Animal Husbandry

ಕೃಷಿ ಭೂಮಿಯಲ್ಲಿ ಹಾವುಗಳ ನಿರ್ವಹಣೆ ಮತ್ತು ಮುಂಜಾಗ್ರತೆ ಕ್ರಮಗಳು

16 December, 2022 3:21 PM IST By: Kalmesh T
Management and preventive measures of snakes in agricultural land

ಹಾವುಗಳು ಸರೀಸೃಪ ಜಾತಿಗೆ ಸೇರಿದ ಪ್ರಾಣಿಗಳು. ಭಾರತದ ಜನರಲ್ಲಿ ಹಾವುಗಳ ಬಗ್ಗೆ ವಿಶೇಷ ನಂಬಿಕೆ/ಮೂಢನಂಬಿಕೆ, ಭಯ ಮತ್ತು ಭಕ್ತಿಯನ್ನು ಕಾಣಬಹುದು. ಹಾವುಗಳು ಆಹಾರ ಸರಪಳಿಯ ಅತೀ ಮುಖ್ಯ ಕೊಂಡಿಯಾಗಿವೆ. ಎಲ್ಲಾ ಹಾವುಗಳು ಮಾಂಸಹಾರಿಯಾಗಿದ್ದು ಕೃಷಿಗೆ ತೊಂದರೆ ಕೊಡುವ ಇಲಿಗಳನ್ನು ನಿಯಂತ್ರಿಸುತ್ತವೆ.

ಇತ್ತೀಚೆಗೆ ಕೃಷಿ ಭೂಮಿಯಲ್ಲಿದ್ದ ಮಂಡಲದ ಹಾವು ಮತ್ತು ಅದರ ಮರಿಗಳನ್ನು ರೈತರು ಕೊಂದು ಹಾಕಿದ ವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ ನಡೆದಿತ್ತು.

ರೈತರಿಗೆ ಹಾವುಗಳ ಉಪಯುಕ್ತತೆ ಮತ್ತು ಕೃಷಿ ಭೂಮಿಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದಾರೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಸ್. ಶಿಶುಪಾಲ ಅವರು. ಅಲ್ಲದೇ ಭಾರತದ ಕೃಷಿಭೂಮಿಯ ಹತ್ತಿರ ಕಾಣಸಿಗುವ ನಾಲ್ಕು ವಿಷಯುಕ್ತ ಹಾವುಗಳ ಪರಿಚಯವನ್ನು ಸಹ ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಸುಮಾರು 60 ಸಾವಿರ ಜನರು ಹಾವಿನ ಕಡಿತಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಸುಮಾರು 270 ಪ್ರಭೇದದ ಹಾವುಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಹೆಚ್ಚಿನವು ವಿಷಕಾರಿ ಅಲ್ಲ. ಕೇವಲ ನಾಲ್ಕು ಜಾತಿಯ ಹಾವುಗಳನ್ನು ಮಾತ್ರ ಮನುಷ್ಯನಿಗೆ ಅಪಾಯ ತರಬಲ್ಲಂತಹ ವಿಷಕಾರಿ ಹಾವುಗಳೆಂದು ಗುರುತಿಸಲಾಗಿದೆ.

ಅವುಗಳೆಂದರೆ ನಾಗರ ಹಾವು (Cobra), ಕೊಳಕು ಮಂಡಲ (Russell’s viper), ಗರಗಸ-ಹುರುಪೆಯ ಮಂಡಲ ಹಾವು (Saw-scaled viper)  ಮತ್ತು ಕಟ್ಟು ಹಾವು (Common Krait). ಇವುಗಳನ್ನು ದೊಡ್ಡ ನಾಲ್ಕು (Big Four)) ಎಂದು ಕರೆಯುತ್ತಾರೆ. ಭಾರತದಲ್ಲಾಗುವ ಹಾವಿನ ಕಡಿತಗಳಲ್ಲಿ ಶೇ 90% ರಷ್ಟು ಇದೇ ನಾಲ್ಕು ಹಾವುಗಳಿಂದ ಆಗಿರುತ್ತವೆ. ಯಾಕೆಂದರೆ ಇವು ಮಾನವನ ವಸತಿ ಸನಿಹದಲ್ಲಿ ವಾಸಿಸುತ್ತವೆ.

