ಕೃಷಿಯನ್ನೇ ಅವಲಂಬಿಸಿರುವ ಗ್ರಾಮೀಣ ಭಾರತದ ರೈತ ಕುಟುಂಬಗಳಿಗೆ ಆರ್ಥಿಕವಾಗಿ ಮುಂದೆ ಬರಲು ಅವಕಾಶ ನೀಡಿರುವುದು ಹೈನುಗಾರಿಕೆ. ಕರ್ನಾಟಕವು ಕೂಡ ಹೈನುಗಾರಿಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ, ಆದರೂ ಸಹ ಪ್ರತಿ ಹೈನು ರಾಸುವಿನ ಹಾಲಿನ ಉತ್ಪಾದನೆ ಬಹಳ ಕಡಿಮೆಯಿದೆ.
ಪಶು ಪಾಲನೆಯಲ್ಲಿ ಪ್ರತಿ ಹೈನು ರಾಸುವಿನ ಉತ್ಪಾದನೆಯು ಅವುಗಳಿಗೆ ನೀಡುವ ಗುಣಮಟ್ಟದ ಹಸಿರು ಮೇವು, ಒಣ ಮೇವು ಹಾಗೂ ಸಮತೋಲನ ಪಶು ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ರೈತರು ಹಾಲಿನಿಂದ ಬರುವ ಆದಾಯದಲ್ಲಿ ಶೇಕಡಾ 60 ರಷ್ಟು ಪಶು ಆಹಾರಕ್ಕಾಗಿ ಖರ್ಚು ಮಾಡುತ್ತಿದ್ದು, ಪ್ರತಿ ಲೀಟರ್ ಹಾಲಿನ ಉತ್ಪಾದನೆಗೆ ವ್ಯಯ ಮಾಡುತ್ತಿರುವ ಖರ್ಚು ಅಧಿಕವಾಗುತ್ತಿದೆ ಹಾಗೂ ಆದಾಯ ಕಡಿಮೆಯಾಗುತ್ತಿದೆ.
ಈ ಸಮಸ್ಯೆಗೆ ಹಲವಾರು ಕಾರಣಗಳಿದ್ದರೂ ಸಹ, ಅಸಮತೋಲಿತ ಹಾಗೂ ಅಪೌಷ್ಠಿಕತೆಯಿಂದ ಕೂಡಿದ ಮೇವು ಮತ್ತು ಅಸಮರ್ಪಕ ಆಹಾರ ಪ್ರಮುಖವಾಗಿವೆ. ಹೈನುಗಾರಿಕೆಯ ವಾಣಿಜ್ಯೀಕರಣದಲ್ಲಿ ಹಸಿರು ಮೇವು ಒದಗಿಸುತ್ತಿರುವ ಪ್ರಮುಖ ಮೇವಿನ ಬೆಳೆಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವುದು ಬಹುಕಟಾವು ಮೇವಿನ ಬೆಳೆ ನೇಪಿಯರ್ ಹುಲ್ಲು. ಈ ಬೆಳೆಯಲ್ಲಿ ಹಲವಾರು ಸುಧಾರಿತ ತಳಿಗಳು ಹಾಗೂ ಸಂಕರಣ ತಳಿಗಳನ್ನು ಭಾರತದ ವಿವಿಧ ಕೃಷಿ ಸಂಬಂಧಿತ ಸಂಶೋಧನಾ ಕೇಂದ್ರಗಳು ಹಾಗೂ ವಿವಿಧ ಕೃಷಿ ಮತ್ತು ಪಶು ಸಂಗೋಪನಾ ವಿಶ್ವ ವಿದ್ಯಾನಿಲಯಗಳು ಅಭಿವೃದ್ಧಿ ಪಡಿಸಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಎನ್.ಬಿ.-21, ಐ.ಜಿ.ಎಫ್.ಆರ್.ಐ.-10, ಬಿ.ಹೆಚ್.-18, ಡಿ.ಹೆಚ್.ಎನ್.-4 (ಸುಧಾರಿತ ಕಾಮಧೇನು), ಡಿ.ಹೆಚ್.ಎನ್.-6 (ಸಂಪೂರ್ಣ), ಕೋ-3, ಕೋ-4 ಮತ್ತು ಕೋ-5.
