Animal Husbandry

ಪಶುಗಳಿಗೆ ಜಂತುನಾಶಕ ಔಷಧ ಹಾಕಿ ಜಂತುಹುಳ ತಡೆಗಟ್ಟಿ

21 August, 2021 9:57 AM IST By:
animal

ಪಶುಪಾಲಕರು ತಮ್ಮಲ್ಲಿರುವ ಎಲ್ಲಾ ವಿಧದ ಪಶುಗಳಿಗೆ ಕಾಲಕಾಲಕ್ಕೆ ಜಂತುನಾಶಕ ಔಷಧಿಯನ್ನು ಹಾಕುವುದು ಕಡ್ಡಾಯವಾಗಿದೆ ಎಂದು ಪಶುವೈದ್ಯ ಡಾ. ನಿಧಾ ತಿಳಿಸಿದ್ದಾರೆ. ಅವರು ಬಾಳೆಹೊನ್ನೂರು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಸಮೀಪದಲ್ಲಿರುವ ಆಜಾದಿಕಾ ಅಮೃತ ಮಹೋತ್ಸವ  ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಜಂತು ನಾಶಕ ಶಿಬಿರ, ಬರಡು ರಾಸುಗಳಿಗೆ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ಪ್ರಾಣಿಗಳಿಗೆ ಜಂತುನಾಶಕ ಔಷಧಿಯನ್ನು ಹಾಕದಿದ್ದಲ್ಲಿ ಅದು ವಿವಿಧ ರೀತಿಯ ಬೇರೆಯ ಕಾಯಿಲೆಗಳಿಗೆ ದಾರಿ ಆಗಬಹುದು. ಜಂತುನಾಶಕವನ್ನು  ಹಾಕದಿದ್ದಲ್ಲಿ ಪಶುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿಯೂ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ವೈದ್ಯರಿಂದ ಸೂಕ್ತ ಮಾರ್ಗದರ್ಶನ ಪಡೆದು ಕಾಲಕಾಲಕ್ಕೆ ಜಂತುನಾಶಕ ಬಳಕೆ ಮಾಡಬೇಕು. ಇದರೊಂದಿಗೆ ಕಾಲುಬಾಯಿ ಲಸಿಕಾ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು.

ಕಾಲುಬಾಯಿ ಜ್ವರದ ಲಕ್ಷಣಗಳು ಯಾವುದಾದರೂ ಜಾನುವಾರುಗಳಲ್ಲಿ ಕಂಡುಬಂದಲ್ಲಿ ತಕ್ಷಣ ಪಶು ಇಲಾಖೆಯನ್ನು ಸಂಪರ್ಕಿಸಬೇಕು. ರೇಬಿಸ್ ಕಾಯಿಲೆ ಬಗ್ಗೆ ಮುನ್ನೆಚ್ಚರಿಕೆವಹಿಸಬೇಕು. ಈ ಕಾಯಿಲೆ ಅತ್ಯಂತ ಅಪಾಯಕಾರಿಯಾಗಿದೆ. ಅದನ್ನು ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆಯೂ ರೈತರಿಗೆ ಮಾಹಿತಿ ನೀಡಲಾಯಿತು.

ಜಂತುಹುಳು ಕರುಗಳಿಗೆ ಬೇಗ ಕಾಡುತ್ತದೆ

ಪಶುಗಳಲ್ಲಿ ವಿಶೇಷವಾಗಿ ಕರುಗಳಲ್ಲಿ ಶೇಕಡಾ 90 ರಷ್ಟು ಕರುಗಳು ಜಂತು ಹುಳುವಿನ ಬಾದೆಯಿಂದ ಸಾಯುತ್ತವೆ. ಜಂತು ಹುಳುಗಳಲ್ಲಿ ಮೂರು ಪ್ರಕಾರಗಳು ದುಂಡು ಹುಳು ಲಾಡಿ ಹುಳು ಮತ್ತು ಚಪ್ಪಟ್ಟೆ ಹುಳು ಅಥವಾ ಕಾರಲು ಹುಳು. ಇವುಗಳಲ್ಲಿ ದುಂಡು ಜಂತು ಹುಳುವಿನ ಬಾಧೆಗೆ ಸಾಯುವ ಕರುಗಳ ಸಂಖ್ಯೆಯೇ ಹೆಚ್ಚು. ಲಾಡಿ ಹುಳು ಮತ್ತು ಚಪ್ಪಟ್ಟೆ ಹುಳುಗಳ ಬಾಧೆ ಪ್ರಾಯದ ಜಾನುವಾರುಗಳಲ್ಲಿ ಕಂಡು ಬರುತ್ತದೆ. ಕರು ಹುಟ್ಟಿದ 8 ರಿಂದ 10 ದಿನಗಳಲ್ಲಿ ಜಂತು ನಾಶಕ ಕುಡಿಸುವುದು ಸೂಕ್ತ ಮತ್ತು ನಂತರ ಒಂದು ವರ್ಷ ಪ್ರಾಯದ ವರೆಗೂ ಪ್ರತಿ ತಿಂಗಳು ಔಷಧ ಕುಡಿಸಬಹುದು.