1 . ನಾಗರ ಹಾವು- ವಿಷಯುಕ್ತ

ಇವು ಕೃಷಿಭೂಮಿಯ ಪ್ರದೇಶದಲ್ಲಿ ಸಾಮಾನ್ಯವಾಗಿ ವಾಸಿಸುವ ಹಾವುಗಳು. ಕೃಷಿಭೂಮಿಯಲ್ಲಿರುವ ಇಲಿ, ಕಪ್ಪೆಗಳನ್ನು ತಿನ್ನಲು ಬರುತ್ತವೆ. ಇವುಗಳ ಮೊಟ್ಟೆಯಿಂದ ಹೊರಬರುವ ಮರಿ 25-30 ಸೆಂ.ಮೀ. ಇದ್ದು ವಯಸ್ಕನಾದಾಗ ಸರಾಸರಿ 100 ಸೆಂ.ಮೀ. ವರೆಗೆ ಬೆಳೆಯಬಲ್ಲದು. ಅಗಲವಾದ ತಲೆ. ಕಂದು, ಹಳದಿ, ಬೂದು ಮತ್ತು ಕಪ್ಪು ಬಣ್ಣಗಳ ಮಿಶ್ರಿತ ಮಾದರಿಗಳು ಕಾಣಸಿಗುತ್ತವೆ. ಉದ್ರೇಕ/ ಕೋಪಗೊಂಡಾಗ ತಲೆಯ ಭಾಗದ ಚರ್ಮವನ್ನು ಅಗಲಿಸಿ ಹೆಡೆಯನ್ನು ತೋರಿಸುತ್ತದೆ. ತಲೆಯ ಹಿಂಭಾಗದಲ್ಲಿ ಕಾಣುವ "ಕನ್ನಡಕ"ದಂತಹ ಮಚ್ಚೆ ಹೆಗ್ಗುರುತು.

ಹಗಲು ಮತ್ತು ರಾತ್ರಿಯಲ್ಲಿಯೂ ಚುರುಕಾಗಿರುವ ಹಾವು. ಕೃಷಿ ಭೂಮಿ, ಮತ್ತು ಕಾಳು ಸಂಗ್ರಹಿಸುವ ಗೋದಾಮುಗಳಲ್ಲಿಯೂ ಕಾಣ ಸಿಗುತ್ತವೆ. ಗೆದ್ದಲು ಮಾಡಿರುವ ಹುತ್ತದಲ್ಲಿ ಅಥವಾ ಇಲಿಗಳ ಬಿಲದಲ್ಲಿ ಅಡಗಿರುತ್ತವೆ. ಆಹಾರಕ್ಕಾಗಿ ಮುಖ್ಯವಾಗಿ ಇಲಿ, ಕಪ್ಪೆ, ಹಕ್ಕಿಗಳು ಮತ್ತು ಇತರೆ ಹಾವುಗಳನ್ನು ತಿನ್ನುತ್ತದೆ. ವರ್ಷಕ್ಕೊಮ್ಮೆ ಮಾರ್ಚಿನಿಂದ ಜುಲೈವರೆಗೆ 12 ರಿಂದ 30 ಮೊಟ್ಟೆಗಳನ್ನಿಡುತ್ತದೆ.

