ಗಿರ್ ಹಸುಗಳ ಕುರಿತಂತೆ ರೈತರಲ್ಲಿ ಹಲವು ಅನುಮಾನಗಳಿವೆ. ದೇಶದಲ್ಲಿ ಯಾವುದೇ ಹಸುವಿನ ತಳಿ ಕುರಿತು ಇರದಂತಹ ಗಾಸಿಪ್‌ಗಳು ಈ ಹಸುವಿನ ಕುರಿತು ಇವೆ. ಕೆಲವರು ಇದು ಗುಜರಾತ್ ಬಿಟ್ಟು ಬೇರೆ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ ಎಂದರೆ, ಮತ್ತೆ ಕೆಲವರು ಈ ಹಸುವಿಗೆ ಹೆಚ್ಚು ಗೋಗಗಳು ಬರುತ್ತವೆ ಎನ್ನುತ್ತಾರೆ. ಹಾಗೇ, ಗಿರ್ ಹಸುಗಳ ಗರ್ಭಧಾರಣೆ ಕಷ್ಟದ ಕೆಲಸ, ರೋಗ ನಿರೋಧಕ ಶಕ್ತಿ ಕಡಿಮೆ, ಸಾಧು ಸ್ವಭಾವ ಆದರೂ ಕೆಲವೊಮ್ಮೆ ಆಕ್ರಮಣ ಮಾಡಬಹುದು ಎಂಬೆಲ್ಲಾ ಗಾಸಿಪ್‌ಗಳು ಚಾಲ್ತಿಯಲ್ಲಿವೆ. ಹಾಗೇ ಈ ಹಸುಗಳನ್ನು ಸಾಕಲು ಬಯಸುವ ರೈತರು ಅಥವಾ ಹೈನುಗಾರರು ಪ್ರತಿ ಬಾರಿಯೂ ಈ ಪ್ರಶ್ನೆಗಳನ್ನು ಕೇಳುತ್ತಾರೆ.
ರೈತರ ವಲಯದಲ್ಲಿ ಇರುವ ಇಂತಹ ಕೆಲವು ಅನುಮಾನಗಳನ್ನು ಪರಿಹರಿಸುವ ಮತ್ತು ಗಿರ್ ಹಸುವಿನ ಗುಣ ಸ್ವಭಾವಗಳ ಕುರಿತು ಇರುವ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಈ ಲೇಖನದ್ದಾಗಿದೆ. ಅದರಂತೆ ಗಿರ್ ಹಸು ಸಾಕುವಾಗ ಕೆಲವು ಸಮಸ್ಯೆಗಳು ಎದುರಾಗಲಿದ್ದು, ಹೈನುಗಾರರು ಅವುಗಳನ್ನು ಗಮನಿಸಲೇಬೇಕು.
ರೋಗ ನಿರೋಧಕ ಶಕ್ತಿ ಇದೆ; ಆದರೆ
ಗಿರ್ ತಳಿ ಹಸುಗಳು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆಯಾದರೂ ಮಾರಕ ಕೆಚ್ಚಲು ಬಾವು ಮಹಾಮಾರಿ ಇದಕ್ಕೂ ಬರುತ್ತದೆ. ಆರಂಭದಲ್ಲೇ ಚಿಕಿತ್ಸೆ ನೀಡದಿದ್ದರೆ ಕೆಚ್ಚಲುಗಳು ಗಟ್ಟಿಯಾಗಿ ಬಾವು ಹೆಚ್ಚಾಗುತ್ತದೆ. ಈ ಹಂತದಲ್ಲಿ ಚಿಕಿತ್ಸೆ ಕಷ್ಟಸಾಧ್ಯ. ಸಂಶೋಧನೆ ಪ್ರಕಾರ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಕಿದ ಶೇ.30ರಷ್ಟು ಗಿರ್ ಆಕಳುಗಳಲ್ಲಿ ಮಂದ ಸ್ವರೂಪದ ಕೆಚ್ಚಲು ಬಾವು ಕಂಡು ಬಂದಿದೆ. ಇದಕ್ಕೆ ಕಾರಣ ಹಲವು. ಗಿರ್ ಹಸುಗಳ ಕೆಚ್ಚಲುಗಳ ಗಾತ್ರವು ಬಹಳ ದೊಡ್ಡದಾಗಿದ್ದು ಅದಕ್ಕೆ ಇರುವ ಹಾಲು ಹಿಂಡುವ ರಂದ್ರವು ದೊಡ್ಡದಿರುತ್ತದೆ. ಇದರಿಂದ ಕೆಚ್ಚಲು ಬಾವು ಉಂಟುಮಾಡುವ ಸೂಕ್ಷಾö್ಮಣುಗಳು ಕೆಚ್ಚಲೊಳಗೆ ಪ್ರವೇಶಿಸುವುದು ಸುಲಭವಾಗುತ್ತದೆ.