ಸೂಪರ್ ನೇಪಿಯರ್:
ಸೂಪರ್ ನೇಪಿಯರ್ ಎಂದು ಪ್ರಸಿದ್ಧಿ ಪಡೆದಿರುವ ಈ ಬೆಳೆಯು ನೇಪಿಯರ್ ಜಾತಿಗೆ ಸೇರಿದ ಮತ್ತೊಂದು ನೂತನ ಸಂಕರಣ ತಳಿಯಾಗಿದ್ದು, ಇದನ್ನು ಸಾಮಾನ್ಯ ನೇಪಿಯರ್ ಹುಲ್ಲು (ಪೆನಿಸಿಟಮ್ ಪರ್‍ಪುರಿಯಂ) ಹಾಗೂ ಸಜ್ಜೆ (ಪೆಸಿಸಿಟಮ್ ಗ್ಲಾಕಮ್)ಯ ಸಂಕರಣದಿಂದ ಅಭಿವೃದ್ಧಿಪಡಿಸಲಾಗಿದ್ದು, ಅತ್ಯಂತ ವೇಗವಾಗಿ ಬೆಳೆಯುವ ಗುಣ ಹೊಂದಿದೆ ಹಾಗು ಉತ್ತಮ ಗುಣಮಟ್ಟದ ಮೇವು ಹೊದಗಿಸುತ್ತಿದೆ. ಕಳೆದ 2-3 ವರ್ಷಗಳಿಂದ ಕರ್ನಾಟಕದ ಹೈನುಗಾರಿಕಾ ಉದ್ಯಮದಲ್ಲಿ ಹೆಚ್ಚು ಪ್ರಚಲಿತಕ್ಕೆ ಬರುತ್ತಿದ್ದು ಇದರ ಅತ್ಯುತ್ತಮ ಮೇವಿನ ಗುಣಗಳಿದಿಂದಾಗಿ ರೈತರ ಪ್ರಶಂಸೆಗೆ ಪಾತ್ರವಾಗುತ್ತಿದೆ.
ಸೂಪರ್ ನೇಪಿಯರ್‍ನ ಮೂಲ:
ಈ ಸೂಪರ್ ನೇಪಿಯರ್ ಸಂಕರಣ ತಳಿಯ ಮೂಲ ಥೈಲಾಂಡ್ ದೇಶವಾಗಿದ್ದು, ಇದನ್ನು ಥೈಲಾಂಡ್ ದೇಶದ ನಾಕಾನ್ ರಾಚ್ಚಾಸಿಮ ಪ್ರಾಂತ್ಯದ ಪಾಕ್ಚಾಂಗ್‍ನ ಜಾನುವಾರು ಅಭಿವೃದ್ಧಿ ಇಲಾಖೆಯಲ್ಲಿ ಜಾನುವಾರು ಪೌಷ್ಠಿಕ ತಜ್ಞ ಹಾಗೂ ತಳಿ ಅಭಿವೃದ್ಧಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಕ್ರೈಲಾಶ್ ಕಿಯೋಥಾಂಗ್ 2013 ರಲ್ಲಿ ಅಭಿವೃದ್ಧಿ ಪಡಿಸಿದ್ದು, ಇದು ಥೈಲಾಂಡ್ ದೇಶದಲ್ಲಿ ಪಾಕ್‍ಚಾಂಗ್-1 ಎಂದು ಕರೆಯಲ್ಪಡುತ್ತದೆ. ಈ ಪಾಕ್‍ಚಾಂಗ್-1 ನೇಪಿಯರ್ ತಳಿಯು ಇದರ ಗುಣಗಳಿಂದಾಗಿ ಸೂಪರ್ ನೇಪಿಯರ್ ಎಂದು ಬಿಡುಗಡೆಯಾದ ಅಲ್ಪ ಕಾಲದಲ್ಲಿ ಥೈಲಾಂಡ್ ದೇಶದಾದ್ಯಂತ ಪ್ರಸಿದ್ಧಿ ಹೊಂದಿದೆ ಮತ್ತು ಥೈಲಾಂಡ್ ಅಲ್ಲದೆ ಫಿಲಿಪೈನ್ಸ್, ಲಾವೋಸ್, ಮಲೇಷ್ಯ ಹಾಗು ಸುತ್ತ ಮುತ್ತಲಿನ ದೇಶಗಳಲ್ಲಿ ಹಸಿರು ಮೇವಿನ ಸ್ವಾವಲಂಬನೆಗೆ ಬಹುಮುಖ್ಯ ಪಾತ್ರವಹಿಸಿದೆ.