ಸಾಮ್ಯಾನವಾಗಿ ನಾಚಿಕೆ ಸ್ವಭಾವದ ಹಾವು. ಆದರೆ, ಕೆಣಕಿದಾಗ ತನ್ನ ದೇಹದ ಮುಂದಿನ ಭಾಗವನ್ನು ಮೇಲೆತ್ತಿ ತಲೆಯ ಭಾಗವನ್ನು ಅಗಲಿಸಿ ಹೆಡೆಯನ್ನು ತೋರಿಸುತ್ತಾ ಪೂತ್ಕರಿಸುತ್ತದೆ. ಆಕಸ್ಮಿಕವಾಗಿ ಅಥವಾ ಅದನ್ನು ಹೊಡೆಯಲು ಹೋದರೆ ಕಚ್ಚುತ್ತದೆ. ವಿಷವು ತೀಕ್ಷ್ಣವಾಗಿದ್ದು ದೇಹದ ನರವ್ಯೂಹದ ಮೇಲೆ ಗಂಭೀರ ಪರಿಣಾಮ ಬೀರಿ ಕೊಲ್ಲುತ್ತದೆ. ಭಾರತದಲ್ಲಿ ಈ ಹಾವಿನ ಕಡಿತಕ್ಕೆ ಪ್ರತಿವಿಷ ಲಭ್ಯವಿದೆ.

1. ನಾಗರ ಹಾವು- ವಿಷಯುಕ್ತ -ಚಿತ್ರಗಳು ಲೇಖಕರವು

2 . ಸಾಮಾನ್ಯ ಕಟ್ಟು ಹಾವು- ವಿಷಯುಕ್ತ

ಮರಿಗಳ ಗಾತ್ರ 25 ರಿಂದ 28 ಸೆಂ.ಮೀ. ಮತ್ತು ವಯಸ್ಕ ಹಾವು ಸರಾಸರಿ 100 ಸೆಂ.ಮೀ. ಇರುತ್ತವೆ. ತೆಳುವಾದ ದೇಹ, ತಲೆ ಕುತ್ತಿಗೆಗಿಂತ ಸ್ವಲ್ಪ ಅಗಲವಾದದ್ದು. ದೇಹವು ಹೊಳೆಯುವ ಕಪ್ಪು ಅಥವಾ ಮಾಸಲು ನೀಲಿ-ಬೂದು, ಅಥವಾ ಕಂದು-ಮಿಶ್ರಿತ ಕಪ್ಪು. ದೇಹದ ಮೇಲೆ ಬಿಳಿಬಣ್ಣದ ಅಡ್ಡಪಟ್ಟಿಗಳು. ಈ ಅಡ್ಡಪಟ್ಟಿಗಳು ತಲೆ ಮತ್ತು ದೇಹದ ಮುಂಭಾಗದಲ್ಲಿ ಗೋಚರಿಸುವುದಿಲ್ಲ. ದೇಹದ ಮಧ್ಯಭಾಗದಲ್ಲಿ ತಲೆಯಿಂದ ಬಾಲದವರೆಗೆ ಅಗಲವಾದ ಛತುಷ್ಕೋನವಿರುವ ಹುರುಪೆಗಳನ್ನು ಕಾಣಬಹುದು (Photo-2).

ರಾತ್ರಿ ಹೊತ್ತು ಬಹಳ ಚುರುಕಾಗಿರುತ್ತದೆ. ಹಗಲು ಹೊತ್ತಿನಲ್ಲಿ ಗೆದ್ದಲಿನ ಹುತ್ತಗಳಲ್ಲಿ ಅಥವಾ ಕಲ್ಲಿನ ಕೆಳಗೆ ವಿಶ್ರಮಿಸುತ್ತದೆ. ಆಹಾರಕ್ಕಾಗಿ ಇತರೆ ಹಾವುಗಳು, ಇಲಿ, ಕಪ್ಪೆ ಮತ್ತು ಹಲ್ಲಿಗಳನ್ನು ತಿನ್ನುತ್ತದೆ. ಸಂತಾನಾಭಿವೃದ್ಧಿ ಸಮಯ ಮಾರ್ಚಿನಿಂದ ಮೇ ತಿಂಗಳಿನವರೆಗೆ. ಹೆಣ್ಣು 08 ರಿಂದ 12 ಮೊಟ್ಟೆಗಳನ್ನಿಡುತ್ತದೆ. ಅತೀ ತೀಕ್ಷ್ಣವಾದ ವಿಷವು ನರವ್ಯೂಹದ ಮೇಲೆ ಪ್ರಭಾವ ಬೀರಿ ಮಿಕವನ್ನು ನಿಶ್ಚೇತಗೊಳಿಸುತ್ತದೆ. ವಿಷ ಮಾರಣಾಂತಿಕವು ಹೌದು. ಭಾರತದಲ್ಲಿ ಈ ಹಾವಿನ ಕಡಿತಕ್ಕೆ ಪ್ರತಿವಿಷ ಲಭ್ಯವಿದೆ.