ಗುಜರಾತಿನ ಗೌಳಿಗರ ಮಂದೆಯಿಂದ ನೇರವಾಗಿ ತಂದ ಅನೇಕ ಹಸುಗಳ ಮತ್ತು ಹೋರಿಗಳ ರಕ್ತ ಪರೀಕ್ಷೆ ಮಾಡಿದಾಗ ಅವುಗಳಲ್ಲಿ ‘ಬ್ರುಸೆಲ್ಲೋಸಿಸ್’ ಅಥವಾ ‘ಕಂದು ರೋಗ’ ಕಂಡು ಬಂದಿದೆ. ಇವುಗಳಲ್ಲಿ ಗರ್ಭಪಾತ ಮರುಕಳಿಸುತ್ತಲೇ ಇರುತ್ತದೆ. ಅಲ್ಲದೇ ಹಾಲು ಮತ್ತು ಮೂತ್ರದಿಂದ ಬರುವ ಒಂದು ಪತ್ತೆ ಹಚ್ಚಲಾಗದ ರೋಗ ಕಾಣಿಸಿಕೊಳ್ಳುತ್ತಿದ್ದು, ಇದು ಒಮ್ಮೆ ಜಾನುವಾರಿಗೆ ಬಂದರೆ ಗುಣ ಮಾಡುವುದು ಕಷ್ಟ. ಈ ರೀತಿಯ ಹಸು ಬೆದೆಗೆ ಬಂದಾಗ ಹೋರಿಯಿಂದ ಗರ್ಭಧಾರಣೆ ಮಾಡಿಸಿದರೆ ಆ ಹೋರಿಗೂ ಕಾಯಿಲೆ ತಗಲಿ ಅದು ಗರ್ಭಧಾರಣೆ ಮಾಡುವ ಎಲ್ಲಾ ಹಸುಗಳಿಗೆ ರೋಗ ಹರಡುತ್ತದೆ. ಈ ರೋಗಕ್ಕೆ ತುತ್ತಾದ ಹಸುಗಳನ್ನು ಸುಖಮರಣಕ್ಕೆ ಈಡು ಮಾಡುವುದೊಂದೇ ಉಪಾಯ ಎನ್ನುತ್ತದೆ ವಿಜ್ಞಾನ. ಆದಾಗ್ಯೂ ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಕೆಲವು ಗಿರ್ ಹಸುಗಳಲ್ಲಿ ಕ್ಷಯ ರೋಗ ಕೂಡ ಪತ್ತೆಯಾಗಿದೆ. ಆದರೆ ಇದರ ಪ್ರಮಾಣ ಕಡಿಮೆ.
ಗರ್ಭಧಾರಣೆ ಸಮಸ್ಯೆ ಇದೆಯೇ?
ಗಿರ್ ಹಸುಗಳು ಕೃತಕ ಗರ್ಭಧಾರಣೆಗೆ ಸುಲಭವಾಗಿ ಕಟ್ಟುವುದಿಲ್ಲ. ಇವುಗಳ ಗರ್ಭಕೋಶ ಕಂಠ ಬಹಳ ದೊಡ್ಡದಾಗಿದ್ದು ಕೃತಕ ಗರ್ಭಧಾರಣೆಯ ನಳಿಕೆಯನ್ನು ಗರ್ಭಕೋಶದೊಳಗೆ ತೂರಿಸಿ ಗರ್ಭಧಾರಣೆ ಮಾಡುವುದು ಅನುಭವಿ ವೈದ್ಯರಿಗೆ ಮಾತ್ರ ಕರಗತವಾಗಿರುತ್ತದೆ. ಹೋರಿಗಳಿಂದ ಆಗುವ ನೈಸರ್ಗಿಕ ಗರ್ಭಧಾರಣೆಗೆ ಈ ತಳಿ ಹೊಂದಿಕೊAಡಿರುವುದರಿAದ ಕೃತಕ ಗರ್ಭಧಾರಣೆ ಮಾಡಿಸಿದ ಅನೇಕ ಹೈನುಗಾರರು ಹೈರಾಣಾಗುತ್ತಾರೆ. ಇದು ಪಶುವೈದ್ಯರು ಮತ್ತು ಸಾಕಣೆಗಾರರಿಗೆ ದೊಡ್ಡ ಸವಾಲಾಗಿ ಉಳಿದಿದೆ.
