Animal Husbandry

ಧಾರವಾಡಿ ಎಮ್ಮೆ ತಳಿಗೆ ರಾಷ್ಟ್ರೀಯ ಮಾನ್ಯತೆ

06 September, 2021 9:02 PM IST By:

ಧಾರವಾಡ ಪೇಡೆ, ಸಾಹಿತ್ಯ, ಸಂಗೀತಕ್ಕೆ ಹೆಸರಾದ ಧಾರವಾಡಕ್ಕೆ ಈಗ ಮತ್ತೊಂದು  ಗರಿ ದೊರೆತಿದೆ. ಹೌದು, ಧಾರವಾಡ ಎಮ್ಮೆ ತಳಿಗೆ ರಾಷ್ಟ್ರೀಯ ಮಾನ್ಯತೆ ದೊರೆತಿದೆ.ಇದು ದೇಶದಲ್ಲಿ ಗುರುತಿಸಲಾದ ಎಮ್ಮೆ ತಳಿಗಳ ಪಟ್ಟಿಗೆ 18ನೇ ತಳಿಯಾಗಿ ಸೇರ್ಪಡೆಯಾಗಿದೆ. ಕೃತಕ ಗರ್ಭಧಾರಣೆ ಭಾರತಕ್ಕೆ ಕಾಲಿಟ್ಟು 60 ವರ್ಷಗಳ ನಂತರವೂ ತಳಿ ಶುದ್ಧತೆ ಕಾಪಾಡಿಕೊಂಡಿರುವ ಧಾರವಾಡ ಎಮ್ಮೆ ತಳಿಗೆ  ರಾಷ್ಟ್ರೀಯ ಮಾನ್ಯತೆ ದೊರೆತಿದೆ.

ನವದೆಹಲಿಯ ಭಾರೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್) ನ ಭಾರತೀಯ ಪಶು ಅನುವಂಶಿಕ ಸಂಪನ್ಮೂಲ ಬ್ಯೂರೋದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಧಾರವಾಡ ಎಮ್ಮೆಗೆ ಧಾವಾಡ ತಳಿ ಎಂದು ಮಾನ್ಯತೆ ನೀಡಿ ಗೌರವಿಸಲಾಗಿದೆ. ಧಾರವಾಡ ತಳಿ ಎಮ್ಮೆಗೆ ಇಂಡಿಯಾ_ಬಫೆಲೋ_0800_ಧಾರವಾಡಿ_01018 ಎಂತು ತಳಿ ಪ್ರವೇಶ ಸಂಖ್ಯೆ ನೀಡಿದೆ. ಈ ಮೂಲಕ ಎಮ್ಮೆಗಳಲ್ಲಿ ಮಾನ್ಯತೆ ಪಡೆದ ರಾಜ್ಯದ ಮೊದಲ ತಳಿ ಇದಾಗಿದೆ.

ಹರಿಯಾಣದ ರಾಷ್ಟ್ರೀಯ ಪಶು ಅನುವಂಶಿಕ ಸಂಸಾಧನ ಬ್ಯೂರೋದಿಂದ ಸೆಪ್ಟೆಂಬರ್ 3 ರಂದು ಧಾರವಾಡ ಎಮ್ಮೆ ತಳಿಗೆ INDIA_BUFFALO_0800_DHARWADI_01018 ನೋಂದಣಿ ಸಂಖ್ಯೆ ನೀಡಿದೆ.

ತಳಿ ಶುದ್ಧತೆ ಕುರಿತು 2017 ರಲ್ಲಿ ಪಶು ವಂಶವಾಹಿ ಸಂಪನ್ಮೂಲ ಸಂರಕ್ಷಣೆಯ ರಾಷ್ಟ್ರೀಯ ಸಂಸ್ಥೆ ಹಾಗೂ ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗದ ಸಹಯೋಗದಲ್ಲಿ ಸಂಶೋಧನೆ ನಡೆಸಿ ತಳಿ ಶುದ್ಧತೆ ಕುರಿತು 2017 ರಲ್ಲಿ ಸಂಶೋಧಕರು  ಪರಿಷತ್ಗೆ ವರದಿ ನೀಡಿದ್ದರು. ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಿತ್ತು.ಈ ಗ ಜಾಗತಿಕ ಮನ್ನಣೆ ದೊರೆತ ದೇಶದ 18 ಎಮ್ಮೆ ತಳಿಯ ಸಾಲಿಗೆ ಧಾರವಾಡಿ ಹೊಸ ಸೇರ್ಪಡೆಯಾಗಿದೆ.

ಅದ್ಯಯನ ನಡೆಸಿದ್ದು ಹೇಗೆ

ಉತ್ತರ ಕರ್ನಾಟಕದ ಧಾರವಾಡ, ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಆಯ್ಕೆ ಒಟ್ಟು 64 ಹಳ್ಳಿಗಳಲ್ಲಿ ಕೃಷಿ ವಿವಿ ಪಶು ವಿಜ್ಞಾನ ವಿಭಾಗದ ವಿಜ್ಞಾನಿ ಡಾ. ವಿ.ಎಸ್.ಕುಲ್ಕರ್ಣಿ ನೇತೃತ್ವದಲ್ಲಿ 3937 ರೈತರ ಬಳಿಯಿರುವ 10,650 ಧಾರವಾಡ ಎಮ್ಮೆಗಳ ಬಗ್ಗೆ ಅಧ್ಯಯನ ಕೈಗೊಂಡು ಅಂತಿಮ ವರದಿ ಸಿದ್ದಪಡಿಸಲಾಗಿತ್ತು. ಸೆಪ್ಟೆಂಬರ್ 3 ರಂದು ತಳಿ ನೋಂದಣಿ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿದೆ.

ಧಾರವಾಡಿ ಎಮ್ಮೆ ತಳಿಯ ವಿಶೇಷತೆ

ಧಾರವಾಡಿ ಎಮ್ಮೆ ತಳಿಯುವ ತನ್ನ ಜೀವಿತಾವಧಿಯಲ್ಲಿ ಐದು ಬಾರಿ ಕರು ಹಾಕುತ್ತದೆ. ಒಮ್ಮೆ ಕರು ಹಾಕಿದರೆ 335 ದಿನ ಹಾಲು ನೀಡುತ್ತದೆ. ಇದರ ಹಾಲಿನಲ್ಲಿ ಶೇ. 7 ರಷ್ಟು ಕೊಬ್ಬಿನಾಂಶ ಇರುತ್ತದೆ. ಹೀಗಾಗಿ ಧಾರವಾಡ ಪೇಡಾ, ಬೆಳಗಾವಿ ಕುಂದಾ, ಜಮಖಂಡಿ ಕಲ್ಲಿ ಪೇಢಾ, ಐನಾಪುರ ಪೇಡಾ, ಗೋಕಾಕ್ ಮತ್ತು ಅಮೀನಗಡ ಕರದಂಟು ಇತ್ಯಾದಿಗಳಲ್ಲಿ ಈ ಎಮ್ಮೆಯ ಹಾಲು ಬಳಸಲಾಗುತ್ತದೆ.