2 . ಸಾಮಾನ್ಯ ಕಟ್ಟು ಹಾವು- ವಿಷಯುಕ್ತ

3. ಕೊಳಕು ಮಂಡಲ (ಮಂಡಲ ಹಾವು/ಕನ್ನಡಿ ಹಾವು)- ವಿಷಯುಕ್ತ

ಮರಿಗಳ ಗಾತ್ರ 24 ಸೆಂ.ಮೀ. ಇದ್ದು ವಯಸ್ಕನಾದಾಗ ಸರಾಸರಿ 100 ಸೆಂ.ಮೀ. ವರೆಗೆ ಬೆಳೆಯಬಲ್ಲದು. ದಪ್ಪ ಶರೀರ. ಒರಟಾದ ಮೈ ಚರ್ಮವನ್ನು ಹೊಂದಿದೆ. ಕುತ್ತಿಗೆಗಿಂತ ಅಗಲವಾದ ತ್ರಿಕೋನಕಾರದ ತಲೆ. ಚಿಕ್ಕ ಮತ್ತು ತೆಳುವಾದ ಬಾಲ. ಕಂದು ಅಥವಾ ಹಳದಿ-ಮಿಶ್ರಿತ ಕಂದು, ಬೂದು-ಕೆಂಪು ಬಣ್ಣಗಳಲ್ಲಿ ಇರುತ್ತದೆ. ದೇಹದ ಉದ್ದಕ್ಕೂ ಕಂದು ಅಥವಾ ಕಪ್ಪು ಬಣ್ಣದ ಅಂಡಾಕೃತಿಯ/ಗುಂಡಗಿರುವ ಮಚ್ಚೆಗಳ ಸಾಲು (Photo-3)

ಆಹಾರಕ್ಕಾಗಿ ಇಲಿ, ಹೆಗ್ಗಣ, ಕಪ್ಪೆ, ಹಲ್ಲಿ, ಓತಿಕ್ಯಾತ ಮತ್ತು ಇತರೆ ಹಾವುಗಳನ್ನು ತಿನ್ನಬಲ್ಲದು. ಸಂತಾನಾಭಿವೃದ್ಧಿ ಸಮಯ ಮೇನಿಂದ ಜುಲೈವರೆಗೆ. ಹೆಣ್ಣು ನೇರವಾಗಿ 06 ರಿಂದ 63 ಮರಿಗಳಿಗೆ ಜನ್ಮ ಕೊಡುತ್ತದೆ. ಸಾಮಾನ್ಯವಾಗಿ ನಿಶಾಚರಿ. ನಿಧಾನವಾಗಿ ಚಲಿಸುವ ಈ ಹಾವು ಕೋಪ ಬಂದಾಗ/ಕೆಣಕಿದರೆ ತನ್ನ ದೇಹವನ್ನು ಸುತ್ತು ಹಾಕಿಕೊಂಡು ಆಕ್ರಮಣಕ್ಕೆ ಮುಂದಾಗುತ್ತದೆ.

ಜೋರಾಗಿ ಉಸಿರು ಬಿಡುತ್ತಾ ಹೆದರಿಸುತ್ತದೆ. ಅನಿರ್ವಾಯವಾದಾಗ ಮಾತ್ರ ಕಚ್ಚಬಲ್ಲದು. ವಿಷವು ಮಿಕದ ರಕ್ತಕೋಶ ಮತ್ತು ಮಾಂಸವನ್ನು ಜೀರ್ಣಿಸಲು ಸಹಕಾರಿಯಾಗಿದೆ. ಕಚ್ಚಿದ ಜಾಗದಲ್ಲಿ ಕೊಳೆಯುವಿಕೆಯನ್ನು ಉಂಟುಮಾಡುತ್ತದೆ. ವಿಷ ಮಾರಣಾಂತಿಕವು ಹೌದು. ಭಾರತದಲ್ಲಿ ಈ ಹಾವಿನ ಕಡಿತಕ್ಕೆ ಪ್ರತಿವಿಷ ಲಭ್ಯವಿದೆ.