ಹೈನುಗಾರಿಕೆಯಲ್ಲಿ ಮುಂಚೂಣಿಯಲ್ಲಿನ ರೈತರು ಈ ಸೂಪರ್ ನೇಪಿಯರ್ ತಳಿಯ ಬಿತ್ತನೆ ತುಂಡುಗಳನ್ನು 2016 ರಲ್ಲಿ ಭಾರತಕ್ಕೆ ಆಮದು ಮಾಡಿಕೊಂಡಿದ್ದು, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರಸಿದ್ಧಿ ಹೊಂದಿ ರೈತರಿಂದ ರೈತರಿಗೆ ಪ್ರಚಾರವಾಗಿ ಹೆಚ್ಚಿನ ಪ್ರದೇಶದಲ್ಲಿ ಬೆಳಯಲಾಗುತ್ತಿದೆ.
ಸೂಪರ್ ನೇಪಿಯರ್‍ನ ವಿಶೇಷ ಗುಣಗಳು :
ಅತ್ಯಂತ ವೇಗವಾಗಿ ಬೆಳೆಯುವ ಗುಣ ಹೊಂದಿದ್ದು, ಅಧಿಕ ಇಳುವರಿ ನೀಡುವ ಸಾಮಥ್ರ್ಯವಿದೆ (500ಟನ್ / ಹೆ.)
ಅಧಿಕ ಕಚ್ಚಾ ಪ್ರೋಟೀನ್ ಅಂಶ ಹೊಂದಿದೆ (ಶೇ.16-18)
ಕಡಿಮೆ ಸಮಯದಲ್ಲಿ ಹೆಚ್ಚು ಎತ್ತರ ಬೆಳೆಯುವ ಸಾಮಥ್ರ್ಯ (60 ದಿನಗಳಲ್ಲಿ 10 ಅಡಿ ಎತ್ತರ ಬೆಳೆಯುವುದು).
ಉತ್ತಮ ಕೂಳೆ ಬೆಳೆಯ ಸಾಮರ್ಥ್ಯ (ವರ್ಷಕ್ಕೆ 6-7 ಕಟಾವು)
ಉತ್ತಮ ಬೇಸಾಯ ಕ್ರಮಗಳನ್ನು ಅನುಸಿರಿಸಿ 7 ರಿಂದ 8 ವರ್ಷಗಳವರೆಗೂ ಅಧಿಕ ಇಳುವರಿ ಪಡೆಯಬಹುದು.
ಉತ್ತಮ ಸಾವಯವ ಅಂಶವಿರುವ ಮಣ್ಣಿನಲ್ಲಿ ಅಧಿಕ ಇಳುವರಿ ನೀಡುವ ಸಾಮರ್ಥ್ಯ ಹೊಂದಿದ್ದು, ಬರ ನಿರೋಧಕ ಶಕ್ತಿ ಹೊಂದಿದೆ.
ಸೂಪರ್ ನೇಪಿಯರ್‍ನ ಬೇಸಾಯ ಕ್ರಮಗಳು:
ಎರಡು ಗೆಣ್ಣುಗಳಿರುವ ಕಡ್ಡಿಗಳನ್ನು ಬಿತ್ತನೆಗೆ ಬಳಸುವುದು.
ಬಿತ್ತನೆ ಅಂತರ : ಸಾಲಿನಿಂದ ಸಾಲಿಗೆ 3 ಅಡಿ ಗಿಡದಿಂದ ಗಿಡಕ್ಕೆ 2 ಅಡಿ.
ಸಾಲು ತೆಗೆದು ಸಾಲಿನಲ್ಲಿ ಕಡ್ಡಿಗಳನ್ನು ಜೋಡಿಸಿ ಕೂಡ ಇಡುಬಹುದು ಅಥವಾ 2 ಅಡಿಗೊಂದರಂತೆ ಒಂದು ಗೆಣ್ಣು ಭೂಮಿಯ ಮೇಲ್ಮೈಲಿರುವಂತೆ ನೆಡುವುದು.
ಸಾವಯವ ಗೊಬ್ಬರ 20 ಟನ್ / ಹೆ., ರಾಸಾಯನಿಕ ಗೊಬ್ಬರ 250 ಕಿ.ಗ್ರಾಂ. ಸಾರಜನಕ / ಹೆ., 125 ಕಿ.ಗ್ರಾಂ. ರಂಜಕ / ಹೆ., 80 ಕಿ.ಗ್ರಾಂ. ಪೊಟ್ಯಾಷ್ / ಹೆ.
