ಹಾಲು ಪ್ರಕೃತಿ ನೀಡಿರುವ ಒಂದು ಶ್ರೇಷ್ಠ ವರದಾನ. ಇದು ಎಲ್ಲಾ ವಯಸ್ಸಿನವರು ಮತ್ತು ರೋಗಿಗಳು ಸೇವಿಸಬಹುದಾದ ಮತ್ತು ಸುಲಭವಾಗಿ ಜೀರ್ಣವಾಗುವ “ಸಂಪೂರ್ಣ ಆಹಾರ”.
ದೇವರ ಪೂಜೆಯಿಂದ ಮಜ್ಜಿಗೆ ತಯಾರಿಸುವವರೆಗೆ, ಮಾನವನ ಪ್ರತಿಯೊಂದು ಕಾರ್ಯದಲ್ಲಿಯೂ ಹಾಲು ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ.
ಆದ್ದರಿಂದ ಹಾಲನ್ನುಉತ್ಪಾದನೆ ಮಾಡಿ ಮಾರಾಟ ಮಾಡುವ ಕೇವಲ ಒಂದು ವಸ್ತುವಾಗಿ ನೋಡದೆ ಅದಕ್ಕೆ ತನ್ನದೇ ಆದ ಸ್ಥಾನ ಮಾನಗಳನ್ನು ನೀಡಬೇಕು.
ಹಾಲು ಎಂದರೇನು ?
ಸಸ್ತನಿ ವರ್ಗದ ಪ್ರಾಣಿಗಳು ಕರುಗಳ ಜನನದ ನಂತರ (ಗಿಣ್ಣು ಹಾಲು ಹೊರತುಪಡಿಸಿ) ಅವುಗಳ ಪೋಷಣೆಗೆ ಅಗತ್ಯವಾದ ನೀರು, ಕೊಬ್ಬು, ಸಸಾರಜನಕ ಸಂಯುಕ್ತ (ಪ್ರೋಟೀನ್), ಸಕ್ಕರೆ (ಲ್ಯಾಕ್ಟೋಸ್), ಖನಿಜಾಂಶ ಮತ್ತು ಜೀವಸತ್ವಗಳಾದ ಎ,ಡಿ,ಇ,ಕೆ ಹಾಗು ಬಿ ಕಾಂಪ್ಲೆಕ್ಸ್ ಇವುಗಳಿಂದ ಕೂಡಿದ ಬಿಳಿ ಬಣ್ಣದ ಆಹಾರ ದ್ರವವನ್ನು ಮೊಲೆಗಳ ಕ್ಷೀರೋತ್ಪಾದನೆ ಗ್ರಂಥಿಗಳಲ್ಲಿ ಉತ್ಪಾದಿಸುತ್ತದೆ. ಇದನ್ನು ಹಾಲು ಎಂದುಕರೆಯುತ್ತಾರೆ.
ಹಾಲಿನ ಉತ್ಪಾದನೆ ಮಾಡುವ ಸಸ್ತನಿ ವರ್ಗದ ಹೆಣ್ಣು ಪ್ರಾಣಿಗಳು ತಿನ್ನುವ ಆಹಾರ ಜೀರ್ಣವಾಗಿ ಅವುಗಳಿಂದ ಹೊರಹೊಮ್ಮುವ ಪೌಷ್ಟಿಕಾಂಶಗಳು ರಕ್ತದೊಂದಿಗೆ ಹೃದಯದ ಅನುವಂಶೀಯತನಕ್ಕೆ ಅನುಗುಣವಾಗಿ ಪರಿವರ್ತನೆಗೊಳ್ಳುವ ಮೂಲಕ ಎಲ್ಲಾ ಪೌಷ್ಟಿಕಾಂಶಗಳೊಂದಿಗೆ ಹಾಲಿನ ಉತ್ಪಾದನೆಯಾಗುತ್ತದೆ.
ಹಾಲು ಉತ್ಪಾದನೆಯಾಗಲು ಪ್ರತಿದಿನ ಕೆಚ್ಚಲಿನ ಮುಖಾಂತರ ಸುಮಾರು 90 ಲೀಟರ್‌ರಕ್ತ ಪ್ರವಹಿಸುತ್ತದೆ. ಅದರಲ್ಲಿ 400 ರಿಂದ 600 ಲೀಟರಿನ ರಕ್ತದಿಂದ ಒಂದು ಲೀಟರ್ ಹಾಲು ಉತ್ಪಾದನೆಯಾಗುತ್ತದೆ.