3. ಕೊಳಕು ಮಂಡಲ (ಮಂಡಲ ಹಾವು/ಕನ್ನಡಿ ಹಾವು)- ವಿಷಯುಕ್ತ

4 . ಗರಗಸ-ಹುರುಪೆಯ ಮಂಡಲ ಹಾವು- ವಿಷಯುಕ್ತ

ಮರಿಗಳ ಗಾತ್ರ 08 ಸೆಂ.ಮೀ.ಗಳಿದ್ದು ವಯಸ್ಕನಾದಾಗ ಸರಾಸರಿ 30 ಸೆಂ.ಮೀ.ನಷ್ಟು ಬೆಳಿಯುತ್ತವೆ. ದೇಹವು ಚಿಕ್ಕದ್ದಾಗಿರುತ್ತದೆ. ನೋಡಲು ಚರ್ಮ ಒರಟಾಗಿರುತ್ತದೆ. ತಲೆಯು ಕುತ್ತಿಗೆಗಿಂತ ಅಗಲವಾಗಿರುತ್ತದೆ. ತಿಳಿಕಂದು, ಗಾಢ-ಕಂದು, ಕೆಂಪು, ಬೂದು ಅಥವಾ ಮರಳಿನ ಬಣ್ಣಗಳಲ್ಲಿ ಕಾಣಸಿಗುವುದು. ಮೈಮೇಲೆ ಅಡ್ಡಾದಿಡ್ಡಿಯಾಗಿರುವ ಗೆರೆಗಳಿರುತ್ತವೆ. ತಲೆ ಮೇಲ್ಭಾಗದಲ್ಲಿ ನಿರ್ಧಿಷ್ಟ ಬಾಣದ ಗುರುತಿರುತ್ತದೆ (Photo-4).

ಸಾಮಾನ್ಯವಾಗಿ ನಿಶಾಚರಿ. ಆಹಾರಕ್ಕಾಗಿ ಇಲಿ, ಕಪ್ಪೆ, ಹಲ್ಲಿ, ಚೇಳು ಮತ್ತು ಕೀಟಗಳನ್ನು ತಿನ್ನುತ್ತದೆ. ಸಂತಾನಾಭಿವೃದ್ಧಿ ಸಮಯ ಏಪ್ರಿಲ್‌ನಿಂದ ಆಗಸ್ಟ್ವರೆಗೆ. ಹೆಣ್ಣು ನೇರವಾಗಿ ನಾಲ್ಕರಿಂದ ಎಂಟು ಮರಿಗಳಿಗೆ ಜನ್ಮ ಕೊಡುತ್ತದೆ. ವಿಷವು ಅತ್ಯಂತ ತೀಕ್ಷ್ಣವಾಗಿದೆ. ಭಾರತದಲ್ಲಿ ಈ ಹಾವಿನ ಕಡಿತಕ್ಕೆ ಪ್ರತಿವಿಷ ಲಭ್ಯವಿದೆ.

4 . ಗರಗಸ-ಹುರುಪೆಯ ಮಂಡಲ ಹಾವು- ವಿಷಯುಕ್ತ

ಹಾವಿನ ವಿಷ ಮತ್ತು ವಿಷದ ಹಲ್ಲುಗಳು:

