗಳಲ್ಲಿ ಮರುಪಾವತಿ ಮಾಡಬೇಕು

ಹೆಚ್ಚಿನ ಮಾಹಿತಿಗಾಗಿ https://adijambava.online ಲಿಂಕ್ ಮೇಲೆ ಕ್ಲಿಕ್ ಮಾಡಬಹುದು. ಅಥವಾ ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮ ನಂ, 17/5, ಓಬ್ಲಾಂಗ್ ಬ್ಲಾಕ್, 2ನೇ ಮಹಡಿ, ಯುನಿಟಿ ಕಟ್ಟಡ, ಜಯಚಾಮರಾಜೇಂದ್ರ ರಸ್ತೆ, ಬೆಂಗಳೊರು 560 002 ದೂರವಾಣಿ 080-22215222 ಗೆ ಕರೆಮಾಡಬಹುದು.