ಜಾನುವಾರುಗಳಲ್ಲಿ ಕಂಡು ಬರುವ ಕೆಚ್ಚಲು ಬಾವು
ಹೈನುಗಾರಿಕೆ ಒಂದು ಉಪ ಕಸುಬುವಿನಿಂದ ಉದ್ದಿಮೆಗೆ ಬದಲಾಗುತ್ತಿರುವದರಿಂದ ಜಾನುವಾರುಗಳಲ್ಲಿ ಕಂಡು ಬರುವ ಕೆಚ್ಚಲು ಬಾವು ಒಂದು ಪ್ರಮುಖವಾಗಿ ಕಾಡುತ್ತಿರುವ ರೋಗವಾಗಿ ಹೊರಹೊಮ್ಮಿದೆ. ಸಾಮಾನ್ಯವಾಗಿ ಹೈನುರಾಸುಗಳಲ್ಲಿ ಕೆಚ್ಚಲು ಮತ್ತು ಮೊಲೆ ತೊಟ್ಟು ತೊದರೆಗಳು ಹೆಚ್ಚಾಗಿ ಕಾಣುತ್ತಿದ್ದು, ಅದಕ್ಕೆ ಕಾರಣ ಪ್ರಮುಖವಾಗಿ ಅದರ ಅಂಗ ರಚನೆಯೇ ಆಗಿದೆ.
ಜೋತುಬಿದ್ದ ಕೆಚ್ಚಲು ಮತ್ತು ಮೊಲೆ ತೊಟ್ಟುಗಳು, ಕರುಗಳು ಹಾಲು ಕುಡಿಯುವ ಬಗೆ, ಕುಡಿಯುವಾಗ ಕಚ್ಚುವ ಸಾಧ್ಯತೆ, ಕರುಹಾಕುವಾಗ ಅಥವಾ ಕೊಟ್ಟಿಗೆಯಲ್ಲಿ ಮಲಗಿದಾಗ ಮೊಲೆತೊಟ್ಟುಗಳು ತೆರೆದು ಕ್ರಿಮಿಕಾರಕಗಳು ಒಳಗೆ ಹೋಗುವ ಸಾಧ್ಯತೆ, ಹಾಲು ಹಿಂಡುವ ವಿಧಾನ ಸಧ್ಯದ ಕೆಚ್ಚಲು ಮತ್ತು ಮೊಲೆ ತೊಟ್ಟಿನ ತೊಂದರೆಗಳಿಗೆ ಪೂರಕವಾಗಿವೆ.
ಹೈನುಗಾರಿಕೆಯಲ್ಲಿ ಆರ್ಥಿಕತೆಯ ಪ್ರಮುಖ ಮೂಲವೆಂದರೆ ಹಾಲಿನ ಇಳುವರಿ. ಅದರಲ್ಲಿ ಈ ಕೆಚ್ಚಲು ಬಾವು ಸಮಸ್ಯೆ ಹಾಲಿನ ಇಳುವರಿ ಮೇಲೆ ನೇರ ಪರೀಣಾಮ ಬೀರುವುದರಿಂದ ಇದನ್ನು ಸರಿಯಾಗಿ ಗುರುತಿಸಿ ತಕ್ಷಣ ಚಿಕಿತ್ಸೆ ಪಡೆಯಬೇಕು.
ಕೆಚ್ಚಲು ಬಾವು ಉಂಟಾಗಲು ಮತ್ತು ಹರಡಲು ಮುಖ್ಯ ಕಾರಣಗಳೆಂದರೆ,
- ಅಧಿಕ ಹಾಲು ಹಿಂಡುವ ರಾಸುಗಳಲ್ಲಿ ಈ ರೋಗವು ಸಾಮಾನ್ಯವಾಗಿ ಕಂಡು ಬರುತ್ತದೆ.
- ಕೆಚ್ಚಲಿಂದ ಸಂಪೂರ್ಣವಾಗಿ ಹಾಲು ಹಿಂಡದಿರುವುದು.
- ಸೂಕ್ತವಲ್ಲದ ವಿಧಾನದಲ್ಲಿ ಹಾಲು ಕರೆಯುವುದು, ಅಂದರೆ ಕೆಚ್ಚಲಿನ ತೊಟ್ಟುಗಳನ್ನು ಜಗ್ಗಿ ಅಥವಾ
ಬೆರಳುಗಳಿಂದ ಒತ್ತಿಕರೆಯುವುದು.