ಎಲ್ಲಾ ಹಾವುಗಳು ಬೇಟೆಯಾಡಿ ತಮ್ಮ ಆಹಾರವನ್ನು ಪಡೆದುಕೊಳ್ಳಬೇಕಾಗಿದೆ. ಹಾಗಾಗಿ ಹಾವುಗಳಲ್ಲಿ ಹಿಮ್ಮುಖವಾಗಿ ಬಾಗಿರುವ ಹಲ್ಲುಗಳಿದ್ದು ಮಿಕವು ತಪ್ಪಿಸಿಕೊಳ್ಳಲಾರದಂತೆ ಹಿಡಿದುಕೊಳ್ಳಲು ಅನುಕೂಲವಾಗಿದೆ. ಕೆಲವು ಹಾವುಗಳಲ್ಲಿ ನೈಸರ್ಗಿಕವಾಗಿ ವಿಷವನ್ನು ಉತ್ಪಾದಿಸುವ ಶಕ್ತಿಯಿದೆ. ಕೆಲವು ಹಾವಿನ ವಿಷಗಳು ನರವ್ಯೂಹದ ಮೇಲೆ ಪ್ರಭಾವ ಬೀರಿದರೆ ಮತ್ತೆ ಕೆಲವು ವಿಷಗಳು ಮಾಂಸಖAಡಗಳನ್ನು ಜೀರ್ಣಿಸುವ ಗುಣ ಹೊಂದಿವೆ. ವಿಷವಿಲ್ಲದ ಹಾವುಗಳು ತಮ್ಮ ಬೇಟೆಯನ್ನು ಒತ್ತಿ ಹಿಡಿದು ಉಸಿರುಕಟ್ಟಿಸಿ ತಿನ್ನುತ್ತವೆ.

ಹಾವಿನ ಕಡಿತಕ್ಕೆ ಇರುವ ಚಿಕಿತ್ಸೆಗಳು

1) ಹಾವಿನ ಕಡಿತಗೊಂಡ ಮನುಷ್ಯನನ್ನು ಗಾಬರಿಗೊಳ್ಳದಂತೆ ಸಮಾಧಾನದಿಂದಿರಿಸಬೇಕು. ವಿಷದ ಹಾವಿನ ಕಡಿತಗಳಲ್ಲಿ ಕೇವಲ ಶೇ.15% ರಷ್ಟು ಮಾತ್ರ ಮಾರಣಾಂತಿಕವಾಗಬಹುದು.

2) ಹಾವು ಕಡಿದ ಭಾಗವನ್ನು ಹೆಚ್ಚು ಅಲ್ಲಾಡಿಸದೆ ತಟಸ್ಥವಾಗಿರುವಂತೆ ನೋಡಿಕೊಳ್ಳಬೇಕು.

3) ನಾಗರ ಹಾವು ಅಥವಾ ಕಟ್ಟು ಹಾವು ಕಚ್ಚಿದ್ದರೆ ಹಾವು ಕಚ್ಚಿದ ಜಾಗದಿಂದ ಮೇಲೆ ಬ್ಯಾಂಡೇಜ್ ಅಥವಾ ಬಟ್ಟೆಯಿಂದ ಮಾಡಿದ ಕಟ್ಟನ್ನು ಕಟ್ಟಿ ರಕ್ತ ಪರಿಚಲನೆಯನ್ನು ಕಡಿಮೆ ಮಾಡಬೇಕು. ಕಟ್ಟು ತುಂಬಾ ಬಿಗಿಯಾಗಿರಬಾರದು.

4) ಬೇಗನೆ ಆರೋಗ್ಯಕೇಂದ್ರಕ್ಕೆ ಕರೆದೊಯ್ಯಬೇಕು. ಈ ಸಮಯದಲ್ಲಿ ಆತ ಯಾವುದೇ ಕಾರಣಕ್ಕೂ ಉತ್ತೇಜನವಾಗದಂತೆ ಮತ್ತು ಸುಸ್ತಾಗದಂತೆ ನೋಡಿಕೊಂಡು

5) ಕೂಡಲೇ ಆಸ್ಪತ್ರೆಯಲ್ಲಿ ಪ್ರತಿವಿಷವನ್ನು ಕೊಡಿಸಬೇಕು.