ಸಾಧು ಹಸುಗಳಲ್ಲ
ಭಾರತದ ಎಲ್ಲಾ ದೇಸಿ ತಳಿಗಳಲ್ಲಿ ಕಂಡುಬರುವ ಹಾಯುವ, ಒದೆಯುವ ಸ್ವಭಾವ ಗಿರ್ ಹಸುಗಳಲ್ಲೂ ಇರುತ್ತದೆ. ಬೇರೆ ತಳಿಗಳಿಗೆ ಹೋಲಿಸಿದರೆ ಇವುಗಳದ್ದು ಸ್ವಲ್ಪ ಸಾಧು ಸ್ವಭಾವವಾದರೂ ಕೆಲವೊಮ್ಮೆ ಕೋಪಗೊಂಡು ಕಾಲುಗಳಿಂದ ಬಲವಾಗಿ ಒದೆಯುತ್ತವೆ. ಹೀಗಾಗಿ, ಈ ಹಸು ಸಧು ಎಂದು ಭಾವಿಸಿ ಹಯನುಗಾರರು, ವೈದ್ಯರು ಹತ್ತಿರ ಹೋಗಿ ಒದೆ ತಿಂದ ನಿದರ್ಶನಗಳಿವೆ.
ಹೆಚ್ಚು ಹಾಲು ಕೊಡಲ್ಲ
ಹೈನುಗಾರರು ತಮ್ಮ ಆದಾಯದಲ್ಲಿ ಶೇ.60ರಷ್ಟ ಹಣವನ್ನು ಪಶು ಆಹಾರ ಮತ್ತು ನಿರ್ವಹಣೆಗೆ ವೆಚ್ಚ ಮಾಡುತ್ತಾರೆ. ಹೀಗಾಗಿ ಪಶು ಅಹಾರದ ಹೆಚ್ಚಿನ ಭಾಗವನ್ನು ಹಾಲನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹಸುಗಳಿಗೆ ಇದ್ದರೆ ಆದಾಯ ಹೆಚ್ಚಾಗುತ್ತದೆ. ಗಾತ್ರದಲ್ಲಿ ದೊಡ್ಡದಾಗಿರುವ ಗಿರ್ ಹಸುಗಳು ಆಹಾರವನ್ನೂ ಹೆಚ್ಚಾಗಿ ಸೇವಿಸುತ್ತವೆ. ಆದರೆ, ಸೇವಿಸುವ ಆಹಾರಕ್ಕೆ ತಕ್ಕಂತೆ ಹಾಲು ನೀಡುವ ಸಾಮರ್ಥ್ಯ ಇವುಗಳಿಗೆ ಇರುವುದಿಲ್ಲ. ಮುಖ್ಯವಾಗಿ ಗುಜರಾತ್ ರಾಜ್ಯದಲ್ಲಿ ಉಚಿತವಾಗಿ ಸಿಗುವ ಪೌಷ್ಟಿಕಾಂಶ ಭರಿತ ಹುಲ್ಲು ಮತ್ತು ಹಿಂಡಿ ನಮ್ಮಲ್ಲಿ ಲಭ್ಯವಿಲ್ಲ. ಆದ್ದರಿಂದ ಇಲ್ಲಿ ಇವುಗಳ ನಿರ್ವಹಣಾ ವೆಚ್ಚ ಹೆಚ್ಚು.
ಗಿರ್ ಹಸು ಸಾಕುವವರು ಗಮನಿಸಿ
* ಸುಂದರ, ರೋಗ ನಿರೋಧಕ, ಹಾಲು ಅಮೃತ, ಮೂತ್ರದಲ್ಲಿ ಔಷಧ ಮತ್ತು ಬಂಗಾರವಿದೆ ಎಂಬೆಲ್ಲ ವದಂತಿಗಳನ್ನು ನಂಬಬೇಡಿ.