- ಮೊಲೆಯ ತೊಟ್ಟಗಳ ಗಾಯದಕಡೆಗೆ ಗಮನ ಹರಿಸದೆ ಇರುವುದು.
- ನಿಯಮಿತವಾಗಿ ರಾಸುಗಳನ್ನು ತೊಳೆಯದಿರುವುದು.
- ಕೊಟ್ಟಿಗೆ ಮತ್ತು ಸುತ್ತಲಿನ ಪರಿಸರವನ್ನು ಶುಚಿಯಾಗಿ ಇಡದಿರುವುದು.
- ಹಾಲು ಕರೆಯಲು ಯಂತ್ರಗಳನ್ನು ಬಳಸುತ್ತಿದ್ದರೆ, ಅದರ ಶುಚಿತ್ವದ ಕಡೆಗೆ ಗಮನ ಹರಿಸದಿರುವುದು.
- ಅನಾರೋಗ್ಯಾದಿಂದ ಬಳಲುತ್ತಿರುವ ವ್ಯಕ್ತಿಗಳು ಹಾಲು ಕರೆಯುವುದು.
- ಹೈನುಗಾರಿಕೆಯಲ್ಲಿ ದೈನಂದಿನ ಚಟುವಟಿಕೆಗೆ ಅಶುದ್ಧ ನೀರು ಬಳಸುವುದು.
ಕೆಚ್ಚಲು ಬಾವು ರೋಗ ಬರಲು ಹತ್ತು ಹಲವಾರು ಕಾರಣಗಳಿದ್ದು ಅವುಗಳಲ್ಲಿ ಸ್ಟಾಫೈಲೊಕೊಕ್ಕಸ್, ಇ ಕೊಲೈ, ಕೊರಿನಿಬ್ಯಾಕ್ಟೇರಿಯಂ ಎಂಬ ವಿಷಾಣುಗಳು ಪ್ರಮುಖ ಕಾರಣಗಳಾಗಿವೆ.
ಇವುಗಳು ಮುಖ್ಯವಾಗಿ ದನಗಳ ಮತ್ತು ಅವುಗಳ ಕೊಟ್ಟಿಗೆಗಳ ಅಸ್ವಚ್ಛತೆ ಹಾಗೂ ರೈತರ ನಿರ್ಲಕ್ಷತೆಯಿಂದ ಕೆಚ್ಚಲನ್ನು ಪ್ರವೇಶಿಸಿ ಕೆಚ್ಚಲು ಬಾವು ರೋಗ ಬರಲು ಕಾರಣವಗುತ್ತವೆ.
ಕೆಚ್ಚಲು ಬಾವು ರೋಗದ ಲಕ್ಷಣಗಳು
- ಕೆಚ್ಚಲು ಬಾವು ರೋಗದಲ್ಲಿ ಕೆಚ್ಚಲು ಬಾತುಕೊಂಡಿರುತ್ತದೆ ಮತ್ತು ಕೆಚ್ಚಲು ಬಿಸಿಯಾಗಿದ್ದು ಹಾಲು ಕೆಟ್ಟಿರುತ್ತದೆ.
- ಹಾಲಿನಲ್ಲಿ ರಕ್ತ, ಸಣ್ಣ ಗೆಡ್ಡೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ನೀರಿನಂತೆಯೊ ಅಥವಾ ಮೊಸರಿನಂತೆಯೂ ಇರಬಹುದು.
- ಬೇನೆ ಅತೀ ಹೆಚ್ಚಾಗಿದ್ದು ನೀರು ಕುಡಿಯುವದಾಗಲಿ ಅಹಾರ ಸೆವನೆಯಾಗಲಿ ಇರುವದಿಲ್ಲಾ. ಬೇನೆ ವಾಸಿಯಾಗದಿದ್ದರೆ ಕೆಚ್ಚಲು ಕೃಮೇಣವಾಗಿ Uಟ್ಟ್ತಿಯಾಗಿ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ.
- ತಕ್ಷಣ ಕೆಚ್ಚಲ ಬಾವುನ್ನು ಗುರುತಿಸಿ ಚಿಕಿತ್ಸೆ ಪಡೆಯದೆ ಹೋದರೆ ಕೆಲವೊಮ್ಮೆ ಕೆಚ್ಚಲು ಕೊಳೆಯಲಾರಂಭಿಸುತ್ತದೆ
- ಅತಿಯಾದ ಬೇನೆಯಿಂದ ಜ್ವರ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಕೆಲವೊಮ್ಮೆ ಜಾನುವಾರು ಸಾವಿಗೀಡಾಗಬಹುದು.