ಹಾವಿನ ಪ್ರತಿವಿಷ ಹಾವು ಕಡಿತವಾದಾಗ ಜೀವ ಉಳಿಸುವ ಏಕೈಕ ಔಷಧಿಯೆಂದರೆ ಆಸ್ಪತ್ರೆಗಳಲ್ಲಿ ಸಿಗುವ ಪ್ರತಿವಿಷ (Antivenom) ಮಾತ್ರ. ಭಾರತದಲ್ಲಿ ತಯಾರಾಗುವ ಪ್ರತಿವಿಷವು ಎಲ್ಲ ದೊಡ್ಡ ನಾಲ್ಕು ಎಂದು ಪರಿಗಣಿಸಿರುವ ಹಾವುಗಳ ವಿಷಗಳ ಮೇಲೆ ಔಷಧಿಯಂತೆ ಕೆಲಸ ಮಾಡುತ್ತದೆ. ಯಾವುದೇ ಹಾವಿನ ಕಡಿತಕ್ಕೊಳಗಾದ ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿದರೆ ವೈದ್ಯರು ದೇಹಕ್ಕೆ ಕೊಡುವ ಲವಣಯುಕ್ತ (Saline) ದ್ರಾವಣದ ಮೂಲಕ ಪ್ರತಿವಿಷವನ್ನು ಹನಿ ಹನಿಯಾಗಿ ರೋಗಿಯ ರಕ್ತಕ್ಕೆ ಸೇರಿಸುತ್ತಾರೆ. ಪ್ರತಿವಿಷದಲ್ಲಿರುವ ಪ್ರತಿಕಾಯಗಳು ರೋಗಿಯ ರಕ್ತದಲ್ಲಿರುವ ಹಾವಿನ ವಿಷದ ಘಟಕಗಳನ್ನು ತಟಸ್ಥಗೊಳಿಸಿ ವಿಷತ್ವವನ್ನು ತಡೆಯುತ್ತವೆ. ಹಾವಿನ ವಿಷ ತಟಸ್ಥಗೊಳ್ಳುತ್ತಿದ್ದಂತೆ ವಿಷದ ಪ್ರಭಾವ ತಗ್ಗಿ ರೋಗಿ ಗುಣಮುಖನಾಗುತ್ತಾನೆ.

ರೈತ ಸ್ನೇಹಿ ಹಾವುಗಳ ಸಂರಕ್ಷಣೆ:

ಜನರು ಹಾವುಗಳಿಂದ ತೊಂದರೆ/ಪ್ರಾಣಹಾನಿ ಎಂದುಕೊಂಡಿರುತ್ತಾರೆ. ರೈತರು ಬೆಳೆದ ಆಹಾರ ಧ್ಯಾನಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಲಾಗುತ್ತದೆ. ಭಾರತದಲ್ಲಿ ಇಲಿಗಳು ಇಂತಹ ಬೆಳೆದ ಧ್ಯಾನಗಳಲ್ಲಿ ಶೇ.20% ತಿಂದು ಹಾಳುಗೆಡವುತ್ತವೆ. ಇಲಿಗಳ ಸಂಖ್ಯೆಯನ್ನು ಸ್ವಾಭಾವಿಕವಾಗಿ ಹತೋಟಿಯಲ್ಲಿಡಲು ಹಾವುಗಳಿಂದ ಮಾತ್ರ ಸಾಧ್ಯ. ಭಾರತದಲ್ಲಿ ವನ್ಯಜೀವಿ ರಕ್ಷಣಾ ಕಾಯ್ದೆ 1972 ರ ಪ್ರಕಾರ ಯಾವುದೇ ಹಾವನ್ನು ಕೊಲ್ಲುವುದು ಅಥವಾ ಘಾಸಿಗೊಳಿಸುವುದು ಶಿಕ್ಷಾರ್ಹ ಅಪರಾಧ.