ಸೂಪರ್ ನೇಪಿಯರ್‍ನ ಕಟಾವು ಮತ್ತು ಇಳುವರಿ:
ನಾಟಿ ಮಾಡಿದ 60-70 ದಿನಗಳಲಿ ಕಟಾವಿಗೆ ಬರುತ್ತದೆ ನಂತರ ಪ್ರತಿ 45-48 ದಿನಗಳಲ್ಲಿ ಕಟಾವು ಮಾಡಬಹುದಾದರೂ ಉತ್ತಮ ಇಳುವರಿ ಪಡೆಯಲು 60-70 ದಿನಗಳಲ್ಲಿ ಕಟಾವು ಮಾಡುವುದು ಸೂಕ್ತ. ವರ್ಷಕ್ಕೆ 6-7 ಕಟಾವಿನಿಂದ ಹೆಕ್ಟೇರಿಗೆ 500 ಟನ್ ಇಳುವರಿ ನೀಡುವ ಸಾಮರ್ಥ್ಯ ಹೊಂದಿದ್ದು, ಸುಮಾರು 50 ಜಾನುವಾರುಗಳಿಗೆ ಸಾಕಾಗುವಷ್ಟು ಹಸಿರು ಮೇವನ್ನು ಒದಗಿಸುತ್ತದೆ.
ಕರ್ನಾಟಕ ರಾಜ್ಯಕ್ಕೆ ಸೂಕ್ತವಾದ ಸುಧಾರಿತ ನೇಪಿಯರ್ ತಳಿಗಳು/ಸಂಕರಣ ತಳಿಗಳು ಮತ್ತು ಇಳುವರಿ ಪ್ರಮಾಣ
ಕ್ರ.ಸಂ |
ನೇಪಿಯರ್ ತಳಿಗಳು |
ಬಿಡುಗಡೆಯಾದ ವರ್ಷ |
ಹಸಿರು ಮೇವಿನ ಇಳುವರಿ (ಟನ್ / ಹೆ./ ವರ್ಷಕ್ಕೆ) |
ಬಿತ್ತನೆ ಅಂತರ ಅಡಿಗಳಲ್ಲಿ |
ಬಿತ್ತನೆ ತುಂಡುಗಳ ಸಂಖ್ಯೆ |
1 |
ಎನ್.ಬಿ.-21 |
1968 |
180-190 |
3 x 2 |
18500 |
2 |
ಕೋ-1 |
1982 |
250-300 |
3 x 2 |
18500 |
3 |
ಪೂಸ ಜೈಂಟ್ ನೇಪಿಯರ್ |
1983 |
250-300 |
3 x 2 |
18500 |
4 |
ಕೋ-3 |
1996 |
380-400 |
3 x 2 |
18500 |
5 |
ಎ.ಪಿ.ಬಿ.ಎನ್.-1 |
1997 |
260-270 |
3 x 2 |
18500 |
6 |
ಬಿ.ಎಚ್-18 |
1998 |
150-160 |
3 x 2 |
18500 |
7 |
ಕೋ-4 |
2008 |
375-390 |
3 x 2 |
18500 |
8 |
ಡಿ.ಹೆಚ್.ಎನ್.-6 (ಸಂಪೂರ್ಣ) |
2008 |
150-170 |
3 x 2 |
18500 |
9 |
ಕೋ-5 |
2012 |
360-370 |
3 x 2 |
18500 |
10 |
ಬಿ.ಎನ್.ಹೆಚ್.-10 |
2015 |
160- |
3 x 2 |
18500 |
11 |
ಪಿ.ಬಿ.ಎನ್.-342 |
2017 |
370-400 |
3 x 2 |
18500 |
12 |
ಪಾಕ್‍ಚಾಂಗ್-1 (ಸೂಪರ್ ನೇಪಿಯರ್) |
2013* |
480-500** |
3 x 2 |
18500 |
|
|
|
|
3 x 2 |
18500 |
*ಭಾರತಕ್ಕೆ ಆಮದಾಗಿರುವುದು 2016 ರಲ್ಲಿ. ** ಇಳುವರಿ ಮಟ್ಟ ಪಾಕ್ಚಾಂಗ್‍ನ ಜಾನುವಾರು ಅಭಿವೃದ್ಧಿ ಇಲಾಖೆಯಲ್ಲಿ ತಿಳಿಸಿರುವಂತೆ ಇದೆ, ಇದನ್ನು ಭಾರತದಲ್ಲಿ ಯವುದೇ ಸಂಶೋಧನೆಗೆ ಓಳಪಡಿಸಿಲ್ಲ.
ಲೇಖನ: ದಿನೇಶ, ಎಂ.ಎಸ್., ಸವಿತಾ, ಎಸ್.ಎಂ. ಮತ್ತು ಪ್ರೀತು, ಡಿ.ಸಿ.