ಕೆಚ್ಚಲು ಬಾವಿನ ಕೆಲವು ಮುನ್ಸೂಚನೆಗಳು
- ಕೆಚ್ಚಲಿನ ನಾಲ್ಕು ತೊಟ್ಟುಗಳಿಂದ ಸ್ವಲ್ಪ ಹಾಲನ್ನು ಪತ್ಯೇಕವಾಗಿ ಕರೆದಾಗ ಗಡ್ಡೆಗಳ ಇರುವಿಕೆ, ಹಾಲಿನ ಬಣ್ಣದಲ್ಲಿನ ವ್ಯತ್ಯಾಸ ಮತ್ತು ನೀರಿನಂತೆ ಇರುವುದನ್ನು ಗಮನಿಸಬಹುದು.
- ಹಾಲು ಕರೆದತಕ್ಷಣ ಸ್ವಲ್ಪ ಹಾಲನ್ನು ಚೆನ್ನಾಗಿ ಕಾಯಿಸಿದಾಗ ಹಾಲು ಒಡೆದು ಹೋಗುವುದನ್ನು ಗಮನಿಸಬಹುದು.
ಕೆಚ್ಚಲು ಬಾವು ಬರದೇ ಇರಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು
- ಆಕಳು ಮತ್ತು ಎಮ್ಮೆಗಳನ್ನು ಮತ್ತು ಅವುಗಳ ಕೆಚ್ಚಲವನ್ನು ಸ್ವಚ್ಛವಾಗಿಡಬೇಕು
- ಆಕಳುಗಳ ಕೊಟ್ಟಿಗೆಗಳು ಸ್ವಚ್ಚ ಹಾಗೂ ಒಣಗಿದ್ದು, ಅವುಗಳು ಸಾಕಷ್ಟು ಬೆಳಕು ಹಾಗೂ ಗಾಳಿಯಿಂದ ಕೂಡಿರಬೆಕು.
- ಹಾಲು ಹಿಂಡುವ ವೈಕ್ತಿಯು ಹಾಲನ್ನು ಹಿಂಡುವ ಮುನ್ನ ಹಾಗೂ ಹಾಲನ್ನು ಹಿಂಡಿದ ನಂತರ ಒಂದು ಚಮಚ ಸಾವಲಾನ್ ಅಥವಾ ಡೆಟಾಲನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಅದರಿಂದ ತನ್ನ ಕೈಗಳು, ಕೆಚ್ಚಲು ಹಾಗು ಮೊಲೆಗಳನ್ನು ಚೆನ್ನಾಗಿ ತೊಳೆಯಬೇಕು.
- ಹಾಲು ಕರೆಯುವಾಗ ಪೂರ್ಣ ಕೈ ಉಪಯೋಗಿಸಿ ಹಾಲು ಕರೆಯಬೇಕು. ಹೆಬ್ಬೆರಳು ಮತ್ತು ತರ‍್ಬೆಳನ್ನು ಮೊಲೆ ತೊಟ್ಟಿನ ಬುಡದಲ್ಲಿ ಸುತ್ತುವರೆಸಿ ಉಳಿದ ಬೆರಳುಗಳನ್ನು ಮೇಲ್ಭಾಗದಿಂದ ಸಂಪೂರ್ಣವಾಗಿ ಮೊಲೆ ತೊಟ್ಟಿನ ಮೇಲೆ ಒತ್ತಡಕೊಟ್ಟು ಹಾಲು ಹಿಂಡುವುದು ಸರಿಯಾದ ಕ್ರಮ.
- ಆಕಳು ಮತ್ತು ಎಮ್ಮೆಗಳು ಕರು ಹಾಕುವದಕ್ಕಿಂತ 1-2 ತಿಂಗಳು ಮುಂಚೆ ವೈದ್ಯರ ಸಲಹೆಯಂತೆ ಪ್ರತಿಯೊಂದು ಮೊಲೆಗೆ ಔಷಧಿಯ ಟ್ಯೂಬನ್ನು ಏರಿಸಿದರೆ ಕರು ಹಾಕಿದ ನಂತರ ಕೆಚ್ಚಲು ಬಾವು ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
- ಕೆಚ್ಚಲು ಅಥವಾ ಮೊಲೆಗಳ ಮೇಲೆ ಯಾವುದದರೂ ಗಾಯಗಳಿದ್ದರೆ ಅವುಗಳನ್ನು ಅಲಕ್ಷಿಸದೆ ಚಿಕಿತ್ಸೆ ಕೊಡಿಸಬೆಕು.