* ಗಿರ್ ಹಸು ಖರೀದಿಸಲೇಬೇಕು ಎಂಬ ಹಂಬಲವಿದ್ದರೆ ಆದಷ್ಟು ವಿಶ್ವಾಸಿಗರು, ಪರಿಚಿತರಿಂದ ಮಾತ್ರ ಖರೀದಿಸಿ, ಆದರೆ ಇವುಗಳು ತಮ್ಮ ದುಬಾರಿ ಬೆಲೆಗೆ ತಕ್ಕಂತೆ ಹಾಲು ನೀಡುವುದಿಲ್ಲ ಎಂಬುದು ನೆನಪಿರಲಿ.
* ಅಪರಿಚಿತರಿಂದ ಅಥವಾ ಗುಜರಾತ್‌ನಿಂದಲೇ ಹಸು ಖರೀದಿ ಮಾಡುವ ಮೊದಲು ಅದಕ್ಕೆ ಮಂದ ಸ್ವರೂಪದ ಕೆಚ್ಚಲು ಬಾವು ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಫ್ ಕೆಚ್ಚಲು ಬಾವಿನ ಪರೀಕ್ಷೆ ಮಾಡಿಸಿ.
* ಕಂದು ಕಾಯಿಲೆ ಇದೆಯೇ ಇಲ್ಲವೇ ಎಂಬುದನ್ನು ಪಶುವೈದ್ಯರ ಮೂಲಕ ಪತ್ತೆ ಮಾಡಿಸಿ. ಗರ್ಭಧರಿಸಿರುವ ಬಗ್ಗೆಯೂ ಖಚಿತ ಪಡಿಸಿಕೊಳ್ಳಿ. ದಲ್ಲಾಳಿಗಳ ಮಾತು ನಂಬಬೇಡಿ.
* ಹಾಲು ಮಾರಲು ಕೆಎಂಎಫ್ ಅವಲಂಬಿಸದೆ ದರ ಹೆಚ್ಚಾದರೂ ಸರಿ, ದೇಸಿ ಹಸುವಿನ ಹಾಲೇ ಬೇಕೆಂದು ಖರೀದಿಸುವ ಗ್ರಾಹಕರನ್ನು ಹುಡುಕಿ, ನಿಮ್ಮದೇ ಮಾರುಕಟ್ಟೆ ಕಂಡುಕೊಳ್ಳಿ. ತುಪ್ಪದ ವಿಷಯದಲ್ಲೂ ಇದೇ ಮಾನದಂಡ ಅನುಸರಿಸಿ.
* ದೇಶಿ ತಳಿ ಮತ್ತು ನೋಡಲು ಸುಂದರವಾಗಿದೆ ಎಂಬ ಒಂದೇ ಕಾರಣಕ್ಕೆ ಗಿರ್ ತಳಿ ಸಾಕಬೇಡಿ. ಕಾಂಕ್ರೆಜ್, ಗಿರ್, ದೇವಣಿ ಇತ್ಯಾದಿಗಳು ನಮಗೆ ಭಾರತೀಯ ತಳಿಗಳಾಗಬಹುದೇ ಹೊರತು ‘ದೇಶಿ’ ತಳಿ ಆಗವು. ಅಷ್ಟಕ್ಕೂ ದೇಶಿ ತಳಿಯನ್ನೇ ಸಾಕಬೇಕೆಂದಿದ್ದರೆ ಜೀವನದಲ್ಲಿ ಕೆಚ್ಚಲು ಬಾವು ರೋಗವನ್ನೇ ಕಾಣದ, ಶೇ.9.5ರಷ್ಟು ಕೊಬ್ಬಿನ ಅಂಶ ಹೊಂದಿರುವ ಹಾಲು ನೀಡುವ ಎಮ್ಮೆ ಸಾಕಿ.
ಲೇಖಕರು: ಪ್ರೊ. ಎನ್.ಬಿ.ಶ್ರೀಧರ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶು ವೈದ್ಯಕೀಯ ಔಷಧಶಾಸ್ತç್ರ ಮತ್ತು ವಿಷಶಾಸ್ತç ವಿಭಾಗ, ಪಶು ವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