ಕೊರೋನಾ ಸಂಕಷ್ಟದಿಂದ ಹೊರಬಂದು ಚೇತರಿಸಿಕೊಳ್ಳಬೇಕೆನ್ನುವಷ್ಠರಲ್ಲಿಯೇ ಅತೀವೃಷ್ಠಿಯಿಂದ ಉಂಟಾದ ಪ್ರವಾಹದಿಂದಾಗಿ ರೈತರ ಬೆಳೆ ಕೊಳೆತು ನಷ್ಟ. ಈ ಕಷ್ಟದಿಂದ ಹೊರಬಂದು ಸುಧಾರಿಸಿಕೊಳ್ಳುವಷ್ಟರದಲ್ಲಿಯೇ ರೈತರ ಜಾನುವಾರುಗಳಿಗೆ ‘ಲಂಪಿಸ್ಕಿನ್’ ಎಂಬ ವಿಚಿತ್ರ ಸಾಂಕ್ರಾಮಿಕ ರೋಗ ಕಾಡುತ್ತಿದೆ. ಜಾನುವಾರುಗಳಲ್ಲಿ ಕಂಡ ಈ ವಿಚಿತ್ರ ರೋಗದಿಂದಾಗಿ ದನಕರುಗಳು ನರಳುತ್ತಿರುವುದರಿಂದ ರೈತರಲ್ಲಿ ಆತಂಕ ಮೂಡಿಸಿದೆ.
ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಯಾದ್ಯಂತ ಲಂಪಿಸ್ಕಿನ್ ಎಂಬ ವಿಚಿತ್ರ ಕಾಯಿಲೆಯಿಂದ ಜಾನುವಾರುಗಳು ನರಳುತ್ತಿವೆ. ಜಾನುವಾರುಗಳ ಮೈ, ಕಾಲುಗಳು, ಭುಜ, ಕುತ್ತಿಗೆ ಹಾಗೂ ಗಂಟಲು ಭಾಗಗಳಲ್ಲಿ ಗುಳ್ಳೆಗಳಾಗಿ ಗಡ್ಡೆಯಾಗುತ್ತಿದೆ. 1 ಇಂಚು ಸುತ್ತಳತೆಯ ಗಡ್ಡೆಗಳಿಂದ ರಂಧ್ರಗಳಾಗಿ ರಕ್ತ ಹೆಪ್ಪುಗಟ್ಟಿ ಕೀವು ತುಂಬಿಕೊಳ್ಳುತ್ತಿದೆ. ರಂಧ್ರಗಳ ಮೂಲಕ ಸಣ್ಣ ಸಣ್ಣ ಹುಳು ಹೊರಬರುತ್ತಿದ್ದು, ಜಾನು ವಾರುಗಳು ನೋವಿನಿಂದ ನರಳುತ್ತಿವೆ.
ಸುಮಾರು 15 ದಿನಗಳಿಂದ ಈ ರೋಗ ವೇಗವಾಗಿ ಹರಡುತ್ತಿದ್ದು, ಜಾನುವಾರುಗಳಿಗೆ ನಡೆದಾಡಲು ಮತ್ತು ಮೇಯಲು ಸಾಧ್ಯವಾಗುತ್ತಿಲ್ಲ. ಅವುಗಳಲ್ಲಿ ಸುಸ್ತು ಆವರಿಸಿ ನಿಲ್ಲಲಾಗದೆ ನೆಲಕ್ಕೆ ಒರಗುತ್ತಿವೆ.
ಲಿಂಪಿ ಚರ್ಮಸೋಂಕಿಗೆ ಔಷಧಿಯಿಲ್ಲ.ಬಾಧಿತ ದನಗಳಿಂದ ಸೊಳ್ಳೆಗಳ ಮೂಲಕ ರೋಗ ಹರಡುತ್ತದೆ. ದೇಹದ ವಿವಿಧ ಭಾಗಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ ಇದೊಂದು ಸಾಂಕ್ರಾಮಿಕ ರೋಗವಾಗಿದೆ ಎಂದು ಪಶುವೈದ್ಯರು ಹೇಳುತ್ತಿದ್ದಾರೆ.
ರೋಗ ಲಕ್ಷಣಗಳು:
ದನಕರುಗಳ ಮೇಲೆ ಗುಳ್ಳೆಗಳು ಕಾಣುತ್ತವೆ. 2 ರಿಂದ 3 ದಿನಗಳಲ್ಲಿ ತೀವ್ರ ಗತಿಯಲ್ಲಿ ಈ ರೋಗ ಹೆಚ್ಚಾಗಿ ಜಾನುವಾರುಗಳಿಗೆ ಬಾಧಿಸುತ್ತದೆ. ನಡೆದಾಡಲು ಕಷ್ಟವಾಗುತ್ತದೆ. ಕೊನೆಗೆ ಸುಸ್ತಾಗಿಸುತ್ತದೆ. ಮೇವು ತಿನ್ನುವುದಿಲ್ಲ.