ಜಂತುಹುಳು ಬಾಧೆಗೆ ಒಳಗಾಗಿರುವ ಪಶುಗಳ ಲಕ್ಷಣ

ಜಂತು ಹುಳು ಬಾಧೆಗೆ ಒಳಗಾಗಿರುವ ಕರುಗಳಲ್ಲಿ ಕಂಡು ಬರುವ ರೋಗ ಲಕ್ಷಣಗಳಲ್ಲಿ ರೈತರು ಗಮನಿಸಬೇಕಾದ ಅಂಶವೆಂದರೆ ಬೇಧಿ, ಸಗಣಿಯಲ್ಲಿ ಕೊಬ್ಬಿನಾಂಶ ಕಾಣಿಸಿಕೊಳ್ಳುವುದು ಮತ್ತು ಕೆಸರಿನಂತೆ ದುರ್ವಾಸನೆಯುಕ್ತ ಸಗಣಿ. ದಿನಗಳೆದಂತೆ ಕರುಗಳು ಸೊರಗುತ್ತಾ ಹೋಗುತ್ತವೆ. ಜಂತು ಹುಳು ಬಾಧೆಗೆ ಒಳಗಾಗಿರುವ ಕರುಗಳನ್ನು ನೋಡಿದ ತಕ್ಷಣ ಗಮನಿಸಬಹುದಾದ ರೋಗ ಲಕ್ಷಣಗಳೆಂದರೆ ಪ್ರೋಟಿನ್ ಕೊರತೆಯಿಂದ ಗಡಿಗೆಯಾಕಾರದ ಹೊಟ್ಟೆ, ನಿಶ್ಯಕ್ತಿ ಮತ್ತು ರಕ್ತ ಹೀನತೆಯಿಂದ ಕಣ್ಣಿನ ಶ್ಲೇಷ್ಮ ಪೊರೆಯು ಬಿಳಿಚಿಕೊಂಡಿರುತ್ತದೆ. ಸಾಮಾನ್ಯವಾಗಿ ಜಂತು ಹುಳುವಿನ ಬಾಧೆ ಇದ್ದ ಕರುಗಳಲ್ಲಿ ದೇಹದ ಉಷ್ಣಾಂಶವು ಕಡಿಮೆಯಾಗುತ್ತ ಹೋಗಿ ಕರುಗಳು ಅಸುನೀಗುತ್ತವೆ. ಇಂತಹ ಲಕ್ಷಣಗಳು ಕಂಡ ತಕ್ಷಣ ರೈತರು ಸಮಯ ಪ್ರಜ್ಞೆಯಿಂದ ಪಶು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಮತ್ತು ಜಂತು ನಾಶಕ ಔಷಧ ಕುಡಿಸಬೇಕು.

ಜಾನುವಾರುಗಳಲ್ಲಿನ ಹೊಟ್ಟೆ ಜಂತುಗಳ ಸಮಸ್ಯೆ ಇದ್ದಾಗ ಹುಳುಗಳು ಪಶುಆಹಾರದ 30% ರಿಂದ 40% ರಷ್ಟು ತಿನ್ನುತ್ತವೆ ಅದಕ್ಕಾಗಿ ಸರಿಯಾದ ಸಮಯಕ್ಕೆ ಜಂತುನಾಶಕ ಔಷಧಿಗಳನ್ನು ನೀಡುವುದರಿಂದ ಜಾನುವಾರುಗಳಲ್ಲಿ ಹೊಟ್ಟೆ ಜಂತುಗಳಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. 

ಮುನ್ನೆಚ್ಚರಿಕೆ: ರೈತರು ಕರುಗಳಲ್ಲಿ ಜಂತು ಹುಳು ಸೊಂಕು ತಗುಲದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಲ್ಲಿ ಪ್ರಮುಖವಾದುದು ಕೊಟ್ಟಿಗೆಯನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಯಾಕೆಂದರೆ ಕರುಳಿನಲ್ಲಿರುವ ಜಂತು ಹುಳುಗಳ ಮೊಟ್ಟೆಗಳು ಸಗಣಿಯ ಜತೆಗೆ ಮಿಶ್ರಣಗೊಂಡು ಹೊರ ಹಾಕಲ್ಪಡುತ್ತವೆ. ಕೊಟ್ಟಿಗೆ ಹಾಸಿಗೆ ಉಷ್ಣಾಂಶದಲ್ಲಿ ಈ ಮೊಟ್ಟೆಯೊಡೆದು ಮೊದಲ ಹಂತದ ಲಾರ್ವ ಹೊರ ಬಂದು ಮೇವು ಮತ್ತು ನೀರು ಕಲುಷಿತಗೊಳ್ಳುವುದು. ಜಾನುವಾರುಗಳನ್ನು ಮೇಯಲು ಬಿಟ್ಟಾಗ ವಿಸರ್ಜಿಸಿದ ಸಗಣಿಯಿಂದ ಹುಲ್ಲುಗಾವಲು ಕೂಡ ಜಂತು ಲಾರ್ವಗಳಿಂದ ಕಲುಷಿತಗೊಂಡು ಆರೋಗ್ಯವಾಗಿರುವ ಜಾನುವಾರುಗಳಿಗೆ ಕೂಡ ಸೊಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಶುದ್ಧ ಕುಡಿಯುವ ನೀರನ್ನು ಒದಗಿಸಿØಜಾನುವಾರುಗಳಿಗೆ ತಾಜಾ ಮೇವು ಮತ್ತು ಧಾನ್ಯಗಳನ್ನು ನೀಡಬೇಕು.