Animal Husbandry

ಬಿಸಿಲಿನ ತಾಪ ಹೆಚ್ಚಾಗುತ್ತಿದ್ದರಿಂದ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ

06 April, 2021 9:29 PM IST By:
Animal Husbandry

ಪ್ರಸಕ್ತ ವರ್ಷ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ಹಾಲಿನ ಇಳುವರಿ ಕಾಪಾಡಲು ಅನುಕೂಲವಾಗುತ್ತದೆ ಎಂದು ಗದಗ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.  

ಮುಂಜಾಗ್ರತಾ ಕ್ರಮಗಳು :

ಜಾನುವಾರುಗಳನ್ನು ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಮೇಯಿಸಲು ಬಿಡಬೇಕು. ದಿನಕ್ಕೆ 2 ರಂದ 3 ಸಾರಿ ಶುದ್ದವಾದ ನೀರನ್ನು ಕುಡಿಸಬೇಕು ಮಧ್ಯಾಹ್ನದ ಸಮಯದಲ್ಲಿ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಅಥವಾ ಗಿಡದ ನೆರಳಿನಲ್ಲಿ ಕಟ್ಟಬೇಕು. ಜಾನುವಾರುಗಳಿಗೆ ದಿನದಲ್ಲಿ 1 ರಿಂದ 2 ಸಾರಿ ಮೈ ತೊಳೆಯಬೇಕು ಹಾಗೂ ಮಿಶ್ರತಳಿ ರಾಸು, ಎಮ್ಮೆಗಳಲ್ಲಿ ದೇಹದ ಉಷ್ಣತೆ ಕಾಪಾಡಲು ಗೋಣಿಚೀಲವನ್ನು ನೀರಲ್ಲಿ ತೋಯಿಸಿ ಮೈ ಮೇಲೆ ಹಾಕಬೇಕು. ದನದ ಕೊಟ್ಟಿಗೆಯನ್ನು ತಂಪಾಗಿ ಇಡಲು ಕೊಟ್ಟಿಗೆಯ ಮೇಲೆ ತೆಂಗಿನಗರಿ, ಹುಲ್ಲನ್ನು ಹಾಕಿ, ಕಿಟಕಿಗಳಿಗೆ ಗೋಣಿಚೀಲಗಳನ್ನು ಕಟ್ಟಿ ನೀರನ್ನು ಸಿಂಪಡಿಸುತ್ತಿರಬೇಕು.

ಜಮೀನು ಉಳಿಮೆ ಮಾಡಲು ಎತ್ತುಗಳನ್ನು ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಮಾತ್ರ ಕೆಲಸಕ್ಕೆ ಉಪಯೋಗಿಸಬೇಕು. ಕುರಿ ಮತ್ತು ಆಡುಗಳನ್ನು ಸಹ ತಂಪಾದ ಸಮಯದಲ್ಲಿ ಮೇಯಿಸಿ ಮದ್ಯಾಹ್ನದಲ್ಲಿ ಗಿಡಗಳ ನೆರಳಿನಲ್ಲಿ ನಿಲ್ಲಿಸಬೇಕು. ವಲಸೆ ಕುರಿಗಳು ದೂರದ ಸ್ಥಳಗಳಿಗೆ ಹೋಗುವುದಿದ್ದರೆ ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಹೊಡೆದುಕೊಂಡು ಹೋಗಬೇಕು. ಕರು,ಕುರಿ, ಮೇಕೆ ಮರಿಗಳಿಗೆ ಸರಿಯಾದ ಪ್ರಮಾಣದಲ್ಲಿ ಹಾಲನ್ನುಕುಡಿಸಬೇಕು ಹಾಗೂ ನೀರನ್ನು ಸಹ 2 ರಿಂದ 3 ಸಾರಿ ಕುಡಿಸಬೇಕು.

 ಹೈನು ರಾಸುಗಳಿಗೆ ಸಾಧ್ಯವಾದಷ್ಟು ಪೌಷ್ಠಿಕ ಆಹಾರ ಹಾಗೂ ಲಭ್ಯವಿರುವ ಹಸಿರು ಮೇವನ್ನು ಕೊಡಬೇಕು. ಪೌಷ್ಠಿಕ ಆಹಾರ ಅಥವಾ ಕುಡಿಯುವ ನೀರಿನಲ್ಲಿ ಲವಣ ಮಿಶ್ರಣ, ಉಪ್ಪು ಹಾಗೂ ಬೆಲ್ಲವನ್ನು ನಿಗದಿತ ಪ್ರಮಾಣದಲ್ಲಿ ನೀಡಬೇಕು. ಕೊಟ್ಟಿಗೆಯ ಸುತ್ತಮುತ್ತ ಮತ್ತು ತೋಟ, ಹೊಲದ ಬದುವುಗಳಲ್ಲಿ ಮೇವಿನ ಮರಗಳನ್ನು ಬೆಳೆಸುವುದರಿಂದ ಜಾನುವಾರುಗಳಿಗೆ ತಂಪಾದ ನೆರಳು ಹಾಗೂ ಪೌಷ್ಟಿಕ ಆಹಾರವಾಗಿ ಹಸಿರು ಸೊಪ್ಪುತಿನ್ನಿಸಲು ಅನುಕೂಲವಾಗುತ್ತದೆ. ಜಾನುವಾರುಗಳಿಗೆ ಮುಂಜಾಗ್ರತೆಯಾಗಿ ಇಲಾಖೆಯಿಂದ ಉಚಿತವಾಗಿ ನೀಡುವ ಸಾಂಕ್ರಾಮಿಕ ರೋಗಗಳ ಲಸಿಕೆಗಳನ್ನು ಕಾಲಕಾಲಕ್ಕೆ ಹಾಕಿಸಬೇಕು.

 ಜಂತು ನಾಶಕ ಔಷಧಿಯನ್ನು ವರ್ಷಕ್ಕೆ 2 ರಿಂದ 3 ಸಾರಿ ಕುಡಿಸಬೇಕು. ಯಾವುದೇ ಸಮಯದಲ್ಲಿ ಕಾಯಿಲೆಯಿಂದ ಬಳಲುವ ಜಾನುವಾರುಗಳನ್ನು ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಚಿಕಿತ್ಸೆ ಕೊಡಿಸಬೇಕು. 

ನಿರ್ಜಲೀಕರಣಗೊಂಡ ಜಾನುವಾರುಗಳಿಗೆ ಉಪ್ಪು, ಅಡುಗೆ ಸೋಡಾ, ಬೆಲ್ಲ ಹಾಗೂ ಲಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಮಿಶ್ರಣ ಮಾಡಿ ದಿನದಲ್ಲಿ 3 ರಿಂದ 4 ಸಾರಿ  ಕುಡಿಸಬೇಕು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.