ಕೃಷಿಭೂಮಿಯಲ್ಲಿ ಮುಂಜಾಗ್ರತಾ ಕ್ರಮಗಳು:

ರೈತರು ಕೃಷಿಭೂಮಿಯಲ್ಲಿ ಓಡಾಡುವಾಗ ಅತೀ ಎಚ್ಚರಿಕೆಯಿಂದ ಇರುವುದು ಅಗತ್ಯ. ಕೃಷಿ ಭೂಮಿಯ ಸುತ್ತ ಇರುವ ಅನಗತ್ಯ ಪೊದೆ ಗಿಡಗಳನ್ನು ನಿವಾರಿಸಿ ಸ್ವಚ್ಛವಾಗಿರಿಸಿಕೊಳ್ಳಬೇಕು. ಹೆಚ್ಚಿನ ಹಾವುಗಳು ರಾತ್ರಿ ಹೊತ್ತು ಚಟುವಟಿಕೆಯಿಂದ ಇರುತ್ತವೆ. ಹಾಗಾಗಿ ಅದಷ್ಟೂ ರಾತ್ರಿ ಹೊತ್ತು ಹೊಲಗದ್ದೆಗಳಲ್ಲಿ ಕೆಲಸಕ್ಕೆ ತೊಡಗಬಾರದು. ರಾತ್ರಿ ಕೆಲಸ ಅನಿವಾರ್ಯವಾದಾಗ ಸರಿಯಾದ ಬೆಳಕಿನ ವ್ಯವಸ್ಥೆಯೊಂದಿಗೆ ಗಮ್ ಬೂಟ್ ಗಳನ್ನು ಧರಿಸಿರಬೇಕು. ಅಕಸ್ಮಿಕವಾಗಿ ಹಾವು ಕಚ್ಚಿದರೆ ತಡ ಮಾಡದೆ ಆಸ್ಪತ್ರೆಗೆ ಹೋಗಬೇಕು. ಯಾವುದೇ ಹಾವು ಕಂಡರೆ ಅರಣ್ಯ ಇಲಾಖೆ ಅಥವಾ ಸ್ಥಳೀಯ ಉರಗ ರಕ್ಷಕರಿಗೆ ಕರೆಮಾಡಿ ಹಾವನ್ನು ರಕ್ಷಿಸಬೇಕು. ಯಾವುದೇ ಕಾರಣಕ್ಕೆ ಹಾವನ್ನು ಮುಟ್ಟುವುದಾಗಲಿ ಅಥವಾ ಹೊಡೆಯುವುದಾಗಲಿ ಮಾಡಬಾರದು.

ಭಾರತದಲ್ಲಿ ವಾಸಿಸುವ ಹೆಚ್ಚಿನ ಹಾವುಗಳು ವಿಷಕಾರಿಯಾಗಿಲ್ಲದೇ ಇರುವುದರಿಂದ ಮತ್ತು ರೈತರಿಗೆ ಉಪಕಾರಿಯಾಗಿರುವುದರಿಂದ ಅವುಗಳಿಗೆ ತೊಂದರೆ ಕೊಡಬಾರದು. ವಿಷಕಾರಿ ಹಾವುಗಳ ಕಡಿತಕ್ಕೆ ಪ್ರತಿವಿಷವಿರುವುದರಿಂದ ಯಾವುದೇ ಭಯ ಅವಶ್ಯಕತೆಯಿಲ್ಲ. ಕೃಷಿಭೂಮಿಯ ಸನಿಹದಲ್ಲಿರುವ ಹಾವುಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಪಡೆದು ‘ಜೀವಿಸು ಮತ್ತು ಜೀವಿಸಲು ಬಿಡು’ ಎಂಬ ತತ್ವವನ್ನು ಪಾಲಿಸಬೇಕು. ರೈತರು ಪ್ರಕೃತಿಯೊಂದಿಗೆ ಜೀವಿಸಲು ಕಲಿತವರಾದ್ದರಿಂದ ಈ ತತ್ವದ ಪಾಲನೆ ಕಷ್ಟವಾಗುವುದಿಲ್ಲ.

ಡಾ. ಎಸ್. ಶಿಶುಪಾಲ, ಪ್ರಾಧ್ಯಾಪಕರು, ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ.

ಮೊ: 8792674905, ಇಮೇಲ್: sskumb@gmail.com

ಚಿತ್ರಗಳು: ಲೇಖಕರವು