ಕೆಚ್ಚಲು ಬಾವು ಬಂದ ಸಮಯದಲ್ಲಿ ಕೈಗೊಳ್ಳಬೇಕಾದ ಚಿಕಿತ್ಸಾ ಕ್ರಮಗಳು
- ಕೆಚ್ಚಲು ಬಾವು ಬಂದ ಜಾನುವಾರನ್ನು ಉಳಿದ ಜಾನುವಾರುಗಳಿಂದ ಬೇರ್ಪಡಿಸಬೇಕು.
- ಕೆಚ್ಚಲು ಬಾವು ರೋಗದಲ್ಲಿ ಅನೇಕ ತರಹದ ಕೆಚ್ಚಲು ಬಾವು ಸಮಸ್ಯೆಗಳಿರುತ್ತವೆ. ಆದ್ದರಿಂದ ಕೆಚ್ಚಲು ಬಾವು ಬಂದ ಕೂಡಲೇ ಸ್ಥಳೀಯ ಪಶುವ್ಯೆದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.
- ಮೊದಲು ಚೆನ್ನಾಗಿರುವ ಜಾನುವರುಗಳ ಹಾಲನ್ನು ಹಿಂಡಿ ನಂತರ ರೋಗ ಪೀಡಿತ ಜಾನುವಾರಿನ ಹಾಲನ್ನು ಹಿಂಡಬೇಕು.
- ಪಶುವೈದ್ಯರ ಸಲಹೆಯಂತೆ ಚಿಕಿತ್ಸೆ ಮುಗಿಯುವ ವರೆಗೂ ರೋಗ ಪೀಡಿತ ಕೆಚ್ಚಲಿನ ಹಾಲನ್ನು ಸಂಪೂರ್ಣವಾಗಿ ಹಿಂಡಿ ಚೆಲ್ಲಬೇಕು.
- ಕರುಗಳನ್ನು ತಾಯಿ ಹಾಲನ್ನು ಕುಡಿಯಲು ಬಿಡದೇ ಒಂದು ಪಾತ್ರೆಯಲ್ಲಿ ಬೇರೆ ಆಕಳಿನ ಚೆನ್ನಾಗಿರುವ ಹಾಲನ್ನು ಕುಡಿಸಬೇಕು.
ಯಾವುದೇ ಒಂದು ರೋಗ ಬರಲು ಮುಖ್ಯವಾಗಿ 3 ಕಾರಣಗಳಿರುತ್ತವೆ
- ಜಾನುವಾರುವಿನ ದೌರ್ಬಲ್ಯತೆ
- ಸೂಕ್ಷ್ಮಾಣು ಜೀವಿಗಳ ತೀವ್ರತೆ
- ಜಾನುವಾರುವಿನ ಸುತ್ತಲಿನ ಪರಿಸರ ಹಾಗು ರೈತರು ಕೈಗೊಳ್ಳುವ ಕ್ರಮಗಳು.
ಇವುಗಳಲ್ಲಿ 3ನೇ ಕಾರಣ ಕೆಚ್ಚಲು ಬಾವು ಬರಲು ಶೇಕಡಾ 70 ರಿಂದ 80 ರಷ್ಟು ಕಾರಣವಾಗಿದೆ. ಆದ್ದರಿಂದ ರೈತರು ಹೈನುಗಾರಿಕೆಯಲ್ಲಿ ಕೆಚ್ಚಲು ಬಾವುನಂತಹ ಸಮಸ್ಯೆಗಳಿಂದ ದೂರ ಉಳಿಯಬೇಕಾದರೆ ಜಾನುವಾರು ಕಟ್ಟುವ ಕೊಟ್ಟಿಗೆಯಿಂದ ಹಿಡಿದು ನೆಲ, ಕುಡಿಯುವ ನೀರು, ಹಾಗು ಜಾನುವಾರುವಿನ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು.
ಲೇಖಕರು: ಡಾ. ಸಂಗೀತಾ ಜಾಧವ, ವಿಜ್ಞಾನಿ(ಪ್ರಾಣಿ ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ ವಿಜಯಪುರ